ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್ ಮಟ್ಟದಲ್ಲೇ ಕಸ ಸಂಸ್ಕರಣೆ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತ್ಯಾಜ್ಯ ನಿರ್ವಹಣೆಗಾಗಿ ವಾರ್ಡ್ ಮಟ್ಟದಲ್ಲೇ ಕಸವನ್ನು ಸಂಸ್ಕರಣೆ ಮಾಡಿ ಜೈವಿಕ ಅನಿಲ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನುಮೋದನೆ ನೀಡಿದ್ದು, ಅರಮನೆ ನಗರ ವಾರ್ಡ್‌ನಲ್ಲಿ ಯೋಜನೆ ಜಾರಿಗೆ ಬರಲಿದೆ.

ಸದಾಶಿವನಗರ, ಎಂ.ಎಸ್.ರಾಮಯ್ಯ ನಗರ, ರಾಜಮಹಲ್ ವಿಲಾಸ ಎರಡನೇ ಹಂತ, ಅಶ್ವತ್ ನಗರ, ಐಟಿಐ ಲೇಔಟ್, ಅರಮನೆ ಮೈದಾನ ಸೇರಿದಂತೆ ಅರಮನೆ ನಗರ ವಾರ್ಡ್ ಒಟ್ಟು 7.47 ಚದರ ಕಿ.ಮೀ ವ್ಯಾಪ್ತಿ ಹೊಂದಿದೆ. ವಾರ್ಡ್‌ನಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವಾರ್ಡ್‌ನಲ್ಲೇ ವಿಂಗಡಣೆ ಮಾಡಿ ಬಯೊಗ್ಯಾಸ್ ಹಾಗೂ ವಿದ್ಯುತ್ ಉತ್ಪಾದಿಸುವ ಪ್ರಸ್ತಾವನೆಗೆ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಅರಮನೆ ನಗರ ವಾರ್ಡ್‌ನಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಶಕ್ತಿ ಉತ್ಪಾದನೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ವಾರ್ಡ್‌ನ ಕಸದ ಸಮಸ್ಯೆ ನಿವಾರಣೆಯಾಗುವುದರ ಜತೆಗೆ ಸಾಕಷ್ಟು ಶಕ್ತಿ ಉತ್ಪಾದನೆಯೂ ಸಾಧ್ಯವಾಗಲಿದೆ.

ಮುಂಬೈನ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯು (ಬಾರ್ಕ್) ತ್ಯಾಜ್ಯ ನಿರ್ವಹಣೆಗೆ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತ್ಯಾಜ್ಯದಿಂದ ಬಯೊಗ್ಯಾಸ್ ಉತ್ಪಾದನೆ ಮಾಡುವ ಯೋಜನೆಯನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ತ್ಯಾಜ್ಯದಿಂದ ಶಕ್ತಿ ಉತ್ಪಾದನಾ ಘಟಕಗಳನ್ನು ರಮಣಶ್ರೀ ಉದ್ಯಾನವನ ಮತ್ತು ಎಂ.ಎಸ್.ರಾಮಯ್ಯನಗರದ ಎಚ್‌ಎಂಟಿ ರಸ್ತೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

`ಹಸಿತ್ಯಾಜ್ಯದಿಂದ ಬಯೊಗ್ಯಾಸ್ ಉತ್ಪಾದಿಸಲು ಅವಕಾಶವಿದೆ. ಜತೆಗೆ ಒಣತ್ಯಾಜ್ಯವನ್ನು ಉರಿಸಿ ಅದರಿಂದ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ವಾರ್ಡ್ ಮಟ್ಟದಲ್ಲೇ ಈ ರೀತಿ ಕಸ ಸಂಸ್ಕರಣೆ ಮಾಡುವುದರಿಂದ ತ್ಯಾಜ್ಯದ ವಿಲೇವಾರಿ ಖರ್ಚು ಉಳಿಯಲಿದೆ. ಜತೆಗೆ ಪ್ರತಿ ವಾರ್ಡ್‌ಗೂ ಸಾಕಷ್ಟು ಪ್ರಮಾಣದ ವಿದ್ಯುತ್ ಪೂರೈಕೆ ಮಾಡಬಹುದು. ವಾರ್ಡ್‌ನಲ್ಲಿ ಸಮರ್ಪಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡುವುದರಿಂದ ಸುಮಾರು ಒಂದು ಸಾವಿರ ಮನೆಗಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ~ ಎಂದು ಅರಮನೆ ನಗರ ವಾರ್ಡ್‌ನ ಬಿಬಿಎಂಪಿ ಸದಸ್ಯ ಡಾ.ಎಂ.ಎಸ್. ಶಿವಪ್ರಸಾದ್ ಹೇಳಿದರು.

`ತ್ಯಾಜ್ಯ ವಿಂಗಡಣೆಯ ಬಗ್ಗೆ ಮನೆ ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ. ಮನೆ ಮನೆಗಳಿಂದ ಕಸ ಸಂಗ್ರಹಿಸುವ ಪೌರ ಕಾರ್ಮಿಕರಿಗೂ ಈ ಬಗ್ಗೆ ತರಬೇತಿ ನೀಡಲಾಗಿದೆ. ವಿವಿಧ ಬಗೆಯ ತ್ಯಾಜ್ಯಗಳ ವಿಂಗಡಣೆಯಿಂದ ಕಸ ನಿರ್ವಹಣೆಯಲ್ಲಿ ಆಗುವ ಪ್ರಯೋಜನಗಳನ್ನು ಅವರಿಗೆ ಮನವರಿಕೆ ಮಾಡಲಾಗಿದೆ~ ಎಂದು ಅವರು ತಿಳಿಸಿದರು.

`ಹಸಿತ್ಯಾಜ್ಯ ಹಾಗೂ ಒಣತ್ಯಾಜ್ಯಗಳ ವಿಂಗಡಣೆಗೆಂದು ಬೆಂಗಳೂರಿನಲ್ಲೇ ಮೊದಲ ಬಾರಿಗೆ ನಮ್ಮ ವಾರ್ಡ್‌ನಲ್ಲಿ ಮನೆ ಮನೆಗಳಿಗೂ ಎರಡು ಬಕೆಟ್‌ಗಳನ್ನು ವಿತರಿಸಲಾಯಿತು. ಕಸ ನಿರ್ವಹಣೆಯ ಬಗ್ಗೆ ಈಗಾಗಲೇ ಜನರಲ್ಲಿ ಸಾಕಷ್ಟು ಅರಿವು ಮೂಡಿದೆ. ಆದರೆ, ಜಾಗೃತಿ ಮೂಡಿಸುವ ಕೆಲಸ ಇನ್ನಷ್ಟು ಆಗಬೇಕಿದೆ. ತಮ್ಮಬ್ಬರ ಮನೆಯ ಕಸ ವಿಂಗಡಣೆಯಿಂದ ನಗರದ ಕಸದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬ ಮನೋಭಾವ ಜನರಿಂದ ದೂರವಾಗಬೇಕು~ ಎಂಬುದು ಅವರ ಅಭಿಪ್ರಾಯ.

ಏನಿದು `ಬಾರ್ಕ್ ತಂತ್ರಜ್ಞಾನ~?
ಬೆಳೆಯುತ್ತಿರುವ ನಗರಗಳ ತ್ಯಾಜ್ಯದ ಸಮಸ್ಯೆಯ ನಿರ್ವಹಣೆಗೆ ಮುಂಬೈನ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯು (ಬಾರ್ಕ್) ರೂಪಿಸಿದ ತಂತ್ರಜ್ಞಾನವನ್ನು `ಬಾರ್ಕ್ ತಂತ್ರಜ್ಞಾನ~ ಎಂದು ಕರೆಯಲಾಗಿದೆ. ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ನಗರದಲ್ಲೇ ಸಂಸ್ಕರಿಸಿ ಅದರಿಂದ ಶಕ್ತಿ ಉತ್ಪಾದನೆ ಮಾಡುವುದು ತಂತ್ರಜ್ಞಾನದ ಮೂಲ ಉದ್ದೇಶ. ಹಸಿತ್ಯಾಜ್ಯದಿಂದ ನಗರ ಪ್ರದೇಶದ ವ್ಯಾಪ್ತಿಯಲ್ಲೇ ಸಾವಯವ ಗೊಬ್ಬರ, ಬಯೊಗ್ಯಾಸ್ ಉತ್ಪಾದನೆ ಮತ್ತು ಒಣತ್ಯಾಜ್ಯವನ್ನು ಉರಿಸಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನಗಳನ್ನು `ಬಾರ್ಕ್~ ಅಭಿವೃದ್ಧಿ ಪಡಿಸಿದೆ.

ತ್ಯಾಜ್ಯ ವಿಂಗಡಣೆ ಬಗ್ಗೆ ಜಾಗೃತಿ ಅಗತ್ಯ
`ಕಸ ವಿಂಗಡಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಕಸ ವಿಂಗಡಣೆ ಮಾಡದವರ ಮೇಲೆ ದಂಡ ಹಾಕುವುದರಿಂದ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಹೀಗಾಗಿ ಹಂತ ಹಂತವಾಗಿ ಮನೆ ಮನೆಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ವಾರ್ಡ್‌ನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಸದಿಂದ ಶಕ್ತಿ ಉತ್ಪಾದಿಸುವ ಯೋಜನೆಗೆ ಕರೆದಿದ್ದ ಹಳೆಯ ಟೆಂಡರ್ ರದ್ದಾಗಿದೆ. ಮತ್ತೆ ಹೊಸದಾಗಿ ಟೆಂಡರ್ ಕರೆಯಬೇಕಿದ್ದು ಶೀಘ್ರವೇ ಯೋಜನೆ ಜಾರಿಗೆ ಬರಲಿದೆ~
-ಡಾ.ಎಂ.ಎಸ್.ಶಿವಪ್ರಸಾದ್, ಬಿಬಿಎಂಪಿ ಸದಸ್ಯ, ಅರಮನೆ ನಗರ ವಾರ್ಡ್

ಅರಿವು ಮೂಡಿಸಬೇಕು
`ಕಸ ವಿಂಗಡಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು    ವಾರ್ಡ್‌ನಲ್ಲಿ ನಡೆಸಲಾಗುತ್ತಿದೆ. ಆದರೆ, ಎಷ್ಟೋ ಬಾರಿ ವಿದ್ಯಾವಂತರೇ ಕಸ ವಿಂಗಡಣೆಯ ಬಗ್ಗೆ ಅನಾದರದ ಮಾತುಗಳನ್ನಾಡುತ್ತಾರೆ. ಎಲ್ಲ ರೀತಿಯ ಕಸವನ್ನೂ ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ಮನೆಯ ಮುಂದೆ ಇಟ್ಟುಬಿಡುತ್ತಾರೆ. ಈ ಅಸಡ್ಡೆ ಜನರಿಂದ ದೂರಾಗಬೇಕು. ದಿನದ ಸ್ವಲ್ಪ ಸಮಯವನ್ನು ಕಸ ವಿಂಗಡಣೆಗೆ ಮೀಸಲಿಟ್ಟರೆ, ನಗರದ ತ್ಯಾಜ್ಯದ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿದೆ. ಕಸದಿಂದ ಶಕ್ತಿ ಉತ್ಪಾದನೆಯ ಯೋಜನೆಯನ್ನು ಬಿಬಿಎಂಪಿ ಶೀಘ್ರವೇ ಅನುಷ್ಠಾನಕ್ಕೆ ತರಬೇಕು~
-ರಾಜಗೋಪಾಲ್, ಅಧ್ಯಕ್ಷರು, ರಾಜಮಹಲ್ ವಿಲಾಸ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT