ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಿಯರ್ಸ್‌ಗೆ ಮತ್ತೊಂದು ಸವಾಲು

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಐಪಿಎಲ್ ಆರನೇ ಆವೃತ್ತಿಯಲ್ಲಿ ಮೊದಲ ಗೆಲುವು ಪಡೆದಿರುವ ಪುಣೆ ವಾರಿಯರ್ಸ್ ಶನಿವಾರ ಇಲ್ಲಿ ನಡೆಯಲಿರುವ ತನ್ನ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಿಸಬೇಕಿದೆ.

ಈ ಋತುವಿನ ಮೊದಲ ಎರಡೂ ಪಂದ್ಯಗಳಲ್ಲಿ ನಿರಾಸೆ ಕಂಡಿದ್ದ ಆ್ಯಂಜಲೊ ಮ್ಯಾಥ್ಯೂಸ್ ನೇತೃತ್ವದ ವಾರಿಯರ್ಸ್ ಗುರುವಾರದ ಪಂದ್ಯದಲ್ಲಿ 2008ರ ಚಾಂಪಿಯನ್ ರಾಜಸ್ತಾನ ರಾಯಲ್ಸ್ ಎದುರು 7 ವಿಕೆಟ್ ಗೆಲುವು ಪಡೆದಿತ್ತು.

ವಾರಿಯರ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಆರಂಭಿಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಮನೀಷ್ ಪಾಂಡೆ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೆ, ರಾಯಲ್ಸ್ ಎದುರು ಉತ್ತಪ್ಪ 16 ಎಸೆತಗಳಲ್ಲಿ 32 ರನ್ ಸಿಡಿಸಿ ಆಕ್ರಮಣಕಾರಿ ಎನಿಸಿದ್ದರು. ಆ್ಯರನ್ ಫಿಂಚ್ ಅರ್ಧಶತಕ ಗಳಿಸಿ ವಾರಿಯರ್ಸ್‌ಗೆ ಆರನೇ ಆವೃತ್ತಿಯಲ್ಲಿ ಮೊದಲ ಗೆಲುವು ತಂದುಕೊಟ್ಟಿದ್ದರು. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಯುವರಾಜ್ ಸಿಂಗ್ ತಂಡಕ್ಕೆ ಮರಳಿದ್ದು ವಾರಿಯರ್ಸ್ ತಂಡದ ಬಲ ಹೆಚ್ಚಿಸಿದೆ.

ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ನಾಯಕ ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಇಂಡಿಯನ್ಸ್ ತಂಡದಲ್ಲಿದ್ದಾರೆ. ಈ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು 44 ರನ್‌ಗಳ ಗೆಲುವು ಸಾಧಿಸಿತ್ತು. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಇಂಡಿಯನ್ಸ್ ನಾಲ್ಕು ಅಂಕಗಳನ್ನು ಹೊಂದಿದೆ. ವಾರಿಯರ್ಸ್ ಎರಡು ಅಂಕಗಳನ್ನು ಗಳಿಸಿದೆ.

ಡೇರ್‌ಡೆವಿಲ್ಸ್ ಎದುರು ಇಂಡಿಯನ್ಸ್ ತಂಡದ ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದ್ದರು. ಲಸಿತ್ ಮಾಲಿಂಗ, ಮಿಷೆಲ್ ಜಾನ್ಸನ್, ಕೀರನ್ ಪೊಲಾರ್ಡ್, ಅವರನ್ನೊಳಗೊಂಡಿರುವ ಇಂಡಿಯನ್ಸ್ ತಂಡವೂ ಬೌಲಿಂಗ್‌ನಲ್ಲೂ ಬಲಿಷ್ಠವಾಗಿದೆ.

ಪಂದ್ಯ ಆರಂಭ: ಸಂಜೆ 4ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT