ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ವಿನೋದ: ಅಮ್ಮ ಜಲಲಲಿತ!

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜಯಲಲಿತ ಕಾವೇರಿ ನೀರಿಗಾಗಿ ಸದಾಕ್ಯಾತೆ ತೆಗೆಯಲು ಕಾರಣ ಏನು?ಇನ್ನೇನು, ಒಗೆಯಲು ನೀರು ಬೇಡವೆ ಅವರ  ಮೂರು ಸಾವಿರ ಸೀರೆ, ಐದುನೂರು ಗೌನು?

ಮಿಸ್ಸಮ್ಮನ ಚಹಾದಂಗಡಿ ಮುಂದೆ ಹರಟೆ ಮಿತ್ರ ಮಂಡಳಿ ಸಭೆ ಸೇರಿತ್ತು. ಮೊದಲ ಸುತ್ತಿನ ಚಹಾ ಮುಗಿದು ಇನ್ನೇನು ಹರಟೆ ಶುರುವಾಗಬೇಕೆನ್ನುವಷ್ಟರಲ್ಲಿ ದುಬ್ಬೀರ ಎರಡೂ ಕೈಗಳಲ್ಲಿ ಒಂದೊಂದು ಭಾರದ ಚೀಲ ಹಿಡಿದುಕೊಂಡು `ಉಸ್ಸಪ್ಪಾ~ ಎನ್ನುತ್ತ ಬಂದು ಕುಳಿತುಕೊಂಡ.

`ಏನೋ ಮಗಾ? ಖರೀದಿ ಜೋರೈತಲ್ಲೋ? ಏನೇನ್ ತಂದಿ, ಏನ್ಕತೆ?~ ತೆಪರೇಸಿ ವಿಚಾರಿಸಿದ.

`ಏನಿಲ್ಲ ಕಣಲೆ, ನಾಳೆ ಪಕ್ಷ ಅಲ್ವಾ? ಎಡೆ ಇಡಾಕೆ ಅದೂ ಇದೂ ಸಾಮಾನು... ಅಷ್ಟೆ~ ಎಂದ ದುಬ್ಬೀರ.

`ಏನು? ಪಕ್ಷಾನ? ನಿಂದಾವುದಲೆ ಹೊಸ ಪಕ್ಷ? ಶ್ರಿರಾಮುಲುದಾಯ್ತು, ಕೇಜ್ರಿವಾಲ್‌ದಾಯ್ತು. ಈಗ ಯಡ್ಯೂರಪ್ಪ ಬೇರೆ ಹೊಸ ಪಕ್ಷ ಕಟ್ಟಾಕೆ ಹೊಂಟಿದಾರೆ. ಅವರ ಜೊತಿಗೆ ನಿಂದೂ ಒಂದಾ?~ ಗುಡ್ಡೆ ನಕ್ಕ.

`ಥೂ ನಿನ್ನ, ರಾಜಕೀಯ ಪಕ್ಷ ಅಲ್ಲಲೆ, ಪಿತೃಪಕ್ಷ ಅಂತ. ಹಿರಿಯರ ಫೋಟೊಗೆ ವರ್ಷಕ್ಕೊಂದ್ಸಲ ಪೂಜೆ ಮಾಡಿ, ಬದುಕಿದ್ದಾಗ ಅವರು ಏನೇನು ಇಷ್ಟಪಡ್ತಿದ್ರು ಅದನ್ನೆಲ್ಲ ಎಡೆಗೆ ಇಟ್ಟು ಲೋಬಾನ ಹಾಕೋದು. ಹಿರಿಯರಬ್ಬ ಅಂತಾರಲ್ಲಲೆ ಅದು~ ದುಬ್ಬೀರ ವಿವರಿಸಿದ.

`ಓ ಹಂಗಾ? ಫೋಟೊಕ್ಕೆ ಪೂಜೆ ಮಾಡೋದು ಅನ್ನು. ಬದುಕಿದ್ದಾಗ ಅವರ‌್ನ ಕಾಲ ಕಸದಂಗೆ ಕಾಣೋದು, ಸತ್ತಮೇಲೆ ಪೂಜೆ ಮಾಡೋದು. ಹೋಗ್ಲಿ ಎಡೆಗೆ ಇಡಾಕೆ ಏನೇನ್ ತಂದಿದೀಯ?~ ಗುಡ್ಡೆ ದುಬ್ಬೀರನ ಚೀಲಗಳ ಕಡೆ ಕಣ್ಣಾಯಿಸಿದ.

`ನಮ್ಮವ್ವನಿಗೆ ಮೈಸೂರುಪಾಕು, ಎಲೆ ಅಡಿಕೆ, ತಂಬಾಕು. ಅಪ್ಪನಿಗೆ ಬೀಡಿ ಬೆಂಕಿಪಟ್ಣ, ಒಂದು ಕ್ವಾಟ್ರು ಎಣ್ಣೆ. ಮನೇಲಿ ಹೆಂಗೂ ನಾಟಿ ಕೋಳಿ ಸಾರು, ರಾಗಿಮುದ್ದೆ ರೆಡಿಯಾಗ್ತಾ ಐತೆ. ಎಲ್ಲನೂ ಎಡೆಗೆ ಇಡೋದು...~

`ಆಮೇಲೆ ಕ್ವಾಟ್ರು ನೀನು ಕುಡಿದು, ನಾಟಿ ಕೋಳಿ ಊಟ ಗಡದ್ದಾಗಿ ಹೊಡೆದು ಮಲಗೋದು. ಅದೇತಾನೆ ನಿನ್ನ ಪಿತೃಪಕ್ಷ?~ ಪರಮೇಶಿ ನಕ್ಕ.

`ಅಲ್ಲೋ, ನಿಮ್ಮವ್ವ ಬದುಕಿದ್ದಾಗ ಅಡಿಕೆ ಎಲೆ ತಂದು ಕೊಡೋ ಅಂತ ಕೇಳಿದ್ರೆ ಅದೇನು ಮೇಕೆ ತಿಂದಂಗೆ ಕಟ್ಟುಗಟ್ಲೆ ಎಲೆ ತಿಂತೀಯ ಅಂತ ಗದರಿಸ್ತಿದ್ದೆ? ನಿಮ್ಮಪ್ಪಂಗೆ ಅದೇನು ಬುಸಬುಸ ಅಂತ ಬೀಡಿ ಸೇದಿ ದುಡ್ಡು ಹಾಳು ಮಾಡ್ತೀಯ ಅಂತಿದ್ದೆ? ಈಗ ಮಾತ್ರ ಎಡೆಗೆ ಇಡಾಕೆ ಎಲ್ಲನೂ ತಂದವ್ನೆ ದೊಡ್ಡ ಮನುಷ್ಯ...~ ಮಿಸ್ಸಮ್ಮ ದುಬ್ಬೀರನನ್ನ ತರಾಟೆಗೆ ತೆಗೆದುಕೊಂಡಳು.

`ಅದಿರ‌್ಲಿ, ಇದನ್ನ ಪಿತೃಪಕ್ಷ ಅಂತ ಯಾಕೆ ಕರೀತಾರೆ? ಮಾತೃಪಕ್ಷ ಅಂತ ಯಾಕೆ ಕರೀಬಾರ್ದು?~ ಗುಡ್ಡೆ ಮಾತು ಬದಲಿಸಿದ.

`ಹೌದಲ್ವಾ? ತಂದೆ ಒಬ್ರಿಗೇ ಏನು ಎಡೆ ಇಡಲ್ಲ, ತಾಯಿಗೂ ಇಡ್ತಾರೆ. ಅಂದಮೇಲೆ ಬರೀ ಪಿತೃಪಕ್ಷ ಅಂತ ಯಾಕೆ ಕರೀಬೇಕು? ರಾಜಕೀಯದಲ್ಲಂತೂ ಈಗ ಪಿತೃಪಕ್ಷಗಳಿಗಿಂತ ಮಾತೃಪಕ್ಷಗಳೇ ಸ್ಟ್ರಾಂಗು. ದೇವೇಗೌಡ್ರುದು ಒಂದೇ ಪಿತೃಪಕ್ಷ. ಉಳಿದಂಗೆ ಸೋನಿಯಾ, ಜಯಾ, ಮಾಯಾ, ಮಮತಾ ಎಲ್ಲರದೂ ಮಾತೃಪಕ್ಷಗಳೇ. ಒಬ್ರಿಗಿಂತ ಒಬ್ರು ಸ್ಟ್ರಾಂಗು. ಒಬ್ರು ಸೆಂಟ್ರಲ್ ಗೌರ‌್ಮೆಂಟ್‌ನೇ ಅಲ್ಲಾಡಿಸಿದ್ರು. ಇನ್ನೊಬ್ರು ಈಗ ಕರ್ನಾಟಕ ಗೌರ‌್ಮೆಂಟ್‌ನ ಅಲ್ಲಾಡಿಸ್ತಾ ಕೂತಿದಾರೆ. ಅಮ್ಮ ಜಯಲಲಿತಾ ಈಗ ಕರ್ನಾಟಕದ ಮೇಲೆ ಕೇಸ್ ಹಾಕಿದಾರಂತೆ?~ ತೆಪರೇಸಿ ಪ್ರಶ್ನಿಸಿದ.

`ಹಾಕಿದಾರಂತಪ್ಪ. ಆವಮ್ಮುಂಗೆ ಜಯಲಲಿತ ಅನ್ನೋಬದ್ಲು `ಜಲಲಲಿತ~ ಅಂತ ಹೆಸರಿಡಬೇಕಿತ್ತು. ಏನೇ ಆಗ್ಲಿ ಕರುಣಾನಿಧಿ ಮುಖ್ಯಮಂತ್ರಿ ಆಗಿದ್ದಾಗ ಇಷ್ಟು ಕಿರಿಕಿರಿ ಇರ‌್ಲಿಲ್ಲ. ಅಲ್ಲ ಮಾತಿಗೆ ಕೇಳ್ತೀನಿ, ಕಾವೇರಿ ನಮ್ಮದು, ನಮ್ಮಲ್ಲೇ ಹುಟ್ಟೋದು, ತಮಿಳುನಾಡಿಗೇಕೆ ನೀರು ಬಿಡಬೇಕು?~ ಕೊಟ್ರೇಶಿ ಪ್ರಶ್ನಿಸಿದ.

`ನೀ ಹೇಳೋದು ಸರಿ. ಇದನ್ನ ಕರುಣಾನಿಧಿನೂ ಒಪ್ಕಂಡ್ರಂತೆ. ಆಯ್ತಪ್ಪ ಕಾವೇರಿ ನಿಮ್ಮದು, ನಿಮ್ಮಲ್ಲೇ ಹುಟ್ಟೋದು. ಅದನ್ನ ನೀವೇ ಇಟ್ಕೊಳಿ. ಅದೇ ತರ ನಿಮ್ಮದು, ನಿಮ್ಮಲ್ಲೇ ಹುಟ್ಟಿದ ಇನ್ನೊಂದನ್ನ ನೀವು ನಿಮ್ಮ ರಾಜ್ಯಕ್ಕೆ ತಗಂಡ್ ಹೋಗಬೇಕು ಅಂದ್ರಂತೆ...~ ಗುಡ್ಡೆ ಕತೆ ಹೊಸೆದ.

`ಹೌದಾ ಏನಂತೆ?~
`ನಿಮ್ಮ ರಾಜ್ಯದಲ್ಲೇ ಹುಟ್ಟಿದ ಅಮ್ಮ ಜಯಲಲಿತಾ ಅವರ‌್ನ ನಿಮ್ಮ ರಾಜ್ಯಕ್ಕೆ ಕರ‌್ಕೊಂಡ್ ಹೋಗಿ ಪುಣ್ಯ ಕಟ್ಕೊಳಿ ಅಂದ್ರಂತೆ...!~ ಗುಡ್ಡೆ ಜೋಕಿಗೆ ಎಲ್ಲರೂ ನಕ್ಕರು.
`ಅದಿರ‌್ಲಿ, ಲೇ ದುಬ್ಬೀರ, ಪಿತೃಪಕ್ಷದ ಎಡೆಗೆ ಸತ್ತೋರು ಏನೇನು ಇಷ್ಟಪಡ್ತಿದ್ರು ಅದನ್ನೆಲ್ಲ ಇಡಬೇಕು ತಾನೇ?~ ಪರಮೇಶಿ ಪ್ರಶ್ನಿಸಿದ.

`ಹೂ ಮತ್ತೆ, ಎಲ್ಲ ಇಡಬೇಕು. ಯಾಕೆ?~
ಏನಿಲ್ಲ, ಇವತ್ತಿನ ರಾಜಕಾರಣಿಗಳು ಸತ್ತಾಗ ಮುಂದೆ ಅವರ ಪಿತೃಪಕ್ಷಕ್ಕೆ ಏನೇನು ಎಡೆ ಇಡಬೇಕಾಗಿ ಬರಬಹುದು ಅಂತ ಯೋಚಿಸ್ತಿದ್ದೆ...~ ಎಂದ ಪರಮೇಶಿ.

`ಹೌದಲ್ಲಲೆ, ನಂಗೆ ಇದು ಹೊಳೀಲೇ ಇಲ್ಲ~ ಎಂದ ಗುಡ್ಡೆ, `ಇನ್ನೇನ್ ಇಡೋದು? ಭೂಮಿ ನುಂಗಣ್ಣಗಳಿಗೆ ಒಂದು ಹಿಡಿ ಮಣ್ಣು, ಗಣಿಕೋರರಿಗೆ ಒಂದು ಪುಟ್ಟಿ ಅದಿರು, ಭ್ರಷ್ಟರು-ಲಂಚಕೋರರಿಗೆಲ್ಲ ಒಂದೆರಡು ನೋಟಿನ ಕಂತೆ ಎಡೆಗೆ ಇಟ್ರಾತು ಅಲ್ವಾ?~ ಎಂದ.

`ಮತ್ತೆ ಈ ಅತ್ಯಾಚಾರಿ, ವ್ಯಭಿಚಾರಿ ರಾಜಕಾರಣಿಗಳಿಗೆ?~ ತೆಪರೇಸಿ ತುಂಟ ನಗೆ ನಗುತ್ತ ಕೇಳಿದಾಗ ಮಿಸ್ಸಮ್ಮ `ಲೇ ತೆಪರ, ನಿಂದು ಅತಿಯಾಯ್ತು. ಬೇರೆ ಏನರೆ ಮಾತಾಡು~ ಎಂದು ಗದರಿದಳು.

`ಓಕೆ ಮಿಸ್ಸಮ್ಮ, ಇನ್ನೊಂದ್ ರೌಂಡ್ ಚಾ ಹಾಕು~ ಎಂದ ತೆಪರೇಸಿ `ಲೇ ಗುಡ್ಡೆ ತಮಿಳುನಾಡಿಗೆ ಮತ್ತೆ ಹದಿನೈದು ದಿನ ನೀರು ಬಿಡಬೇಕು ಅಂತ ಅಮ್ಮ ಜಯಲಲಿತಾ ಆರ್ಡರ್ ಮಾಡ್ಸಿದಾರಂತೆ ನಿಜಾನಾ?~ ಎಂದ.

`ಮಾಡ್ಸಿದಾರಂತಪ. ಆದ್ರೆ ನೀರು ಇದ್ರೆ ತಾನೆ ಬಿಡೋಕೆ? ಪಿತೃಪಕ್ಷದಲ್ಲಿ ಎಣ್ಣೆಗೆ ಮಿಕ್ಸ್ ಮಾಡ್ಕಳಾಕೇ ನಮಗೆ ನೀರಿಲ್ಲ. ಇನ್ನು ಜಯಲಲಿತಮ್ಮುಂಗೆ ಎಲ್ಲಿಂದ ಬಿಡೋದು?~
`ಏನೇ ಆದ್ರು ಜಯಲಲಿತಾ ಕಿರಿಕ್ಕು ಅತಿಯಾತಪ. ಆವಮ್ಮುಂಗೆ ಎಷ್ಟು ನೀರು ಬಿಟ್ರೂ ಸಾಲಲ್ಲ. ಅವರಿಗೆ ಅಷ್ಟು ನೀರು ಯಾಕೆ ಬೇಕು ಅಂತ...~ ದುಬ್ಬೀರನಿಗೆ ಕೋಪ.

`ಯಾಕೆ ಅಂದ್ರೆ? ಆವಮ್ಮನ ಮೂರು ಸಾವಿರ ಸೀರೆ, ಐದುನೂರು ಗೌನು ಒಗೆಯೋಕೆ ನೀರು ಬೇಡ್ವಾ? ಇವನೊಬ್ಬ...~ ಎಂದ ಗುಡ್ಡೆ ಕೀಟಲೆಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT