ನವದೆಹಲಿ(ಪಿಟಿಐ): ಟೆಲಿಮಾರ್ಕೆಟಿಂಗ್ ಕರೆಗಳ ಮೇಲೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತುಸು ತಗ್ಗಿಸಿದೆ.
ದೂರವಾಣಿ ಸೇವಾ ಸಂಸ್ಥೆಗಳ ವಿರುದ್ಧ ಒಂದು ವಾರದಲ್ಲಿ 50ಕ್ಕಿಂತ ಕಡಿಮೆ ದೂರುಗಳು ದಾಖಲಾದರೆ ಭಾರಿ ದಂಡದಿಂದ ವಿನಾಯ್ತಿ ಲಭಿಸಲಿದೆ. ಈ ಮೊದಲು ಒಂದು ದೂರಿಗೆ ₨5 ಸಾವಿರದಂತೆ ದಂಡ ವಿಧಿಸಲಾಗುತ್ತಿತ್ತು.
ಪರಿಷ್ಕೃತ ನೀತಿಯಂತೆ ದೂರುಗಳ ಸಂಖ್ಯೆ 50ರಿಂದ 300ರ ಒಳಗಿದ್ದರೆ ಪ್ರತಿ ದೂರಿಗೆ ₨1ಸಾವಿರದಂತೆ, 300ರಿಂದ 700ರ ಒಳಗಿದ್ದರೆ ₨2 ಸಾವಿರದಂತೆ ಹಾಗೂ 700ರ ಮೇಲಿನ ದೂರುಗಳಿಗೆ ತಲಾ ₨5 ಸಾವಿರದಂತೆ ದಂಡ ವಿಧಿಸಲಾ ಗುವುದು ಎಂದು ‘ಟ್ರಾಯ್’ ಪ್ರಕಟಣೆ ತಿಳಿಸಿದೆ.
‘ಅನಪೇಕ್ಷಿತ ವಾಣಿಜ್ಯ ಕರೆ, ಎಸ್‌ಎಂ ಎಸ್‌ಗಳ ಹಾವಳಿ ತಡೆಯಲು ದೂರ ವಾಣಿ ಸೇವಾ ಪೂರೈಕೆ ಕಂಪೆನಿಗಳು ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿವೆ. ಈಗ ಪ್ರತಿ ವಾರ ದಾಖಲಾಗುವ ದೂರು ಗಳ ಸಂಖ್ಯೆ 12 ಸಾವಿರದಿಂದ ಸರಾಸರಿ 4 ಸಾವಿರಕ್ಕೆ ತಗ್ಗಿದೆ. ಈ ನಿಟ್ಟಿನಲ್ಲಿ ತುಸು ವಿನಾಯ್ತಿ ನೀಡಲಾಗಿದೆ’ ಎಂದು ‘ಟ್ರಾಯ್’ ಸ್‍ಪಷ್ಟಪಡಿಸಿದೆ.