ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಸಮುದಾಯ ಅಭಿವೃದ್ಧಿಗೆ ಕ್ರಮ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ತುಮಕೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯದವರ ಅಭಿವೃದ್ಧಿಗಾಗಿ `ಗ್ರೂಪ್ ಎ~ ಹುದ್ದೆಯ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದರು.

ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ವಿಧಾನಸೌಧದಲ್ಲಿ ಮಂಗಳವಾರ ಜಂಟಿಯಾಗಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ `ವಾಲ್ಮೀಕಿ ಭವನ~ ನಿರ್ಮಿಸಲಾಗುವುದು. ಇದೇ ಮಾದರಿಯ ಭವನಗಳನ್ನು ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಿಸುವ ಆಲೋಚನೆಯೂ ಸರ್ಕಾರಕ್ಕೆ ಇದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಸರ್ಕಾರಿ ಗ್ರಂಥಾಲಯಗಳಿಗೆ ವಾಲ್ಮೀಕಿ ರಾಮಾಯಣದ ಪ್ರತಿಗಳನ್ನು ನೀಡಲಾಗಿದೆ. ಕೆಲವು ಕಾಲೇಜುಗಳಿಗೂ ಈ ಕೃತಿಯ ಪ್ರತಿಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ವಾಲ್ಮೀಕಿ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ಇದೇ ರೀತಿ ರಾಷ್ಟ್ರಮಟ್ಟದಲ್ಲೂ ಆಚರಿಸುವಂತಾಗಬೇಕು ಎಂದು ಹೇಳಿದರು. ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ, ಸಂಸದ ಡಿ.ಬಿ. ಚಂದ್ರೇಗೌಡ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಬೇಗ್, ಐ-ಪಾಡ್, ರಾಮಾಯಣ
ಬೆಂಗಳೂರು:
`ನೋಡಿ ಮುಖ್ಯಮಂತ್ರಿಗಳೆ, ನೀವು ಮಾತ್ರ ವಾಲ್ಮೀಕಿ ರಾಮಾಯಣ ಓದುವುದು ಅಂತ ತಿಳಿಯಬೇಡಿ. ನಾನೂ ರಾಮಾಯಣ ಓದುತ್ತೇನೆ. ನನ್ನ ಐ-ಪಾಡ್ ನೋಡಿ, ವಾಲ್ಮೀಕಿ ರಾಮಾಯಣದ ಪುಸ್ತಕ ಇದೆ ಇದರಲ್ಲಿ.~

- ಹೀಗೆ ಡಿ.ವಿ. ಸದಾನಂದ ಗೌಡ ಅವರಿಗೆ ಹೇಳಿದ್ದು ಶಾಸಕ ಆರ್. ರೋಷನ್ ಬೇಗ್. ಈ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಗೌಡರು, `ನಾನು ರೋಷನ್ ಬೇಗ್ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಅವರು ತಮ್ಮ ಐ-ಪಾಡ್ ತೋರಿಸಿದರು. ಅದರಲ್ಲಿ ವಾಲ್ಮೀಕಿ ರಾಮಾಯಣದ ಎಲೆಕ್ಟ್ರಾನಿಕ್ ಪುಸ್ತಕ ಇತ್ತು. ತಾವು ಪ್ರಸ್ತುತ ರಾಮಾಯಣ ಕೃತಿ ಓದುತ್ತಿರುವುದಾಗಿ ರೋಷನ್ ಬೇಗ್ ತಿಳಿಸಿದರು~ ಎಂದು ಗೌಡರು ಹೇಳಿದರು.

ಭಾಷೆ - ಸಮುದಾಯಗಳನ್ನು ಮೀರಿದ ರಾಮಾಯಣದಂತಹ ಮಹಾಕಾವ್ಯಗಳು ದೇಶದ ಸಾಂಸ್ಕೃತಿಕ ಸಾಮರಸ್ಯಕ್ಕೆ ಪೂರಕವಾಗಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT