ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ವೇಗ ಹೆಚ್ಚಿಸಲು

ಅಕ್ಷರ ಗಾತ್ರ

ಯುವಜನತೆ ಸದಾ ಮಂತ್ರಿಸುವ ಜಪವೆಂದರೆ `ಸ್ಪೀಡ್, ಸ್ಪೀಡ್, ಸ್ಪೀಡ್~. ಹೀಗಾಗಿಯೇ ಹಳೆ ಕಾಲದವರು ನಮ್ಮ ಸ್ಪೀಡಿಗೆ ಹೊಂದಿಕೊಳ್ಳುವುದಿಲ್ಲ ಎಂದು ಜರಿಯುವ ಯುವಜನತೆ ಪ್ರತಿಯೊಂದಕ್ಕೂ ಕಾಯುವಷ್ಟು ತಾಳ್ಮೆ ಇಲ್ಲದೆ ಸಹನೆ ಕಳೆದುಕೊಂಡವರಂತಾಡುತ್ತಾರೆ.

ಇದು ವಾಹನ ವಿಷಯದಲ್ಲೂ ಅಷ್ಟೆ. `ನಮ್ಮಪ್ಪನ ಹಳೇ ಮಾಡಲ್ ಗಾಡಿ ಮಾರಾಯ. ಓಡೋದೇ ಇಲ್ಲ ಎನ್ನುತ್ತದೆ~ ಎಂದು ಹೇಳುವವರು ಹಲವರು.

ಉತ್ತಮ ಗಾಳಿಯೊಂದಿಗೆ ಸ್ವಲ್ಪ ಪ್ರಮಾಣದ ಇಂಧನ ಸೇರಿ ಅದಕ್ಕಿಷ್ಟು ಕಿಡಿ ಹೊತ್ತಿದೊಡನೆ ದೊಡ್ಡದೊಂದು `ಸ್ಫೋಟ~ವಾಗಿ ವಾಹನ ಹಿಂಬದಿಯ ಸೈಲೆನ್ಸರ್‌ನಿಂದ ದಟ್ಟ ಹೊಗೆಯೊಮ್ಮೆ ಹೊರಹೋಗುತ್ತದೆ. ಕಾರ್ ಆದಲ್ಲಿ ಆರು ಸಾವಿರ ಆರ್‌ಪಿಎಂನೊಂದಿಗೆ ಬಲು ವೇಗದಲ್ಲಿ ಸಾಗಿದರೆ, ಫೆರಾರಿಯಂಥ ಕಾರಿನಲ್ಲೂ ಇಂಥದ್ದೇ ಕ್ರಿಯೆ ನಡೆದು ಅದು 19 ಸಾವಿರ ಆರ್‌ಪಿಎಂನೊಂದಿಗೆ ಶರವೇಗದಲ್ಲಿ ಓಡುತ್ತದೆ. ಹೀಗೆ ಪ್ರತಿಯೊಬ್ಬರೂ ತಮ್ಮ ವಾಹನ ಫಾರ್ಮುಲಾ ಒನ್ ವಾಹನದಂತೆ ಓಡಬೇಕೆಂಬ ಬಯಕೆ ಹೊಂದಿರುತ್ತಾರೆ. ಈ ನಾಲ್ಕು ಉಪಕರಣಗಳಲ್ಲಿನ ಬದಲಾವಣೆ ಇದರ ಆರಂಭಿಕ ಹಂತ.

ಏರ್ ಫಿಲ್ಟರ್
ಏರ್ ಫಿಲ್ಟರ್‌ನ ವಿಷಯಕ್ಕೆ ಬಂದಲ್ಲಿ ನಮ್ಮಲ್ಲಿ ಎರಡು ಬಗೆಯ ಮನಸ್ಥಿತಿ ಇರುವ ವಾಹನ ಸವಾರರು ಸಿಗುತ್ತಾರೆ. ಒಬ್ಬರು ವಾಹನದ ವೇಗದ ಸಾಮರ್ಥ್ಯ ಹೆಚ್ಚಿಸುವುದು ಅಥವಾ ಅದರ ಬಾಳಕೆ ಕುರಿತು ಕಾಳಜಿ ಮಾಡುವವರು. ಮತ್ತೊಬ್ಬರು ತಮ್ಮ ವಾಹನ ತಯಾರಿಸಿದ ಕಂಪೆನಿ ಸೂಚಿಸುವ ಉಪಕರಣಗಳನ್ನೇ ಬಳಸುವವರು. ಈ ಇಬ್ಬರೂ ಚಾಲಕರೂ ಮಾರುಕಟ್ಟೆಯಲ್ಲಿರುವ ಎರಡು ಬಗೆಯ ಏರ್ ಫಿಲ್ಟರ್‌ಗಳ ನಡುವಿನ ವ್ಯತ್ಯಾಸ ಅರಿಯುವುದು ಸೂಕ್ತ.

ವಾಹನ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿಯೇ ಅಭಿವೃದ್ಧಿಪಡಿಸಲಾದ ಏರ್ ಫಿಲ್ಟರ್‌ಗಳು ಗಾಳಿಯ ಒಳ ಹರಿವನ್ನು ಹೆಚ್ಚು ಮಾಡುವಂಥವು. ಎಂಜಿನ್ ಚಾಲನೆಗೆ ಬೇಕಾಗುವಷ್ಟು ಗಾಳಿಯನ್ನು ಒಂದೇ ಬಾರಿ ಎಳೆದು ನೀಡುವ ಸಾಮರ್ಥ್ಯವುಳ್ಳವು. ಇವು ವಾಹನದ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಅಗತ್ಯಕ್ಕಿಂತ ಹೆಚ್ಚು ಮಾಡುತ್ತವೆ.

ಇವುಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಹೆಸರು `ಕೆ ಅಂಡ್ ಎನ್~. ಎಲ್ಲಾ ಬಗೆಯ ವಾಹನಗಳಿಗೂ ಬಗೆಬಗೆಯ ಏರ್ ಫಿಲ್ಟರ್‌ಗಳನ್ನು ಇದು ತಯಾರಿಸುತ್ತದೆ. ಜತೆಗೆ `ಕೆ ಅಂಡ್ ಎನ್~ ಕ್ಲೀನರ್‌ನಲ್ಲಿ ಡಿಟರ್ಜೆಂಟ್ ಗುಣ ಇಲ್ಲದಿರುವುದರಿಂದ ಏರ್ ಫಿಲ್ಟರ್‌ಗೇನೂ ಹಾನಿಯಾಗದು.

ಇದೇ ರೀತಿಯಲ್ಲಿ ಏರ್ ಫಿಲ್ಟರ್‌ಗಳನ್ನು ತಯಾರಿಸುವ ಮತ್ತೊಂದು `ಫ್ರಾಮ್~ ಕಂಪೆನಿಯ `ಏರ್ ಹಾಗ್~. ಇದು ಉತ್ತಮ ಗುಣಮಟ್ಟದ್ದಾದರೂ `ಕೆ ಅಂಡ್ ಎನ್~ನಂಥೆ ವಿಸ್ತೃತ ಶ್ರೇಣಿಯನ್ನು ಹೊಂದಿಲ್ಲ.
 
ಮಾರುಕಟ್ಟೆಯಲ್ಲಿ ನಾನಾ ಕಂಪೆನಿಯ ಏರ್ ಫಿಲ್ಟರ್‌ಗಳು ಲಭ್ಯವಿದ್ದರೂ ಗುಣಮಟ್ಟ ಹಾಗೂ ಬಾಳಿಕೆಯನ್ನು ಪರಿಗಣಿಸಿ ಏರ್ ಫಿಲ್ಟರ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಈ ಎರಡೂ ಕಂಪೆನಿಗಳ ಏರ್ ಫಿಲ್ಟರ್‌ಗಳಲ್ಲಿ ಧನಾತ್ಮಕ ಅಂಶ ಎಂದರೆ, ಇವುಗಳನ್ನು ಶುಚಿಗೊಳಿಸಿ ಮರುಬಳಕೆ ಮಾಡಬಹುದು. ಹೀಗಾಗಿ ಪ್ರತಿ ಬಾರಿಯೂ ಏರ್ ಫಿಲ್ಟರ್‌ಗಳನ್ನು ಬದಲಿಸುವ ಅಗತ್ಯವಿಲ್ಲ. ಆದರೆ ಶುಚಿಗೊಳಿಸುವ ಕ್ರಿಯೆ ಅತ್ಯಂತ ಅಚ್ಚುಕಟ್ಟಾಗಿರಬೇಕು.

ಇಲ್ಲವೆಂದಾದಲ್ಲಿ ಏರ್ ಫಿಲ್ಟರ್ ಬದಲಾಯಿಸಬೇಕಾದ್ದು ಅನಿವಾರ್ಯ ಆದೀತು. ಇದಕ್ಕಾಗಿ ನಿಮ್ಮ ವಾಹನದ `ಮಾಲೀಕರ ಕೈಪಿಡಿ~ಯಲ್ಲಿ ಎಷ್ಟು ಕಿಲೋ ಮೀಟರ್‌ಗೊಮ್ಮೆ ಏರ್ ಫಿಲ್ಟರ್ ಶುಚಿಗೊಳಿಸಬೇಕೆಂಬುದನ್ನು ಗಮನಿಸಿ. ಇಂಥ ಏರ್ ಫಿಲ್ಟರ್‌ಗಳ ಎರಡು ನಕಾರಾತ್ಮಕ ಅಂಶಗಳೆಂದರೆ ಇವು ದುಬಾರಿ ಹಾಗೂ ವಾಹನ ತಯಾರಕರ ವಾರಂಟಿಯ ಷರತ್ತುಗಳನ್ನು ಉಲ್ಲಂಘಿಸುತ್ತವೆ.

ಟ್ಯೂನಿಂಗ್ ಬಾಕ್ಸ್
ತಂತ್ರಜ್ಞಾನದ ವಿಷಯದಲ್ಲಿ ಇಂದಿನ ಕಾರುಗು ಸಾಕಷ್ಟು ಬದಲಾಗಿವೆ. ಏಕ ಸಿಲಿಂಡರ್‌ಗಳ ಪೆಟ್ರೋಲ್ ಚಾಲಿತ ಕಾರುಗಳನ್ನು ಅಭಿವೃದ್ಧಿಪಡಿಸಿದಾಗ ಹುಟ್ಟಿಕೊಂಡ ಕಾರ್ಬೋರೇಟರ್ ಎಂಬ ಉಪಕರಣವು, ಬಹು ಸಿಲಿಂಡರ್‌ಗಳಿಗಾಗಿ ಫ್ಯುಯಲ್ ಇಂಜೆಕ್ಷನ್ ವ್ಯವಸ್ಥೆ ರೂಪಿಸಿದಾಗ ಬಂದಾಗ  ಕಣ್ಮರೆಯಾಯಿತು.
 
ಪ್ರತಿಯೊಂದು ಸಿಲಿಂಡರ್‌ಗೂ ಅಗತ್ಯವಿರುವ ಇಂಧನವನ್ನು ಪೂರೈಕೆ ಮಾಡುವ ಹಾಗೂ ಅವುಗಳನ್ನು ನಿರ್ವಹಿಸುವ ಕಂಪ್ಯೂಟರ್ ಆಧಾರಿತ `ಎಂಜಿನ್ ಕಂಟ್ರೋಲ್ ಯೂನಿಟ್~ (ಇಸಿಯು) ಬಳಕೆ ಆರಂಭವಾಯಿತು. ಹತ್ತು ವರ್ಷಗಳ ಹಿಂದೆ ಫೆರಾರಿ ಫಾರ್ಮುಲಾ 1 ಕಾರಿನಲ್ಲಿ ಮಾತ್ರ ಇದ್ದ ಇಂಥ ವ್ಯವಸ್ಥೆ ಈಗ ರಸ್ತೆಗಿಳಿಯುವ ಬಹುತೇಕ ಕಾರುಗಳಲ್ಲಿ ಲಭ್ಯ. ಹೀಗೆ ಎಂಜಿನ್‌ಗೆ ಇಂಧನ ಎಷ್ಟು ಪೂರೈಕೆಯಾಗಬೇಕು, ಯಾವ ಗೇರ್‌ನಲ್ಲಿ ಎಷ್ಟು ಇಂಧನ ಬಿಡುಗಡೆ ಮಾಡಬೇಕೆಂಬುದನ್ನು ಟ್ಯೂನಿಂಗ್ ಬಾಕ್ಸ್ ನಿರ್ಧರಿಸುತ್ತದೆ.

ಪೀಟ್ಸ್, ರೇಸ್ ಚಿಪ್ ಇತ್ಯಾದಿ ಕಂಪೆನಿಗಳ ಟ್ಯೂನಿಂಗ್ ಬಾಕ್ಸ್‌ಗಳು ಲಭ್ಯ. ಈಗಾಗಲೇ ಕಾರಿನಲ್ಲಿ ಪ್ರೋಗ್ರಾಮ್ ಮಾಡಲಾದ ಟ್ಯೂನಿಂಗ್ ಬಾಕ್ಸ್ ಬದಲಾಗಿ ಇಸಿಯು ಹಾಗೂ ಸಿಆರ್‌ಡಿಐ ಮಧ್ಯದಲ್ಲಿ ಈ ಟ್ಯೂನಿಂಗ್ ಬಾಕ್ಸ್ ಸ್ಥಾಪಿಸಲಾಗುತ್ತದೆ.
 
ಡೀಸೆಲ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಟ್ಯೂನಿಂಗ್ ಬಾಕ್ಸ್‌ಗಳಲ್ಲಿ `ಪೀಟ್ಸ್~ ಈಗಾಗಲೇ ಸಾಕಷ್ಟು ಪ್ರಚಲಿತವಾಗಿದೆ. ಬಿಎಂಡಬ್ಲೂ, ಆಡಿ, ಮರ್ಸಿಡೀಸ್, ಫಿಯೆಟ್, ಫೋರ್ಡ್, ಲ್ಯಾಂಡ್ ರೋವರ್, ಮಾರುತಿ, ಹ್ಯುಂಡೈ, ಟಾಟಾ ಕಾರುಗಳಿಗೆ ಸುಲಭವಾಗಿ ಅಳವಡಿಸಬಹುದಾದ ಈ ಟ್ಯೂನಿಂಗ್ ಬಾಕ್ಸ್‌ನಲ್ಲಿ ಆರ್‌ಐಎಸ್‌ಸಿ ಮೈಕ್ರೊ ಪ್ರೊಸೆಸ್ಸರ್ ನಿಯಂತ್ರಿತ ಡಿಜಿಟಲ್ ವ್ಯವಸ್ಥೆ ಇದೆ.

ಇದು ಡೀಸಲ್ ಎಂಜಿನ್‌ನ ಶಕ್ತಿಯನ್ನು ಶೇ. 30ರಷ್ಟು ಹೆಚ್ಚಿಸುತ್ತದೆ. ಟಾರ್ಕ್ ಹೆಚ್ಚಾದಂತೆ ಹೆಚ್ಚು ಗೇರ್ ಬಳಸುವ ಅಗತ್ಯವಿರುವುದಿಲ್ಲ. ಉದಾಹರಣೆಗೆ ಫಿಯೆಟ್ ಪುಂಟೊ 75 ಅಶ್ವಶಕ್ತಿ ಹಾಗೂ 190 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
 
ಆದರೆ ಪೀಟ್ಸ್ ಟ್ಯೂನಿಂಗ್ ಬಾಕ್ಸ್ ಬಳಕೆಯಿಂದ ಇದೇ ಕಾರು 92 ಅಶ್ವಶಕ್ತಿ ಹಾಗೂ 230ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಲಿದೆ. ಅದರಂತೆ ಆಡಿ `ಕ್ಯೂ7~ 240 ಅಶ್ವಶಕ್ತಿ ಹಾಗೂ 550 ಎನ್‌ಎಂ ಟಾರ್ಕ್ ಹೊಂದಿದೆ. ಪೀಟ್ಸ್ ಮೂಲಕ ಇದರ ಅಶ್ವಶಕ್ತಿ 272ಕ್ಕೆ ಹಾಗೂ ಟಾರ್ಕ್ 624ಎನ್‌ಎಂನಷ್ಟು ವೃದ್ಧಿಯಾಗಲಿದೆ.

ಟ್ಯೂನಿಂಗ್ ಬಾಕ್ಸ್‌ನ ಬೆಲೆ 17 ಸಾವಿರದಿಂದ ಆರಂಭವಾಗಿ 30 ಸಾವಿರ ರೂಪಾಯಿವರೆಗೂ ಲಭ್ಯ. ಇದರ ಅಳವಡಿಕೆಯಿಂದ ಕಾರಿನ ಕಾರ್ಯಕ್ಷಮತೆ, ವೇಗ ಹೆಚ್ಚಾಗುವುದೇನೋ ಸತ್ಯ. ಆದರೆ ಇಂಧನ ಕ್ಷಮತೆ ತುಸುಮಟ್ಟಿಗೆ ಕಡಿಮೆಯಾಗಬಹುದು. ಇದರ ಜತೆಯಲ್ಲಿ ವಾಹನ ತಯಾರಕರ ವಾರಂಟಿಯ ಉಲ್ಲಂಘನೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಸಿಂಥೆಟಿಕ್ ಆಯಿಲ್
ಸಾಮಾನ್ಯವಾಗಿ ನಾವು ಬಳಸುವ ಸಾಂಪ್ರದಾಯಿಕ ಮಿನರಲ್ ಮಿಶ್ರಿತ ಎಂಜಿನ್ ಆಯಿಲ್‌ಗೆ ಹೋಲಿಸಿದಲ್ಲಿ ಸಿಂಥೆಟಿಕ್ ಆಯಿಲ್ ಬಳಕೆಯಿಂದ ವಾಹನದ ಎಂಜಿನ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ಮಿನರಲ್ ಎಂಜಿನ್ ಆಯಿಲ್‌ನಲ್ಲಿ ಹೆಚ್ಚು ನೈಸರ್ಗಿಕವಾಗಿರುತ್ತದೆ.
 
ಆದರೆ ಸಿಂಥೆಟಿಕ್ ಆಯಿಲನ್ನು ಪ್ರಯೋಗಾಲಯದಲ್ಲಿ ಕೆಲವು ರಾಸಾಯನಿಕಗಳನ್ನು ಹದವಾಗಿ ಬೆರೆಸಿ ತಯಾರಿಸಿರುತ್ತಾರೆ. ಇದರಲ್ಲಿ ವೇಗವರ್ಧಕವಾಗಿ ಪಾಲಿಯಲ್ ಫೊಲೆಫಿನ್ (ಪಿಎಒ), ಸಿಂಥೆಟಿಕ್ ಈಸ್ಟರ್ ಹಾಗೂ ಆಲ್ಕಲೇಟೆಡ್ ಆರೊಮ್ಯಾಟಿಕ್ಸ್ ಅನ್ನು ನಿರ್ದಿಷ್ಟ ಅಳತೆಯಲ್ಲಿ ಬೆರೆಸಲಾಗಿರುತ್ತದೆ. ಇದರ ಜತೆಗೆ ಮಿನರಲ್ ಆಯಿಲ್‌ಗೆ ಹೋಲಿಸಿದಲ್ಲಿ ಸಿಂಥೆಟಿಕ್ ಆಯಿಲ್ ಕಣಗಳ ಅಳತೆ ಹಾಗೂ ಆಕಾರ ಒಂದೇ ರೀತಿಯದ್ದಾಗಿರುತ್ತದೆ. ಹೀಗೆ ಸಿಂಥೆಟಿಕ್ ಎಂಜಿನ್ ಆಯಿಲ್ ಬಳಸಿದ ಮೊದಲ ಕಾರ್ ಎಂದರೆ `ಪೋರ್ಷ್~.

ಹೀಗೆ ಸಿಂಥೆಟಿಕ್ ಎಂಜಿನ್ ಆಯಿಲ್ ತಯಾರಿಸುವ ಸಾಕಷ್ಟು ಕಂಪೆನಿಗಳು ಇವೆ. ಅವುಗಳಲ್ಲಿ ಮೊಬೈಲ್1 ಕೂಡ ಒಂದು ಹಾಗೂ ಹೆಚ್ಚು ಬೇಡಿಕೆ ಇರುವಂಥದ್ದು. ಅತ್ಯಂತ ಉಷ್ಣ ವಾತಾವರಣದಲ್ಲೂ ಇದರ ಜಿಗುಟುತನ ಒಂದೇ ರೀತಿಯಲ್ಲಿರುವುದು ಇದರ ವಿಶೇಷ. ಸಿಂಥೆಟಿಕ್ ಆಯಿಲ್‌ನ ದೀರ್ಘಕಾಲದ ಬಾಳಿಕೆಗೆ, ಅಧಿಕ ಕಾರ್ಯಕ್ಷಮತೆಗೆ ಸೀಸವನ್ನು ಬಳಸಲಾಗಿರುತ್ತದೆ. ಇದರಿಂದ ವಾಹನದ ವೇಗವೂ ಹೆಚ್ಚಲಿದೆ ಎಂದು ಕೆಲ ಪ್ರಯೋಗಳು ಸಾಬೀತುಪಡಿಸಿವೆ.

 ಇಂಧನ
ವಾಹನಗಳಿಗೆ ಇಂಧನವೇ ಆಹಾರ. ಹೀಗಾಗಿ ಅದಕ್ಕೆ ಬಳಸುವ ಇಂಧನ ಎಂಥದ್ದಾಗಿರಬೇಕೆಂಬುದು ಹಲವರ ಗೊಂದಲ. ಸಾಮಾನ್ಯವಾಗಿ ಸೀಸರಹಿತ (ಅನ್‌ಲೆಡೆಡ್) ಪೆಟ್ರೋಲ್ ಅನ್ನು `ನಾರ್ಮಲ್ ಪೆಟ್ರೋಲ್~ ಎಂದು ನಾವು ಹೇಳುತ್ತೇವೆ.

ಪೆಟ್ರೋಲ್ ಬಂಕ್‌ಗಳಲ್ಲಿ ಅದರ ಪಕ್ಕದಲ್ಲೇ ತುಸು ದುಬಾರಿಯಾದ `ಸ್ಪೀಡ್~, `ಎಕ್ಸ್‌ಟ್ರಾ ಪ್ರೀಮಿಯಂ~ ಪಂಪ್ ಕೂಡಾ ಇರುತ್ತದೆ. ಇದರ ನಡುವಿನ ಆಕ್ಟೇನ್ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ. ಇದೇ ರೀತಿಯಲ್ಲಿ ಡೀಸಲ್‌ನಲ್ಲಿ ಸಿಟೇನ್ ಸಂಖ್ಯೆ ಇದರ ಗುಣಮಟ್ಟವನ್ನು ಹೇಳುತ್ತದೆ.

ವಾಹನ ವೇಗವಾಗಿ ಚಲಿಸಬೇಕೆಂದಲ್ಲಿ ಅಧಿಕ ಸಂಖ್ಯೆಯ ಆಕ್ಟೇನ್ ಇರುವ ಪೆಟ್ರೋಲ್ ಬಳಸಿದರೆ ಸೂಕ್ತ ಎಂದು ಹೇಳಲಾಗುತ್ತದೆ. ಕಚ್ಚಾ ತೈಲವನ್ನು ಕುದಿಸಿದಾಗ ಬಗೆಬಗೆಯ ಪೆಟ್ರೋಲಿಯಂ ಉತ್ಪನ್ನಗಳು ಸಿಗುತ್ತವೆ. ಹೀಗೆ 87, 88, 89, 90, 91, 93 ಹಾಗೂ 97 ಆಕ್ಟೇನ್ ಇರುವ ಪೆಟ್ರೋಲ್ ಲಭ್ಯ. ಸಾಮಾನ್ಯವಾಗಿ `ನಾರ್ಮಲ್~ ಪೆಟ್ರೋಲ್ ಎಂಬ ಇಂಧನದಲ್ಲಿ 87 ಅಥವಾ ಕೆಲವೆಡೆ 91 ಆಕ್ಟೇನ್ ಲಭ್ಯ. ಆದರೆ ಅಧಿಕ (97) ಆಕ್ಟೇನ್ ಪೆಟ್ರೋಲ್ ಬಳಸಿದಾಗ ಅಧಿಕ ಶಾಖ ಉತ್ಪತ್ತಿಯಾಗುತ್ತದೆ. ಇದರಿಂದ ವಾಹನದ ವೇಗ ಹೆಚ್ಚಲಿದೆ.

ಇದರಂತೆ ಡೀಸಲ್ ಗುಣಮಟ್ಟವನ್ನು ಕೂಡ ಸಿಟೇನ್ ಸಂಖ್ಯೆಯ ಆಧಾರದ ಮೇಲೆ ಅಳೆಯಲಾಗುತ್ತದೆ. ಟರ್ಬೊಜೆಟ್, ಹೈ ಸ್ಪೀಡ್ ಇತ್ಯಾದಿ ಹೆಸರಿನ ಡೀಸಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಸಾಮಾನ್ಯ ಡೀಸಲ್‌ನಲ್ಲಿ 46-48 ಸಿಟೇನ್ ಇದ್ದರೆ ವೇಗ ವರ್ಧಕ ಡೀಸಲ್‌ನಲ್ಲಿ 50-55 ಸಿಟೇನ್ ಇರುತ್ತದೆ. ಆದರೆ ಜೈವಿಕ ಡೀಸಲ್‌ನಲ್ಲಿ ಸಿಟೇನ್ ಸಂಖ್ಯೆ 55 ಇರುತ್ತದೆ.

ಅಧಿಕ ಆಕ್ಟೇನ್ ಇರುವ ಇಂಧನ ಬಳಸಿದರೆ ಎಂಜಿನ್ ಹೆಚ್ಚು ಶಾಖ ಉತ್ಪಾದಿಸುತ್ತದೆ. ಇದು ದೀರ್ಘ ಕಾಲದಲ್ಲಿ ವಾಹನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಮಾತೂ ಇದೆ.

ಇಷ್ಟೆಲ್ಲಾ ಮಾಡಿದ ಮೇಲೆ ನಿಮ್ಮ ವಾಹನ `ಹೂಂ~ಕರಿಸುತ್ತಾ ನಾಗಾಲೋಟದಲ್ಲಿ ಓಡುವುದಂತೂ ಸತ್ಯ. ಹೀಗೆ ಓಡಿಸಲು ಆಕ್ಸಲರೇಟರ್ ಹಿಂಡುವ ಮೊದಲು ನಿಮ್ಮ ಸಂತೋಷದಲ್ಲೇ ತಮ್ಮ ನೆಮ್ಮದಿ ಕಾಣುತ್ತಿರುವ ನಿಮ್ಮ ಪೋಷಕರನ್ನೊಮ್ಮೆ ನೆನಪಿಸಿಕೊಳ್ಳಿ. ಏಕೆಂದರೆ...

ಏರ್ ಫಿಲ್ಟರ್ ಟಿಪ್ಸ್
* ಪ್ರತಿ ಐದು ಸಾವಿರ ಕಿಲೋ ಮೀಟರ್‌ಗೊಮ್ಮೆ ಏರ್ ಫಿಲ್ಟರ್ ಶುಚಿಗೊಳಿಸಿ

ಶುಚಿಗೊಳಿಸುವಾಗ ಅದು ಮರುಬಳಕೆಯ ಏರ್ ಫಿಲ್ಟರ್‌ಗಳೇ ಎಂಬುದನ್ನು ಗಮನಿಸಿ.

(ಏರ್ ಫಿಲ್ಟರ್ ಕಾಗದದ್ದಾದರೆ ಅದು ಒಮ್ಮೆ ಬಳಸಿ ಬಿಸಾಡುವ ಏರ್ ಫಿಲ್ಟರ್ ಎಂದರ್ಥ)
4ಏರ್ ಫಿಲ್ಟರ್‌ನಲ್ಲಿ ಹೆಚ್ಚು ಕೊಳೆ ಕುಳಿತಷ್ಟೂ, ವಾಹನ ಹೆಚ್ಚು ಇಂಧನ ಕುಡಿಯುತ್ತದೆ, ಪಿಕ್‌ಅಪ್ ಸಮಸ್ಯೆ ತಲೆದೋರಬಹುದು ಹಾಗೂ ಸೈಲೆನ್ಸರ್ ಹೆಚ್ಚು ಕಪ್ಪಾಗಬಹುದು, ವಾಹನ ಸ್ಟಾರ್ಟ್ ಮಾಡಿದಾಗ ಇಂಧನದ ವಾಸನೆ ಬರಬಹುದು.

25ಕ್ಕಿಂತ ಹೆಚ್ಚು ಬಾರಿ ಏರ್ ಫಿಲ್ಟರ್ ಶುಚಿಗೊಳಿಸಬೇಡಿ.

ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಿ ಏರ್ ಫಿಲ್ಟರ್ ಶುಚಿಗೊಳಿಸಬೇಡಿ.
ಇಷ್ಟೆಲ್ಲಾ ಮಾಡಿದ ಮೇಲೆ ವಾಹನ ಕಾರ್ಯಕ್ಷಮತೆ ಹೇಗಿರುತ್ತದೆ? ಎಂಬ ಪ್ರಶ್ನೆ ಮೂಡಬಹುದು. ಸಾಮಾನ್ಯ ಏರ್ ಫಿಲ್ಟರ್‌ಗಳಲ್ಲಿ ಅಂಕು ಡೊಂಕುಗಳು ಹೆಚ್ಚಿರುವುದರಿಂದ ಗಾಳಿಯ ಸಂಚಾರ ಅಷ್ಟು ಸುಗಮವಾಗಿರುವುದಿಲ್ಲ. ಆದರೆ ಕಾರ್ಯಕ್ಷಮತೆ ಹೆಚ್ಚಿಸುವ ಏರ್ ಫಿಲ್ಟರ್‌ಗಳಲ್ಲಿ ಗಾಳಿಯ ಸಂಚಾರ ಹೆಚ್ಚು ಸರಾಗವಾಗಿರುವುದರಿಂದ ಎಂಜಿನ್‌ಗೆ ಹೆಚ್ಚು ಆಮ್ಲಜನಕ ಪೂರೈಕೆಯಾಗುತ್ತದೆ. ಇದರಿಂದ ಇಂಧನ ಹೆಚ್ಚು ಉರಿದು ಅಧಿಕ ಶಕ್ತಿ ಉತ್ಪಾದನೆಯಾಗುತ್ತದೆ.

ಸಿಂಥೆಟಿಕ್ ಆಯಿಲ್ ಬಳಸುವುದಾದರೆ...

* ವಾಹನ 10-15 ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿದ ನಂತರ ಸಿಂಥೆಟಿಕ್ ಆಯಿಲ್ ಬಳಸುವುದು ಸೂಕ್ತ. ಏಕೆಂದರೆ ಆರಂಭದಲ್ಲಿ ವಾಹನದ ಎಂಜಿನ್ ಉಪಕರಣಗಳ ಸವಕಳಿ ಒಂದು ಹಂತಕ್ಕೆ ಬಂದಿರುತ್ತದೆ.

* ಎಂಜಿನ್ ಆಯಿಲ್‌ನ ಗ್ರೇಡ್ ಯಾವುದು ಎಂದು ತಿಳಿದುಕೊಳ್ಳುವುದು ಸೂಕ್ತ. ವಾಹನ ತಯಾರಕರು ಸೂಚಿಸಿದ ಗ್ರೇಡ್‌ನ ಆಯಿಲನ್ನೇ ಬಳಸಿ. ಉದಾಹರಣೆಗೆ: 10ಡಬ್ಲೂ-40 ಎಂದು ನಮೂದಿಸಿದ್ದರೆ ಅದನ್ನೇ ಬಳಸುವುದು ಸೂಕ್ತ.

*ಸಾಂಪ್ರದಾಯಿಕ ಎಂಜಿನ್ ಆಯಿಲ್‌ನಿಂದ ಸಿಂಥೆಟಿಕ್ ಆಯಿಲ್‌ಗೆ ಬದಲಾಯಿಸುವ ಮುನ್ನ ಎಂಜಿನ್ ಶುಚಿಗೊಳಿಸಬೇಕು. ಆದರೆ ಕೆಲವೊಂದು ಹಳೆಯ ಹಾಗೂ ಹೆಚ್ಚು ಇಂಧನ ಕ್ಷಮತೆ ಹೊಂದಿರುವ ವಾಹನಗಳು ಈ ಕ್ರಿಯೆಯಿಂದ ಕೊಂಚ ಬದಲಾಗಬಹುದು. ನುರಿತ ಮೆಕ್ಯಾನಿಕ್ ಜತೆಗೆ ಚರ್ಚೆ ನಡೆಸಿ ಮುಂದುವರಿಯುವುದು ಒಳ್ಳೆಯದು.

* ಭಾರತದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಸಹಜವಾಗಿ ಎಂಜಿನ್ ಮೇಲೆ ಒತ್ತಡ ಹೆಚ್ಚಿರುತ್ತದೆ. ಹೀಗಾಗಿ ಪ್ರತಿ 7.5ರಿಂದ 10 ಸಾವಿರ ಕಿ.ಮೀ.ಗೊಮ್ಮೆ ಎಂಜಿನ್ ಆಯಿಲ್ ಬದಲಿಸುವುದು ಸೂಕ್ತ.

* ಪೆಟ್ರೋಲ್ ಕಾರಿಗೆ ಹೋಲಿಸಿದಲ್ಲಿ ಡೀಸಲ್ ಕಾರಿಗೆ ಸಿಂಥೆಟಿಕ್ ಎಂಜಿನ್ ಆಯಿಲ್ ಹೆಚ್ಚು ಉಪಯುಕ್ತ. ಆದರೆ ಡೀಸಲ್ ಕಾರುಗಳು ಸಿಂಥೆಟಿಕ್ ಆಯಿಲ್ ಬಳಸುವ ಮುನ್ನ ತಯಾರಕರು ಸೂಚಿಸಿದ ಗ್ರೇಡ್‌ನ ಆಯಿಲ್ ಅನ್ನೇ ಬಳಸಿ.

* ಮಾರುಕಟ್ಟೆಯಲ್ಲಿ ಸೆಮಿ ಸಿಂಥೆಟಿಕ್ ಆಯಿಲ್ ಲಭ್ಯ. ಇದರಲ್ಲಿ ಅರ್ಧ ಸಿಂಥೆಟಿಕ್ ಉಳಿದ ಅರ್ಧ ಮಿನರಲ್ ಆಯಿಲ್ ಇರುತ್ತದೆ. ಇದರ ಬಳಕೆಯಲ್ಲೂ ಅದರದ್ದೇ ಆದ ಕೆಲವು ಲಾಭಗಳಿವೆ. ಸಿಂಥೆಟಿಕ್ ಎಂಜಿನ್ ಆಯಿಲ್‌ನ ಏಕೈಕ ಅನಾನುಕೂಲವೆಂದರೆ ಇದು ದುಬಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT