ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಎರಡು ಬಾರಿ ತ್ಯಾಜ್ಯ ವಿಲೇವಾರಿಗೆ ಹೈಕೋರ್ಟ್ ಆದೇಶ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಒಣ ತ್ಯಾಜ್ಯವನ್ನು ವಾರದಲ್ಲಿ ಎರಡು ಬಾರಿ ವಿಲೇವಾರಿ ಮಾಡಬೇಕು. ತ್ಯಾಜ್ಯ ವಿಲೇವಾರಿಗೆ ಕರೆದಿರುವ ಟೆಂಡರ್ ಕುರಿತು ನವೆಂಬರ್ 6ರೊಳಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಹಸಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಆದಷ್ಟು ಶೀಘ್ರ ಆರಂಭಿಸಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂದು ದೂರಿ ಜಿ.ಆರ್. ಮೋಹನ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ನಗರ ಎದುರಿಸುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತ ವಿಚಾರಣೆಯನ್ನು ಮಂಗಳವಾರ ಬೆಳಿಗ್ಗೆ ಕೈಗೆತ್ತಿಕೊಂಡ ನ್ಯಾಯಪೀಠ, ತ್ಯಾಜ್ಯ ವಿಲೇವಾರಿ ಬಗ್ಗೆ ಈಗಿನ ಸ್ಥಿತಿಗತಿ ಏನು ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು. ಅವರಿಂದ ಸೂಕ್ತ ಉತ್ತರ ದೊರೆಯದಿದ್ದಾಗ ಪೀಠ ಅಸಮಾಧಾನ ವ್ಯಕ್ತಪಡಿಸಿತು. ತ್ಯಾಜ್ಯ ವಿಲೇವಾರಿ ಸಂಬಂಧ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿರುವ ಆದೇಶ ಉಲ್ಲಂಘಿಸಲಾಗಿದೆ ಎಂದು ನ್ಯಾಯಪೀಠ ಕೆಂಡಾಮಂಡಲಗೊಂಡಿತು.

`ತ್ಯಾಜ್ಯ ವಿಲೇವಾರಿಗೆ ನಿಗದಿ ಮಾಡಿರುವ 25 ಎಕರೆ ಜಾಗ ಎಲ್ಲಿದೆ? ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ. ತ್ಯಾಜ್ಯ ವಿಲೇವಾರಿ ಕೆಲಸ ನಿಮ್ಮಿಂದ ಆಗದಿದ್ದರೆ, ಬಿಬಿಎಂಪಿಯನ್ನು ಸೂಪರ್‌ಸೀಡ್ ಮಾಡಿ ಎಂದು ಸರ್ಕಾರಕ್ಕೆ ಹೇಳಬೇಕಾಗುತ್ತದೆ. ಕಸವನ್ನು ಬಿಬಿಎಂಪಿ ಅಧಿಕಾರಿಗಳ ಮನೆ ಮುಂದೆ ಸುರಿಯಿರಿ ಎಂದೂ ಹೇಳಬೇಕಾಗುತ್ತದೆ. ಜನ ಎದುರಿಸುತ್ತಿರುವ ಸಮಸ್ಯೆ ಆಗ ನಿಮ್ಮ ಅರಿವಿಗೆ ಬರುತ್ತದೆ~ ಎಂದು ನ್ಯಾಯಪೀಠ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

ಬಿಬಿಎಂಪಿ ಆಯುಕ್ತರು ನ್ಯಾಯಾಲಯಕ್ಕೆ ಹಾಜರಾಗಲಿ ಎಂದು ನ್ಯಾ. ಸೇನ್ ಅವರು ನಿರ್ದೇಶನ ನೀಡಿದರು. ಮಂಗಳವಾರ ಮಧ್ಯಾಹ್ನ ನ್ಯಾಯಾಲಯದಲ್ಲಿ ಹಾಜರಾದ ಆಯುಕ್ತ ರಜನೀಶ್ ಗೋಯಲ್, `ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವ ತೀರ್ಮಾನ ತೆಗೆದುಕೊಂಡ ಕಾರಣ ಹೊಸದಾಗಿ ಟೆಂಡರ್ ಕರೆಯಲಾಯಿತು.
ಈಗ 35 ಲಕ್ಷ ಮಂದಿ ತ್ಯಾಜ್ಯವನ್ನು ಪ್ರತ್ಯೇಕಿಸುತ್ತಿದ್ದಾರೆ. ಈ ಸಂಖ್ಯೆ ಶೀಘ್ರದಲ್ಲೇ 60 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ~ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

`ಪ್ರತಿ ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗುತ್ತಿದೆಯೇ ಎಂಬುದನ್ನು ವಲಯ ಅಧಿಕಾರಿಗಳು ಪರಿಶೀಲಿಸಬೇಕು. ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿದ್ದರೆ ಅದಕ್ಕೆ ವಲಯ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ. ತ್ಯಾಜ್ಯ ವಿಲೇವಾರಿ ಟೆಂಡರ್ ಅಧಿಸೂಚನೆಯ ರೂಪುರೇಷೆಗಳನ್ನು ವಲಯ ಆಯುಕ್ತರು ಮೂರು ದಿನಗಳಲ್ಲಿ ಅಂತಿಮಗೊಳಿಸುತ್ತಾರೆ. ಅದನ್ನು ನಾನು ಮೂರು ದಿನಗಳಲ್ಲಿ ಪರಿಶೀಲಿಸುತ್ತೇನೆ. ನಂತರ ಅದು ಸ್ಥಾಯಿ ಸಮಿತಿ ಪರಿಶೀಲನೆಗೆ ಹೋಗುತ್ತದೆ. ಸ್ಥಾಯಿ ಸಮಿತಿಯಿಂದ ಬಿಬಿಎಂಪಿ ಕೌನ್ಸಿಲ್‌ಗೆ, ಅಲ್ಲಿಂದ ಸರ್ಕಾರದ ಒಪ್ಪಿಗೆಗೆ ರವಾನೆ ಆಗುತ್ತದೆ~ ಎಂದು ವಿವರಿಸಿದರು.

ತ್ಯಾಜ್ಯ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವ ಸಂಬಂಧ ಉಪನಿಯಮಗಳಿಗೆ ತಿದ್ದಪಡಿ ತರಲಾಗುತ್ತಿದೆ ಎಂದೂ ಆಯುಕ್ತರು ತಿಳಿಸಿದರು. ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT