ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್ ಮೀಸಲಾತಿ ಆಕ್ಷೇಪಣೆ ಪರಿಶೀಲನೆ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ):`ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಕರಡು ಪಟ್ಟಿ ಪ್ರಕಟಿಸಿದ್ದು, ಅದಕ್ಕೆ ರಾಜ್ಯದ ಎಲ್ಲ ಕಡೆಯಿಂದ ಆಕ್ಷೇಪಣೆಗಳು ಬರುತ್ತಿವೆ. ಅವುಗಳ ಪರಿಶೀಲನೆ ನಂತರ ಮುಖ್ಯಮಂತ್ರಿ ಜತೆ ಚರ್ಚಿಸಿ, ಚುನಾವಣೆ ನಡೆಸುವ ಸಂಬಂಧ ಅಂತಿಮ ನಿರ್ಧಾರಕ್ಕೆ ಬರಲಾಗುವುದು' ಎಂದು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಮಂಗಳವಾರ ವಿಧಾನಸಭೆಗೆ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್,ಜೆಡಿಎಸ್ ಸದಸ್ಯರು ವಿಷಯ ಪ್ರಸ್ತಾಪಿಸಿ, ಮೀಸಲಾತಿ ನಿಗದಿಪಡಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅವೈಜ್ಞಾನಿಕವಾಗಿದ್ದು, ಅದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಪಡಿಸಿದರು.

`2012ರ ಜನಗಣತಿಯನ್ನು ಆಧಾರಿಸಿಯೇ ಚುನಾವಣೆ ನಡೆಸುವ ಉದ್ದೇಶ ಸರ್ಕಾರಕ್ಕೆ ಇತ್ತು. ಈ ಕುರಿತು ಜನಗಣತಿ ನಿರ್ದೇಶನಾಲಯಕ್ಕೆ ಹಲವು ಬಾರಿ ಪತ್ರ ಬರೆದು ಜನಗಣತಿ ವರದಿ ನೀಡುವಂತೆ ಕೋರಲಾಗಿತ್ತು. 2013ರ ಜೂನ್ ವೇಳೆಗೆ ಅಂತಿಮ ವರದಿ ನೀಡುವುದಾಗಿ ಜನಗಣತಿ ಅಧಿಕಾರಿಗಳು ಹೇಳಿದ್ದರು.

ಸರ್ಕಾರ ಒತ್ತಡ ಹೇರಿದ ಮೇಲೆ ಮಾರ್ಚ್ ವೇಳೆಗೆ ನೀಡಲು ಒಪ್ಪಿದರು. ಈ ನಡುವೆ ಸಾರ್ವಜನಿಕರೊಬ್ಬರು ಹೈಕೋರ್ಟ್‌ಗೆ ಹೋದ ಕಾರಣ, ಇದೇ 18ರೊಳಗೆ ವಾರ್ಡ್‌ವಾರು ಮೀಸಲಾತಿ ಪ್ರಕಟಿಸುವಂತೆ ಕೋರ್ಟ್ ಸೂಚಿಸಿದೆ' ಎಂದು ಅವರು ಹೇಳಿದರು.

`ರಾಜ್ಯದ ಎಲ್ಲ ಕಡೆಯಿಂದ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಗಳು ಬಂದಿದ್ದು, ಅವುಗಳ ಪರಿಶೀಲನೆ ನಡೆದಿದೆ. ಆಕ್ಷೇಪಣೆಗಳು ನ್ಯಾಯಬದ್ಧವಾಗಿದ್ದರೆ ಅವುಗಳನ್ನು ಸರಿಪಡಿಸಲಾಗುವುದು. ಬಳಿಕ ಸದಸ್ಯರು ಎತ್ತಿರುವ ತಕರಾರುಗಳ ಕುರಿತು ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಪರಿಹಾರ ಹುಡುಕಲಾಗುವುದು' ಎಂದರು.

ನಗರಾಭಿವೃದ್ಧಿ ಸಚಿವ ಎಸ್.ಸುರೇಶಕುಮಾರ್ ಮಾತನಾಡಿ, `ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಅವಧಿ ಪೂರ್ಣ ಆಗುವುದಕ್ಕೂ ಮುನ್ನ ಚುನಾವಣೆ ನಡೆಸುವುದು ಕಡ್ಡಾಯ. ಹೀಗಾಗಿ 2001ರ ಜನಗಣತಿ ಪ್ರಕಾರವೇ ಚುನಾವಣೆ ನಡೆಸಬೇಕಾಗಿದೆ. 2012ರ ಜನಗಣತಿ ಪ್ರಕಾರ ಚುನಾವಣೆ ನಡೆಸಿದರೆ, ತುಮಕೂರು, ವಿಜಾಪುರ ಮತ್ತು ಶಿವಮೊಗ್ಗ ನಗರಸಭೆಗಳಿಗೆ ಮಹಾನಗರ ಪಾಲಿಕೆಯ ಮಾನ್ಯತೆ ಸಿಗಲಿದೆ. ಈ ವಿಷಯವನ್ನು ಹೈಕೋರ್ಟ್ ಗಮನಕ್ಕೂ ತರಲಾಗಿದೆ' ಎಂದು ಹೇಳಿದರು.

ಈ ಪ್ರಕರಣ ಹೈಕೋರ್ಟ್‌ನಲ್ಲಿದ್ದು, ತೀರ್ಪು ಬಂದ ನಂತರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು. ಅದಕ್ಕೂ ಮುನ್ನ ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕಾಗಿದೆ ಎಂದರು. ಇದಕ್ಕೂ ಮುನ್ನ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಮಾತನಾಡಿ, `ನಗರ ಸ್ಥಳೀಯ ಸಂಸ್ಥೆಗಳಿಗೆ 2012ರ ಜನಗಣತಿಯನ್ನು ಆಧರಿಸಿ ಚುನಾವಣೆ ನಡೆಸಬೇಕು' ಎಂದು ಒತ್ತಾಯಿಸಿದರು.

`2013ರ ಆರಂಭದಲ್ಲಿ ನಾವಿದ್ದೇವೆ. ಇಂತಹ ಸನ್ನಿವೇಶದಲ್ಲಿ 12 ವರ್ಷದ ಹಿಂದಿನ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ನಿಗದಿಪಡಿಸುವುದು ಎಷ್ಟರ ಮಟ್ಟಿಗೆ ಸರಿ? 12 ವರ್ಷದಲ್ಲಿ ನಗರ ಪ್ರದೇಶಗಳ ಜನಸಂಖ್ಯೆ ದ್ವಿಗುಣ ಆಗಿದ್ದು, ಜಾತಿವಾರು ಮೀಸಲಾತಿಯಲ್ಲೂ ಸಾಕಷ್ಟು ವ್ಯತ್ಯಾಸ ಆಗಿದೆ. ಹೀಗಾಗಿ 2012ರ ಜನಗಣತಿಯನ್ನು ಆಧಾರಿಸಿಯೇ ಮೀಸಲಾತಿ ನಿಗದಿಪಡಿಸಬೇಕು' ಎಂದು ಜಯಚಂದ್ರ ಒತ್ತಾಯಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಜನವರಿಗೆ ಮುಗಿಯಲಿದೆ. ಇಷ್ಟಾದರೂ ಜುಲೈ 7ರ ಮತದಾರರ ಪಟ್ಟಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪರಿಗಣಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT