ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ನಂಟು ಭಾರತ ನೆರೆ`ಹೊರೆ'

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಭಾರತದಲ್ಲಿ ವಿದೇಶಿ ಕಂಪೆನಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿ ಅವರಿಗೆ ನಾನಾ ರಿಯಾಯಿತಿಗಳನ್ನು ಕೊಟ್ಟು ಅನುಕೂಲ ಮಾಡಿಕೊಡಲಾಗುತ್ತದೆ. ಆದರೆ, ವಿದೇಶಗಳಲ್ಲಿ ಭಾರತದ ಕಂಪೆನಿಗಳ ಸ್ಥಿತಿಗತಿ ಹೇಗಿದೆ?  ಅಂತರರಾಷ್ಟ್ರೀಯ ಪೇಟೆಯಲ್ಲಿ ಇಣುಕಿ ನೋಡಿದರೆ ಭಾರತದ ಕಂಪೆನಿಗಳು ಕಳೆದ ಕೆಲವು ತಿಂಗಳುಗಳಿಂದ ಭಾರಿ ಹಿನ್ನಡೆ ಅನುಭವಿಸುತ್ತಿವೆ. ಅದರಲ್ಲೂ  ನೆರೆ-ಹೊರೆಯ ದೇಶಗಳಲ್ಲೇ ಭಾರತದ ಹೂಡಿಕೆ ಕುಗ್ಗುತ್ತಿದೆ.

ಮಾಲ್ಡೀವ್ಸ್, ಶ್ರೀಲಂಕಾ ಹಾಗೂ ನೇಪಾಳದಲ್ಲಿ ಭಾರತದ ಕಂಪೆನಿಗಳು ಕಾಲ್ತೆಗೆಯುವ ಹಂತಕ್ಕೆ ಬಂದಿದ್ದರೆ, ಅವುಗಳ ಸ್ಥಾನದಲ್ಲಿ ಚೀನಾ ರಾರಾಜಿಸುತ್ತಿದೆ.
ಮಾಲ್ಡೀವ್ಸ್ ಸರ್ಕಾರ ಇತ್ತೀಚೆಗಷ್ಟೆ ಭಾರತದ ಅತಿ ದೊಡ್ಡ ವಿದೇಶಿ ಹೂಡಿಕೆ ಒಪ್ಪಂದವನ್ನು ಏಕಾಏಕಿ ರದ್ದುಪಡಿಸಿದೆ. ಈ ಪ್ರಕ್ರಿಯೆ ಭಾರತದ ವಿದೇಶಿ ವ್ಯಾಪಾರದ ಮೇಲಿನ ಅತಿ ದೊಡ್ಡ ಹೊಡೆತ ಎಂದೇ ಹೇಳಲಾಗುತ್ತಿದೆ.

ಮಾಲ್ಡೀವ್ಸ್‌ನ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ ಹಾಗೂ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಅಲ್ಲಿನ ಸರ್ಕಾರ ಕರೆದಿದ್ದ ಜಾಗತಿಕ ಟೆಂಡರ್‌ಗೆ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಕಂಡು ಬಂದಿರಲಿಲ್ಲ. ನಂತರ ಅಂತರರಾಷ್ಟ್ರೀಯ ಹಣಕಾಸು ನಿಗಮದ ಮಧ್ಯಸ್ಥಿಕೆಯಲ್ಲಿ ಬೆಂಗಳೂರು ಮೂಲದ ಮೂಲಸೌಕರ್ಯ ಸಂಸ್ಥೆ `ಜಿಎಂಆರ್' ಸಮೂಹದೊಂದಿಗೆ ರೂ. 275 ಕೋಟಿಯ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ಇದೀಗ ಅದನ್ನು ಮಾಲ್ಡೀವ್ಸ್ ಸರ್ಕಾರ ರದ್ದುಪಡಿಸಿದೆ. ಜಿಎಂಅರ್ ಸಮೂಹ ಸಂಸ್ಥೆಗಂತೂ ಅತಿ ದೊಡ್ಡ ನಷ್ಟವಾಗಿದೆ. ಈಗಾಗಲೇ ಕೋಟ್ಯಂತರ ರೂಪಾಯಿಗಳನ್ನು ಈ ವಿಮಾನ ನಿಲ್ದಾಣ ನವೀಕರಣ ಹಾಗೂ ಹೊಸ ನಿಲ್ದಾಣ ನಿರ್ಮಾಣಕ್ಕೆ ಜಿಎಂಆರ್ ಖರ್ಚು ಮಾಡಿದೆ.

ಈ ಯೋಜನೆಗಾಗಿಯೇ ಭಾರತದ ಎಕ್ಸಿಸ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್‌ಗಳು 16 ಕೋಟಿ ಡಾಲರ್ಹಣವನ್ನು ಸಾಲವನ್ನಾಗಿ ಸಂಸ್ಥೆಗೆ ನೀಡಿವೆ. ಈ ಬ್ಯಾಂಕುಗಳದ್ದೂ ಇದೀಗ ಕಂಗಾಲು ಸ್ಥಿತಿ.ಜಿಎಂಆರ್ ಜತೆಗಿನ ಒಪ್ಪಂದ ರದ್ಧತಿ ಹಿಂದೆ ಅಲ್ಲಿನ ಪ್ರತಿಪಕ್ಷಗಳ ವಿರೋಧ ಹಾಗೂ ವೋಟ್‌ಬ್ಯಾಂಕ್ ರಾಜಕೀಯಕ್ಕೆ ಬದಲಾಗಿ ಚೀನಾದ ಹುನ್ನಾರ ಇರಬಹುದೆಂದು ಈಗ ಅಂದಾಜು ಮಾಡಲಾಗಿದೆ. ಮಾಲ್ಡೀವ್ಸ್‌ಗೆ ಸೆಪ್ಟಂಬರ್‌ನಲ್ಲಿ ಚೀನಾ 50 ಕೋಟಿ ಡಾಲರ್ ಸಾಲ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಶ್ರೀಲಂಕಾದಲ್ಲೂ ಹಿನ್ನಡೆ
ಮಾಲ್ಡೀವ್ಸ್‌ನಲ್ಲಿ ಮಾತ್ರ ಭಾರತದ ಕಂಪೆನಿಗೆ ಹೊಡೆತ ಬಿದ್ದಿಲ್ಲ. ಶ್ರೀಲಂಕಾದಲ್ಲೂ ವ್ಯಾಪಾರ ವಲಯದಲ್ಲಿ ಭಾರತದ ಪ್ರಭಾವ ಕುಗ್ಗುತ್ತಿದ್ದು, ಚೀನಾ ಆಧಿಪತ್ಯ ಸ್ಥಾಪಿಸುತ್ತಿದೆ.  ಇತ್ತೀಚೆಗಷ್ಟೆ ಶ್ರೀಲಂಕಾದಲ್ಲಿನ 50,000 ಕೋಟಿ ಡಾಲರ್ ಮೊತ್ತದ `ಕೊಲಂಬೊ ಹಾರ್ಬರ್ ಎಕ್ಸ್‌ಪ್ಯಾನ್ಷನ್' ಯೋಜನೆ ಹಾಗೂ 36,000 ಕೋಟಿ ಡಾಲರ್ ಮೊತ್ತದ ಹಂಬಟೋಟಾ ಬಂದರು ನಿರ್ಮಾಣದ ಬೃಹತ್ ಯೋಜನೆಗಳನ್ನು ಚೀನಾ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಭಾರತದ ಆಟೊಮೊಬೈಲ್ ಕ್ಷೇತ್ರದ ವಿದೇಶಿ ವ್ಯಾಪಾರಕ್ಕೂ ಶ್ರೀಲಂಕಾ ದೊಡ್ಡ ಹೊಡೆತವನ್ನೇ ನೀಡಿದೆ. ಆಮದಾಗುವ ಎಲ್ಲ ಆಟೊಮೊಬೈಲ್ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ. ಅಲ್ಲದೆ ಹೊಸದಾಗಿ ಹೆಚ್ಚುವರಿ ಸುಂಕಗಳನ್ನು ಲಂಕಾ ಸರ್ಕಾರ ಹೇರಿದೆ. ಭಾರತದ ಆಟೊಮೊಬೈಲ್‌ನ ಸರಿ ಸುಮಾರು 600 ಕೋಟಿ ಡಾಲರ್ ವಿದೇಶಿ ವ್ಯಾಪಾರದಲ್ಲಿ 80 ಕೋಟಿ ಡಾಲರ್ ಮೊತ್ತದಷ್ಟು ವಹಿವಾಟು ಶ್ರೀಲಂಕಾದೊಂದಿಗೇ ನಡೆಯುತ್ತಿದೆ.

ಈಗ ಅಲ್ಲಿನ ಸರ್ಕಾರ ಹೊಸ ಸುಂಕಗಳನ್ನು ವಿಧಿಸಿರುವುದು ಭಾರತದ ವಿದೇಶಿ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ  ಶ್ರೀಲಂಕಾದೊಂದಿಗೆ ಮಾತುಕತೆ ನಡೆಸುವುದಾಗಿ ಪ್ರಕಟಿಸಿದೆ.ಶ್ರೀಲಂಕಾದ ಈ ದಿಢೀರ್ ಕ್ರಮದ ಹಿಂದೆ ಚೀನಾದ ಸಂಚು ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚೀನಾದ ನೆರವಿನಿಂದ ಶ್ರೀಲಂಕಾದಲ್ಲಿನ ಆಟೊಮೊಬೈಲ್ ಕ್ಷೇತ್ರ ಈಗಷ್ಟೇ ಕಣ್ಣುಬಿಡುತ್ತಿದೆ. ಆಮದಿನ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದರಿಂದ ಸಹಜವಾಗಿಯೇ ಭಾರತದ ಆಟೊಮೊಬೈಲ್ ಸರಕುಗಳು ದುಬಾರಿಯಾಗಲಿವೆ. ಚೀನಾ ಪೂರೈಸುವ ಬಿಡಿಭಾಗಗಳ ನೆರವಿನಿಂದ ತಯಾರಿಕೆಯಾಗುತ್ತಿರುವ ದೇಶೀಯ ಆಟೊಮೊಬೈಲ್ ಅಗ್ಗವಾಗಲಿದ್ದು, ಪರೋಕ್ಷವಾಗಿ ಚೀನಾ ಭಾರತವನ್ನು ಮಣಿಸಿ ತನ್ನ ಛಾಪನ್ನು ಹೆಚ್ಚಿಸಿಕೊಳ್ಳುತ್ತಿದೆ.

ಬಾಹ್ಯಾಕಾಶ ರಂಗದಲ್ಲೂ ಶ್ರೀಲಂಕಾ ಭಾರತವನ್ನು ಕಡೆಗಣಿಸಿದೆ. ಉಪಗ್ರಹ ಉಡಾವಣೆಯಂತಹ ಮಹತ್ವದ ಒಪ್ಪಂದವನ್ನು ಚೀನಾದೊಂದಿಗೇ ಮಾಡಿಕೊಂಡಿದೆ. ಕಳೆದ ತಿಂಗಳಷ್ಟೇ ತನ್ನ ಮೊದಲ ಉಪಗ್ರಹವನ್ನು ಚೀನಾದ ಉಡ್ಡಯನ ಕೇಂದ್ರದಿಂದ ಶ್ರೀಲಂಕಾ ಹಾರಿಬಿಟ್ಟಿದೆ.ಶಸ್ತ್ರಾಸ್ತ್ರಗಳ ಆಮದಿನಲ್ಲೂ ಶ್ರೀಲಂಕಾ ಚೀನಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅಧಿಕ ಪ್ರಮಾಣದ ಶಸ್ತ್ರಾಸ್ತ್ರಗಳು ಅಲ್ಲಿಂದಲೇ ಆಮದಾಗುತ್ತಿವೆ. ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಹೆದ್ದಾರಿಗಳು, ರೈಲು ಹಳಿಗಳು ಹಾಗೂ ನೀರಾವರಿಗೆ ಸಂಬಂಧಿಸಿದ ಕಾಮಗಾರಿಗಳ ಒಪ್ಪಂದಗಳನ್ನೂ ಚೀನಾದ ಕಂಪೆನಿಗಳೊಂದಿಗೆ ಶ್ರೀಲಂಕಾ ಮಾಡಿಕೊಂಡಿದೆ.

ಚೀನಾದೊಂದಿಗಿನ ವಾಣಿಜ್ಯ ಸಂಬಂಧ ಭಾರತದೊಂದಿಗಿನ ನಂಟಿಗೆ ತೊಡಕಾಗಬಹುದು ಎನ್ನುವ ಭಾವನೆ ಶ್ರೀಲಂಕಾಕ್ಕೆ ಇದೆ. ಈ ಮರ್ಮವನ್ನು ಅರಿತೇ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು, `ಚೀನಾದೊಂದಿಗೆ ಶ್ರೀಲಂಕಾ ಅಪ್ಪಟ ವ್ಯಾಪಾರಿ ಸಂಬಂಧವನ್ನಷ್ಟೇ ಹೊಂದಿದೆ' ಎಂಬ ಸ್ಪಷ್ಟನೆಯನ್ನೂ ಇತ್ತೀಚೆಗೆ ನೀಡಿದ್ದಾರೆ.ಮಾಲ್ಡೀವ್ಸ್ -ಶ್ರೀಲಂಕಾದಲ್ಲಿನ ವಿದ್ಯಮಾನಗಳು ಘಟಿಸುವುದಕ್ಕೆ ಕೇವಲ ಮೂರು ತಿಂಗಳ ಹಿಂದೆ ಕಾಕತಾಳೀಯ ಎಂಬಂತೆ ಮಾಲ್ಡೀವ್ಸ್ ಅಧ್ಯಕ್ಷರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ತಮ್ಮ ದೇಶವು ಚೀನಾದೊಂದಿಗೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಇಷ್ಟಪಡುತ್ತದೆ ಎಂದೂ ಹೇಳಿದ್ದರು.

ನೇಪಾಳದಲ್ಲೂ ಹಿನ್ನಡೆ
ನೇಪಾಳದಲ್ಲೂ ಭಾರತದ ಕಂಪೆನಿಗಳಿಗೆ ಚೀನಾ ಪರೋಕ್ಷವಾಗಿ ಭಾರಿ ಹೊಡೆತ ನೀಡಲಾರಂಭಿಸಿದೆ. ನೇಪಾಳದಲ್ಲಿನ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ `ತ್ರಿಭುವನ್ ವಿಮಾನ ನಿಲ್ದಾಣ' ನವೀಕರಣ ಹಾಗೂ ಅದನ್ನು ಮೇಲ್ದರ್ಜೆಗೇರಿಸುವ ಒಪ್ಪಂದಕ್ಕೆ ಭಾರತದ ಕಂಪೆನಿಗಳು ಆಸಕ್ತಿ ತೋರಿಸಿದ್ದವು. ಆದರೆ ನೇಪಾಳದ ಪ್ರತಿಪಕ್ಷಗಳ ವಿರೋಧದಿಂದಾಗಿ ಈ ಯೋಜನೆ ಭಾರತಕ್ಕೆ ಲಭಿಸಲೇ ಇಲ್ಲ. ಇದು ನಡೆದದ್ದು ಇದೇ ವರ್ಷ ಜುಲೈ ತಿಂಗಳಲ್ಲಿ.

ಸರಿ ಸುಮಾರು ಇದೇ ಹೊತ್ತಿಗೆ ನೇಪಾಳದ `ಪಶ್ಚಿಮ ಸೇತಿ ಜಲವಿದ್ಯುತ್ ಯೋಜನೆ'ಯ ಬೃಹತ್ ಮೊತ್ತದ ಒಪ್ಪಂದ ಭಾರತದ ಕಂಪೆನಿಯೊಂದಿಗೆ ಆಗಲಿದೆ ಅನ್ನುವಷ್ಟರಲ್ಲಿಯೇ ಚೀನಾ  ಆ ಯೋಜನೆಯನ್ನು ಹೈಜಾಕ್ ಮಾಡಿತು. ಇಡೀ ಕಾಮಗಾರಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಈ ಮೂಲಕ ನೇಪಾಳದಲ್ಲಿನ ಜಲ ಹಾಗೂ ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿನ ಭಾರತದ ಕಂಪೆನಿಗಳ ಪಾರುಪತ್ಯವನ್ನು ಚೀನಾ ಬಹುತೇಕ ಅಳಿಸಿಹಾಕಿದಂತಾಗಿದೆ.

ಹಿಂದೆಯೂ ಇದೇ ಕಥೆ-ವ್ಯಥೆ
2010ರಲ್ಲಿ ಮುದ್ರಣ ಕ್ಷೇತ್ರದಲ್ಲಿ ಭಾರತದ ಕಂಪೆನಿಯೊಂದರ ಜತೆಗಿನ ಒಡಂಬಡಿಕೆಯನ್ನೂ ನೇಪಾಳ ರದ್ದುಗೊಳಿಸಿತ್ತು. ನಂತರ ಅದನ್ನು ಫ್ರಾನ್ಸ್ ಕಂಪೆನಿಯೊಂದಕ್ಕೆ ವಹಿಸಲಾಯಿತು.ಕಳೆದೊಂದು ವರ್ಷದಲ್ಲಿ ಭಾರತದ ಕಂಪೆನಿಗಳ ಹೂಡಿಕೆ ನೇಪಾಳದಲ್ಲಿ ಶೇ 30ರಷ್ಟು ಕಡಿಮೆಯಾಗಿದೆ.
ನೇಪಾಳದಲ್ಲಿ ಜಲವಿದ್ಯುತ್ ಯೋಜನೆ ಆರಂಭಿಸಿರುವ ಭಾರತದ ಜಿಎಂಆರ್ ಕಂಪೆನಿಯ ಕಟ್ಟಡಗಳ ಮೇಲೆ ಮಾವೋವಾದಿಗಳು ಈ ವರ್ಷದಲ್ಲೇ ಅಮಾನುಷ ದಾಳಿ ನಡೆಸಿ, ಬೆದರಿಕೆ ಹಾಕಿದ್ದರು.

ಭೂತಾನ್‌ನಲ್ಲಿ ಚೀನಾ ಬಿಳಲು
ಪುಟ್ಟ ದೇಶ ಭೂತಾನ್, ಭಾರತದೊಂದಿಗೆ ಶತಮಾನಗಳಿಂದಲೂ ಗಾಢ ಸಂಬಂಧ ಹೊಂದಿದೆ. ಆದರೆ ಇತ್ತೀಚೆಗಷ್ಟೆ ಚೀನಾ ಕೂಡ ಅಲ್ಲಿ ತನ್ನ ಪ್ರಭಾವನ್ನು ಹೆಚ್ಚಿಸಿಕೊಳ್ಳುತ್ತಿದೆ. ರಾಜಧಾನಿ ಥಿಂಪುವಿನಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಬುದ್ಧನ ಪ್ರತಿಮೆ ಸ್ಥಾಪಿಸುವ ಒಪ್ಪಂದದ ಜತೆಗೆ ಅಲ್ಲಿನ ಶಿಕ್ಷಣ ಹಾಗೂ ಆರೋಗ್ಯದ ಕ್ಷೇತ್ರದ ಅನೇಕ ಯೋಜನೆಗಳನ್ನು ತನ್ನ ಕೈವಶ ಮಾಡಿಕೊಂಡಿದೆ. ಇದೇ ಯತ್ನದಲ್ಲಿದ್ದ ಭಾರತದ ಕಂಪೆನಿಗಳನ್ನು ಹಿಂದಿಕ್ಕಿರುವ ಚೀನಾ, ಭೂತಾನ್‌ನ ಬಹುತೇಕ ಅಭಿವೃದ್ಧಿ ಯೋಜನೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಪಾಕ್‌ನಲ್ಲೂ ಡ್ರಾಗನ್ ಪ್ರಾಬಲ್ಯ
ಭಾರತದ ಮಗ್ಗಲು ಮುಳ್ಳು ಎಂದೇ ಗುರುತಿಸಿಕೊಂಡಿರುವ ಪಾಕಿಸ್ತಾನದಲ್ಲಿ ತೀರಾ ಇತ್ತೀಚೆಗಷ್ಟೇ ಭಾರತಕ್ಕೆ ಹೂಡಿಕೆ ಮಾಡಲು ಮುಕ್ತ ಅವಕಾಶ ಸಿಕ್ಕಿದೆ. ಹಾಗೆಯೇ ಭಾರತವೂ ಪಾಕಿಸ್ತಾನದಿಂದ ಬಂಡವಾಳವನ್ನು ಹರಿದು ಬರಲು ಅವಕಾಶ ನೀಡಿದೆ. ಸದ್ಯ ವಿದ್ಯುತ್ ಕೊರತೆಯಿಂದ ತೀವ್ರವಾಗಿ ಪರಿತಪಿಸುತ್ತಿರುವ ಪಾಕ್ 500 ಮೆಗಾವಾಟ್ ವಿದ್ಯುತ್ತನ್ನು ಭಾರತದಿಂದ ತರಿಸಿಕೊಳ್ಳುತ್ತಿದೆ.

ಆದಾಗ್ಯೂ ಪಾಕಿಸ್ತಾನದಲ್ಲಿ ಭಾರತದ ಕಂಪೆನಿಗಳ ಹೂಡಿಕೆ ತೃಣಮಾತ್ರವಷ್ಟೆ! ಪಾಕ್‌ನಲ್ಲಿ 2000-01ರಲ್ಲಿ ಅಮೆರಿಕ ಕಂಪೆನಿಗಳ  ಹೂಡಿಕೆ 927 ಲಕ್ಷ ಡಾಲರ್‌ಗಳಷ್ಟಿದ್ದಿತು. ಹನ್ನೆರಡು ವರ್ಷಗಳ ಹಿಂದೆ ಅಲ್ಲಿ, ಚೀನಾ ಕಂಪೆನಿಗಳ ಹೂಡಿಕೆ 3ಲಕ್ಷ ಡಾಲರ್ ಮಾತ್ರವೇ ಇದ್ದಿತು. ಆದರೆ 2012-13ರ ಜುಲೈ ಅಂತ್ಯಕ್ಕೆ ಅಮೆರಿಕದ ಹೂಡಿಕೆ 445 ಲಕ್ಷ ಡಾಲರ್‌ಗೆ ಕುಸಿದಿದ್ದರೆ, ಚೀನಾ ಹೂಡಿಕೆ 84 ಲಕ್ಷ ಡಾಲರ್‌ಗೆ ಏರಿಕೆ ಕಂಡಿದೆ. ಚೀನಾದ ಭಾಗಶಃ ಆಡಳಿತಕ್ಕೆ ಒಳಪಟ್ಟಿರುವ ಹಾಂಕಾಂಗ್ 520 ಲಕ್ಷ ಡಾಲರ್‌ಗಳಷ್ಟು ಭಾರಿ ಹೂಡಿಕೆಯನ್ನು ಇಸ್ಲಾಮಾಬಾದ್‌ನಲ್ಲಿ ಮಾಡುತ್ತಿದೆ.  ಭಾರತದ ಎಡ-ಬಲದಲ್ಲಿರುವ ಪಾಕ್ ಮತ್ತು ಚೀನಾ ಮಧ್ಯೆ ಬಾಂಧ್ಯವ್ಯ ದಿನೇ ದಿನೇ ವೃದ್ಧಿಸುತ್ತಿದೆ. ಸಮಾಧಾನದ ಸಂಗತಿ ಎಂದರೆ ಪಾಕಿಸ್ತಾನ ಕಳೆದ ವಾರವಷ್ಟೇ ಭಾರತದಿಂದ ಅಕ್ಕಿಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಬಾಂಗ್ಲಾ ಸಿಹಿ-ಕಹಿ
ಭಾರತದ ಎಡಭಾಗದ ಸೊಂಟಕ್ಕೆ ಅಂಟಿಕೊಂಡಂತೆಯೇ ಇರುವ ಮತ್ತೊಂದು ನೆರೆಯ ದೇಶ ಬಾಂಗ್ಲಾ. ಸದ್ಯಕ್ಕೆ ಇಲ್ಲಿ ಭಾರತದ ವಾಣಿಜ್ಯ ಚಟುವಟಿಕೆಗೆ ಅಂತಹ ದೊಡ್ಡ ಸಮಸ್ಯೆಗಳು ಎದುರಾಗಿಲ್ಲ. ಬಾಂಗ್ಲಾ ಪ್ರಮುಖ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನವಿದೆ. ಅದರ ಆಮದು ಪ್ರಮಾಣದ ಶೇ 15ರಷ್ಟು ಪಾಲು ಭಾರತದ ಸರಕುಗಳದ್ದೇ ಆಗಿದೆ.ಆದರೆ ಈ ದೇಶದಲ್ಲಿನ ನೇರ ವಿದೇಶಿ ಹೂಡಿಕೆ ವಿಚಾರಕ್ಕೆ ಬಂದರೆ, ಇಲ್ಲಿ ಭಾರತಕ್ಕಿಂತ ಹೆಚ್ಚಿನ ಪಾಲನ್ನು ಚೀನಾ ಹೊಂದಿದೆ.ಇದಿಷ್ಟೂ ಭಾರತದ ನೆರೆಹೊರೆಯ ಸಮಾಚಾರ. ಕೊಡು-ಕೊಳ್ಳು ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ಎಲ್ಲ ನೆರೆಯ ದೇಶಗಳು ಭಾರತಕ್ಕಿಂತ ಚೀನಾಕ್ಕೆ ದೊಡ್ಡದಾಗಿ ಮಣೆ ಹಾಕುತ್ತಿವೆ ಎಂಬುದು ಸ್ಪಷ್ಟ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT