ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ಯದಂಗಡಿಯಲ್ಲೇ ಸಂಗೀತ ಕಲಿಕೆ

Last Updated 10 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಸಂಗೀತಕ್ಕೆ ಎಲ್ಲೆಯಿಲ್ಲ. ದಿನೇದಿನೇ ಇದಕ್ಕೆ ಹೊಸ ಪ್ರಯೋಗಗಳ ನಂಟು. ಮನರಂಜನೆಗೆ ಸೀಮಿತವಾಗಿದ್ದ ಸಂಗೀತ ಹವ್ಯಾಸವಾಗಿ ಮಾರ್ಪಾಟಾಗಿದೆ. ಪ್ರತಿ ಕುಟುಂಬದಲ್ಲೂ ಹಾಡು ಉಲಿಯುವ ಮಕ್ಕಳು ಕಾಣಸಿಗುತ್ತಾರೆ.

`ಫ್ಯೂಷನ್~ನ ಹಂಗು, ಪಾಶ್ಚಿಮಾತ್ಯ ಸಂಗೀತದ ಗುಂಗಿನಿಂದ ಸಂಗೀತ ವಾದ್ಯಗಳನ್ನು ಮಾರುವ ಮಳಿಗೆಗಳೂ ಈಗ ಹೊಸ ರಂಗು ಪಡೆದುಕೊಂಡಿವೆ. ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕರ ಆಯ್ಕೆಯೂ ಆಗಿರುವ `ರೆನಾಲ್ಡ್ಸ್~ನಲ್ಲಿ ಸುಮಾರು 800ರಿಂದ 1000 ಬಗೆಯ ವಾದ್ಯಗಳು ಸಿಗುತ್ತವೆ.

`ಕೆಲವು ವರ್ಷಗಳ ಹಿಂದಿಗೆ ಹೋಲಿಸಿದರೆ ನಗರದಲ್ಲಿ ಸಂಗೀತ ಶಾಲೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಹೆಚ್ಚುತ್ತಿರುವ ಸ್ಪರ್ಧಾತ್ಮಕ ಮನೋಭಾವ, ರಿಯಾಲಿಟಿ ಶೋಗಳೂ ಇದಕ್ಕೆ ಇಂಬು ನೀಡಿವೆ.
 
ಬದಲಾಗುತ್ತಿರುವ ಅಗತ್ಯಕ್ಕೆ ಸ್ಪಂದಿಸುತ್ತಾ ನಮ್ಮ ಮಳಿಗೆ ಮೂರು ದಶಕಗಳಲ್ಲಿ ಹೊಸ ರೂಪ ಪಡೆದುಕೊಂಡಿದೆ~ ಎಂದು ವಾದ್ಯವೈವಿಧ್ಯ ತೋರಿಸುತ್ತಾ ತಮ್ಮ ಸಂಗೀತಾಭಿಮಾನವನ್ನೂ ವ್ಯಕ್ತಪಡಿಸಿದವರು ಮಳಿಗೆಯ ವ್ಯವಸ್ಥಾಪಕ ರಘುನಂದನ್.

ಇಲ್ಲಿ ಸಂಗೀತ ಪರಿಕರಗಳ ಮಳಿಗೆಗಳು ರಸ್ತೆಗೊಂದರಂತಿವೆ. ಆದರೆ ಎಲ್ಲಾ ಸಾಧನಗಳೂ ಒಂದೇ ಕಡೆ ದೊರೆಯುವ ಅವಕಾಶ ಕಡಿಮೆ. ಮೂರು ದಶಕಗಳ ಹಿನ್ನೆಲೆಯಿರುವ ರೆನಾಲ್ಡ್ಸ್ ನಗರದಲ್ಲಿ ಮೂರು ಕಡೆ ಮಳಿಗೆಗಳನ್ನು ಹೊಂದಿದೆ. ರಾಜ್‌ಕುಮಾರ್ ರಸ್ತೆಯಲ್ಲಿ ಅದು ಆರಂಭವಾಗಿ ನಾಲ್ಕು ವರ್ಷ ಕಳೆದಿದೆಯಷ್ಟೆ.

`ಕೆಲವು ವರ್ಷಗಳ ಹಿಂದೆ ರಾಗಕ್ಕೆ ತಟ್ಟುಮಣೆ ನಾದ ಜತೆಯಾಗುತ್ತಿತ್ತು. ಆದರೆ ಈಗ ಡ್ರಮ್‌ಗಳ ಸದ್ದು ಜೋಶ್ ನೀಡುತ್ತವೆ. ಒಬ್ಬೊಬ್ಬರ ಅಭಿರುಚಿಯೂ ಒಂದೊಂದು ತರಹ. ಅವರಿಗೆ ತಕ್ಕಂತೆ ಸಂಗೀತ ಪ್ರಕಾರವೂ ಹೊಸ ರೂಪು ಪಡೆದುಕೊಳ್ಳುತ್ತಿದೆ.
 
ಆದರೆ ಇಲ್ಲಿಗೆ ಬಂದರೆ ನೀವು ಎರಡೂ ತಲೆಮಾರಿನ ಸಾಧನಗಳನ್ನು ನೋಡಿ ಕೊಂಡುಕೊಳ್ಳಬಹುದು~ ಎನ್ನುವ ರಘು ತಮ್ಮ ಮಳಿಗೆಯ ಗ್ರಾಹಕರ ಪಟ್ಟಿಯಲ್ಲಿ ಸಂಗೀತ ನಿರ್ದೇಶಕರಾದ ಗುರುಕಿರಣ್, ಹಂಸಲೇಖ, ಸಾಧುಕೋಕಿಲ, ಮನೋಮೂರ್ತಿ ಇರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

`ರೆನಾಲ್ಡ್ಸ್‌ನಲ್ಲಿ ಕೇವಲ ಸಂಗೀತ ಪರಿಕರಗಳಷ್ಟೇ ಅಲ್ಲ, ಪೂರಕ ಸಾಮಗ್ರಿಗಳೂ ದೊರೆಯುತ್ತವೆ. ಸಂಗೀತ ಪರಿಕರಗಳೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಅತ್ಯುತ್ತಮ ಸೌಂಡ್ ಅಂಡ್ ಲೈಟಿಂಗ್ ವ್ಯವಸ್ಥೆ ಅಳವಡಿಸುವಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ~ ಎಂಬುದು ಅವರ ವಿವರಣೆ.

ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ, ಹೀಗೆ ಎಲ್ಲಾ ಪ್ರಕಾರಗಳಿಗೂ ಇಲ್ಲಿ ಆಯ್ಕೆ ಹಲವು. ಸಂಗೀತಕ್ಕೆ ಜತೆಯಾಗುವ ವೀಣೆ, ವಯೊಲಿನ್, ಮೃದಂಗ, ಘಟಂ, ಭರತನಾಟ್ಯ ಗೆಜ್ಜೆಗಳು, ತಟ್ಟು ಮಣೆ, ನಟುವಾಂಗ, ಉಡ್ಕಿ, ತಂಬೂರಿ, ಕೊಳಲು, ಇವಷ್ಟಲ್ಲದೇ ಹಿಂದೂಸ್ತಾನಿ ಸಂಗೀತಕ್ಕೆ ಸಾಥ್ ನೀಡುವ ಸಿತಾರ್, ಸರೋದ್, ಸಾರಂಗ್, ದಿಲ್‌ರುಬಾ, ತಬಲಾ, ತಾನ್ಪುರ, ಹಾರ್ಮೋನಿಯಂ, ಡೋಲಕ್, ಲೆಹರಾ, ಬಾನ್ಸುರಿ... ಇವೆಲ್ಲವೂ ಇಲ್ಲಿ ಲಭ್ಯ ಎಂದು ಪಟ್ಟಿ ಮಾಡುತ್ತಾರೆ.

ಇನ್ನು ಪಾಶ್ಚಾತ್ಯ ಸಂಗೀತವನ್ನು ಕನವರಿಸುವವರಿಗೆ ಇಲ್ಲಿ ವಿಪುಲ ಅವಕಾಶ. ತಂತಿ ವಾದ್ಯ, ಸುಶಿರ ವಾದ್ಯ ಹಾಗೂ ಲಯವಾದ್ಯದ ಎಲ್ಲಾ ರೀತಿಯ ವಾದ್ಯ, ಸಾಧನಗಳನ್ನೂ ಇಲ್ಲಿ ನೋಡಬಹುದು.
 
ಗಿಟಾರ್, ಅಕೌಸ್ಟಿಕ್ಸ್, ಸೆಮಿ ಅಕೌಸ್ಟಿಕ್ಸ್, ಟ್ರಂಪೆಟ್, ಸ್ಯಾಕ್ಸೊಫೋನ್, ಕ್ಲಾರಾನೆಟ್, ಹಾರ್ಮೊನಿಕಾ, ಮೆಲೋಡಿಯನ್, ಜಿಂಬೋ, ದರ್ಬುಕಾ, ಡ್ರಮ್ ಸೆಟ್, ಟ್ರಿಪಲ್ ಕಾಂಗೋ, ಟ್ಯಾಂಬೊರಿನ್,  ಖಂಜಿರ, ಪಿಯಾನೊ, ಚೆಲ್ಲೋ ಹೀಗೆ ಹಲವು ವಾದ್ಯಗಳ ಹೆಸರನ್ನು ನಿರರ್ಗಳವಾಗಿ ಹೇಳುತ್ತಾ ಇದ್ದರು.

ಇಂದಿನ ಪೀಳಿಗೆ ಫ್ಯೂಷನ್ ಸಂಗೀತವನ್ನು ಹೆಚ್ಚು ಇಷ್ಟಪಡುತ್ತದೆ. ಬ್ಯಾಂಡ್‌ಗಳೂ ಫ್ಯೂಷನ್ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತವೆ. ಅಂತಹವರು ಇಲ್ಲಿಗೆ ಬಂದು ಖುಷಿಯಿಂದ ಸಾಧನಗಳನ್ನು ಕೊಂಡುಕೊಳ್ಳುತ್ತಾರೆ. ಕೆಲವರು ಉಡುಗೊರೆಯಾಗಿಯೂ ವಾದ್ಯಗಳನ್ನು ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಸಂಗೀತ ಕಲಿಯುವವರಿಗೆ ವಾದ್ಯಗಳ ಸಾಥ್ ನೀಡಲೆಂದು ತಬಲಾ,  ಮೃದಂಗ, ಲೆಹರಾ, ವೀಣೆ, ವಯೊಲಿನ್, ಡೋಲಕ್ ಹೀಗೆ ವಿವಿಧ ನಾದಗಳ ಶ್ರುತಿ ಪೆಟ್ಟಿಗೆಗಳೂ ಇಲ್ಲಿವೆ. ವಾದ್ಯ ಕಲಿಯುವವರಿಗೆ ಇಲ್ಲಿ ತರಗತಿಗಳನ್ನು ನಡೆಸುತ್ತ್ದ್ದಿದು, ಸಂಗೀತ ಪಾಠ ಹೇಳಲೆಂದೇ ಆರು ಮಂದಿ ಇಲ್ಲಿಗೆ ಬರುತ್ತಾರೆ. ಸದ್ಯಕ್ಕೆ 180 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಅವರ ಸಂಖ್ಯೆಯೂ ದಿನೇದಿನೇ ಹೆಚ್ಚುತ್ತಿದೆಯಂತೆ.

ಸಂಗೀತ ಸಾಧನಗಳನ್ನು ಕೊಂಡುಕೊಳ್ಳುವ ಬಗ್ಗೆ ಗೊಂದಲಇರುವವರಿಗೆ ಇಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗುತ್ತದೆ.
 


`ಇಂಥ ಮಳಿಗೆಗಳು ಬೇಕು~
ರೆನಾಲ್ಡ್ಸ್‌ನಲ್ಲಿ ಸಂಗೀತ ಸಾಧನಗಳ ಅದ್ಭುತ ಸಂಗ್ರಹವಿದೆ. ಅಷ್ಟೇ ಅಲ್ಲ, ಇದರೊಂದಿಗೆ ಸಂಗೀತ ಶಾಲೆ ನಡೆಸುತ್ತಿರುವ ವಿಭಿನ್ನ ಸಂಸ್ಥೆಯೂ ರೆನಾಲ್ಡ್ಸ್ ಎನ್ನಬಹುದು.
 
ಇವರ  ಸಂಗೀತಾಸಕ್ತಿಯೂ ಆಶ್ಚರ್ಯಕರ. ವಿದೇಶಗಳಿಂದ ಸಂಗೀತ ಸಾಧನಗಳನ್ನು ಆಮದು ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಇದರಲ್ಲಿ ನಷ್ಟವೇ ಹೆಚ್ಚಾಗಿರುತ್ತದೆ. ಆದರೂ ಸಂಗೀತಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಅವೆಲ್ಲವನ್ನೂ ಮೆಟ್ಟಿ ನಿಂತು ನಗರದಲ್ಲಿ ಬೆಳವಣಿಗೆ ಕಾಣುತ್ತಿರುವುದು ಸಂತಸದ ಸಂಗತಿ.

ನಾನೂ ಕಳೆದ ಮೂರು ವರ್ಷಗಳಿಂದ ಅಲ್ಲಿನ ಗ್ರಾಹಕ. ಹಾರ್ಮೋನಿಯಂ, ಪಿಯಾನೊ, ಕೀಬೋರ್ಡ್ ಹೀಗೆ ವಿವಿಧ ಸಾಧನಗಳನ್ನು ಇವರಲ್ಲಿಯೇ ಕೊಂಡುಕೊಂಡಿದ್ದೇನೆ. ನಗರದಲ್ಲಿ ಸಂಗೀತಾಸಕ್ತರು ಹೆಚ್ಚುತ್ತಿದ್ದಾರೆ. ಈ ಕಾರಣ ಇಂತಹ ಮಳಿಗೆಗೆಳ ಅವಶ್ಯಕತೆಯಿದೆ.
-ಹಂಸಲೇಖ, ಸಂಗೀತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT