ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಎಂಜಿನ್‌ನಿಂದ ಉತ್ಪತ್ತಿಯಾಗುವ ಶಾಖದಿಂದ ವಿದ್ಯುತ್!

Last Updated 13 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೀರು, ಗಾಳಿ, ಕಲ್ಲಿದ್ದಲು, ತ್ಯಾಜ್ಯದಿಂದ ವಿದ್ಯುತ್... ಚಾಲನೆಯಲ್ಲಿರುವ ವಾಹನದ ಎಂಜಿನ್‌ನಿಂದ ಉತ್ಪತ್ತಿಯಾಗುವ ಶಾಖದಿಂದ ವಿದ್ಯುತ್! ಹೌದು. ನಗರದ ನಿಟ್ಟೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.

ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಪ್ರೊ.ಪಿ.ಬಿ.ಶೆಟ್ಟಿ ಅವರ ಮಾರ್ಗದರ್ಶನದಲ್ಲಿ  ರಜತ್ ಎಂ.ಆಳ್ವ, ವೇದಕುಮಾರ್, ಸಾತ್ವಿಕ್ ಹೆಗಡೆ, ರಾಹುಲ್ ಪೈ ವಿದ್ಯಾರ್ಥಿಗಳು ಇಂತಹದ್ದೊಂದು ಪ್ರಯೋಗ ನಡೆಸಿದ್ದು, ಉತ್ತೇಜಕರ ಪ್ರಾಥಮಿಕ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಅಭಾವ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ 24 ಗಂಟೆಗಳ ಕಾಲ ವಿದ್ಯುತ್ ದೊರಕುವುದಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಮಾರುಕಟ್ಟೆಯಲ್ಲಿ ದೊರೆಯುವ ಸರಳ ಸಲಕರಣೆಯನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿ, ವಿದ್ಯುಚ್ಛಕ್ತಿಯನ್ನು ವಿಭಿನ್ನ ರೀತಿಯಲ್ಲಿ ಉತ್ಪಾದಿಸುವ `ಫಿಜೋ ಆಲ್ಟರ್‌ನೇಟ್~ ಪ್ರಯೋಗಕ್ಕೆ ತಾಂತ್ರಿಕ ವಿದ್ಯಾರ್ಥಿಗಳು ಚಾಲನೆ ನೀಡಿದ್ದಾರೆ.

ರೂಪು ರೇಷೆ
ವಾಹನಗಳಲ್ಲಿರುವ ಎಂಜಿನ್ನಿಗೆ ಉಕ್ಕಿನ ಕ್ಯಾಂಟಿಲಿವರ್ ಬೀಮ್ ಡಿಸ್ಕ್ ಆಳವಡಿಸಿ ಅದರ ಮುಂಭಾಗ ಪಿಜೋ-ಸೆರಾಮಿಕ್ ಕ್ರಿಸ್ಟಲ್ ಸಲಕರಣೆಯನ್ನು 10 ಡಿಗ್ರಿ ಅಂತರದಲ್ಲಿ ನಿಲ್ಲಿಸಲಾಗುತ್ತದೆ. ಎಂಜಿನ್ ಚಲಿಸುವಾಗ ಡಿಸ್ಕ್‌ನಲ್ಲಿರುವ ಮುಳ್ಳುಗಳು ಒಂಂದಕ್ಕೊಂದು ಘರ್ಷಣೆಗೊಂಡು ವಿದ್ಯುಚ್ಛಕ್ತಿ ಉತ್ಪಾದನೆಗೆ ನೆರವಾಗುತ್ತದೆ. 

ಕಾರ್ಯವೈಖರಿ
ಉಕ್ಕಿನ ಕ್ಯಾಂಟಿ ಲಿವರ್ ಬೀಮ್‌ಗಳಲ್ಲಿರುವ ಮುಳ್ಳುಗಳು ಒಂದಕ್ಕೊಂದು ಘರ್ಷಣೆಯಾಗುವಂತೆ ಅವುಗಳನ್ನು ಜೋಡಿಸಲಾಗಿರುತ್ತದೆ. ಚಲಿಸುವ ಎಂಜಿನ್‌ನಿಂದ ಹೊರಹೊಮ್ಮುವ ಯಾಂತ್ರಿಕ ಶಕ್ತಿಯನ್ನು ಪಿಜೋ ಸೆರಾಮಿಕ್ ಕ್ರಿಸ್ಟಲ್ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ. ಕ್ಯಾಂಟಿ ಲಿವರ್ ಬೀಮ್ ಮತ್ತು ಪಿಜೋ ಸೆರಾಮಿಕ್ ಕ್ರಿಸ್ಟ್‌ಲ್ ನಡುವೆ 10 ಡಿಗ್ರಿ ಅಂತರವಿದ್ದಾಗ ಸತತವಾಗಿ ಶಾಖವನ್ನು ವಿದ್ಯುತ್ ಆಗಿ ಪರಿವರ್ತನೆಗೊಳಿಸಲು ಸಾಧ್ಯವಾಗುತ್ತದೆ.

ಈ ಸಲಕರಣೆಗಳನ್ನು ಕಾರು, ಟ್ರಕ್ಕಿನ ಎಂಜಿನ್ನಿನಲ್ಲಿ ಆಳವಡಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು. ಅಲ್ಲದೇ ಉತ್ಪಾದನೆಗೊಂಡ ವಿದ್ಯುಚ್ಛಕ್ತಿಯನ್ನು ಬ್ಯಾಟರಿ ಗಳಲ್ಲಿ ಶೇಖರಿಸಿ ಇತರೆ ಕಾರ್ಯಗಳಿಗೂ ಉಪಯೋಗಿಸಬಹುದು. ಕ್ಯಾಂಟಿಲಿವರ್ ಬೀಮ್ ಡಿಸ್ಕನ್ನು ಸ್ವಲ್ವ ವಿಶಿಷ್ಟವಾಗಿ ವಿನ್ಯಾಸಗೊಳಿಸಿ ಬಸ್‌ಗಳಿಗೆ ಆಳವಡಿಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಚಿಂತನೆ ನಡೆದಿದೆ.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ರಜತ ಆಳ್ವ, `ದೆಹಲಿಯ ಗುರುಗಾವ್‌ನಲ್ಲಿರುವ ಸುಜುಕಿ ಪವರ್ ಟ್ರೇನ್ ಇಂಡಿಯಾ ಲಿಮಿಟೆಡ್‌ನ ಆರ್‌ಎನ್‌ಡಿ ಪ್ರಯೋಗಾಲಯದಲ್ಲಿ ಈ `ಫಿಜೋ ಆಲ್ಟರ್‌ನೇಟ್~ ಪ್ರಯೋಗಿಸಲಾಯಿತು. ಈ ಪ್ರಯೋಗಕ್ಕೆ ಸುಮಾರು 1.30 ಲಕ್ಷ ರೂಪಾಯಿ ಖರ್ಚು ತಗುಲಿದೆ.
 
ಇದೇ ಡಿಸ್ಕನ್ನು ಸಪಟಾದ ತಟ್ಟೆಯ ವಿನ್ಯಾಸದಲ್ಲಿ ಸಿದ್ದಪಡಿಸಿ ದೊಡ್ಡ ವಾಹನಗಳಲ್ಲಿ ಆಳವಡಿಸಿ ವಿದ್ಯುತ್ ಉತ್ಪಾದಿಸುವ ಕುರಿತು ಚಿಂತನೆ ನಡೆದಿದೆ.   ಈ ಪ್ರಯೋಗವನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಿಬೇಕಿದೆ. ಪೇಟೆಂಟ್ ದೊರೆತ ನಂತರವೇ ವಿದ್ಯುತ್ ಪ್ರಮಾಣದ ಈ ಬಗ್ಗೆ ತಿಳಿಸಲಾಗುವುದು~ ಎಂದು ಪ್ರತಿಕ್ರಿಯಿಸಿದರು.

ಮಾರ್ಗದರ್ಶಕ ಪ್ರೊ. ಪಿ.ಬಿ.ಶೆಟ್ಟಿ ಮಾತನಾಡಿ, `ಇದು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಸೃಜನಶೀಲತೆಯಿಂದ ಮೂಡಿದ ನೂತನ ಕಲ್ಪನೆ. ಇದನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಕಾಲೇಜಿನ ಸಿಬ್ಬಂದಿ ಮತ್ತು ಪೋಷಕರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಈ ಪ್ರಯೋಗವನ್ನು ವಾಸ್ತವದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಬಳಕೆಯಾಗುವಂತೆ ರೂಪಿಸಲು ಪ್ರಯತ್ನಿಸುತ್ತಿದ್ದೇವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT