ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್ ಅಂಗಳದಲ್ಲಿ ಘಮಘಮ ಭೋಜನ!

Last Updated 16 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ವಿಜಾಪುರ: ಕೃಷ್ಣಾ ನದಿಯ ನೀರಿನ ರುಚಿ ಇಲ್ಲಿಯ ಕಾಯಿಪಲ್ಲೆ ಮೂಲಕವೇ ಸವಿಯಬೇಕು. ರಸ ಮತ್ತು ರುಚಿ ಎರಡೂ ಮೇಳೈಸಿರುವ ಇಲ್ಲಿಯ ಆಹಾರ ವೈವಿಧ್ಯವನ್ನು ಈಗ ಹಲವು ರಾಜ್ಯಗಳಿಂದ ಬಂದಿರುವ ಕ್ರೀಡಾಪಟುಗಳ ಬಾಯಿಂದಲೇ ಕೇಳಬೇಕು!

ಉತ್ತರ, ಈಶಾನ್ಯ, ದಕ್ಷಿಣ, ಪೂರ್ವ, ಪಶ್ಚಿಮ ರಾಜ್ಯಗಳಿಂದ ಬಂದಿರುವ ವಾಲಿಬಾಲ್ ಆಟಗಾರರು ವಿಜಾಪುರ ಜನರಿಗೆ ಕ್ರೀಡೆಯ ರಸದೌತಣ ಬಡಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಇಲ್ಲಿಯ ಜನ ವೈಶಿಷ್ಟ್ಯಪೂರ್ಣ ಆಹಾರದ ಆತಿಥ್ಯವನ್ನು ಮನದುಂಬಿ ನೀಡುತ್ತಿದ್ದಾರೆ.

37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಬಂದಿರುವ ಬಾಲಕ, ಬಾಲಕಿಯರು, ಅಧಿಕಾರಿಗಳು, ಸ್ವಯಂಸೇವಕರ ಹೊಟ್ಟೆ ತುಂಬ, ಮನ ತಣಿಯುವಷ್ಟು ಪ್ರಕಾರಗಳ ಆಹಾರ ನೀಡಲಾಗುತ್ತಿರುವುದು ಇಲ್ಲಿಯ ವಿಶೇಷ.

ಜೋಳ, ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ತುಪ್ಪ, ಅಗಸಿ ಹಿಂಡಿ, ಶೇಂಗಾ, ಪುಟಾಣಿ, ಕೆಂಪು ಖಾರದ ಹಿಂಡಿ, ಕೆನೆ ಮೊಸರು, ಹಸಿರು ಕಾಯಿಪಲ್ಲೆ, ಸೊಪ್ಪು, ಕಾಳಿನ ಪಲ್ಯಗಳು, ಅನ್ನ, ಹೋಳಿಗೆ ಕಟ್ಟಿನ ಸಾರಿನ ರುಚಿ ಸವಿಯುವ ಭಾಗ್ಯ ಹೊರರಾಜ್ಯದವರದ್ದು.

ಆದರೆ, ತಮ್ಮ ಊರುಗಳಿಂದ ದೂರ ಬಂದಿರುವ ಕ್ರೀಡಾಪಟುಗಳಿಗೆ ಯಾವುದೇ ಕೊರತೆಯಾಗಬಾರದು ಎಂಬ ಕಾರಣಕ್ಕೆ ಉತ್ತರ ಭಾರತದ ಪರೋಟಾ, ಚಪಾತಿ, ಫುಲ್ಕಾ, ಚಿಕನ್, ಬ್ರೆಡ್‌ಜಾಮ್, ಬೇಯಿಸಿದ ತತ್ತಿಗಳು, ಮಟನ್ ಜೊತೆಗೆ ಬಾಳೆಹಣ್ಣು, ಹಾಲು, ಶ್ರೀಖಂಡ, ಸಿಹಿ ತಿಂಡಿ ಕೂಡ ಕೊಡಲಾಗುತ್ತಿದೆ.

ಸ್ಟೇಷನ್ ರಸ್ತೆಯಲ್ಲಿರುವ ವನಿತಾ ಉತ್ಕರ್ಷ ಮಂಡಲದಲ್ಲಿ ದೊಡ್ಡ ಪೆಂಡಾಲ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ‘ಶರಣರ ನಾಡಿ’ನ ದಾಸೋಹ ಸಂಸ್ಕೃತಿಯಂತೆ ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಆಟಗಾರರಿಗೆ ಅನ್ನದಾಸೋಹ ನಡೆಯುತ್ತಿದೆ.

ಪ್ರತಿದಿನ ಒಂದು ಸಾವಿರ ಮಂದಿ ಇಲ್ಲಿಯ ಊಟವನ್ನು ಸವಿಯುತ್ತಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕ ಕಮಿಟಿಯನ್ನು ಮಾಡಲಾಗಿದ್ದು ಸಂಪೂರ್ಣ ಜವಾಬ್ದಾರಿಯನ್ನು ಇದರ ಸದಸ್ಯರು ಹೊತ್ತುಕೊಂಡಿದ್ದಾರೆ. ಪ್ರತಿದಿನ ಇಲ್ಲಿಯ ‘ಮೆನು’ ಬದಲಾಗುತ್ತಿದೆ.

“ಎಲ್ಲ ಊಟವೂ ಚೆನ್ನಾಗಿದೆ. ಮೊದಲಿಗೆ ಇಲ್ಲಿ ಬರಲು ಹೆದರಿಕೆಯಾಗಿತ್ತು. ಇಲ್ಲಿಯ ಊಟದ ಬಗ್ಗೆ ಚಿಂತೆಯಿತ್ತು. ಆದರೆ, ಈಗ ಊಟ ಸೇರುತ್ತಿದೆ. ಜನರೂ ಉತ್ತಮವಾಗಿ ವರ್ತಿಸುತ್ತಾರೆ” ಎಂದು ಜಮ್ಮು-ಕಾಶ್ಮೀರ ತಂಡದ ಕೋಚ್ ಮಹೇಂದ್ರ ಶರ್ಮಾ ಹೇಳುತ್ತಾರೆ.

“ಇಲ್ಲಿಯ ಊಟದಲ್ಲಿ ಉಪ್ಪು ಕಡಿಮೆ ಬಳಕೆ ಮಾಡುತ್ತಾರೆ. ಆದರೆ ನಮಗೆ ಇಲ್ಲಿಯ ಆಹಾರ ಇಷ್ಟವಾಗಿದೆ. ಇದಕ್ಕೆ ಹೊಂದಿಕೊಂಡಿದ್ದೇವೆ” ಎನ್ನುವ ಮಧ್ಯಪ್ರದೇಶದ ತಂಡದ ಬಾಲಕಿಯರು ಅವಲಕ್ಕಿ ತಿನ್ನುವುದರಲ್ಲಿ ಮಗ್ನರಾದರು.

ಇಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಉರಿಯುವ ಒಲೆಗಳ ಮುಂದೆ ಎರಡು ಅವಧಿಯಲ್ಲಿ ನಿರಂತರವಾಗಿ ಅಡುಗೆ ತಯಾರಿಸಲಾಗುತ್ತಿದೆ. ಚಪಾತಿ ತಯಾರಿಸಲೇಂದೆ ಪ್ರತಿ ಶಿಫ್ಟ್‌ನಲ್ಲಿ 15 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಅನ್ನ, ಸಾರು, ಪಲ್ಯ ತಯಾರಿಕೆ, ಪಾತ್ರೆ ತೊಳೆಯಲು, ಊಟ ಬಡಿಸಲು, ಊಟಕ್ಕೆ ಬರುವವರಿಂದ ಕೂಪನ್ ಪಡೆದುಕೊಂಡು ಒಳಗೆ ಬಿಡಲು ಹೀಗೆ ಒಟ್ಟು 40 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲಕಿಯರು, ಬಾಲಕರು ಮತ್ತು ಅಧಿಕಾರಿಗಳು ಹಾಗೂ ಗಣ್ಯರಿಗಾಗಿ ಪ್ರತ್ಯೇಕ ಪೆಂಡಾಲ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಇದರಿಂದ ನೂಕುನುಗ್ಗಲು ತಪ್ಪಿಸಲಾಗುತ್ತಿದೆ.

“ಬೇರೆ ಬೇರೆ ರಾಜ್ಯಗಳಿಂದ ಬಂದವರು ನಮ್ಮ ಊರಿನ ಅತಿಥಿಗಳು. ಆಹಾರ, ನೀರಿನಲ್ಲಿ ಹೆಚ್ಚು ಕಮ್ಮಿಯಾಗಿ ಅವರ ಆರೋಗ್ಯ ಕೆಟ್ಟರೆ ನಮ್ಮ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ.ಅದಕ್ಕಾಗಿಯೇ ಎಲ್ಲ ರೀತಿಯ ಎಚ್ಚರಿಕೆ ವಹಿಸಿ ಊಟದ ವ್ಯವಸ್ಥೆ ಮಾಡಿದ್ದೇವೆ. ಸ್ವಚ್ಛತೆ ಮತ್ತು ರುಚಿಗೆ ಆದ್ಯತೆ ನೀಡಿದ್ದೇವೆ. ಇದರಲ್ಲಿ ನಮ್ಮ ಕಮಿಟಿಯ ಎಲ್ಲ ಸದಸ್ಯರೂ ಶ್ರಮಿಸುತ್ತಿದ್ದಾರೆ” ರಾಜು ಹಿಪ್ಪರಗಿ, ಅರುಣ್ ವಾರದ್, ಅಡುಗೆ ತಯಾರಕ ಯಮುನಪ್ಪ ಗಂಗಣ್ಣವರ ಹೇಳುತ್ತಾರೆ.

ಸೋಮವಾರ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಮಂಗಳವಾರದಿಂದ ನಾಕೌಟ್ ಹಂತದ ಪಂದ್ಯಗಳು ಶುರುವಾಗಲಿವೆ. ಗುರುವಾರ ರಾತ್ರಿ ಫೈನಲ್ ಮುಗಿಯುತ್ತದೆ. ಆದರೆ ಶುಕ್ರವಾರ ತಂಡಗಳು ರೈಲು ಹತ್ತುವವರೆಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಟೂರ್ನಿಯ ಸವಿನೆನಪಿನೊಂದಿಗೆ ಮರಳಲಿರುವ ಆಟಗಾರರು  ‘ಗುಮ್ಮಟನಗರಿ’ಯ ಊಟ ರುಚಿಯನ್ನು ಮೆಲುಕು ಹಾಕುವುದು ಖಚಿತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT