ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತುಶಿಲ್ಪಿಯಾದ ಆಫೀಸ್ ಬಾಯ್

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಉದ್ಯಾನನಗರಿ ಕಾಂಕ್ರೀಟ್ ನಗರವಾಗಿ ಮಾರ್ಪಟ್ಟಿದೆ. ಇದರ ನಡುವೆಯೇ ಆರ್ಕಿಟೆಕ್ಟ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಆರ್ಕಿಟೆಕ್ಟ್ ಎಂಜಿನಿಯರಿಂಗ್ ಕೋರ್ಸ್ ಮಾಡಿದ ವಾಸ್ತುಶಿಲ್ಪಿಗಳ ಸಂಖ್ಯೆ ನಗರದಲ್ಲೆಗ ಅಪಾರ.

ಆದರೆ  ಕೋರ್ಸ್ ಮಾಡದ ಆಫೀಸ್ ಬಾಯ್ ಒಬ್ಬ ಆಕರ್ಷಕ ಕಟ್ಟಡಗಳ ರಚನಾ ನಕ್ಷೆಗಳನ್ನು ಆಧರಿಸಿ, ಮಾದರಿಗಳನ್ನು ತಯಾರಿಸುವಲ್ಲಿ ನಿಪುಣನಾದ, ಮುಖ್ಯ ಎಂಜಿನಿಯರ್‌ಗಳಿಂದ ಸೈ ಎನಿಸಿಕೊಂಡ ಉದಾಹರಣೆಯೊಂದು ನಮ್ಮೆದುರಿಗಿದೆ.
ಮಂಡ್ಯ ಜಿಲ್ಲೆ ಗೊರವಾಲೆ ಗ್ರಾಮದಿಂದ ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಜಿ.ಆರ್. ದಿನೇಶ್ ಈಗ ವಾಸ್ತುಶಿಲ್ಪಿಯಾಗಿದ್ದಾರೆ.

ವಿದ್ಯಾಭ್ಯಾಸದ ಖರ್ಚಿಗಾಗಿ ಉದ್ಯೋಗ ಅರಸಿ ನಗರ ಸುತ್ತಿದರು. ಕೊನೆಗೆ ಸೇರಿಕೊಂಡಿದ್ದು ಮಲ್ಲೇಶ್ವರದ `ದಿ ಡಿಸೈನ್ ಫರ್ಮ್~ ಎಂಬ ಸಂಸ್ಥೆಗೆ. ಅಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡಬೇಕಾದ ಅನಿವಾರ್ಯ. ಮನೆಯಲ್ಲಿನ ಬಡತನದಿಂದಾಗಿ ಸಿಕ್ಕ ಕೆಲಸ ಬಿಡಲಿಲ್ಲ. ಜೊತೆಗೆ ಸಂಜೆ ಕಾಲೇಜೊಂದರಲ್ಲಿ ಬಿ.ಕಾಂ ಪದವಿ ಪಡೆದರು. ಮುಂದೆ ಇದೇ ಕಚೇರಿ ದಿನೇಶ್ ಪಾಲಿಗೆ ಅದೃಷ್ಟದ ತಾಣವಾಯಿತು.

ಆಫೀಸ್ ಬಾಯ್ ಆಗಿದ್ದ ದಿನೇಶ್ ಇಲ್ಲಿನ ಎಂಜಿನಿಯರ್‌ಗಳು ಮಾಡುತ್ತಿದ್ದ ವಾಸ್ತು ವಿನ್ಯಾಸಗಳನ್ನು ಕುತೂಹಲದಿಂದ ನೋಡುತ್ತಿದ್ದರು. ಹಾಗಾಗಿ ಅದರಲ್ಲೇ ಆಸಕ್ತಿಯೂ ಬೆಳೆಯಿತು. `ಮನೆಗೆ ಬಂದು ಥರ್ಮಕೋಲ್‌ನಿಂದ ಮನೆಗಳ ಮಾದರಿ ಮಾಡುವುದನ್ನು ಅಭ್ಯಾಸ ಮಾಡತೊಡಗಿದೆ.

ಕಚೇರಿಗೆ ಬಂದು ಮುಖ್ಯ ಎಂಜಿನಿಯರ್ ಬಳಿ ತನ್ನ ಕಲೆಯ ಬಗ್ಗೆ ಹೇಳಿಕೊಂಡೆ. ಆಗ ಅವರು ಒಂದು ಮನೆಯ ಒಳಾಂಗಣ ವಿನ್ಯಾಸವನ್ನು ತಯಾರಿಸುವಂತೆ ಹೇಳಿದರು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅಂದಿನಿಂದ ಸಣ್ಣಪುಟ್ಟ ವಿನ್ಯಾಸಗಳ ಮಾದರಿ ತಯಾರಿಸುವುದು ರೂಢಿಯಾಯಿತು.

ಮುಖ್ಯ ಆರ್ಕಿಟೆಕ್ಟ್‌ಗಳಾದ ಸುಜಿತ್ ಮುರಳೀಧರ್ ಹಾಗೂ ಕೃಪಾಕರನ್ ಅವರ ಸಲಹೆ ನನಗೆ ಸಹಕಾರಿ ಆಯಿತು ಎಂದು ಸ್ಮರಿಸಿಕೊಳ್ಳುತ್ತಾರೆ ದಿನೇಶ್.  ಇದೀಗ ದಿನೇಶ್ ಮಾದರಿ ನಿರ್ಮಿಸುವ ಪರಿಪೂರ್ಣ ಕಲಾವಿದ. ಮೌಂಟ್‌ಬೋರ್ಡ್, ಅಕ್ರಿಲಿಕ್ ಹಾಳೆ ಹಾಗೂ ಫೆವಿಕಾಲ್ ಬಳಸಿ 30/40 ಅಳತೆಯ ಮನೆಯಿಂದ ಬೃಹತ್ ಸಂಕೀರ್ಣಗಳು, ಆಸ್ಪತ್ರೆ,

ರಂಗಮಂದಿರಗಳು ಹೀಗೆ ನಾನಾ ಬಗೆಯ ಕಟ್ಟಡಗಳ ರಚನಾ ನಕ್ಷೆ ಆಧರಿಸಿ ಮಾದರಿಗಳನ್ನು ತಯಾರಿಸುತ್ತಾರೆ.  `ಆಟೋಕ್ಯಾಡ್ ಹಾಗೂ 3ಡಿ ಫೋಟೊಶಾಪ್ ಸಾಫ್ಟ್‌ವೇರ್‌ನಿಂದ ಎಂಜಿನಿಯರ್‌ಗಳು ವಿನ್ಯಾಸ ಮಾಡಿಕೊಡುತ್ತಾರೆ.

ಅದನ್ನು ಆಧರಿಸಿ ಮಾದರಿಗಳನ್ನು ನಾನು ಮಾಡುತ್ತೇನೆ. ಇದುವರೆಗೂ 70ರಿಂದ 80 ಮಾದರಿ ಕಲಾಕೃತಿಗಳನ್ನು ತಯಾರಿಸಿದ್ದು, ಅವುಗಳೆಲ್ಲಾ ಈಗ ಕಟ್ಟಡಗಳಾಗಿವೆ~ ಎಂದು ಹೆಮ್ಮೆಯಿಂದ ಮುಗುಳ್ನಗುತ್ತಾರೆ ದಿನೇಶ್.

`ಹತ್ತಿಯಿಂದ ಮರದ ಕಲಾಕೃತಿಯನ್ನೂ ಜೊತೆಗೆ ಮನೆ ಆವರಣದಲ್ಲಿ ವ್ಯಕ್ತಿಗಳು ಇರುವ ಚಿತ್ರಗಳನ್ನೂ ಮಾಡುತ್ತೇನೆ. ಮನೆಗಳಷ್ಟೇ ಅಲ್ಲದೆ ಶಾಲೆ, ದೇವಾಲಯಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಮಾದರಿ ಮಾಡುತ್ತೇನೆ. 25ರಿಂದ 30 ಸಾವಿರದವರೆಗೆ ಹಣ ಪಡೆಯುತ್ತೇವೆ.

ಅಳತೆ ಆಧಾರದಲ್ಲಿ ಬೆಲೆ ನಿಗದಿ ಮಾಡಲಾಗುತ್ತದೆ~ ಎನ್ನುವ ದಿನೇಶ್‌ಗೆ ಮಾದರಿಗಳೊಂದಿಗೆ ತಾವೇ ಕಟ್ಟಡಗಳನ್ನು ವಿನ್ಯಾಸಗೊಳಿಸಬೇಕು ಎಂಬ ಮಹತ್ವಾಕಾಂಕ್ಷೆಯೂ ಇದೆ.  ದಿನೇಶ್ ಅವರನ್ನು ಸಂಪರ್ಕಿಸಲು: 81053 21821.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT