ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸನೆಯಿಂದಲೇ ಕ್ಯಾನ್ಸರ್ ಪತ್ತೆ!

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ವೈದ್ಯಕೀಯ ಲೋಕಕ್ಕೆ ತಂತ್ರಜ್ಞಾನದ ಕೊಡುಗೆ ಅಪಾರ. ದಿನನಿತ್ಯ ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ನವನವೋನ್ಮೇಶವಾದ ಆವಿಷ್ಕಾರಗಳು ವೈದ್ಯಕೀಯ ಲೋಕದ ಅನೇಕ ಮಾರಾಣಾಂತಿಕ ಕಾಯಿಲೆಗಳಿಗೆ ರಾಮಬಾಣವಾಗಿವೆ ಹಾಗೂ ಆಗುತ್ತಿವೆ.

ಸದ್ಯ ಕಾಯಿಲೆಗಳಲ್ಲೇ ಅತ್ಯಂತ ಗಂಭೀರ ಹಾಗೂ ಹೆಸರು ಕೇಳಿದರೆ ಸಾಕು ಬೆಚ್ಚಿ ಬೀಳುವಂತೆ ಮಾಡುವ `ಅರ್ಬುದ' ಅರ್ಥಾತ್ `ಕ್ಯಾನ್ಸರ್' ಕಾಯಿಲೆಯನ್ನು ಸುಲಭದಲ್ಲಿ ಪತ್ತೆ ಹಚ್ಚಬಹುದಾದ ಸಾಧನವೊಂದು ರೂಪುಗೊಂಡಿದೆ ಎಂದು ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಜರ್ನಲ್ PLOSONE ಇತ್ತೀಚೆಗಷ್ಟೆ ಪ್ರಕಟಿಸಿದೆ.

ಕ್ಯಾನ್ಸರ್, ಅದೊಂದು ಸಾವಿನ ಲೋಕದ ಸರದಾರ. ಒಂದಕ್ಕೆ ಎರಡಾಗಿ, ಎರಡಕ್ಕೆ ನಾಲ್ಕಾಗಿ, ಎಂಟಾಗಿ, ಹದಿನಾರಾಗಿ, ನೂರಾಗಿ, ಲಕ್ಷವಾಗಿ ರಕ್ತಬೀಜಾಸುರನಂತೆ ಕೆಲವೇ ದಿನಗಳಲ್ಲಿ ಗೆಡ್ಡೆಯ ರೂಪ ತಾಳುವ ಕ್ಯಾನ್ಸರ್ ಕೋಶಗಳ ಬೆಳವಣಿಗೆ ನಿರೀಕ್ಷೆ, ನಿಯಂತ್ರಣಗಳಿಗೆ ಮೀರಿದ್ದು.

ಒಮ್ಮೆ ಕ್ಯಾನ್ಸರ್ ಬಂದಿತೆಂದರೆ ಬದುಕು ಮುಗಿದೇ ಹೋಯಿತು ಎಂದು ಹೆದರಿಕೊಳ್ಳಬೇಕಿಲ್ಲ. ಈ ಮಾರಾಣಾಂತಿಕ ರೋಗಕ್ಕೂ ಆರಂಭದ ಹಂತಗಳಲ್ಲಿ ಸೂಕ್ತ ಹಾಗೂ ಪರಿಣಾಮಕಾರಿ ಚಿಕಿತ್ಸೆ ಇದೆ. ಪ್ರಾಥಮಿಕ ಹಂತದಲ್ಲಿದ್ದಾಗಲೇ ರೋಗಪತ್ತೆಯಾದರೆ ಕ್ಯಾನ್ಸರ್‌ನಿಂದ ಮುಕ್ತಿ ಖಂಡಿತ ಸಾಧ್ಯ.

ಚಿಕಿತ್ಸೆಯನ್ನು ಕ್ಯಾನ್ಸರ್‌ನ ಯಾವ ಹಂತದಲ್ಲಿ ಪಡೆದುಕೊಳ್ಳುತ್ತೇವೆ ಎಂಬುದು ಗುಣಮುಖವಾಗುವ ಸಾಧ್ಯತೆಗಳನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾಗಿ ಚಿಕಿತ್ಸೆ ಪಡೆದುಕೊಂಡರೆ ಸಾವನ್ನು ಗೆಲ್ಲಬಹುದು. ಕೊನೆಯ ಹಂತಗಳಲ್ಲಿಯಾದರೆ ರೋಗ ನಿವಾರಣೆ ಕಷ್ಟ. ಒಟ್ಟಾರೆ ಸಾವು ಉಳಿವಿನ ಸಾಧ್ಯತೆ ಎಷ್ಟು ಬೇಗ ಕ್ಯಾನ್ಸರ್ ಪತ್ತೆಯಾಗುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.

ಇದನ್ನೇ ಮನಗಂಡ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರವು ರೋಗಪತ್ತೆಗೆ ನವನವೀನ ಸಾಧನಗಳನ್ನು ರೂಪಿಸುವಲ್ಲಿ ಸತತವಾಗಿ ಶ್ರಮಿಸುತ್ತಲೇ ಇದೆ. ಮುಖ್ಯವಾಗಿ ಕ್ಯಾನ್ಸರ್‌ನಲ್ಲಿ ಅತಿ ದೊಡ್ಡ  ಹಾಗೂ ದುಬಾರಿ ಕ್ಯಾನ್ಸರ್ ಎಂದೇ ಕುಖ್ಯಾತಿಯಾಗಿರುವ ಮೂತ್ರಕೋಶದ ಕ್ಯಾನ್ಸರನ್ನು ಕೇವಲ 30 ನಿಮಿಷದಲ್ಲಿ ಪತ್ತೆ ಹಚ್ಚುವಂತಹ ಸಾಧನವನ್ನು ಬ್ರಿಟನ್ ವಿಜ್ಞಾನಿಗಳು ಈಗ ಅಭಿವೃದ್ಧಿಪಡಿಸಿದ್ದಾರೆ.

ಲಿವರ್ ಪೂಲ್ ವಿಶ್ವವಿದ್ಯಾನಿಲಯ ಹಾಗೂ ಪಶ್ಚಿಮ ಇಂಗ್ಲೆಂಡ್‌ನ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ `ಓಡೋರೀಡರ್' ಎಂಬ ಉಪಕರಣವನ್ನು ರೂಪಿಸಿದ್ದು, ಇದು ಮೂತ್ರಕೋಶದ ಕ್ಯಾನ್ಸರನ್ನು ಅತ್ಯಂತ ಕರಾರುವಾಕ್ಕಾಗಿ ಕೇವಲ 30 ನಿಮಿಷದಲ್ಲಿ ಪತ್ತೆ ಹಚ್ಚುತ್ತದೆ.

ಮುಖ್ಯವಾಗಿ ಈ ಸಾಧನದಲ್ಲಿ ಸಂವೇದಕವೊಂದನ್ನು ಅಳವಡಿಸಲಾಗಿದ್ದು, ಇದು ಮೂತ್ರದಿಂದ ಹೊರ ಬರುವ ಅನಿಲವನ್ನು ವಿಶ್ಲೇಷಿಸಿ ಮೂತ್ರಕೋಶದಲ್ಲಿ ಕ್ಯಾನ್ಸರ್ ಕೋಶಗಳಿವೆಯೋ ಇಲ್ಲವೋ ಎಂಬುದನ್ನು ನಿರ್ಣಯಿಸುತ್ತದೆ ಎಂದು ಇದನ್ನು ರೂಪಿಸಿರುವ ವಿಜ್ಞಾನಿಗಳು ಹೇಳಿದ್ದಾರೆ.

ಮೂತ್ರಕೋಶದಲ್ಲಿ ಕ್ಯಾನ್ಸರ್ ಕಣಗಳಿದ್ದಲ್ಲಿ ಮೂತ್ರದಲ್ಲಿ ಒಂದು ವಿಧದ ರಾಸಾಯನಿಕಗಳ ಅನಿಲ ಸೇರಿಕೊಂಡಿರುತ್ತದೆ. ಈ ಅನಿಲವನ್ನು ಪತ್ತೆಹಚ್ಚಲು ಈ ಹೊಸ ಉಪಕರಣ ನೆರವಾಗುತ್ತದೆ ಎಂಬುದು ವಿಜ್ಞಾನಿಗಳ ಅಭಿಮತ.

ಒಂದು ಸಣ್ಣ ಬಾಟಲಿಯಲ್ಲಿ ಮೂತ್ರವನ್ನು ತುಂಬಿಸಿ ಈ ಉಪಕರಣದಲ್ಲಿ ಇಟ್ಟರಾಯಿತು. ಕೇವಲ ಅರ್ಧಗಂಟೆಯಲ್ಲಿ ಪರೀಕ್ಷೆಯ ವರದಿಯನ್ನು ಕಂಪ್ಯೂಟರ್ ಪರದೆ ಮೇಲೆ ಮೂಡಿಸುತ್ತದೆ. ಈ ಮೂಲಕ ಮೂತ್ರದ ಮಾದರಿ ನೀಡಿದ ವ್ಯಕ್ತಿಯಲ್ಲಿ ಮೂತ್ರಕೋಶದ ಕ್ಯಾನ್ಸರ್ ಇದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.

ಸೋಜಿಗದ ಸಂಗತಿ ಎಂದರೆ ಈ ಸಂಶೋಧನೆಗೆ ಸ್ಪೂರ್ತಿಯಾಗಿದ್ದು ಶ್ವಾನ!

ಹೌದು, ಅಸಾಧ್ಯ ವಾಸನಾಗ್ರಹಣ ಶಕ್ತಿಯನ್ನು ಪಡೆದುಕೊಂಡಿರುವ ನಮ್ಮ ಡೊಂಕು ಬಾಲದ ನಾಯಿಗಳು ಯಾವ ರೀತಿ ವಾಸನೆಯನ್ನು ರಾಸಾಯನಿಕಗಳ ಅನಿಲಗಳ ಮೂಲಕ ಗ್ರಹಿಸುತ್ತವೆಯೋ ಹಾಗೆಯೇ ಈ ಸಾಧನವೂ ಕೂಡ ಗ್ರಹಿಸುತ್ತದೆ ಎನ್ನುತ್ತಾರೆ ಸಂಶೋಧನಕರು. ಸದ್ಯ ಪ್ರಾಥಮಿಕ ಹಂತದಲ್ಲಿ 98 ಮೂತ್ರಗಳ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 24 ಮಂದಿಯ ಮೂತ್ರಕೋಶದಲ್ಲಿ ಕ್ಯಾನ್ಸರ್ ರೋಗಾಣು ಇರುವುದು ಈ ಸಾಧನದಿಂದ ಪತ್ತೆಯಾಯಿತು. ನಂತರ ರೋಗಿಗಳನ್ನು ವಿವರವಾಗಿ ಪರೀಕ್ಷಿಸಿದಾಗ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಹೀಗಾಗಿ ಇದು ಶೇ 100ರಷ್ಟು ಕರಾರುವಾಕ್ ಆಗಿ ಫಲಿತಾಂಶ ನೀಡಬಲ್ಲದಾಗಿದೆ ಎಂದು ಸಂಶೋಧನಾ ತಂಡದ ಪ್ರಮುಖರಾದ ಪ್ರೊಫೆಸರ್ ಕ್ರಿಸ್ ಪ್ರೋಬ್ರಟ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT