ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದೊಳಗೆ ಮಳೆಯಾಗದಿದ್ರೆ ದೇವರೇ ಗತಿ!

Last Updated 10 ಜುಲೈ 2013, 9:02 IST
ಅಕ್ಷರ ಗಾತ್ರ

ಹೂವಿನಹಡಗಲಿ: ಆರಂಭಿಕ ಮುಂಗಾರು ಭರವಸೆ ಹುಟ್ಟಿಸಿದ್ದರಿಂದ ತಾಲ್ಲೂಕಿನಲ್ಲಿ ರೈತರು ಸಂಭ್ರಮದಿಂದ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಇದೀಗ ಮಳೆರಾಯ ಮುನಿಸಿ ಕೊಂಡಿದ್ದರಿಂದ ಆ ಸಂಭ್ರಮ ಬಹುಕಾಲ ಉಳಿಯದೇ ಮತ್ತೆ ಬರದ ಛಾಯೆ ಆವರಿಸುವ ಆತಂಕ ಎದುರಾಗಿದೆ.

ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಶೇ 72.5ರಷ್ಟು ಬಿತ್ತನೆ ಕಾರ್ಯ ಹೂವಿನಹಡಗಲಿ ತಾಲ್ಲೂಕಿನ ಲ್ಲಿ ಆಗಿರುವ ಕುರಿತು ಕೃಷಿ ಇಲಾಖೆ ದಾಖಲಿಸಿದೆ. ಸಧ್ಯ ಉತ್ತಮ ಮಳೆ ನಿರೀಕ್ಷೆಯಲ್ಲಿರುವಾಗಲೇ ವರುಣನ ಅವಕೃಪೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ದೊಡ್ಡ ಮಳೆ ಸುರಿಯದಿದ್ದರೂ ದಿನ ಬಿಟ್ಟು ದಿನ ಸುರಿಯುವ ಸಣ್ಣನೆಯ ಜಿಟಿಜಿಟಿ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದಾಗಿ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರಿಲ್ಲ. ಕಳೆದ 15 ದಿನಗಳಿಂದ ಹದಮಳೆ ಬೀಳದಿರುವುದರಿಂದ  ತೇವಾಂಶ ಕೊರತೆಯಿಂದ ಬೆಳೆಗಳು ಬಾಡುತ್ತಿವೆ. ವಾರದೊಳಗಾಗಿ ಮಳೆ ಸುರಿಯದಿದ್ದರೆ ಬಿಸಿಲಿನ ತಾಪಕ್ಕೆ ಎಳೆಯ ಬೆಳೆಗಳು ಕರಗಿ ಹೋಗುವ ಸಂಭವವಿದೆ.

ತಾಲ್ಲೂಕಿನ ಇಟ್ಟಿಗಿ ಮತ್ತು ಹಿರೇಹಡಗಲಿ ಹೋಬಳಿಯಲ್ಲಿರುವ ಎರೆ ಭೂಮಿಯಲ್ಲಿ ತೇವಾಂಶ ಇನ್ನೂ ಇರುವುದರಿಂದ ಬೆಳೆಗಳು ಕೆಲಕಾಲ ಜೀವ ಹಿಡಿದುಕೊಳ್ಳಬಹುದು. ಆದರೆ ಕೆಂಪುಮಿಶ್ರಿತ ಮಸಾರಿ ಭೂಮಿಯಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಬೆಳೆಗಳು ಈಗಲೇ ಒಣಗಿ ನಿಂತಿವೆ.

ಹೂವಿನಹಡಗಲಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 63,476 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 25160 ಹೆಕ್ಟೇರ್ ಪ್ರದೇಶದಲ್ಲಿ  ಮೆಕ್ಕೆಜೋಳ , 7067 ಹೆಕ್ಟೇರ್ ಪ್ರದೇಶದಲ್ಲಿ ಹೈ.ಜೋಳ, 2862 ಹೆಕ್ಟೇರ್ ಸಜ್ಜೆ,  2876 , 2615 ಹೆಕ್ಟೇರ್ ಪ್ರದೇಶದಲ್ಲಿ  ಶೇಂಗಾ, 1853 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಸೇರಿದಂತೆ ಒಟ್ಟು 46,056 ಹೆಕ್ಟೇರ್ ಪ್ರದೇಶದಲ್ಲಿ ಶೇ 72.5 ರಷ್ಟು ಬಿತ್ತನೆಯಾಗಿರುವುದಾಗಿ ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

“ಈ ವರ್ಷ ಮೈಲಾರಲಿಂಗಪ್ಪ ಒಳ್ಳೆ ಕಾರ್ಣೀಕ ನುಡದಾನ, ಮಳಿಬೆಳಿ ಹಸ ನಾಗತೈತಿ ಅಂತೇಳಿ ಸಾಲಶೂಲ ಮಾಡಿ ಬಿತ್ಗಿ ಮಾಡೀವಿ. ಬರೀ ಮೋಡ ನೋಡಾದ ಆಗೈತಿ, ಮಳಿ ಸುರಿವಲ್ದು. ಕೂಲಿ ಆಳು, ಗಳೇವು ದುಬಾರಿ ಇರೋ ದ್ರಿಂದ ಈ ಬೆಳಿ ಹಾಳಾದ್ರ ಬ್ಯಾರೇ ಬೆಳಿ ಬಿತ್ಕಿ ಮಾಡುವುದು ಕಷ್ಟದ ಕೆಲಸ” ಎನ್ನುತ್ತಾರೆ ಹಿರೇಮಲ್ಲನಕೆರೆಯ ರೈತ ರಾಮಣ್ಣ.

“ದನಕರ ಮಾರಾಟ ಮಾಡಿ ಬೀಜ ಗೊಬ್ರ ತಂದು ಬಿತ್ತೀವಿ. ಒಳ್ಳೇ ಟೈಮ್ಕ ಮಳಿ ಕೈಕೊಟ್ಟಾತಿ. ಆದ್ರೂ ಮಳೆರಾಯ ನಮ್ಮ ಕೈಬಿಡಂಗಿಲ್ಲ ಅನ್ನೋ ನಂಬಿಕೆ ಐತಿ” ಎನ್ನುತ್ತಾರೆ ಹಡಗಲಿಯ ರೈತ ರಾಘವೇಂದ್ರ ಹುಣ್ಸಿಕಾಯಿ.

ರಾಜ್ಯದ ಕರಾವಳಿ, ಮಲೆನಾಡು ಪ್ರದೇಶದಲ್ಲಿ  ಮಳೆ ಹೆಚ್ಚಾಗಿ ಹಾನಿಯಾ ಗುತ್ತಿದರೆ, ಬಯಲು ಸೀಮೆಯ ಜನ ಮಳೆಗಾಗಿ ಗೋಳಿಡುವ ಪರಿಸ್ಥಿತಿ ಬಂದಿದೆ. ಸತತ ಬರ ಎದುರಿಸಿ ಹೈರಾ ಣಾಗಿರುವ ರೈತ ಸಮೂಹ ಮತ್ತೊಮ್ಮೆ ಸಂಕಷ್ಟದ ದಿನಗಳನ್ನು ಎದುರು ನೋಡುವಂತಾಗಿದೆ. ಸಧ್ಯ ಉತ್ತಮ ಮಳೆ ಸುರಿದರಷ್ಟೇ ರೈತನ ಮೊಗದಲ್ಲಿ ಮಂದಹಾಸ ಮೂಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT