ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ಟನ್‌ನ ವಿಧಾನಸೌಧ!

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ವಿಧಾನಸೌಧದ ಒಳಗೆ ಪ್ರವೇಶಿಸುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೇ ಗೊತ್ತು. ಭದ್ರತೆ, ಸುರಕ್ಷತೆ ಹೆಸರಿನಲ್ಲಿ ಜನಸಾಮಾನ್ಯರನ್ನು ವಿಧಾನಸೌಧದಿಂದ ದೂರ ಇಡಲಾಗುತ್ತದೆ. ಜನಪ್ರತಿನಿಧಿಗಳ ಅಥವಾ ಅಧಿಕಾರಿಗಳ ಶಿಫಾರಸ್ಸು ಪತ್ರ ಪಡೆದು ಒಳ ಹೋಗಬೇಕು ಎಂದರೂ ಶ್ರೀಸಾಮಾನ್ಯರು ಸಾಕಷ್ಟು ಇರುಸುಮುರುಸು ಅನುಭವಿಸಬೇಕು. ಇನ್ನು ದೆಹಲಿಯ ಸಂಸತ್ ಭವನದಲ್ಲೂ ಇದಕ್ಕಿಂತ ಹೆಚ್ಚು ಭದ್ರತೆ.

ಆದರೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಇರುವ `ದಿ ಕ್ಯಾಪಿಟಲ್ ಹಿಲ್~ನಲ್ಲಿ ಮಾತ್ರ ಇದೆಲ್ಲಕ್ಕಿಂತ ಭಿನ್ನವಾದ ಅನುಭವ. ವಿಶ್ವದ ಅತ್ಯಂತ ಬಲಾಢ್ಯ, ಸಿರಿವಂತ ದೇಶದ ಸಂಸತ್ತು (ಪ್ರತಿನಿಧಿಗಳ ಸಭೆ ಅಥವಾ ಕಾಂಗ್ರೆಸ್ ಮತ್ತು ಸೆನೆಟ್) ಸಭೆ ಸೇರುವ ಭವ್ಯ ಕಟ್ಟಡ `ದಿ ಕ್ಯಾಪಿಟಲ್~, ಸನಿಹದ ಸುಪ್ರೀಂ ಕೋರ್ಟ್ ಕಟ್ಟಡ, ಅಮೂಲ್ಯ ಮಾಹಿತಿಗಳನ್ನು ಒಳಗೊಂಡ ಗ್ರಂಥಾಲಯ, ಉದ್ಯಾನಗಳನ್ನು ಒಳಗೊಂಡ ದಿ ಕ್ಯಾಪಿಟಲ್ ಹಿಲ್ ಪ್ರದೇಶಕ್ಕೆ ಅಮೆರಿಕನ್ ಪ್ರಜೆಗಳಷ್ಟೇ ಅಲ್ಲ ವಿದೇಶಿಯರೂ ಕೂಡ ಸಲೀಸಾಗಿ ಹೋಗಬಹುದು, ಒಳಗೆಲ್ಲ ನೋಡಬಹುದು. ಕಾಂಗ್ರೆಸ್ ಅಥವಾ ಸೆನೆಟ್ ಅಧಿವೇಶನ ನಡೆಯುತ್ತಿದ್ದರೆ ಅದನ್ನೂ ವೀಕ್ಷಿಸಬಹುದು.

ಸೆನೆಟ್ ಅಥವಾ ಕಾಂಗ್ರೆಸ್ ಸದಸ್ಯರ ಕಚೇರಿಗಳ ಮೂಲಕ ಕಾಯ್ದಿರಿಸಿದರೆ ಅವರ ಸಿಬ್ಬಂದಿಗಳೇ ಈ ಕಟ್ಟಡದ ವಿವಿಧ ಭಾಗಗಳನ್ನು ತೋರಿಸಿ ವಿವರಿಸುತ್ತಾರೆ. ಅದಿಲ್ಲದಿದ್ದರೆ ಯುಎಸ್ ಕ್ಯಾಪಿಟಲ್ ವಿಸಿಟರ್ ಸೆಂಟರ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡವಾಗಿ ನೋಂದಾಯಿಸಿಕೊಂಡು ವೀಕ್ಷಿಸಬಹುದು. ಇದೂ ಸಾಧ್ಯವಾಗದೇ ಹೋದರೆ ಪ್ರತಿ ದಿನ ಸೀಮಿತ ಸಂಖ್ಯೆಯಲ್ಲಿ `ಆಯಾ ದಿನದ ಪ್ರವಾಸಿ ಪಾಸ್~ ವಿತರಿಸುತ್ತಾರೆ. ಅದನ್ನು ಪಡೆದು ಒಳ ಪ್ರವೇಶಿಸಿ ವೀಕ್ಷಿಸಬಹುದು. ರಜಾ ದಿನಗಳನ್ನು ಹೊರತು ಪಡಿಸಿ ಉಳಿದಂತೆ ಯಾವಾಗ ಬೇಕಾದರೂ ಹೋಗಬಹುದು. ಪ್ರವೇಶ ಉಚಿತ.

ಅಷ್ಟೇನೂ ಕಿರಿಕಿರಿ ಎನಿಸದ ಭದ್ರತಾ ತಪಾಸಣೆ ಬಳಿಕ ಗುಂಪು ಗುಂಪಾಗಿ ಒಳ ಕರೆದುಕೊಂಡು ಹೋಗುತ್ತಾರೆ. ಪ್ರತಿ ಗುಂಪಿಗೂ ಒಬ್ಬ ಮಾರ್ಗದರ್ಶಿಯ ಸೇವೆಯೂ ಇರುತ್ತದೆ. ಹೀಗಾಗಿ ಯಾವುದನ್ನು ನೋಡಬೇಕು, ಎಲ್ಲಿ ಹೇಗೆ ಹೋಗಬೇಕು ಎಂಬ ಗೊಂದಲಕ್ಕೆ ಆಸ್ಪದವೇ ಇಲ್ಲ.
 
ಮೊದಲು ಸುಮಾರು 15 ನಿಮಿಷಗಳ ಪರಿಚಯಾತ್ಮಕ ಚಿತ್ರ ತೋರಿಸುತ್ತಾರೆ. ಅದಾದ ನಂತರ ವಿವಿಧ ಭಾಗಗಳಿಗೆ ಕರೆದೊಯ್ಯುತ್ತಾರೆ, ಅಲ್ಲಿನ ವಿಶೇಷಗಳು, ಕಲೆಗಳ ಮಹತ್ವಗಳನ್ನು ವಿವರಿಸುತ್ತಾರೆ. ಫೋಟೋಗಳನ್ನೂ ಕೂಡ ಯಾವುದೇ ನಿರ್ಬಂಧವಿಲ್ಲದೆ ತೆಗೆಯಬಹುದು.

ಅಮೆರಿಕನ್ ಜನತಂತ್ರದ ಅತ್ಯಂತ ಮಹತ್ವದ ಸಂಕೇತವಾದ ಅಚ್ಚ ಬಿಳಿಯ ಬಣ್ಣದ `ದಿ ಕ್ಯಾಪಿಟಲ್~ ಭವನ, ಕಲೆ ಮತ್ತು ವಿನ್ಯಾಸದ ದೃಷ್ಟಿಯಿಂದಲೂ ಅಷ್ಟೇ ಭವ್ಯ ಮತ್ತು ವಿಶಿಷ್ಟವಾಗಿದೆ. ಅದರ ತುತ್ತ ತುದಿಯಲ್ಲಿ ಬೀಡು ಕಬ್ಬಿಣದಿಂದ ನಿರ್ಮಿಸಿದ ಅತ್ಯಾಕರ್ಷಕ ವೃತ್ತಾಕಾರದ ಬೃಹತ್ ಗುಮ್ಮಟ, ಅದರ ಮೇಲೆ ನಿಲ್ಲಿಸಿರುವ ಹತ್ತೊಂಬತ್ತೂವರೆ ಅಡಿ ಎತ್ತರ ಮತ್ತು 15 ಸಾವಿರ ಪೌಂಡ್ ತೂಕದ ಸ್ವಾತಂತ್ರ್ಯ ಪ್ರತಿಮೆ (ಸ್ಟ್ಯಾಚು ಆಫ್ ಫ್ರೀಡಂ), ಕಟ್ಟಡದ ಎರಡನೇ ಮಾಳಿಗೆಯಲ್ಲಿನ ವೃತ್ತಾಕಾರದ ಕಲಾತ್ಮಕ ಸಭಾಂಗಣ `ರೊಟುಂಡಾ~, ಅನೇಕ ದಶಕಗಳ ಹಿಂದೆ ಸೆನೆಟ್ ಮತ್ತು ಸುಪ್ರೀಂ ಕೋರ್ಟ್ ಕಲಾಪ ನಡೆಯುತ್ತಿದ್ದ ಸಭಾಂಗಣಗಳು, ಮೊದಲ ಮಾಳಿಗೆಯಲ್ಲಿರುವ 100 ಅಡಿಗೂ ಎತ್ತರದ 28 ಚಿತ್ತಾಕರ್ಷಕ ಕಂಬಗಳ ಹಾಲ್ ಆಫ್ ಕಾಲಮ್ಸ, ವರ್ಣರಂಜಿತ ಮತ್ತು ಕಲಾತ್ಮಕ ಮಿಲ್ಟನ್ ಟೈಲ್ಸ್‌ಗಳನ್ನು ಒಳಗೊಂಡ ಈ ಕಟ್ಟಡದ ವಿನ್ಯಾಸ ಎಂಥವರನ್ನೂ ಮೂಕವಿಸ್ಮಿತಗೊಳಿಸುತ್ತದೆ.

ಅಮೆರಿಕದ ಹಿಂದಿನ ಅನೇಕ ಅಧ್ಯಕ್ಷರುಗಳು, ಐತಿಹಾಸಿಕ ಸಾಧನೆ ಮಾಡಿದ ಆ ಕಾಲದ ಪ್ರಮುಖ ಸದಸ್ಯರುಗಳು ಕುಳಿತುಕೊಳ್ಳುತ್ತಿದ್ದ ಸ್ಥಳಗಳು, ಎಲ್ಲ 50 ರಾಜ್ಯಗಳ ವಿಶೇಷತೆ, ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಗಳ ಸಭಾಂಗಣ, ಅಧಿಕಾರದಲ್ಲಿ ಇದ್ದಾಗ ನಿಧನರಾದ ಅಧ್ಯಕ್ಷರ ಶವಪೆಟ್ಟಿಗೆಯನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡುವ ಸ್ಥಳ ಇತ್ಯಾದಿಗಳನ್ನು ಈ ಭವ್ಯ ಕಟ್ಟಡ ಒಳಗೊಂಡಿದೆ.

ರೋಚಕ ಇತಿಹಾಸ
ಕ್ಯಾಪಿಟಲ್ ಕಟ್ಟಡದ ನಿರ್ಮಾಣ ಆರಂಭವಾಗಿದ್ದು 1793ರಲ್ಲಿ. ಆ ಕಾಲದಲ್ಲಿಯೇ ಇದರ ವಿನ್ಯಾಸಕ್ಕೆ ಸ್ಪರ್ಧೆ ಏರ್ಪಡಿಸಿ 500 ಡಾಲರ್ ಬಹುಮಾನ ನಿಗದಿಪಡಿಸಲಾಗಿತ್ತು.
ಶತಮಾನಗಳ ಕಾಲ ಅನೇಕ ಹಂತಗಳನ್ನು ದಾಟಿ, ಹೊಸ ಸೇರ್ಪಡೆ ಮತ್ತು ವಿಸ್ತರಣೆಗಳೊಂದಿಗೆ ನಿರ್ಮಾಣವಾದ ಈ ಕಟ್ಟಡ ಹಿಂದೊಮ್ಮೆ ಬ್ರಿಟಿಷ್ ಸೈನಿಕರು ಹಚ್ಚಿದ ಬೆಂಕಿಯಲ್ಲಿ ಬಹುತೇಕ ಸುಟ್ಟು ಹೋಗಿತ್ತು. ನಂತರ ಮತ್ತೆ ದುರಸ್ತಿ ಮಾಡಲಾಯಿತು.

ಮೂಲತಃ ಈ ಕಟ್ಟಡ ಈಗಿನಷ್ಟು ವಿಶಾಲವಾಗಿರಲಿಲ್ಲ. ಕಾಲಾನುಕ್ರಮದಲ್ಲಿ ವಿಸ್ತರಿಸುತ್ತ, ಮಾರ್ಪಾಡು ಮಾಡುತ್ತ ಬರಲಾಯಿತು. ಆದರೆ ಪ್ರತಿಯೊಂದು ವಿಸ್ತರಣೆ ಕೂಡ ಮೂಲ ಸೌಂದರ್ಯ, ವಿನ್ಯಾಸಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಇರುವುದು ಇದರ ವಿಶೇಷ.
16.5 ಎಕರೆ ಪ್ರದೇಶದಲ್ಲಿ 1.75 ಲಕ್ಷ ಚದರ ಅಡಿ ಹರಡಿಕೊಂಡಿರುವ `ಕ್ಯಾಪಿಟಲ್~ನ ವೈಭವವನ್ನು ನೋಡಿಯೇ ಅನುಭವಿಸಬೇಕು.

ನಮ್ಮ ವಿಧಾನಸೌಧ, ಸಂಸತ್ ಭವನ ಕೂಡ ಕಲೆಯ ಆಗರ, ಅಲ್ಲದೆ ನಮ್ಮ ಜನತಂತ್ರದ ಸಂಕೇತ. ಭದ್ರತೆ ಹೆಸರಿನಲ್ಲಿ ಶ್ರೀಸಾಮಾನ್ಯರನ್ನು ಇವುಗಳಿಂದ ದೂರ ಇಡುವುದೇಕೇ ಎಂಬ ಪ್ರಶ್ನೆ ಕ್ಯಾಪಿಟಲ್ ಕಟ್ಟಡ ನೋಡಿ ಹೊರ ಬರುವಾಗ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT