ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ಯಮೇಳದಲ್ಲಿ ಮಿಂಚಿದ ಹಂಸಧ್ವನಿ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಖ್ಯಾತ ಗಾಯಕಿ ಎಂ.ಎಸ್.ಶೀಲಾ ಅವರ ಹಂಸಧ್ವನಿ ಕ್ರಿಯೇಷನ್ಸ್‌ನ ಹದಿಮೂರನೆ ವಾರ್ಷಿಕೋತ್ಸವದ ಅಂಗವಾಗಿ ಸೇವಾಸದನದಲ್ಲಿ ಏರ್ಪಡಿಸಿದ್ದ ಎರಡನೆಯ ದಿನದ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು.

ಎರಡು ವೀಣೆಗಳು (ರೇವತಿ ಮೂರ್ತಿ ಮತ್ತು ಗೀತಾ ರಮಾನಂದ), ಒಂದು ಕೊಳಲು (ಅಮಿತ್ ನಾಡಿಗ್) ಮತ್ತು ಒಂದು ಪಿಟೀಲು (ಮತ್ತೂರು ಶ್ರೀನಿಧಿ) ವಾದ್ಯಗಳ ಜೊತೆಗೆ ವಿ.ಎಸ್. ರಾಜಗೋಪಾಲ್ (ಮೃದಂಗ), ಶ್ರೀಶೈಲ (ಘಟ) ಮತ್ತು ಎಂ.ಗುರುರಾಜ್ (ಮೋರ್ಸಿಂಗ್) ಅವರ ಪಕ್ಕವಾದ್ಯಗಳನ್ನೊಳಗೊಂಡಿದ್ದ ವಾದ್ಯ ಕಛೇರಿಯು ಮುದನೀಡಿತು.

ಯೋಜನಾಬದ್ಧವಾಗಿ ನಡೆದ ಕಛೇರಿಯಲ್ಲಿ ಎಲ್ಲ ನುರಿತ ಕಲಾವಿದರು ಮಿಂಚಿದರು. ಕಛೇರಿಯು ಪೂರ್ವ ಸಿದ್ಧತೆಗಳಿಂದೊಡಗೂಡಿದ್ದರೂ ಮನೋಧರ್ಮದ ವಿಕಸನ ಮತ್ತು ಪ್ರಕಟಣೆಗಳಿಗೆ ಸಾಕಷ್ಟು ಅವಕಾಶಗಳು ನಿರ್ಮಿತಗೊಂಡು ಭಾಗವಹಿಸಿದ್ದ ಎಲ್ಲ ವಾದ್ಯಗಾರರ ಹಿರಿಮೆಗಳು ಅಭಿವ್ಯಕ್ತಗೊಂಡವು. ಖಮಾಚ್ ದರು (ಮಾತೆ ಮಲಯಾಧ್ವಜ) ಸೊಗಸಾದ ಪೀಠಿಕೆಯಾಯಿತು. ನಂತರ ಪಲ್ಲವಿಯೊಂದನ್ನು ಹಂಸಧ್ವನಿ ರಾಗದಲ್ಲಿ ವಿಸ್ತರಿಸಲಾಯಿತು. ರಾಗ, ತಾನಗಳ ಮುನ್ನುಡಿಯ ನಂತರ `ವೀಣಾ ಸರಸ್ವತಿ ದೇವೀ ಹಂಸಧ್ವನಿ ಸಲಹು' ಪಲ್ಲವಿಯನ್ನು ಆದಿತಾಳದಲ್ಲಿ ಹೆಣೆದು ನಂತರ ಮನೋಧರ್ಮ ಭಾಗಗಳಲ್ಲಿ ಪ್ರತ್ಯೇಕವಾಗಿ ಹಾಗೂ ಜೊತೆಗೂಡಿ ಸಕ್ರಿಯವಾಗಿ ಸ್ಪಂದಿಸಿ ಅಂದಿನ ವಾದ್ಯ ಕಛೇರಿಗೆ ಉತ್ತಮ ಸಮಾಪ್ತಿಯನ್ನೊದಗಿಸಿದರು. ಸ್ವರಸಂಯೋಜನೆಯ ಹಿಂದಿನ ಕಾಲದಿಂದಲೂ ಜನಪ್ರಿಯವಾದ ಕೀರವಾಣಿ ನಗಮಾಬು ರಸಿಕರನ್ನು ನಲಿಸಿತು.

ಮಲ್ಲಾಡಿ ಸೋದರರೆಂದೇ ಸುಪ್ರಸಿದ್ಧರಾಗಿರುವ ಶ್ರೀರಾಮ ಪ್ರಸಾದ್ ಮತ್ತು ರವಿಕುಮಾರ್ ತುಂಬಿದ್ದ ಸಭೆಯನ್ನು ನಿರಾಸೆಗೊಳಿಸಲಿಲ್ಲ. ಅವರ ಯುಗಳ ಗಾಯನ ಕಛೇರಿಯು ವಸ್ತು ನಿರ್ದಿಷ್ಟವಾಗಿದ್ದರೂ ಕರ್ನಾಟಕ ಸಂಗೀತದ ಕಲ್ಪನಾ ವಿಲಾಸದ ದಿಗ್ದರ್ಶನವಾದದ್ದು ಖುಷಿ ಕೊಟ್ಟಿತು. ತ್ಯಾಗರಾಜರು ವೈವಿಧ್ಯದ ಪಂಚರತ್ನ ಕೃತಿಗಳನ್ನು ರಚಿಸಿರುವುದು ಗಮನಾರ್ಹ ಸಂಗತಿ. ಕೋವೂರಿನ ಸುಂದರೇಶ್ವರನನ್ನು ಕುರಿತಾದ ಕೋವೂರು ಪಂಚರತ್ನ ಕೃತಿಗಳು ಬಹಳ ಮಹತ್ವದ್ದಾಗಿದ್ದು, ಅವುಗಳ ಮೂಲಕ ತ್ಯಾಗರಾಜರ ದೈವೀ ಪ್ರತಿಭೆ ಪ್ರವಹಿಸಿದೆ. ಎಚ್.ಕೆ.ವೆಂಕಟರಾಂ (ಪಿಟೀಲು), ತುಮಕೂರು ರವಿಶಂಕರ್ (ಮೃದಂಗ) ಮತ್ತು ಎನ್. ಅಮೃತ್ (ಖಂಜಿರ) ಅವರ ಸಮರ್ಥ ಹಾಗೂ ಸಾರ್ಥಕ ಪಕ್ಕವಾದ್ಯಗಳೊಂದಿಗೆ ಮಲ್ಲಾಡಿ ಸೋದರರು ಆ ಪಂಚರತ್ನ ಕೃತಿಗಳ ಪರಮತೆಯನ್ನು ಪರಿಚಯಿಸಿದರು.

ಭಾವಪೂರ್ಣವಾಗಿ ಸಾಹಿತ್ಯ ಶುದ್ಧಿಯನ್ನು ಕಾಪಿಟ್ಟುಕೊಂಡು ಏಕ ಕಂಠ, ಏಕ ಮನೋಧರ್ಮತೆಯೊಂದಿಗೆ ಮೂಡಿಬಂದ ಅವರ ಪ್ರಸ್ತುತಿಗಳು ಪ್ರೌಢವೂ ಆಗಿದ್ದವು. ಭಾವ ಮತ್ತು ಸ್ವರಗಳ ಖಚಿತತೆ ಮತ್ತು ಮೇಳೈಸುವಿಕೆ ಅಪೂರ್ವವಾಗಿತ್ತು. ಶಾಸ್ತ್ರೀಯತೆಯ ಚೌಕಟ್ಟಿನಲ್ಲೇ ಅವರು ಹಾಡಿದುದು ಅಭಿನಂದನೀಯವಾಗಿತ್ತು. ಕೋವೂರು ಪಂಚರತ್ನ ಕೃತಿಗಳೊಂದಿಗೆ ಬೇರೆ ಬೇರೆ ರೋಚಕ ರಚನೆಗಳನ್ನೂ ಹಾಡಿ ತಮ್ಮ ನಿರೂಪಣೆಗಳನ್ನು ವೈವಿಧ್ಯಮಯಗೊಳಿಸಿದರು. ತಾಳ್ಳಪಾಕ್ಕಂ ಅಣ್ಣಮಾಚಾರ್ಯ ಅವರ ಪುರುಷೋತ್ತಮ ಪುರುಷಾರ್ಥ ರಚನೆ ರೇಗುಪ್ರಿಯಲ್ಲಿ ಮೂಡಿ ಬಂದು ಭಕ್ತಿ ಭಾವವನ್ನು ಸ್ಫುರಿಸಿತು. ಅದಕ್ಕೆ ಹೆಣೆಯಲಾಗಿದ್ದ ಕಲ್ಪನಾಸ್ವರಗಳು ಕಲಾತ್ಮಕವಾಗಿದ್ದವು.

ಅವರು ಹಾಡಿದ ಶಹನಾ ರಾಗ (ಈ ವಸುಧಾ), ಖರಹರಪ್ರಿಯ  ಕೋರಿ ಸೇವಿಂಪ), ಕಾಮವರ್ಧಿನಿ (ಶಂಭೋ ಮಹಾದೇವ), ಕಲ್ಯಾಣೀ ಮತ್ತು ಶಂಕರಾಭರಣ (ಸುಂದರೇಶ್ವರುನಿ ಜೂಚಿ) ರಾಗಗಳ ರಚನೆಗಳು ಕರ್ನಾಟಕ ಸಂಗೀತದ ಮೌಲ್ಯಗಳೊಂದಿಗೆ ತುಂಬಿ ತುಳುಕಾಡಿದವು. ರಾಗಾಲಾಪನೆಗಳು ಮತ್ತು ಸ್ವರ ಪ್ರಸ್ತಾರಗಳು ಸುಬದ್ಧವಾಗಿ ಅವರ ಲಯ ಪ್ರಭುತ್ವ ಪ್ರಖರವಾಗಿ ಪ್ರಜ್ವಲಿಸಿತು. ಅಸಾಧಾರಣ ಪ್ರತಿಭೆಯಿಂದ ಮುನ್ನಡೆಸಿದ ಅವರ ಕಛೇರಿ ಕೌಶಲ್ಯ ಕಲಾತ್ಮಕವಾಗಿತ್ತು. ತಮ್ಮ ಕಛೇರಿಯ ಒಂದೇ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಪ್ರತಿಯೊಂದು ಹಂತವೂ ತನ್ನ ರೋಚಕತೆಯನ್ನು ಹೊಂದಿತ್ತು.

ಲವಲವಿಕೆಯಿಂದ ಬಹು ಆಸ್ಥೆಯಿಂದ ಹಾಡುತ್ತಾ ಪಕ್ಕವಾದ್ಯಗಾರರನ್ನು ತಮ್ಮಡನೆ ಅವರು ಒಯ್ದ ಪರಿ ಪ್ರಶಂಸನೀಯವಾಗಿತ್ತು. ಅವಶ್ಯಕತೆಗೆ ತಕ್ಕಂತೆ ಆನಂದಭೈರವಿ ರಾಗ ಮತ್ತು ಅದರಲ್ಲಿ ನಿಬದ್ಧವಾಗಿದ್ದ ಮಾನಸ ಗುರುಗುಹ ಕೀರ್ತನೆ ವಿಳಂಬ ಗತಿಯಲ್ಲಿ ಆಪ್ಯಾಯಮಾನವಾಗಿದ್ದು ಕಿವಿಗಳನ್ನು ತುಂಬಿದವು.
ಸಂಗೀತೋತ್ಸವದ ರೂವಾರಿ ಖ್ಯಾತ ವಿದುಷಿ ಎಂ.ಎಸ್.ಶೀಲಾ `ಜಗದೀಶ ಪಾಹಿಮಾಂ' ಶೀರ್ಷಕ ಕಾರ್ಯಕ್ರಮವನ್ನು ನಡೆಸಿದರು.

ಪಿಟೀಲಿನಲ್ಲಿ ಪ್ರೇರಕ ಸಹಕಾರವನ್ನು ಚಾರುಲತಾ ರಾಮಾನುಜಂ ನೀಡಿದರು. ಆನೂರು ಅನಂತಕಷ್ಣ ಶರ್ಮ(ಮೃದಂಗ). ವಿನೋದ್‌ಶಾಂ, ಸುನಾದ ಆನೂರು, ಪುನೀತ್, ಸುಬ್ರಹ್ಮಣ್ಯಶಾಸ್ತ್ರಿ, ಗೋಪೀಶ್ರವಣ, ನಾಗೇಂದ್ರಪ್ರಸಾದ್, ಸುದತ್ತ ಮತ್ತು ಚಿದಾನಂದ ಅವರ ವಿವಿಧ ಲಯವಾದ್ಯಗಳ ಗಣನೀಯ ಸಹಕಾರದೊಂದಿಗೆ ಶೀಲಾ ಅವರು ತಮ್ಮ ಎಂದಿನ ಸುಮಧುರ ಹಾಗೂ ಸಂಪದ್ಭರಿತ ಕಂಠದಲ್ಲಿ `ಈಶ ಪಾಹಿಮಾಂ' (ಕಲ್ಯಾಣಿ), ನಾದತನುಮನಿಶಂ, ಗಂಗಾಧರ (ಪೂರ್ವಿಕಲ್ಯಾಣಿ), ಜಾನಪದ ಗೀತೆ ಮತ್ತು ಹಿಂದೀಗೀತೆ (ಶಂಕರ ತೋರೆ, ಸರಸಾಂಗಿ) ಮುಂತಾದ ರಚನೆಗಳನ್ನು ಹಾಡಿ ಕಳೆ ಕಟ್ಟಿದರು. ಶಿವನ ಸ್ತುತಿಯ ಗಾಯನ ಮನೋರಮವಾಗಿತ್ತು. ಚೇತನಾಪೂರ್ಣವಾಗಿ ಮೂಡಿಬಂದ ಸುಮನಸರಂಜನಿ ತಿಲ್ಲಾನ ಮೆಲುಕುಹಾಕುವಂತೆ ಮೈತಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT