ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತು ವಾಸ್ತವ ಬೇರೆ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

 ಇತ್ತೀಚಿನ ದಿನಗಳಲ್ಲಿ `ವಾಸ್ತು ಶಾಸ್ತ್ರ~ ಎಂಬುದು ವೈಜ್ಞಾನಿಕವೋ, ಅವೈಜ್ಞಾನಿಕವೋ ಎಂಬ ಬಗ್ಗೆ ಬಹಳಷ್ಟು ಮಾತುಕತೆಗಳಾಗುತ್ತಿವೆ. ವಾಸ್ತು ಶಾಸ್ತ್ರ ವೈಜ್ಞಾನಿಕ ಆಧಾರದ ಮೇಲೆ ರೂಪಿತವಾಗಿದೆ ಎಂದು ಅದನ್ನು ನಂಬುವವರು, ಅದರಿಂದಲೇ ಹೊಟ್ಟೆ ಹೊರೆದುಕೊಳ್ಳುವವರು ಹೇಳುತ್ತಾರೆ. ಅದೇ ನಂಬಿಕೆ ಇಲ್ಲದವರು `ಇದು ಅವೈಜ್ಞಾನಿಕವಾದುದು~ ಎಂದು ಹೇಳಿ ನಿರುಮ್ಮಳವಾಗಿ ಜೀವನ ಸಾಗಿಸುತ್ತಿದ್ದಾರೆ.

ನಾವು ಚಿಕ್ಕವರಿದ್ದಾಗ, ಈಗ್ಗೆ ಇಪ್ಪತ್ತು- ಮೂವತ್ತು ವರ್ಷಗಳ ಹಿಂದೆ ವಾಸ್ತು ಶಾಸ್ತ್ರಕ್ಕೆ ಅಷ್ಟೇನೂ ಮಹತ್ವ ಇರಲಿಲ್ಲ. ಮನೆ, ಕಟ್ಟಡ ಕಟ್ಟುವಾಗ  ಅದರೊಳಗೆ ಸಾಕಷ್ಟು ಗಾಳಿ, ಬೆಳಕು ಬರಬೇಕು ಅಷ್ಟೇ ಎಂದು ಹೇಳುತ್ತಿದ್ದರು.

ಆದರೆ ಈಗ? ತಾವು ಹೇಳುವ ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಡ ಕಟ್ಟಿಸುವವರ ಜೀವನದಲ್ಲಿ ಕಷ್ಟಗಳೇ ಬರುವುದಿಲ್ಲ ಎಂಬಂತೆ ವಾಸ್ತು ಶಾಸ್ತ್ರಜ್ಞರು ಭರವಸೆ ಹುಟ್ಟಿಸುತ್ತಾರೆ. ಹಾಗಿದ್ದರೆ ಈ ಜಗತ್ತಿನಲ್ಲಿ ಕಷ್ಟ, ನೋವುಗಳಿಲ್ಲದ ಜೀವಿಗಳು ಸಿಗಬಹುದೇ? ಗೌತಮ ಬುದ್ಧ ಹೇಳಿದಂತೆ, ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಕಷ್ಟಗಳಿಲ್ಲದ ಮಾನವ ಜೀವಿ ಸಿಗುವುದೂ ದುರ್ಲಭ ಅಲ್ಲವೇ?

ನಾವು ಬಯಲಿನಲ್ಲಿ ನಿಂತರೆ ನಮಗೆ ಯಾವ ಕಡೆಗಾದರೂ ದಿಕ್ಕುಗಳು ಕಾಣುತ್ತವೆಯೇ? ವಾರದಲ್ಲಿ ಏಳು ದಿನಗಳು, ತಿಂಗಳಲ್ಲಿ ಸಾಮಾನ್ಯವಾಗಿ 30 ಅಥವಾ 31 ದಿನಗಳು, ವರ್ಷದಲ್ಲಿ 365 ಅಥವಾ 366 ದಿನಗಳಿರುವಂತೆ ಗುರುತಿಗೆ ಇರಲಿ ಎಂದು ಸೂರ್ಯ ಉದಯಿಸುವ ದಿಕ್ಕಿಗೆ ಪೂರ್ವ ಎಂದೂ, ಅಸ್ತಂಗತನಾಗುವ ದಿಕ್ಕಿಗೆ ಪಶ್ಚಿಮ ಎಂದೂ, ಉಳಿದಂತೆ ಉತ್ತರ, ದಕ್ಷಿಣ, ಆಗ್ನೇಯ, ವಾಯವ್ಯ, ನೈರುತ್ಯ, ಈಶಾನ್ಯ ಎಂದು ಕರೆಯುವ ರೂಢಿಯನ್ನು ಮಾಡಿಕೊಂಡು ಬಂದಿದ್ದೇವೆ.

ಹಾಗೇ ಆಳವಾಗಿ ಯೋಚಿಸಿದರೆ, ದಿಕ್ಕುಗಳೇ ಇಲ್ಲವೆಂದು ನನ್ನ ಅಭಿಪ್ರಾಯ. ನನಗೆ, ನಿಮಗೆ ಹೆಸರುಗಳಿರುವಂತೆ ಈ ದಿಕ್ಕುಗಳೂ ಸಾಂಕೇತಿಕ ಅಷ್ಟೆ. ಇಲ್ಲದಿದ್ದರೆ ದಿಕ್ಕಿನ ಪ್ರತಿಯೊಂದು ಕೋನ ಕೋನಕ್ಕೂ ಹೆಸರನ್ನು ಯಾಕೆ ಸೃಷ್ಟಿಸಿಲ್ಲ? ಸಂಖ್ಯೆ ಬಹಳವಾಗುತ್ತದೆ, ನೆನಪಿಡುವುದು ಕಷ್ಟ ಎಂದು ಇರಬಹುದು.

ಅದರಂತೆ ರವಿವಾರದಿಂದ ಶನಿವಾರ ಎಂದು ಬರೀ ಏಳು ಹೆಸರುಗಳಿವೆ. ಪ್ರತಿ ದಿನಕ್ಕೂ ಒಂದು ಹೆಸರಿಟ್ಟಿದ್ದರೆ ವರ್ಷದಲ್ಲಿ 365 ದಿನಗಳ ಹೆಸರುಗಳೂ ಬೇರೆ ಬೇರೆ ಆಗಿರುತ್ತಿದ್ದವು. ನಮ್ಮ ದೇಶದಲ್ಲಿನ 60 ಸಂವತ್ಸರಗಳ ಹೆಸರುಗಳು ಈಗ ಅದೆಷ್ಟು ಬಳಕೆಯಲ್ಲಿವೆ? ಏನಿದ್ದರೂ 2012ರ ನಂತರ 2013 ಎಂದೂ, ನಂತರ 2014... ಹೀಗೇ ಮುಂದುವರಿಯುತ್ತದೆ ಅಲ್ಲವೇ?

ಆದರೆ ಬಹುತೇಕ ವಾಸ್ತು ಶಾಸ್ತ್ರಜ್ಞರು, `ಬಾಗಿಲು ಆ ದಿಕ್ಕಿಗೆ ಇರಬೇಕು, ಈ ದಿಕ್ಕಿಗೆ ಇರಬೇಕು, ಗಾಳಿ ಆ ದಿಕ್ಕಿನಿಂದ ಬರಬೇಕು, ಇದು ಅಗ್ನಿಮೂಲೆ, ದೇವರ ಮನೆ ಅಲ್ಲೇ ಇರಬೇಕು~ ಎಂದೆಲ್ಲಾ ಹೇಳುತ್ತಾರೆ. ಯಾವ ದಿಕ್ಕಿನಿಂದ ಬಂದರೂ ಗಾಳಿ, ಗಾಳಿಯೇ. ಒಟ್ಟಿನಲ್ಲಿ ಗಾಳಿ ಚೆನ್ನಾಗಿ ಬರಬೇಕು ಅಷ್ಟೆ. ಆದಿ ಮಾನವನ ಕಾಲದಿಂದಲೂ ನಾಗರಿಕತೆ ಬೆಳೆದು ಬಂದಿದೆ.

ಅವರಲ್ಲಿ ವಿದ್ಯೆ ಇರಲಿಲ್ಲ, ಸಂಸ್ಕಾರವಿರಲಿಲ್ಲ. ಆದರೂ ಅವರು ಜೀವನ ಮಾಡಿಲ್ಲವೇ? ಒಂದು ವೇಳೆ ಅವರು ಅರ್ಥಪೂರ್ಣವಾಗಿ ಜೀವಿಸಿರದಿದ್ದರೆ ಇಂದು ನಾವು ಇರಲಿಕ್ಕೆ ಸಾಧ್ಯವಿತ್ತೇ? ಆಗೆಲ್ಲ ವಾಸ್ತು ಶಾಸ್ತ್ರ ಇತ್ತೇ? ಆಗಿಲ್ಲದ ಈ ವಾಸ್ತು ಶಾಸ್ತ್ರ ಈಗ ಹುಟ್ಟಿಕೊಂಡದ್ದಾದರೂ ಯಾಕೆ? ಅಮಾಯಕರು, ಮಾನಸಿಕ ಸ್ಥೈರ್ಯ ಕಡಿಮೆ ಇರುವವರನ್ನು ಶೋಷಿಸಿ, ಅವರಲ್ಲಿ ಭಯ ಹುಟ್ಟಿಸಿ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಸ್ವಾಥ ಮಾರ್ಗ ಇದು ಎನ್ನಬಹುದು.ಕೆಲವು ವಿಕೃತ ವಾಸ್ತು ಶಾಸ್ತ್ರಜ್ಞರ ಇತ್ತೀಚಿನ ಉದಾಹರಣೆಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ನಮ್ಮ ಪರಿಚಿತರೊಬ್ಬರ ಮನೆಯ ಕಾಂಪೌಂಡು ಹೂವು, ಹಣ್ಣುಗಳ ಗಿಡ, ಬಳ್ಳಿಗಳಿಂದ ನಳನಳಿಸುತ್ತಿತ್ತು. ಮಲ್ಲಿಗೆ, ಪಾರಿಜಾತದ ಗಿಡಗಳು ಹತ್ತು ವರ್ಷಕ್ಕಿಂತ ಮೊದಲಿನಿಂದಲೂ ಅಲ್ಲಿದ್ದವು. ಅವುಗಳ ವಾರಗೆಯದೇ ಆದ ಪೇರಲ ಮರವಿತ್ತು. ಆ ಮನೆಯವರು ಒಮ್ಮೆ ತಮ್ಮ ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ಪಡೆಯಲು ವಾಸ್ತು ಶಾಸ್ತ್ರಜ್ಞರನ್ನು ಕರೆಸಿದ್ದರು.
 
ಅವರ ಅಹವಾಲುಗಳನ್ನು ಆಲಿಸಿದ ಶಾಸ್ತ್ರಜ್ಞರು ಮನೆಯನ್ನೆಲ್ಲಾ ಸುತ್ತಾಡಿ ಬಂದು, ಕೊನೆಗೆ ಯಾರಿಗೂ ಉಪದ್ರವ ನೀಡದೇ, ಯಾವ ಫಲಾಪೇಕ್ಷೆಯೂ ಇಲ್ಲದೇ ರಾಶಿ ರಾಶಿ ಹೂವು, ಹಣ್ಣುಗಳನ್ನು ನೀಡುತ್ತಿದ್ದ ಗಿಡಗಳನ್ನೆಲ್ಲಾ ಬೇರು ಸಹಿತ ಕಿತ್ತುಹಾಕಲು ತಿಳಿಸಿದರು. ಅವರ ಈ ಹಿತೋಪದೇಶವನ್ನು (?) ಶಿರಸಾವಹಿಸಿ ಪಾಲಿಸಿದ ಮನೆಯವರು ಮರುದಿನವೇ ಎಲ್ಲ ಬಳ್ಳಿ, ಗಿಡಗಳನ್ನೂ ನೆಲಸಮ ಮಾಡಿದರು.

ಇವರ ಮನೆಯ ಹೂವುಗಳು ಓಣಿಯ ನಾಲ್ಕಾರು ಮನೆಗಳ ದೇವರ ಪಟ ಮತ್ತು ಹೆಣ್ಣು ಮಕ್ಕಳ ಮುಡಿ ಏರಿ ಸಾರ್ಥಕತೆ ಪಡೆಯುತ್ತಿದ್ದವು, ಎಲ್ಲರಿಗೂ ತಂಗಾಳಿಯನ್ನು ನೀಡುತ್ತಿದ್ದವು. ಇಂತಹ ನಿರುಪದ್ರವಿ ಗಿಡ, ಬಳ್ಳಿಗಳನ್ನು ನಿಷ್ಕರುಣೆಯಿಂದ ತೆಗೆದು ಹಾಕಲು ಹೇಳಿ ಆ ವಾಸ್ತು ಶಾಸ್ತ್ರಜ್ಞರು ಅಮಾನವೀಯತೆ ಮೆರೆದಿದ್ದರು.
 
ಆತ್ಮೀಯ ಮಾನವೀಯ ಸಂಬಂಧಗಳಂತೆ ಈ ಬಳ್ಳಿ, ಗಿಡಗಳೂ ಮನುಷ್ಯರೊಂದಿಗೆ ಮಾನಸಿಕ ಸಂಬಂಧ ಬೆಸೆಯುತ್ತವೆ ಎನ್ನಲಾಗುತ್ತದೆ. ಆದರೆ ತಮ್ಮ ಮಕ್ಕಳಂತೆಯೇ ಬೆಳೆಸಿದ್ದ ಅವುಗಳನ್ನು ಬೇರು ಸಹಿತ ಕಿತ್ತೊಗೆಯುವಾಗ ಆ ಮನೆಯವರಿಗಾದರೂ ಯಾವ ಭಾವನೆಗಳೂ ಕಾಡಲಿಲ್ಲವೇ?

ಇನ್ನೊಬ್ಬರು ಪರಿಚಿತರ ಮನೆಯ ಕಾಂಪೌಂಡಿನ ವಾಯವ್ಯ ದಿಕ್ಕಿನಲ್ಲಿ ಕೊಳವೆ ಬಾವಿಯೊಂದು ಇದೆ. ನಲ್ಲಿಯ ನೀರು ಬರದೇ ಇದ್ದಾಗ, ಅದರ ನೀರೇ ಮನೆಯವರೆಲ್ಲರ ಬಳಕೆಗೆ ಒದಗುವ ಪವಿತ್ರ ಗಂಗೆ. ಕುಡಿಯಲೂ ಅದು ಯೋಗ್ಯವಾಗಿದೆ. ಈ ಕೊಳವೆ ಬಾವಿಯನ್ನು ಪರೀಕ್ಷಿಸಿದ ವಾಸ್ತು ಶಾಸ್ತ್ರಜ್ಞರೊಬ್ಬರು, `ಇದು ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಆದ್ದರಿಂದ ಇದನ್ನು ಮುಚ್ಚಿಸಿಬಿಡಿ~ ಎಂದು ಮನೆಯವರ ಮೆದುಳಿನಲ್ಲಿ ಭಯದ ಹುಳುವೊಂದನ್ನು ಸೇರಿಸಿಬಿಟ್ಟರು.
 
ಕುಟುಂಬದವರ ಆರೋಗ್ಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ, ಆರ್ಥಿಕ ಸ್ಥಿತಿ-ಗತಿ ಏರುಪೇರಾದರೆ ಅವರು ಬಿಟ್ಟಿರುವ ಹುಳು ಇವರ ಮನಸ್ಸನ್ನು ಕೊರೆಯತೊಡಗುತ್ತದೆ. ಜೀವನದಲ್ಲಿನ ಏರುಪೇರುಗಳಿಗೂ ಶಾಸ್ತ್ರಜ್ಞರ ಮಾತುಗಳಿಗೂ ನೇರವಾಗಿ ಸಂಬಂಧ ಕಲ್ಪಿಸಿಕೊಂಡು ಅವರು ಪೇಚಾಡುತ್ತಿರುತ್ತಾರೆ.
 
15 ವರ್ಷಗಳಿಂದ ಆ ಕೊಳವೆ ಬಾವಿ ಅಲ್ಲೇ ಇದೆ. ಲಕ್ಷಾಂತರ ರೂಪಾಯಿಗಳಿದ್ದ ಮನೆಯವರ ಆಸ್ತಿ ಈಗ ಕೋಟ್ಯಂತರ ರೂಪಾಯಿಯಷ್ಟಾಗಿದೆ. ಆದರೆ ಇದ್ಯಾವುದೂ ಅವರ ಅರಿವಿಗೆ ಬರುತ್ತಲೇ ಇಲ್ಲ.

ವಾಯವ್ಯ ದಿಕ್ಕಿನಲ್ಲಿ ಇರುವ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರು ಬರುತ್ತಿದೆ. ಆದರೂ ಇಲ್ಲಿ ಅದು ಬೇಡ ಎನ್ನುವ ಶಾಸ್ತ್ರಜ್ಞರಿಗೆ ಈಶಾನ್ಯ ದಿಕ್ಕಿನಲ್ಲಿ ಕೊಳವೆ ಬಾವಿ ಹಾಕಿಸಿ ನೀರು ತರಿಸಿಕೊಡುವ ಛಾತಿಯಾದರೂ ಇದೆಯೇ? ಭೂಗರ್ಭದಲ್ಲಿ ನೆಲೆಸಿರುವ ಚಂಚಲೆ ಗಂಗಾಮಾತೆಯ ನೆಲೆ ತಿಳಿಯುವುದು ಕಷ್ಟ.

ಈಶಾನ್ಯದಲ್ಲಿ ಝರಿ ಇದ್ದರೂ ಅದೇ ನೀರು, ವಾಯವ್ಯದಲ್ಲಿದ್ದರೂ ಅದೇ ನೀರು. ಅದು ಬಳಕೆಗೆ ಯೋಗ್ಯವಿದೆಯೋ ಇಲ್ಲವೋ ಎಂಬುದಷ್ಟೇ ಮುಖ್ಯ. ತಾಂತ್ರಿಕತೆಯಲ್ಲಿ ಅಭೂತಪೂರ್ವ ಬೆಳವಣಿಗೆಯಾಗಿದ್ದರೂ ಭೂಗರ್ಭ ಶಾಸ್ತ್ರಜ್ಞರಿಗೇ ಕೆಲವು ಸಂದರ್ಭಗಳಲ್ಲಿ ಗಂಗೆಯ ನೆಲೆ ಸಿಗುವುದು ಕಷ್ಟ.
 
ಕೆಲವೊಮ್ಮೆ ಅವರು ಗುರುತಿಸುವ 100 ಸ್ಥಳಗಳಲ್ಲಿ 50ರಲ್ಲಿ ಯಶಸ್ಸು ಸಿಗುವುದೂ ದುರ್ಲಭ. ತಜ್ಞರನ್ನು ನಂಬಿ 40 ಕೊಳವೆ ಬಾವಿಗಳನ್ನು ಕೊರೆಸಿದರೂ ನಾಲ್ಕು ಬಾವಿಗಳಲ್ಲಿ ಮಾತ್ರ ನೀರು ಬಂದಂಥ ಉದಾಹರಣೆಗಳೂ ಇವೆ. ಅದರಿಂದ ಆಡು ಭಾಷೆಯಲ್ಲಿ ಒಂದು ಮಾತು ಹೇಳುತ್ತಾರೆ.

`ನಾಣ್ಯವೊಂದನ್ನು ಮೇಲೆ ತೂರಿದಾಗ ಅದು `ಚಿತ್ತ~ (ಹೆಡ್) ಆದರೂ ಬೀಳಬಹುದು ಅಥವಾ ~ಬಕ್ಕ~ (ಟೇಲ್) ಆದರೂ ಬೀಳಬಹುದು; ಹಾಗೇ ಕೊಳವೆ ಬಾವಿಯಲ್ಲಿ ನೀರು ಬರಬಹುದು, ಬರದೆಯೂ ಇರಬಹುದು ಎಂದು.

ವಸ್ತುಸ್ಥಿತಿ ಹೀಗಿರುವಾಗ ಸಮೃದ್ಧಿಯಾಗಿ ನೀರು ಕೊಡುತ್ತಿರುವ ಕೊಳವೆ ಬಾವಿಯನ್ನು ಮುಚ್ಚಿಸಿ, ವಾಸ್ತು ಶಾಸ್ತ್ರಜ್ಞರು ಹೇಳುವ ದಿಕ್ಕಿನಲ್ಲಿ ಹೊಸದೊಂದು ಬಾವಿಯನ್ನು ಕೊರೆಸಿದರೆ ನೀರು ಬಂದೇ ಬರುತ್ತದೆ ಎಂಬ ಗ್ಯಾರಂಟಿ ಏನಿದೆ? ಅವರು ಕೊಡುವ ಇಂತಹ ಸಲಹೆಗಳು ಎಷ್ಟರಮಟ್ಟಿಗೆ ಸಮಂಜಸ?

ವಾಸ್ತು ಶಾಸ್ತ್ರಜ್ಞರ ವಿಚಾರಗಳಲ್ಲಿ ಸತ್ಯ ಇದ್ದು, ಅವು ಪ್ರಾಯೋಗಿಕವಾಗಿವೆ ಎಂದರೆ ಅಳವಡಿಸಿಕೊಳ್ಳೋಣ. ಆದರೆ ನಮ್ಮ ಕಷ್ಟ ಸುಖಗಳನ್ನು ಅವರು ಯಾವ್ಯಾವುದಕ್ಕೋ ಸಂಬಂಧ ಕಲ್ಪಿಸಿದರೆ ಅದು ಸರಿಯೋ ತಪ್ಪೋ ಎಂದು ವಿಚಾರ ಮಾಡುವಷ್ಟಾದರೂ ಪ್ರಜ್ಞೆ ನಮ್ಮಲ್ಲಿರಬೇಕಾಗುತ್ತದೆ.

`ಕಷ್ಟಗಳು ಮನುಷ್ಯನಿಗಲ್ಲದೇ ಗಿಡ-ಮರ, ಬೆಟ್ಟ-ಗುಡ್ಡಗಳಿಗೆ ಬರುತ್ತವೆಯೇ~ ಎಂದು ಹಿಂದಿನ ಕಾಲದಿಂದ ನಮ್ಮ ಹಿರಿಯರು ಹೇಳಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಮನುಷ್ಯನಿಂದ ಗಿಡ-ಮರಗಳಿಗೆ, ಬೆಟ್ಟ-ಗುಡ್ಡಗಳಿಗೆ ನಿರಂತರವಾಗಿ ಕಷ್ಟಗಳು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅದರಿಂದಲೇ ಇತ್ತೀಚಿನ ವರ್ಷಗಳಲ್ಲಿ ದೇಶದ ಎಕರೆಗಟ್ಟಲೆ ಅರಣ್ಯ ಪ್ರದೇಶ ಕಡಿಮೆಯಾಗಿದೆ.

ಹಾಗೇ ಅಕ್ರಮ ಗಣಿಗಾರಿಕೆಯಿಂದ ಎಷ್ಟೋ ಬೆಟ್ಟ-ಗುಡ್ಡಗಳು ನೆಲಸಮವಾಗಿವೆ. ಹೀಗಿರುವಾಗ ಇನ್ನು ಕಷ್ಟ-ಸುಖಗಳು ನಮಗೆ ಬರುವುದಿಲ್ಲವೇ? ನಮ್ಮ ಪ್ರಾಮಾಣಿಕ ಪ್ರಯತ್ನವಿದ್ದಾಗಲೂ ಹಲವಾರು ಬಾರಿ ನಾವಂದುಕೊಂಡಂತೆ ಕೆಲಸಗಳು ಆಗುವುದಿಲ್ಲ.
 
ಭಗವದ್ಗೀತೆ ಬೋಧಿಸಿದ್ದ ಶ್ರೀಕೃಷ್ಣ ಪರಮಾತ್ಮನೇ ಯಃಕಶ್ಚಿತ್ ಬೇಡನೊಬ್ಬನ ಬಾಣಕ್ಕೆ ಬಲಿಯಾದನಲ್ಲವೇ? ಆದ್ದರಿಂದ ಪರಿಶ್ರಮ, ಪ್ರಾಮಾಣಿಕತೆ, ಬದ್ಧತೆಯಿಂದ, ಬಂದದ್ದನ್ನು ಧೈರ್ಯದಿಂದ ಎದುರಿಸುವ ಮನೋಭಾವ ರೂಢಿಸಿಕೊಳ್ಳಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT