ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನಿಲುಗಡೆಗೂ ಪರದಾಡುವ ಸಾಧ್ಯತೆ..!

ಕಲಾಮಂದಿರದ ಎದುರು ಪಾದಚಾರಿ ಮಾರ್ಗ...
Last Updated 22 ಡಿಸೆಂಬರ್ 2012, 6:02 IST
ಅಕ್ಷರ ಗಾತ್ರ

ಬಳ್ಳಾರಿ: ಸಂಗೀತ, ನಾಟಕ, ಉಪನ್ಯಾಸ, ಸಾಹಿತ್ಯ ಗೋಷ್ಠಿ, ಸಮಾವೇಶ ಸೇರಿದಂತೆ ಹತ್ತು- ಹಲವು ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಿಗೆ ವೇದಿಕೆ ಒದಗಿಸುವ ಸ್ಥಳೀಯ ರಾಘವ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತೆರಳುವವರು ಇನ್ನುಮುಂದೆ ತಮ್ಮ ವಾಹನ ನಿಲುಗಡೆಗೆ ತೀವ್ರ ಪರದಾಡುವ ಕಾಲ ಸನ್ನಿಹಿತವಾಗಿದೆ.

ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಕಲಾಮಂದಿರದ ಎದುರು ಪಾದಚಾರಿ ಮಾರ್ಗ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 50 ಅಡಿ ರಸ್ತೆ ಕಿರಿದಾಗಿ, ಸಭೆ, ಸಮಾರಂಭಗಳಿಗೆ ಆಗಮಿಸುವ ಸಾರ್ವಜನಿಕರು ವಾಹನ ನಿಲುಗಡೆಗೆ ಪರದಾಡುವುದಷ್ಟೇ ಅಲ್ಲದೆ, ಸಂಚಾರ ದಟ್ಟಣೆಯಿಂದಲೂ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ.

ಅನಗತ್ಯವಾಗಿರುವ ಈ ಕಾಮಗಾರಿ ನಿರ್ಮಾಣ ಕಾರ್ಯವನ್ನು ಕೈಬಿಡಬೇಕು ಎಂದು ಸ್ಥಳೀಯ ಕಲಾಭಿಮಾನಿಗಳು ಆಗ್ರಹಿಸಿದ್ದು, ವಾಹನ ನಿಲುಗಡೆಗೇ ಅನುಕೂಲ ಕಲ್ಪಿಸುವ ಕಾಮಗಾರಿ ಮಾಡಬೇಕು ಎಂದು ಕೋರಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ರಾಘವ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುವ ಜನತೆ ತಮ್ಮ ವಾಹನಗಳನ್ನು ನಿಲ್ಲಿಸಲು ಎದುರಿನ ಪ್ರಮುಖ ರಸ್ತೆಯ ಎರಡೂ ಬದಿಯ ಜಾಗೆಯನ್ನು ಬಳಸಿಕೊಳ್ಳುತ್ತಿದ್ದು, ಪಾದಚಾರಿ ಮಾರ್ಗ ನಿರ್ಮಾಣ ಮಾಡಿದಲ್ಲಿ, ವಾಹನ ನಿಲುಗಡೆಗೆ ಜಾಗವೇ ಇಲ್ಲದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಗಮನಕ್ಕೆ ಬಂದಿಲ್ಲ: `ಮಹಾನಗರ ಪಾಲಿಕೆ ವತಿಯಿಂದ ಈ ಕಾಮಗಾರಿಗೆ ಅನುಮತಿ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆದರೆ, ನಿರ್ಮಿತಿ ಕೇಂದ್ರದವರು ಪಾದಚಾರಿ ಮಾರ್ಗ ನಿರ್ಮಿಸುತ್ತಿದ್ದಾರೆ. ಈ ಹಿಂದಿನ ಮೇಯರ್ ಅನುಮತಿ ನೀಡಿರಬಹುದು. ಈ ಕುರಿತು ಚರ್ಚಿಸಲಾಗುವುದು' ಎಂದು ಮೇಯರ್ ಸಿ.ಇಬ್ರಾಹಿಂ ಬಾಬು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಅನಗತ್ಯ ಮಾರ್ಗ ಬೇಡ: ನಗರದ ವಿವಿಧೆಡೆ ಈಗಾಗಲೇ ನಿರ್ಮಾಣ ಮಾಡಿರುವ ಅನೇಕ ಪಾದಚಾರಿ ಮಾರ್ಗಗಳು ನಿರುಪಯುಕ್ತವಾಗಿದ್ದು, ಬೀದಿಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಸೂಕ್ತ ವ್ಯವಸ್ಥೆ ಒದಗಿಸಿದಂತಾಗಿದೆ. ಈಗಿರುವ ಮಾರ್ಗಗಳು ಇದ್ದೂ ಇಲ್ಲದಂತಾಗಿದ್ದು, ಹೊಸ ಮಾರ್ಗವೂ ಅನಗತ್ಯ ಎಂದು ಅನೇಕರು ತಿಳಿಸಿದ್ದಾರೆ. ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗ ಇರಬೇಕು. ಆದರೆ, ರಾಘವ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳವೇ ಇಲ್ಲದಂತೆ ಮಾಡುವ ಇಂತಹ ಅಭಿವೃದ್ಧಿ ಅಗತ್ಯವಿಲ್ಲ.

ಇದರ ಬದಲು, ವಾಹನ ನಿಲುಗಡೆ ಮಾಡುವುದಕ್ಕೇ ಸೂಕ್ತ ರೀತಿಯ ವ್ಯವಸ್ಥೆ ಮಾಡಬೇಕು ಎಂದು ನಗರದ ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿಯ ಅಧ್ಯಕ್ಷ ಎಸ್.ಮಂಜುನಾಥ, ಉಪಾಧ್ಯಕ್ಷೆ ಡಾ.ವಿ.ಎಂ. ಶಿವಶಾಂತಲಾ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಜಿ.ಎಂ. ಗುರುಬಸವರಾಜ್, ರಂಗತೋರಣದ ಸಹ ಕಾರ್ಯದರ್ಶಿ ಅಡವಿ ಸ್ವಾಮಿ, ಸಂಗನಕಲ್ಲು ಪ್ರಕಾಶ್, ಮಹಮ್ಮದ್ ಆಜಂ, ಆರ್.ಪ್ರತಾಪ್‌ಕುಮಾರ ಗೌಡ, ಬಿ.ಬಸವರಾಜ್, ಕಪ್ಪಗಲ್ಲು ರಸೂಲ್‌ಸಾಬ್, ಎಚ್.ಹಂಪನಗೌಡ, ಎನ್.ನಾಗರಾಜ್, ಪ್ರೊ.ಎ. ತಿಮ್ಮನಗೌಡ, ಎನ್.ಎಂ. ಭೋಜರಾಜ್, ಮಹದೇವ ತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್, ರಾಘವ ರಂಗದ ಅಧ್ಯಕ್ಷ ರಮೇಶಗೌಡ ಪಾಟೀಲ, ರಾಘವ ಕಲಾಮಂದಿರದ ಅಧ್ಯಕ್ಷ ಕೆ.ಚೆನ್ನಪ್ಪ, ಅಭಿನಯ ಕಲಾಕೇಂದ್ರದ ಅಧ್ಯಕ್ಷ ಜಗದೀಶ, ರಂಗಜಂಗಮದ ಅಧ್ಯಕ್ಷ ಅಣ್ಣಾಜಿ ಕೃಷ್ಣಾರೆಡ್ಡಿ ಮತ್ತಿತರರು ಕೋರಿದ್ದಾರೆ.

ಬೆಳೆಯುತ್ತಿರುವ ನಗರದಲ್ಲಿ ಪ್ರಸ್ತುತ ವಾಹನಗಳ ಸಂಖ್ಯೆ ಹೆಚ್ಚಿದ್ದು, ವಾಹನಗಳ  ನಿಲುಗಡೆಗೆ ಸ್ಥಳವೇ ಇಲ್ಲದಂತಾಗಿ, ಪರದಾಡುವ ಸ್ಥಿತಿ ಇದೆ. ಇದನ್ನು ಗಮನಿಸಿ ಈ ಜಾಗೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ, ಮಿಕ್ಕ ಕಡೆ ಪಾದಚಾರಿ  ಮಾರ್ಗ ನಿರ್ಮಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಇನ್ನೂ ಅನೇಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT