ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಸಂಬಂಧ ಬಲಪಡಿಸಿ

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಹಿಮಾಲಯದ ತಪ್ಪಲಲ್ಲಿರುವ ನೆರೆಯ ರಾಷ್ಟ್ರ ಭೂತಾನ್‌ನಲ್ಲಿ ರಾಷ್ಟ್ರೀಯ ಅಸೆಂಬ್ಲಿಯ 47 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷವಾದ ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ (ಪಿಡಿಪಿ) 32 ಸ್ಥಾನಗಳನ್ನು ಗೆದ್ದು ಅಧಿಕಾರ ಗಳಿಸಿದೆ.ಈವರೆಗೆ ದೇಶ ಆಳುತ್ತಿದ್ದ ಪ್ರಧಾನಿ ಜಿಗ್ಮಿ ಯೋಸರ್ ಥಿನ್ಲೇ ಅವರ ಪಕ್ಷವು ಕೇವಲ 15 ಸ್ಥಾನ ಗಳಿಸಿ, ಅಧಿಕಾರ ಕಳೆದುಕೊಂಡಿದೆ.

2008ರಲ್ಲಿ ಅರಸೊತ್ತಿಗೆಯನ್ನು ತೊರೆದು ಪ್ರಜಾಪ್ರಭುತ್ವವನ್ನು ಆಲಿಂಗಿಸಿದ ದೇಶ ಭೂತಾನ್. ಇತ್ತೀಚೆಗೆ ಭಾರತದ ಜತೆಗೆ ಭೂತಾನ್‌ನ ರಾಜತಾಂತ್ರಿಕ ಸಂಬಂಧ ಅಷ್ಟೇನೂ ಹಿತಕರವಾಗಿಲ್ಲ. ಮಾಜಿ ಪ್ರಧಾನಿ ಥಿನ್ಲೇ ಭಾರತಕ್ಕಿಂತ ಹೆಚ್ಚಾಗಿ ಚೀನಾದ ಜತೆಗೆ ನಿಕಟವಾಗಿದ್ದವರು. ಭಾರತ ಮತ್ತು ಚೀನಾದ ಗಡಿಗಳ ಮಧ್ಯೆ ಸೂಕ್ಷ್ಮ ಸ್ಥಳದಲ್ಲಿ ಇರುವ ಭೂತಾನ್‌ನಲ್ಲಿ, ಈಗ ಪಿಡಿಪಿ ಅಧಿಕಾರ ಗಳಿಸಿರುವುದು ಭಾರತದ ಜತೆಗಿನ ಸಂಬಂಧ ಸುಧಾರಣೆಗೆ ನೆರವಾಗುವುದು ಖಚಿತ.

ಭಾರತದ ಪೆಟ್ರೋಲಿಯಂ ಉತ್ಪನ್ನಗಳಿಗೆ ಭೂತಾನ್‌ನಲ್ಲಿ ಇದ್ದ ಸಬ್ಸಿಡಿಯನ್ನು ನಮ್ಮ ತೈಲ ಕಂಪೆನಿಗಳು ಇತ್ತೀಚೆಗೆ ಹಿಂತೆಗೆದುಕೊಂಡ ಬಗ್ಗೆ ಭೂತಾನ್ ಪ್ರತಿಭಟನೆ ಸಲ್ಲಿಸಿತ್ತು. ಈ ಸಂಬಂಧದ ಒಪ್ಪಂದದ  ಅವಧಿ ಜೂನ್ 30ಕ್ಕೆ ಮುಗಿದಿದ್ದರಿಂದ ಸಹಜವಾಗಿ ಈ ಸಬ್ಸಿಡಿ ಕಡಿತ ಉಂಟಾಗಿದೆ. `ಇದೊಂದು ತಾಂತ್ರಿಕ ವಿಷಯ. ಶೀಘ್ರವೇ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು' ಎಂದು ಭಾರತ ಸರ್ಕಾರ ಸ್ಪಷ್ಟೀಕರಣವನ್ನೂ ನೀಡಿದೆ. `ಭೂತಾನ್‌ನ ಮತ್ತು ಅಲ್ಲಿನ ಜನರ ಸಾಮಾಜಿಕ- ಆರ್ಥಿಕ ಅಭಿವೃದ್ಧಿಯಲ್ಲಿ ವಿಶೇಷ ಪಾಲುದಾರನಾಗಲು ಭಾರತ ಬಯಸುತ್ತದೆ.

ನಮ್ಮ ದ್ವಿಪಕ್ಷೀಯ ಸಂಬಂಧವು ನಂಬಿಕೆ, ಪರಸ್ಪರ ವಿಶ್ವಾಸ ಮತ್ತು ತಿಳಿವಳಿಕೆಯ ತಳಪಾಯದ ಮೇಲೆ ನಿಂತಿದೆ. ಉಭಯ ದೇಶಗಳ ಸಂಬಂಧವು ಇನ್ನಷ್ಟು ವೃದ್ಧಿಯಾಗಲಿದೆ' ಎಂದು ಪ್ರಧಾನಿ ಮನಮೋಹನ ಸಿಂಗ್ ಅವರು ಚುನಾವಣೆಯಲ್ಲಿ ಜಯ ಗಳಿಸಿದ ಪಿಡಿಪಿ ನಾಯಕ ತ್ಸೆರಿಂಗ್ ಟೋಬ್‌ಗೇ ಅವರಿಗೆ ಶುಭಸಂದೇಶ ಕಳುಹಿಸಿರುವುದು ಸೂಕ್ತವಾಗಿಯೇ ಇದೆ.

ಭಾರತ ಮತ್ತು ಭೂತಾನ್ ಎರಡರ ಜತೆಗೂ ಚೀನಾ ಗಡಿ ತಕರಾರುಗಳನ್ನು ಮಾಡಿಕೊಂಡಿದೆ. ಚೀನಾದ ಗಡಿ ಒತ್ತುವರಿಯಿಂದಾಗಿ ಕುಲಾ ಕಾಂಗ್ರಿ ಶಿಖರದ ಸಹಿತ ಮೂರು ಪ್ರದೇಶಗಳನ್ನು ಭೂತಾನ್ ಈಗಾಗಲೇ ಕಳೆದುಕೊಂಡಿದೆ. ಉಳಿದ ಗಡಿ ತಕರಾರಿನ ಸ್ಥಳಗಳನ್ನು ಉಳಿಸಿಕೊಳ್ಳಲು ಪಶ್ಚಿಮದ ಚುಂಬಿ ಕಣಿವೆಯ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಡುವ ಪ್ರಸ್ತಾವವೂ ಭೂತಾನ್ ಮುಂದಿದೆ.

ಹೀಗಾದಲ್ಲಿ ಭಾರತದ ಗಡಿಯಲ್ಲಿ ಚೀನಾದ ಒತ್ತಡ, ಕಿರಿಕಿರಿ ಹೆಚ್ಚಬಹುದು. ಈ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಲು ಭಾರತವು ಭೂತಾನ್ ಜತೆಗೆ ಹೆಚ್ಚು ಮುತ್ಸದ್ದಿತನದ ವರ್ತನೆ ತೋರಬೇಕಿದೆ. ಮುಖ್ಯವಾಗಿ ಉಭಯ ದೇಶಗಳ ನಡುವೆ ವಾಣಿಜ್ಯ ಒಪ್ಪಂದಗಳಿಗೆ ಹೆಚ್ಚು ಒತ್ತು ಕೊಟ್ಟರೆ, ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸುವುದು ಸುಲಭವಾಗಲಿದೆ. ಭೂತಾನ್‌ನಲ್ಲಿ ಹೊಸ ಸರ್ಕಾರ ಬಂದಿರುವುದೂ ಇದಕ್ಕೆ ಪೂರಕ ವಾತಾವರಣ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT