ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದೊಳಗೆ ಮಾಣಿ-ಸುಳ್ಯ ಹೆದ್ದಾರಿ ದುರಸ್ತಿ

Last Updated 14 ಜೂನ್ 2011, 10:55 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ಹೆದ್ದಾರಿಗಳ ಕಾಮಗಾರಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಗಳು (ಕೆಆರ್‌ಡಿಸಿಎಲ್) ತೋರಿರುವ ನಿರ್ಲಕ್ಷ್ಯವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಂಸದ ನಳಿನ್ ಕುಮಾರ್ ಕಟೀಲ್, ಅಧಿಕಾರಿಗಳು ಇನ್ನು ಮುಂದೆ ಜನಪ್ರತಿನಿಧಿಗಳಿಗೆ ವಂಚಿಸುವ ಪರಿಪಾಠ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.

ಮಾಣಿ- ಸುಳ್ಯ ರಾಜ್ಯ ಹೆದ್ದಾರಿ ಕಾಮಗಾರಿ ಬಗ್ಗೆ ಜನಪ್ರತಿನಿಧಿಗಳಿಗೆ ನಾಲ್ಕು ಬಾರಿ ನೀಡಿದ ಭರವಸೆಯನ್ನು ಕೆಆರ್‌ಡಿಸಿಎಲ್ ಈಡೇರಿಸಿಲ್ಲ. ಈ ಬಾರಿ ಪೊಳ್ಳು ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ಜನರಿಲ್ಲ ಎಂದು ಸಂಸದರು ಹೇಳಿದರು. ಇದೇ 21ರೊಳಗೆ ಮಾಣಿ-ಸುಳ್ಯ ಹೆದ್ದಾರಿಯನ್ನು ಸಂಚಾರ ಯೋಗ್ಯವಾಗುವಂತೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಹೆದ್ದಾರಿ ಕಾಮಗಾರಿಗಳ ಸ್ಥಿತಿಗತಿ ಅರಿಯುವ ಸಲುವಾಗಿಯೇ ಸಂಸದರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಶಾಸಕ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ, ಮಹಾನಗರ ಪಾಲಿಕೆ ಆಯುಕ್ತ ಕೆ.ಎನ್.ವಿಜಯ ಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಇತರರು ಇದ್ದರು.

ಮಾಣಿ-ಸುಳ್ಯ, ಪಂಪ್‌ವೆಲ್-ತಲಪಾಡಿ, ನೆಲ್ಯಾಡಿ-ಉದನೆ, ಎಡಪದವು-ಮಿಜಾರು, ವಿಮಾನನಿಲ್ದಾಣ- ಮರ ವೂರು, ಮೂಲ್ಕಿ ಬೈಪಾಸ್ ರಸ್ತೆ, ಮಂಗ ಳೂರು ಸುತ್ತಮುತ್ತಲಿನ ಹೆದ್ದಾರಿ ಕಾಮಗಾರಿ, ಬ್ರಹ್ಮರಕೂಟ್ಲು ದೇವಸ್ಥಾನ ಬಿಕ್ಕಟ್ಟು, ಬಿ.ಸಿ.ರೋಡ್‌ನಲ್ಲಿ ಹೆದ್ದಾರಿ ಅವಾಂತರ ಸಹಿತ ಹಲವು ವಿಚಾರಗಳ ಬಗ್ಗೆ ಗಹನ ಚರ್ಚೆ ನಡೆಯಿತು.

ಲೋಕೋಪಯೋಗಿ ಇಲಾಖೆ ತನ್ನ ವ್ಯಾಪ್ತಿಯ ರಸ್ತೆಗಳಲ್ಲಿರುವ ಹೊಂಡಗಳನ್ನು ತಕ್ಷಣ ಮುಚ್ಚಬೇಕು. ಅದಕ್ಕೆ ಮಳೆಹಾನಿ ನಿಧಿಯಿಂದ ಹಣ ನೀಡಲಾಗುವುದು. ನೆಲ್ಯಾಡಿ-ಉದನೆ ನಡುವಿನ ರಸ್ತೆ ಹೊಂಡಗಳನ್ನು ಕೂಡಲೇ ಮುಚ್ಚಬೇಕು. ಬಿ.ಸಿ.ರೋಡ್‌ನಲ್ಲಿ ಫ್ಲೈಓವರ್ ಮೇಲೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ನಳಿನ್ ಕುಮಾರ್ ಸೂಚಿಸಿದರು. ರಸ್ತೆ ದುರಸ್ತಿಗೆ ಮಳೆಹಾನಿ ಪರಿಹಾರ ನಿಧಿಯಿಂದ ಹಣ ನೀಡುವುದಾಗಿ ಜಿಲಾಧಿಕಾರಿ ಭರವಸೆ ನೀಡಿದರು.

`ಮಾಣಿ-ಸುಳ್ಯ ಹೆದ್ದಾರಿ ವಿಸ್ತರಣಾ ಕಾಮಗಾರಿ ಅರ್ಧದಲ್ಲೇ ಉಳಿದಿದೆ. ಈಗಾಗಲೇ ಅಗೆದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ನೀವು ಕೊಟ್ಟ ನಾಲ್ಕು ಬಾರಿಯ ಭರವಸೆಯನ್ನು ಈಡೇರಿಸಿಲ್ಲ. ಈ ಬಾರಿ ನಮಗೆ ಪೊಳ್ಳು ಭರವಸೆ ಬೇಡ, ನಾವು ಜನರಿಗೆ ಉತ್ತರ ಹೇಳಬೇಕು. ಸುಳ್ಯದಲ್ಲಿ ಜನ ಮುಷ್ಕರಕ್ಕೆ ಸಜ್ಜಾಗಿದ್ದಾರೆ~ ಎಂದು ಸಂಸದರು ಏರು ದನಿಯಲ್ಲೇ ಹೇಳಿದರು.

`ಇದೇ 17ರೊಳಗೆ ಸುಳ್ಯ ಪೇಟೆಯ ವ್ಯಾಪ್ತಿಯಲ್ಲಿ ಎಲ್ಲಾ ಸಮಸ್ಯೆ ಪರಿಹರಿಸುತ್ತೇವೆ. ಮಾಣಿಯವರೆಗೆ ರಸ್ತೆ ವಿಸ್ತರಣೆ ನಡೆಯುತ್ತಿರುವ ಸ್ಥಳಗಳಲ್ಲೆಲ್ಲ ಕೆಸರು ನೀರು ಹರಿದುಹೋಗುವಂತೆ ಮಾಡಿ, ನಡುವೆ ತಾತ್ಕಾಲಿಕ ವಿಭಜಕ ನಿರ್ಮಿಸಿ ಎರಡೂ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.

ಇದೇ 21ರೊಳಗೆ ಈ ಎಲ್ಲ ಕಾಮಗಾರಿ ಮುಗಿಸಿಕೊಡುತ್ತೇವೆ~ ಎಂದು ಕೆಆರ್‌ಡಿಸಿಎಲ್ ಅಧಿಕಾರಿಗಳು ಭರವಸೆ ನೀಡಿ ದರು. ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಲಕ್ಷ್ಯದಿಂದ ಬಿ.ಸಿ.ರೋಡ್‌ನಲ್ಲಿ ಸದ್ಯ ಅವಾಂತರ ಸೃಷ್ಟಿಯಾಗಿದೆ. ಪೊಳಲಿ ಜಂಕ್ಷನ್‌ವರೆಗೆ ಚರಂಡಿ ನೀರು ರಸ್ತೆಯಲ್ಲಿ ಹರಿದು ಅಂಗಡಿಗಳು, ಮನೆಗಳು ತೊಂದರೆಗೆ ಸಿಲುಕಿವೆ ಎಂದು ನಾಗರಾಜ ಶೆಟ್ಟಿ ದೂರಿದರು. ಇಲಾಖೆ ನಿರ್ಲಕ್ಷ್ಯದಿಂದ ಬಂಟ್ವಾಳ ಜನತೆಗೆ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗಿದೆ ಎಂದರು.

ಮೂಲ್ಕಿಯಲ್ಲಿ ಬೈಪಾಸ್ ರಸ್ತೆ ನಿರ್ಮಾಣದಿಂದ ಪುರಾಣ ಪ್ರಸಿದ್ಧ ಬಪ್ಪನಾಡು ಕ್ಷೇತ್ರ ರಥೋತ್ಸವಕ್ಕೆ ತೊಂದರೆಯಾಗುತ್ತದೆ. ಸ್ಥಳೀಯರ ಭಾವನೆ ಅರಿತುಕೊಂಡು ಫ್ಲೈಓವರ್‌ನಂಥ ಪರ್ಯಾಯ ವ್ಯವಸ್ಥೆಯತ್ತ ಗಮನ ಹರಿಸಬೇಕು ಎಂದು ಅಭಯಚಂದ್ರ ಜೈನ್ ಸಲಹೆ ನೀಡಿದರು.

ಇದಕ್ಕೆ ಬದಲಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ರೂಪಿಸಿರುವ ಪರ್ಯಾಯ ಯೋಜನೆಗಳ ಬಗ್ಗೆ ಪ್ರಶಾಂತ್ ಗವಸಾನೆ ಸಭೆಯ ಗಮನಕ್ಕೆ ತಂದರು. ಆದರೆ ಈ ಸಲಹೆಗಲು ಜನಪ್ರತಿನಿಧಿಗಳಿಗೆ ಸಮಾಧಾನವಾಗಲಿಲ್ಲ. ಕೊನೆಗೆ ಮುಂದಿನ ಸೋಮವಾರ ಸಂಸದರ ಸಹಿತ ಹಿರಿಯ ಅಧಿ ಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸಭೆ ನಿರ್ಧರಿಸಿತು.

ನೇತ್ರಾವತಿ ಸೇತುವೆ ಕುಸಿತ ದುರಸ್ತಿ ಮಾಡಲಾಗಿದ್ದು, ಮಂಗಳವಾರ ಸಹಜ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದ ಅಧಿಕಾರಿಗಳು, ಬ್ರಹ್ಮರಕೂಟ್ಲುವಿನಲ್ಲಿ ಸ್ಥಳೀಯರು ತಿಳಿಸಿದಂತೆ ದೇವಸ್ಥಾನಕ್ಕೆ ಸುತ್ತುವರಿದು ಚತುಷ್ಪಥ ರಸ್ತೆ ನಿರ್ಮಿಸಿದರೆ ಅಪಘಾತ ಹೆಚ್ಚಬಹುದು ಎಂದರು. ಆದರೆ ಇದನ್ನು ಒಪ್ಪದ ನಾಗರಾಜ ಶೆಟ್ಟಿ, ಅಲ್ಲಿ ದ್ವಿಪಥ ರಸ್ತೆ ನಿರ್ಮಿಸಿದರೆ ಅಪಘಾತಗಳು ಹೆಚ್ಚಬಹುದು, ದೇವಸ್ಥಾನಕ್ಕೆ ಸುತ್ತುವರಿದು ನಿರ್ಮಿಸುವ ರಸ್ತೆಗೆ ಹೆಚ್ಚುವರಿ ವೆಚ್ಚ ಬೀಳು ವುದನ್ನು ಜನತೆ ಭರಿಸಲು ಸಿದ್ಧರಿರುವಾಗ ಅದರ ಬಗ್ಗೆ ಯಾಕೆ ಗಮನ ಹರಿಸ ಬಾರದು ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸುವ ಭರವಸೆ ಅಧಿಕಾರಿಗಳಿಂದ ಬಂತು.

ಬಜ್ಪೆ ವಿಮಾನನಿಲ್ದಾಣಕ್ಕೆ ಉಡುಪಿ ಭಾಗದಿಂದ ಸಂಪರ್ಕ ಕಲ್ಪಿಸುವ ಸೇತುವೆ ವಿಸ್ತರಿಸಬೇಕು ಎಂದು ಸಂಸದರು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.

ಪಂಪ್‌ವೆಲ್ ಬಳಿ ಬಸ್ ನಿಲ್ದಾಣ `ಪಾಲಿಕೆಯ ಮೂರ್ಖ ನಿರ್ಧಾರ!~
ಮಂಗಳೂರು: ಪಂಪ್‌ವೆಲ್ ಬಳಿ ಬಸ್ ನಿಲ್ದಾಣ ನಿರ್ಮಿಸುವ ಮಹಾನಗರ ಪಾಲಿಕೆಯ ನಿರ್ಧಾರ ಮೂರ್ಖತನದ್ದು. ಅಲ್ಲಿ ಚತುಷ್ಪಥ ಹೆದ್ದಾರಿ ಬರುತ್ತದೆ ಎಂಬುದು ನಾಲ್ಕಾರು ವರ್ಷಗಳ ಹಿಂದೆಯೇ ಗೊತ್ತಿತ್ತು. ಹಾಗಿದ್ದರೂ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಲ್ಲಿ ಜಾಗ ಖರೀದಿಸಿ ಅಭಿವೃದ್ಧಿಪಡಿಸುವ ಅಗತ್ಯ ಏನಿತ್ತು? ಇದರ ಹಿಂದೆ ಯಾರ‌್ಯಾರು ಇದ್ದಾರೆ ಎಂದು ನಾನು ಹೇಳುವುದಿಲ್ಲ. ಇನ್ನೇನಿದ್ದರೂ ಎಲ್ಲಾ ಒಂದೆಡೆ ಕೂತು ಎರಡೂ ಕಡೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಷ್ಟೇ.....

ಸಂಸದ ನಳಿನ್ ಕುಮಾರ್ ಕಟೀಲ್ ಹೀಗೆ ಚಾಟಿ ಬೀಸಿದಾಗ ಹಲವರ ಮುಖ ಕಪ್ಪಿಟ್ಟಿತು. ಆದರೆ ಯಥಾ ರೀತಿ ಒಂದು ಕ್ಷಣದಲ್ಲಿಯೇ ಅದು ಮಾಯವಾಯಿತು ಕೂಡ. ಪಂಪ್‌ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿಯವರು ಚತುಷ್ಪಥ ರಸ್ತೆ ನಿರ್ಮಿಸುವಾಗ ಅಲ್ಲಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣವನ್ನೂ ಗಮನಕ್ಕೆ ತೆಗೆದುಕೊಂಡು ಕೆಲವು ರಿಯಾಯಿತಿ ತೋರಬೇಕು ಎಂಬ ಸಲಹೆಗೆ ಸಂಸದರು ಈ ಮಾತನ್ನು ಆಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT