ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಿಂದ ವಿತರಣೆಯಾಗದ ಪಹಣಿ, ಮ್ಯುಟೇಷನ್

Last Updated 24 ಜನವರಿ 2012, 7:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿದ್ಯುತ್ ಅಭಾವ ಮತ್ತು ಇನ್ನಿತರ ನೆಪಗಳನ್ನು ಒಡ್ಡಿ ಒಂದು ವಾರದಿಂದ ಪಹಣಿ ಮತ್ತು ಮ್ಯುಟೇಷನ್ ವಿತರಿಸುತ್ತಿಲ್ಲ ಎಂದು ಆರೋಪಿಸಿ, ವಿವಿಧ ಗ್ರಾಮಗಳ ರೈತರು ಮತ್ತು ಸಂಘ-ಸಂಸ್ಥೆ ಪ್ರತಿನಿಧಿಗಳು ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಹಣಿ ವಿತರಿಸದೆ ಸತಾಯಿಸುತ್ತಿದ್ದಾರೆ ಎಂದ ಪ್ರತಿಭಟನಾಕಾರರು, `ಗ್ರಾಮಸ್ಥರತ್ತ ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿದೆ. ಸರಿಯಾಗಿ ಸ್ಪಂದಿಸುತ್ತಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ದಿನ ಬೆಳಿಗ್ಗೆ ದೂರದೂರದ ಗ್ರಾಮಗಳಿಂದ ನಾವು ಬರುತ್ತೇವೆ. ಆದರೆ ತಾಲ್ಲೂಕು ಕಚೇರಿಯ ಪಹಣಿ ಮತ್ತು ಮ್ಯುಟೇಷನ್ ವಿತರಣಾ ಕೌಂಟರ್ ಯಾವಾಗಲೂ ಮುಚ್ಚಿರುತ್ತದೆ. ಏನೇ ವಿಷಯ ಕೇಳಿದರೂ ಒಂದಿಲ್ಲೊಂದು ನೆಪ ಹೇಳುತ್ತಾರೆ. ಪಹಣಿ, ಮ್ಯುಟೇಷನ್ ವಿತರಿಸಲು ನಿರಾಸಕ್ತಿ ತೋರುತ್ತಾರೆ. ಇದರ ಕುರಿತು ಪ್ರಶ್ನಿಸಿದರೆ, ನಮ್ಮನ್ನು ಕೆಂಗಣ್ಣಿನಿಂದ ನೋಡುತ್ತಾರೆ. ಏನನ್ನೂ ಮಾಡಿಕೊಡುವುದಿಲ್ಲ ಎಂದು ನೇರವಾಗಿಯೇ ಹೇಳುತ್ತಾರೆಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

`ಜಮೀನಿನ ಸರ್ವೆಗಾಗಿ 2007ರಲ್ಲಿ ಅರ್ಜಿ ಸಲ್ಲಿಸಿದೆ. ಆದರೆ ಈವರೆಗೆ ಜಮೀನಿನ ಸರ್ವೆ ಪ್ರಕ್ರಿಯೆ ಕೈಗೊಳ್ಳಲಾಗಿಲ್ಲ. ಪ್ರತಿ ದಿನ ಕಚೇರಿಗೆ ಬಂದರೂ ಏನೂ ಪ್ರಯೋಜನವಾಗಿಲ್ಲ. ತಾಲ್ಲೂಕು ಕಚೇರಿಯವರು ಸರ್ವೆ ಮಾಡುವುದಿಲ್ಲ. ಪಹಣಿಯನ್ನೂ ವಿತರಿಸುವುದಿಲ್ಲ. ಗ್ರಾಮಸ್ಥರು ಪ್ರತಿದಿನ ಬಂದು, ಬರಿಗೈಯಲ್ಲಿ ಮರಳುತ್ತಿದ್ದಾರೆ~ ಎಂದು ತಾಲ್ಲೂಕಿನ ನಡುವಿನಹಳ್ಳಿ ಗ್ರಾಮದ ರೈತ ಎನ್. ಸಿ.ನಾಗರಾಜ್ ತಿಳಿಸಿದರು.

`ಮುದ್ದೇನಹಳ್ಳಿ, ಪೆರೇಸಂದ್ರ, ಯಲುವಹಳ್ಳಿ, ಗಂಗರೇಕಾಲುವೆ, ನಾಯನಹಳ್ಳಿ ಸೇರಿದಂತೆ ಬೇರೆ ಬೇರೆ ಗ್ರಾಮಗಳಿಂದ ಜನರು ನಿತ್ಯ ಕಚೇರಿಗೆ ಬರುತ್ತಾರೆ. ಕಚೇರಿ ಸಿಬ್ಬಂದಿ ಎದುರು ಸಂಕಷ್ಟ ತೋಡಿಕೊಳ್ಳುತ್ತಾರೆ. ಕೆಲಸ ಮಾಡಿಕೊಡುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಆದರೆ ಕಚೇರಿಯವರು ಸ್ಪಂದಿಸದಿದ್ದಾಗ ನಿರಾಸೆಯಿಂದ ಮರಳುತ್ತಾರೆ~ ಎಂದು ರೈತ ಯಲುವಹಳ್ಳಿ ವೆಂಕಟರಾಜು ಹೇಳಿದರು.

ಪ್ರತಿಭಟನೆ ಬಳಿಕ ತಾಲ್ಲೂಕು ಕಚೇರಿಯೊಳಗೆ ಹೋದ ಪ್ರತಿಭಟನಾಕಾರರು, ತಹಶೀಲ್ದಾರ್ ಡಾ. ಎನ್. ಭಾಸ್ಕರ್ ಅವರನ್ನು ಪ್ರಶ್ನಿಸಿದರು. ಕೆಲಸದಲ್ಲಿ ಯಾಕೆ ವಿಳಂಬ ತೋರಲಾಗುತ್ತಿದೆ. ರೈತರತ್ತ ಯಾಕೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ತಹಶೀಲ್ದಾರ್ ಡಾ. ಎನ್. ಭಾಸ್ಕರ್, `ತಾಂತ್ರಿಕ ಸಮಸ್ಯೆಯಿಂದ ಪಹಣಿ ವಿತರಣೆ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಶನಿವಾರದಂದೇ ತಾಂತ್ರಿಕ ಸಮಸ್ಯೆ ಪರಿಹರಿಸಿಕೊಳ್ಳಲಾಗಿದೆ. ಇಂದಿನಿಂದಲೇ ಪಹಣಿ ಮತ್ತು ಮ್ಯುಟೇಷನ್ ವಿತರಿಸುತ್ತೇವೆ~ ಎಂದರು.

`ಸರ್ವೆ ಮಾಡುವ ಸಿಬ್ಬಂದಿ ಕೊರತೆಯಿರುವ ಕಾರಣ ಸರ್ವೆ ಪ್ರಕ್ರಿಯೆ ವಿಳಂಬವಾಗಿದೆ. ಸರ್ವೆ ಸಿಬ್ಬಂದಿ ನೇಮಕಾತಿಯಾಗಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಸಮಸ್ಯೆ ಕೊನೆಗೊಳ್ಳಲಿದೆ~ ಎಂದು ಅವರು ತಿಳಿಸಿದರು. ಗಂಗರೇಕಾಲುವೆಯ ರಾಮಾಂಜನೇಯ, ಮುದ್ದೇನಹಳ್ಳಿಯ ನೀಲಮ್ಮ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT