ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್ ಮೀಸಲು ಅವೈಜ್ಞಾನಿಕ: ಕಾಂಗ್ರೆಸ್ ಆಕ್ಷೇಪ

Last Updated 6 ಡಿಸೆಂಬರ್ 2012, 5:38 IST
ಅಕ್ಷರ ಗಾತ್ರ

ದಾವಣಗೆರೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲಾಗದೇ, ಬಿಜೆಪಿ ಸರ್ಕಾರ ಅಡ್ಡದಾರಿ ಹಿಡಿದಿದ್ದು, ಮಹಾನಗರ ಪಾಲಿಕೆ ವಾರ್ಡ್ ಮೀಸಲಾತಿ ಕರಡು ಪಟ್ಟಿ ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ 209 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಜಾಗ್ರತೆ ವಹಿಸಬೇಕಾಗಿದ್ದ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಅವೈಜ್ಞಾನಿಕವಾಗಿ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸುವ ಮೂಲಕ ಹೈಕೋರ್ಟ್‌ನಲ್ಲಿ ಸುಲಭವಾಗಿ ಯಾರು ಬೇಕಾದರೂ ತಡೆಯಾಜ್ಞೆ ತಂದು, ಚುನಾವಣೆ ನಿಲ್ಲಲಿ ಎಂಬ ದುರುದ್ದೇಶದಿಂದ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ವಕ್ತಾರ ಹಾಗೂ ಕೆಪಿಸಿಸಿ ಸದಸ್ಯ ಡಿ. ಬಸವರಾಜ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕರಡು ಪಟ್ಟಿಯ ಮೀಸಲಾತಿಯಂತೆ ಚುನಾವಣೆ ನಡೆದಲ್ಲಿ ಸಾಮಾಜಿಕ ನ್ಯಾಯಕ್ಕೆ ಕೊಡಲಿಪೆಟ್ಟು ಬೀಳುತ್ತದೆ. ಪಾಲಿಕೆಯ 41 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿರುವ 4 ವಾರ್ಡ್‌ಗಳನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಬರುವಂತೆ ಜಿಲ್ಲಾಡಳಿತ ಮೀಸಲು ಕರಡುಪಟ್ಟಿಯಲ್ಲಿ ಪ್ರಕಟಿಸಿದೆ.

ಇದರಿಂದ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸ ಬಯಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತದೆ. ಪರಿಶಿಷ್ಟ ಪಂಗಡದ ಎರಡು ವಾರ್ಡ್‌ಗಳನ್ನೂ ದಾವಣಗೆರೆ ಉತ್ತರ ವಿಧಾನಸಭಾ ವ್ಯಾಪ್ತಿಗೆ ಮೀಸಲು ನಿಗದಿಪಡಿಸಲಾಗಿದೆ. ಇದರಿಂದ ದಕ್ಷಿಣ ಕ್ಷೇತ್ರದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತದೆ ಎಂದರು.

ವಾರ್ಡ್ ನಂ. 26 ಮತ್ತು 37ರಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲು ಪ್ರಕಟಿಸಲಾಗಿದೆ. ಆದರೆ, ಸರ್ಕಾರವೇ ಹೊರಡಿಸಿರುವ ಜನಗಣತಿಯ ಪ್ರಕಾರ, ವಾರ್ಡ್ ನಂ. 37ರಲ್ಲಿ 1,038 ಪರಿಶಿಷ್ಟ ಪಂಗಡದ ಜನಸಂಖ್ಯೆ ಇದೆ. ವಾರ್ಡ್ ನಂ. 41ರಲ್ಲಿ 1,287 ಮತ್ತು ವಾರ್ಡ್ ನಂ. 15ರಲ್ಲಿ 1,115 ಪರಿಶಿಷ್ಟ ಪಂಗಡದ ಜನರು ಇದ್ದಾರೆ. ಇದರಿಂದ ವಾಸ್ತವಕ್ಕೆ ವಿರುದ್ಧವಾದ ಮೀಸಲಾಗಿ ನಿಗದಿಪಡಿಸಿರುವುದು ಸ್ಪಷ್ಟವಾಗುತ್ತದೆ.

ಹಿಂದುಳಿದ ವರ್ಗದವರು ವಾಸಿಸುವ ವಾರ್ಡ್‌ಗಳನ್ನು ಸಾಮಾನ್ಯ ಕ್ಷೇತ್ರಗಳೆಂದೂ, ಸಾಮಾನ್ಯರೇ ಹೆಚ್ಚಾಗಿ ವಾಸಿಸುವ ಪ್ರದೇಶಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿರುವುದು ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ದೊರೆಯದಂತೆ ಆಗುತ್ತದೆ. ವಾರ್ಡ್ ನಂ. 4ರಲ್ಲಿ ಬಹುತೇಕರು ಅಲ್ಪಸಂಖ್ಯಾತರು ವಾಸಿಸುತ್ತಿದ್ದು, ಹಿಂದುಳಿದ ವರ್ಗ `ಬಿ' ಮಹಿಳೆಗೆ ನಿಗದಿಗೊಳಿಸಿರುವುದು ಸಹ ಅಲ್ಪಸಂಖ್ಯಾತರಿಗೆ ಸರ್ಕಾರ ದ್ರೋಹ ಬಗೆದಂತಾಗಿದೆ ಎಂದು ದೂರಿದರು.

ತರಾತುರಿಯಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಒಂದು ವಾರ ಸಮಯ ಆಕ್ಷೇಪಣೆಗೆ ಮೀಸಲಿಟ್ಟು, ಸಾರ್ವಜನಿಕರು, ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತರಲಿ ಎಂಬುದೇ ಸರ್ಕಾರದ ಉದ್ದೇಶ. ಪಾಲಿಕೆಗೆ ಮೀಸಲಾತಿ ನಿಗದಿಪಡಿಸುವಲ್ಲಿ ಎಸಗಿರುವ ಅನ್ಯಾಯದ ವಿರುದ್ಧ ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಆಕ್ಷೇಪಣೆ ಸಲ್ಲಿಸಲಿದೆ. ಇದಕ್ಕೂ ಸರ್ಕಾರ ಕಿವಿಗೊಡದಿದ್ದರೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಡಿ.ಎನ್. ಜಗದೀಶ, ಕೆ.ಜಿ. ಶಿವಕುಮಾರ, ಸೀಮೆಎಣ್ಣೆ ಮಲ್ಲೇಶ್, ಎ. ನಾಗರಾಜ, ಆರ್. ಜಗನ್ನಾಥ, ಎಸ್. ಮಲ್ಲಿಕಾರ್ಜುನ, ಹುಚ್ಚವ್ವನಹಳ್ಳಿ ಅಜ್ಜಯ್ಯ, ಪದ್ಮಾ ವೆಂಕಟೇಶ್, ಕೆ.ಎಚ್. ಚೈತನ್ಯಕುಮಾರ್, ಆಟೋ ಕಲ್ಲೇಶಪ್ಪ, ಆಟೋ ತಿಮ್ಮಣ್ಣ, ಡಿ. ಬಸವರಾಜ, ಆನಂದಕುಮಾರ್, ಮುಶ್ರಫ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT