ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಷಿಕೋತ್ಸವದಲ್ಲಿ ಕನ್ನಡ ಸಂಸ್ಕೃತಿ ಸಿಂಚನ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕನ್ನಡ ಹಾಗೂ ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹಾಡು, ನೃತ್ಯ ಕಾರ್ಯಕ್ರಮವನ್ನು ಇತ್ತೀಚೆಗೆ ಕೋಗಲು ಕ್ರಾಸ್‌ ಬಳಿ ಇರುವ ಆಕ್ಸ್‌ಫರ್ಡ್‌ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.

ಸಂಸ್ಥೆಯ 23ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಮಾಡಿದರು.
‘ಭ್ರಷ್ಟಾಚಾರ ವಿರುದ್ಧ ಹೋರಾಡುವ ಮನೋಭಾವವನ್ನು ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ಸಮಾಜದ ಭಾಗವಾಗಿಯೇ ಅದು ಮುಂದುವರೆದುಕೊಂಡು ಬಂದಿದೆ. ಆದರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಅಸಾಧ್ಯವೇನಲ್ಲ. ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಇದರ ವಿರುದ್ಧ ಮನೋಭಾವವನ್ನು ಮೂಡಿಸಬೇಕು’ ಎಂದು ನಿವೃತ್ತ ನ್ಯಾ.ಎನ್. ಸಂತೋಷ ಹೆಗ್ಡೆ ಕರೆ ನೀಡಿದರು.

ನಂತರ ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ಮುಖ್ಯ ಅತಿಥಿಗಳಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ ಅವರು ಸಮಾಜದಲ್ಲಿ ಸಚ್ಚಾರಿತ್ರ್ಯದ ಕೊರತೆ ಇದೆ. ಶಿಕ್ಷಣ ಅಂದರೆ ಅಂಕ ಗಳಿಕೆಯ ಲೆಕ್ಕಾಚಾರವಲ್ಲ. ಶಿಕ್ಷಣ ಮಕ್ಕಳಲ್ಲಿ ಸಚ್ಚಾರಿತ್ರ್ಯ ರೂಪಿಸಬೇಕು. ಮಾನವೀಯತೆ ಮೈಗೂಡಿಸಿಕೊಳ್ಳುವಂತೆ ಮಾಡಬೇಕು. ದೇಶದ ಆಸ್ತಿಯಾಗುವಂತೆ ಮಾಡಬೇಕು. ಹಾಗಾದಾಗ ಮಕ್ಕಳು ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಹೋರಾಟಗಾರರಾದ ವಿದ್ಯಾಧರ ಗುರೂಜಿ, ಸಮೂಹದ ಅಧ್ಯಕ್ಷ ಎ.ಎಸ್. ರಾಜು ಇನ್ನಿತರರು ಪಾಲ್ಗೊಂಡಿದ್ದರು.
ಬಳಿಕ ನಡೆದ ರಂಗುರಂಗಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು. ನೆಲದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ, ಕನ್ನಡ ಹಾಡುಗಳ ನೃತ್ಯ, ಬೇಡರ ಕುಣಿತ ಇತ್ಯಾದಿಗಳು ಮನ ತಣಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT