ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್ ಸಭೆ: ಶಾಸಕರ ಲೇವಡಿ

Last Updated 13 ಅಕ್ಟೋಬರ್ 2012, 9:55 IST
ಅಕ್ಷರ ಗಾತ್ರ

ಗಂಗಾವತಿ: `ನಾನೇ ಇಷ್ಟು ಅನುದಾನ ತಂದಿದ್ದು, ನನ್ನಿಂದಲೇ ಗಂಗಾವತಿ ಅಭಿವೃದ್ಧಿಯಾಗಿದೆ ಎಂದು ಡಂಗೂರ ಸಾರುತ್ತಿರುವ ಅನ್ಸಾರಿ ಅವರೇ, ನಿಮ್ಮ ಅಹಂಕಾರದ ಮಾತು ಸರಿಯಲ್ಲ. ಸಾರ್ವಜನಿಕರಿಗೂ ತಿಳಿವಳಿಕೆ ಇದೆ. ಮತದಾರ ಸಾರ್ವಜನಿಕರಿಗೂ ರಾಜಕಾರಣಿಗಳ ಹೇಳಿಕೆಯಲ್ಲಿ ಸರಿ ಯಾವುದು, ಹಾರಿಕೆ ಉತ್ತರ ಯಾವುದು ಎಂಬುವುದು ನಿರ್ಧರಿಸುವಷ್ಟು ಜಾಣ್ಮೆ ಇದೆ~ ಎಂದು ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನುದ್ದೇಶಿಸಿ ಹೇಳಿದರು.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಜಿ ಸಚಿವರು ವಾರ್ಡ್‌ವಾರು ಹಮ್ಮಿಕೊಂಡ ಸಭೆಗಳಲ್ಲಿ ತಮ್ಮನ್ನು ದೂಷಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಶಾಸಕ, ಮಾಜಿ ಸಚಿವರ ವಾರ್ಡ್‌ವಾರು ಸಭೆಯ ಬಗ್ಗೆ ಲೇವಡಿ ಮಾಡಿದರು.

ಚುನಾವಣೆ ಬಂದಾಗ ಮಾತ್ರ ಕೆಲವರಿಗೆ ಮತದಾರರ ನೆನಪಾಗುತ್ತದೆ. ಮತದಾರರನ್ನು ಓಲೈಸಿಕೊಳ್ಳಲು ಅವರ ಮನೆಗೆ ತೆರಳುವ ಸ್ಥಿತಿ ಬಂದಿರುತ್ತದೆ. ಆದರೆ ನಾನು ಹಾಗಲ್ಲ. ಚುನಾವಣೆ ಉದ್ದೇಶ ಇಟ್ಟುಕೊಂಡೇ ಜನರ ಬಳಿಗೆ ಹೋಗುವ ದರ್ದಿಲ್ಲ.

ನಾನು ಜನಪ್ರತಿನಿಧಿ. ಕಳೆದ ನಾಲ್ಕು ವಷದಿಂದ ನಿತ್ಯ ಬೆಳಗ್ಗೆ 7ರಿಂದ ಸಂಜೆ ಹತ್ತರವರೆಗೆ ನಿತ್ಯವೂ ಜನ ಸಾಮಾನ್ಯರತ್ತ ಹೋಗುತ್ತಿದ್ದೇನೆ. ಹೀಗಾಗಿ ಚುನಾವಣೆ ಉದ್ದೇಶಕ್ಕಾಗಿಯೇ ಇತರ ಪಕ್ಷದ ಮುಖಂಡರಂತೆ ಜನರ ಮನೆಗೆ ಹೋಗುವ ಅಗತ್ಯ ನನಗಿಲ್ಲ ಎಂದರು.

ನಗರದ ಕುಡಿಯುವ ಯೋಜನೆಗೆ ರೂ,64 ಕೋಟಿ ಮಂಜೂರಾಗಿದೆ. ನಗರೋತ್ಥಾನದಲ್ಲಿ ರೂ,15 ಕೋಟಿ ಮಂಜೂರಾಗಿದೆ. ಇದೆಲ್ಲವನ್ನೂ ನಾನೇ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಮಾಜಿ ಸಚಿವರು ಬಿಜೆಪಿಯಲ್ಲಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು.

ಮಿನಿ ವಿಧಾನಸೌಧ ನಿರ್ಮಾಣವಾಗಿ ಕೇವಲ ನಾಲ್ಕೈದು ವರ್ಷದಲ್ಲಿ ಕಳಪೆ ಗುಣಮಟ್ಟ ಬಹಿರಂಗವಾಗಿದೆ. ಈ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಶೀಘ್ರ ಮಾಹಿತಿ ಕಲೆಹಾಕಿ ತನಿಖೆಗೆ ಒಪ್ಪಿಸುವ ಸಂಬಂಧ ಯೋಚಿಸುವುದಾಗಿ ಶಾಸಕ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರು. ಅವರ ಹಿಂದೆಯೆ ನಾವೆಲ್ಲಾ ಇದ್ದೇವೆ. ಯಾವ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲಾರರು. ಇನ್ನೂ ಎರಡ್ಮೂರು ತಿಂಗಳ ಕಾಯ್ದು ನೋಡಿ ಬಿಎಸ್‌ವೈ ಪಕ್ಷ ತ್ಯಜಿಸುವುದಿಲ್ಲ ಎಂದು ಶಾಸಕ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT