ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಬಾಂಧವ್ಯ ವೃದ್ಧಿಗೆ ಒತ್ತು

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ):  ಭಾರತ- ಬಾಂಗ್ಲಾ ದೇಶಗಳ ನಡುವೆ ಬಾಂಧವ್ಯ ವೃದ್ಧಿಗೆ ಒತ್ತು ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ವಾಣಿಜ್ಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬಾಂಗ್ಲಾದಿಂದ 61 ವಸ್ತುಗಳ ಆಮದಿಗೆ ಸುಂಕ ವಿನಾಯಿತಿ ಘೋಷಣೆ ಮಾಡಿದ್ದಾರೆ.

ಬಾಂಗ್ಲಾ ದೇಶದ ಈ ವಸ್ತುಗಳಲ್ಲಿ ಪ್ರಮುಖವಾಗಿ 46 ವಿವಿಧ ಬಗೆಯ ಜವಳಿ ಅದರಲ್ಲಿಯೂ ಸಿದ್ಧ ಉಡುಪುಗಳು ಸೇರಿವೆ. ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟಿನ ಅಂತರದ ಸಮಸ್ಯೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಂಗ್ ಇದೇ ಸಂದರ್ಭದಲ್ಲಿ ಹೇಳಿದರು.

ಭಾರತದೊಂದಿಗಿನ ತನ್ನ ವಾಣಿಜ್ಯ ವಹಿವಾಟಿನ ಅಂತರದ ಬಗ್ಗೆ ಬಾಂಗ್ಲಾದೇಶ ಸದಾ ಗಮನ ಸೆಳೆಯುತ್ತಿದೆ. ಪ್ರತಿ ವರ್ಷ ಭಾರತ ಬಾಂಗ್ಲಾ ದೇಶಕ್ಕೆ ಮೂರು ಶತಕೋಟಿ ಡಾಲರ್ ಮೊತ್ತದ ವಸ್ತುಗಳನ್ನು ರಫ್ತು ಮಾಡುತ್ತಿದೆ. ಪ್ರತಿಯಾಗಿ ಬಾಂಗ್ಲಾ ದೇಶ ಕೇವಲ 400 ದಶಲಕ್ಷ ಡಾಲರ್ ಮೊತ್ತದ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಸೆಣಬು, ಅಮೋನಿಯಾ ಮತ್ತು ಸಿದ್ಧಉಡುಪುಗಳು ಸೇರಿವೆ.

ವಾಣಿಜ್ಯ ವಹಿವಾಟು ವೃದ್ಧಿಗೆ ಸಂಬಂಧಿಸಿದಂತೆ ಗಡಿಯಲ್ಲಿ  ಸಂಚಾರ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಇದರಿಂದ ಭಾರತವಷ್ಟೇ ಅಲ್ಲದೇ ಇತರ ನೆರೆಯ ದೇಶಗಳೊಂದಿಗೂ ಬಾಂಗ್ಲಾ ದೇಶ ಉತ್ತಮ ವಹಿವಾಟು ನಡೆಸಬಹುದು ಎಂದರು.

ಅಲ್ಲದೆ ತಮಿಳುನಾಡಿನ ತಿರುಪೂರ್, ಕೊಯಮತ್ತೂರು, ಸೇಲಂ ಮತ್ತು ಈರೋಡ್ ಹಾಗೂ ಪಂಜಾಬಿನ ಲೂದಿಯಾನಗಳಲ್ಲಿರುವ ಜವಳಿ ಹಾಗೂ ಸಿದ್ಧ ಉಡುಪುಗಳ ಕಾರ್ಖಾನೆಗಳೊಂದಿಗೆ ವ್ಯವಹಾರಕ್ಕೆ ಅನುಮತಿ ನೀಡುವಂತೆಯೂ ಈ ಸಂದರ್ಭದಲ್ಲಿ ಬಾಂಗ್ಲಾ ದೇಶ ಕೋರಿಕೆ ಸಲ್ಲಿಸಿತು.

ಬಾಂಗ್ಲಾ ದೇಶದ ಜವಳಿ ಮತ್ತು ಸಿದ್ಧ ಉಡುಪುಗಳ ಕ್ಷೇತ್ರದ 46 ವಸ್ತುಗಳಿಗೆ ಭಾರತ ಸುಂಕ ವಿನಾಯಿತಿ ನೀಡುವುದರಿಂದ ಭಾರತದ ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರಕ್ಕೆ ತೊಂದರೆ ಆಗುತ್ತದೆ ಎಂದು ಭಾರತೀಯ ಜವಳಿ ಉದ್ಯಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಕೆ.ನಾಯರ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಮಮತಾ ಗೈರು: ಪ್ರಧಾನಿಗೆ ಅವಮಾನ (ಢಾಕಾ ವರದಿ):  ಪ್ರಧಾನಿ ನಿಯೋಗದ ಜತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಢಾಕಾಗೆ ತೆರಳದಿದ್ದುದು ಮನಮೋಹನ್ ಸಿಂಗ್ ಅವರಿಗೆ ಆದ ಅವಮಾನ ಎಂದು ಇಲ್ಲಿನ ದಿನಪತ್ರಿಕೆಯೊಂದು ವರದಿ ಮಾಡಿದೆ.

ಗುರುದ್ವಾರಕ್ಕೆ ಗುರುಶರಣ್ ಭೇಟಿ: ಬಾಂಗ್ಲಾ ಪ್ರವಾಸದಲ್ಲಿರುವ ಪ್ರಧಾನಿ ಮನ ಮೋಹನ್ ಸಿಂಗ್ ಅವರ  ಪತ್ನಿ ಗುರು ಶರಣ್‌ಕೌರ್ ಅವರು ಢಾಕಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ನಾನಕ್‌ಶಾಹಿ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಗುರುಶರಣ್‌ಕೌರ್  ಹತ್ತು ಸಾವಿರ ಟಾಕಗಳಷ್ಟು ಹಣವನ್ನು ಮಂದಿರಕ್ಕೆ ನೀಡಿದರು ಎಂದೂ ಗುರುದ್ವಾರದ ಆಡಳಿತ ಮಂಡಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ  ನಾರಾಯಣ  ರವಿದಾಸ್ ಪಪ್ಪು ತಿಳಿಸಿದ್ದಾರೆ.

ಉಲ್ಫಾ ಮುಖಂಡನಿಗಾಗಿ ಕೋರಿಕೆ : ಉಲ್ಫಾ ಉಗ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅನೂಪ್ ಚೆಟಿಯಾನನ್ನು ಒಪ್ಪಿಸುವಂತೆ ಭಾರತ ಬಾಂಗ್ಲಾ ದೇಶಕ್ಕೆ ಮನವಿ ಸಲ್ಲಿಸಿದೆ.

ಸ್ವದೇಶಕ್ಕೆ ಪ್ರಧಾನಿ ಸಿಂಗ್: ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ ಇಲ್ಲಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದರು.

ಸಂಜೆ ಆರು ಗಂಟೆಗೆ ಇಲ್ಲಿನ ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಂಗ್ ಅವರಿಗೆ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಸೇರಿದಂತೆ ಹಲವು ಗಣ್ಯರು ಬೀಳ್ಕೊಟ್ಟರು.

ತೀಸ್ತಾ-ಪರಿಹಾರಕ್ಕೆ ಸೂಚನೆ
ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದದ ಮಾತುಕತೆ ಕೊನೆ ಗಳಿಗೆಯಲ್ಲಿ ರದ್ದುಗೊಂಡಿದ್ದರೂ ಸಹ, ಸಮಸ್ಯೆ ಪರಿಹಾರಕ್ಕೆ ಯೋಗ್ಯವಾದ ಮಾರ್ಗೋಪಾಯ ಕಂಡು ಹಿಡಿಯುವಂತೆ ಪ್ರಧಾನಿ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಉಭಯ ದೇಶಗಳ ಅಧಿಕಾರಿಗಳು ಪರಿಶ್ರಮ ಪಟ್ಟು ಸೂತ್ರವೊಂದನ್ನು ಕಂಡು ಹಿಡಿದಿದ್ದರು. ಆದರೆ ತಮ್ಮ ಭೇಟಿಯ ಅವಧಿಯಲ್ಲಿಯೇ ಒಪ್ಪಂದ ಏರ್ಪಡದೇ ಇರುವುದು ದುರದೃಷ್ಟಕರ ಎಂದು ಢಾಕಾ ವಿವಿಯಲ್ಲಿ ಶಿಕ್ಷಣತಜ್ಞರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.

ಹಿಲ್ಸಾ ರುಚಿಗೆ ಮನಸೋತ ಸಿಂಗ್!
ಪ್ರಧಾನಿ ಮನಮೋಹನ್ ಸಿಂಗ್ ಅವರು ಸಸ್ಯಾಹಾರಿ. ಆದರೆ ಬಾಂಗ್ಲಾ ದೇಶದ ರಾಷ್ಟ್ರೀಯ ಮೀನು ಎಂದು ಪರಿಗಣಿಸಲ್ಪಟ್ಟಿರುವ ಹಿಲ್ಸಾ ರುಚಿ ನೋಡುವ ಬಯಕೆಯಿಂದ ಅವರು ತಮ್ಮ ಸಸ್ಯಾಹಾರವನ್ನು ಮುರಿಯುವ ನಿರ್ಧಾರ ಮಾಡ್ದ್ದಿದಾರೆ. ಅತ್ಯಂತ ರುಚಿಯಾಗಿರುವ ಈ ಮೀನು ಬಾಂಗ್ಲಾ ದೇಶವಲ್ಲದೇ, ಪಶ್ಚಿಮ ಬಂಗಾಳದಲ್ಲಿಯೂ ಜನಪ್ರಿಯ ಎಂದು ಇಲ್ಲಿನ ಕೃಷಿ ವಿವಿಯ ಮಹಮ್ಮದ್ ಅಮಿನುಲ್ ಇಸ್ಲಾಂ ಹೇಳುತ್ತಾರೆ.

  ಇದು ಸಮುದ್ರದ ಮೀನು. ಇವು ತತ್ತಿ ಇಡಲು ನದಿಗಳಿಗೆ ವಲಸೆ ಹೋಗುತ್ತವೆ. ಆದರೆ ಈಗ ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಿಡಿಯುತ್ತಿರುವುದರಿಂದ ವಿನಾಶದ ಅಂಚಿಗೆ ಬಂದಿವೆ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT