ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸಂಖ್ಯೆ ಹೆಚ್ಚಿಸಿದ ಸಾರಿಗೆ ಅವ್ಯವಸ್ಥೆ!

Last Updated 19 ಸೆಪ್ಟೆಂಬರ್ 2013, 20:39 IST
ಅಕ್ಷರ ಗಾತ್ರ

ಬೆಂಗಳೂರು: ಏಷ್ಯಾದಲ್ಲೇ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ವಾರ್ಷಿಕ ಬೆಳವಣಿಗೆ ದರ ಶೇ 3.25ರಷ್ಟಿದೆ ಎಂಬ ಅಂದಾಜಿದೆ. ಅಮಿಬಾದಂತೆ ಜಾಗ ಸಿಕ್ಕಲ್ಲೆಲ್ಲ ತನ್ನ ಮೈಚಾಚುತ್ತಾ ಹೊರಟಿರುವ ಈ ಊರಿನ ರಸ್ತೆಗಳ ಗಾತ್ರ ದಶಕಗಳ ಹಿಂದೆ ಹೇಗಿತ್ತೋ ಈಗಲೂ ಹಾಗೇ ಇದೆ. ಆದರೆ, ನಗರದ ವಾಹನಗಳ ಸಂಖ್ಯೆ ಮಾತ್ರ 45 ಲಕ್ಷದ ಗಡಿ ದಾಟಿದ್ದು, ಅವುಗಳ ಓಡಾಟಕ್ಕೆ ಮತ್ತು ನಿಲ್ಲುವುದಕ್ಕೆ ಸ್ಥಳಾವಕಾಶವೇ ಇಲ್ಲವಾಗಿದೆ.

ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಲೆಕ್ಕಕ್ಕೇ ಸಿಗದಂತೆ ಜನಸಂಖ್ಯೆ ಬೆಳೆಯುತ್ತಿದೆ. ‘ಇನ್ನೇನು ಒಂದು ಕೋಟಿಗೆ ತಲುಪಲಿದ್ದು, ಈ ಜನ ಪ್ರವಾಹದಲ್ಲಿ ಮುಂದಿನ ಗತಿ ಏನು’ ಎಂಬ ಚಿಂತೆ ಬಿಬಿಎಂಪಿಯನ್ನೂ ಕಾಡುತ್ತಿದೆ. ನಗರದಲ್ಲಿ ಪ್ರತಿ ಇಬ್ಬರಿಗೆ ಒಂದರಂತೆ ವಾಹನ ಸೌಲಭ್ಯ ಇದೆ. ರಾಜ್ಯ ಸಾರಿಗೆ ಇಲಾಖೆಯೇ ಈ ಅಂಶವನ್ನು ಬಹಿರಂಗಪಡಿಸಿದೆ. ದೇಶದ ಬೇರೆ ಯಾವ ಭಾಗದಲ್ಲಿ ಕೂಡ ಜನಸಂಖ್ಯೆಗೂ ವಾಹನಗಳ ಸಂಖ್ಯೆಗೂ ಇಷ್ಟೊಂದು ದೊಡ್ಡ ಅನುಪಾತ ಇಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ 40 ಲಕ್ಷ ಜನ ಉದ್ಯೋಗಿಗಳಿದ್ದಾರೆ ಎಂಬ ಅಂದಾಜಿದೆ. 32 ಲಕ್ಷ ದ್ವಿಚಕ್ರ ವಾಹನಗಳು, 8 ಲಕ್ಷ ಕಾರುಗಳು, 1.5 ಲಕ್ಷ ಆಟೊಗಳು ಮತ್ತು 3.5 ಲಕ್ಷ ಇತರ ವಾಹನಗಳು ಇವೆ ಎಂಬ ಲೆಕ್ಕ ಹಾಕಲಾಗಿದೆ. ನಗರದ ವಾಹನಗಳ ಸಂಖ್ಯೆಯಲ್ಲಿ ಶೇ 70ರಷ್ಟು ದ್ವಿಚಕ್ರ ವಾಹನಗಳೇ ತುಂಬಿವೆ. 20ರಿಂದ 40 ವರ್ಷದೊಳಗಿನ ಯುವ ಪೀಳಿಗೆ ಹೆಚ್ಚಾಗಿ ಈ ವಿಧದ ಸಾರಿಗೆ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದೆ.

ನಗರದಲ್ಲಿ ನಿತ್ಯ ಸರಾಸರಿ 600 ಹೊಸ ವಾಹನಗಳು ನೋಂದಣಿ ಆಗುತ್ತಿದ್ದು, ತಿಂಗಳಿಗೆ 12,000 ದ್ವಿಚಕ್ರ ವಾಹನಗಳು ಹೊಸದಾಗಿ ಸೇರ್ಪಡೆ ಆಗುತ್ತಿವೆ. ಕಳೆದ ಒಂದೂವರೆ ದಶಕದಲ್ಲಿ ಬೆಂಗಳೂರು ದಿಕ್ಕು–ದಿಸೆಯಿಲ್ಲದೆ ಬೆಳೆದಿದೆ. ಮೂಲಸೌಕರ್ಯಗಳ ವಿಷಯದಲ್ಲಿ ಸ್ಥಳೀಯ ಆಡಳಿತ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸಮರ್ಪಕ ರಸ್ತೆ ಜಾಲವೂ ಇಲ್ಲ ಎಂಬುದು ನಗರ ಯೋಜನಾ ತಜ್ಞರು ಎತ್ತಿರುವ ಪ್ರಮುಖ ತಕರಾರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 5,000 ಕಿ.ಮೀ. ರಸ್ತೆ ಜಾಲ ಇದ್ದರೂ ಬಹುಪ್ರಮಾಣದ ಮಾರ್ಗ ಬಸ್‌ಗಳ ಓಡಾಟಕ್ಕೆ ಸೂಕ್ತವಾಗಿಲ್ಲ. ಗಲ್ಲಿ–ಗಲ್ಲಿಗಳಿಂದ ತುಂಬಿಹೋಗಿರುವ ಬಡಾವಣೆಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವುದು ಅಸಾಧ್ಯವಾಗಿದೆ. ಮುಖ್ಯ ರಸ್ತೆಗಳವರೆಗೆ ಬಹುದೂರ ನಡೆದುಕೊಂಡು ಹೋಗಿ, ಬಸ್‌ ಹಿಡಿಯಲು ಬಡಾವಣೆ ನಿವಾಸಿಗಳಿಗೆ ಮನಸ್ಸಿಲ್ಲ. ಹೀಗಾಗಿ ಸುಲಭದ ದಾರಿಯಾಗಿ ಸಿಕ್ಕಿರುವುದು ದ್ವಿಚಕ್ರ ವಾಹನ ಖರೀದಿಯೊಂದೇ.

ಪ್ರತಿ ಚದರ ಕಿ.ಮೀ. ವ್ಯಾಪ್ತಿಯಲ್ಲಿ 17.33 ಕಿ.ಮೀ. ಉದ್ದದ ರಸ್ತೆ ಇರಬೇಕು ಎಂದು ನಗರ ಅಭಿವೃದ್ಧಿ ಮಾರ್ಗಸೂಚಿ ಹೇಳುತ್ತದೆ. ಬೆಂಗಳೂರಿನಲ್ಲಿ ಅಷ್ಟೊಂದು ಉದ್ದದ  ರಸ್ತೆ ಸಿಗುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ರಸ್ತೆ, ಪಾರ್ಕ್ ಮತ್ತು ಪಾರ್ಕಿಂಗ್‌ ಸೇರಿದಂತೆ ಯಾವ ಮೂಲ ಸೌಕರ್ಯಗಳೂ ಇಲ್ಲದಂತೆ ನಗರವನ್ನು ಬೆಳೆಸಲಾಗಿದೆ. ಇದರಿಂದ ಸಂಚಾರ ವ್ಯವಸ್ಥೆ ಸಂಕಷ್ಟಗಳು ಹೆಚ್ಚಾಗಿವೆ.

ನಗರದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಓಡಾಟಕ್ಕೆ ಬಿಎಂಟಿಸಿ ಬಸ್‌ಗಳನ್ನು ಆಶ್ರಯಿಸಿದರೆ, ಉಳಿದ ಅಷ್ಟೇ ಜನ ಖಾಸಗಿ ವಾಹನ ಅವಲಂಬಿಸಿದ್ದಾರೆ. ಸಮರ್ಪಕವಾದ ಸಾರ್ವಜನಿಕ ವ್ಯವಸ್ಥೆ ಇಲ್ಲದಿರುವುದೇ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಲು ಮೂಲ ಕಾರಣವಾಗಿದೆ.

ನಗರದ ಎಲ್ಲ ಭಾಗಗಳಲ್ಲಿ ಬಿಎಂಟಿಸಿ ಸಮರ್ಪಕವಾದ ಬಸ್‌ ಸೌಲಭ್ಯವನ್ನು ಒದಗಿಸಿಲ್ಲ. ಬೇಕಾದ ಸಮಯಕ್ಕೆ ಬಸ್‌ಗಳು ಸಿಗುವುದಿಲ್ಲ. 800 ಚದರ ಕಿ.ಮೀ.ಯಷ್ಟು ವಿಶಾಲವಾದ ಪ್ರದೇಶದ ಮೂಲೆ–ಮೂಲೆಗಳ ಸಂಪರ್ಕಕ್ಕೆ ಅಗತ್ಯವಾದಷ್ಟು ಬಸ್‌ಗಳ ಲಭ್ಯತೆ ಕೂಡ ಅದಕ್ಕೆ ಇಲ್ಲ. ಶಾಲೆ ಮತ್ತು ಕಚೇರಿಗಳಿಗೆ ಹೋಗುವ ಹಾಗೂ ಅಲ್ಲಿಂದ ವಾಪಸು ಬರುವ ಸಂದರ್ಭದಲ್ಲಿ ಬಸ್‌ಗಳು ತುಂಬಿ ತುಳುಕುತ್ತವೆ. ಅಂತಹ ವಾತಾವರಣದಲ್ಲಿ ಪ್ರಯಾಣ ಹಿಂಸೆಯಾಗಿ ಪರಿಣಮಿಸುತ್ತದೆ. ಪ್ರಯಾಣ ದರವೂ ಬಲು ದುಬಾರಿಯಾಗಿದೆ. ಹೀಗಾಗಿ ಬಸ್‌ ಪ್ರಯಾಣ ಸಾರ್ವಜನಿಕರಿಗೆ ಉತ್ತೇಜನಕಾರಿಯಾಗಿಲ್ಲ.

ಬೆಂಗಳೂರಿನಲ್ಲಿ ಹಗಲು ಮತ್ತು ರಾತ್ರಿಗಳ ವ್ಯತ್ಯಾಸವೇ ಅಳಿಸಿಹೋಗಿದ್ದು, ಇಲ್ಲಿನ ನಿವಾಸಿಗಳು 3–4 ಪಾಳಿಗಳಲ್ಲಿ ದುಡಿಯಲು ಹೋಗುತ್ತಾರೆ. ಹೀಗಾಗಿ ಅಪರಾತ್ರಿಗಳಲ್ಲಿ ಮನೆಗಳಿಗೆ ತೆರಳುವ ಲಕ್ಷಾಂತರ ಜನ ಇದ್ದಾರೆ. ಎಲ್ಲಾ ಕಂಪೆನಿಗಳಲ್ಲಿ ರಾತ್ರಿ ವಾಹನದ ಸೌಕರ್ಯ ಒದಗಿಸಿಲ್ಲ. ಬಸ್‌ ಇಲ್ಲದೆ, ಸಂಸ್ಥೆಯಿಂದಲೂ ವಾಹನ ಸೌಕರ್ಯ ಇಲ್ಲದೆ ಈ ಉದ್ಯೋಗಿಗಳು ಮನೆ ತಲುಪುವ ಬಗೆಯಾದರೂ ಹೇಗೆ? ಪರಾವಲಂಬಿಗಳಾಗಿ ಒದ್ದಾಡದಿರಲು ದ್ವಿಚಕ್ರ ವಾಹನ ಹೊಂದಿದ್ದಾರೆ.

ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಜತೆಗೆ ಪಾರ್ಕಿಂಗ್‌ ಕಿರಿಕಿರಿಯನ್ನೂ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು ಎಂದು ಬಹುತೇಕ ತಜ್ಞರು ಹೇಳುತ್ತಾರೆ. ಆದರೆ, ಇಷ್ಟೊಂದು ದಯನೀಯ ಸ್ಥಿತಿಯಲ್ಲಿ ಇರುವ ಸೌಲಭ್ಯವನ್ನು ಸಾರ್ವಜನಿಕರು ಹೇಗೆ ಬಳಸಬೇಕು ಮತ್ತು ಅದಕ್ಕೆ ಅಷ್ಟೊಂದು ದುಬಾರಿ ಬೆಲೆ ಏಕೆ ತೆರಬೇಕು ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಕ್ಕಿಲ್ಲ.

ಮೆಟ್ರೊ ಸಾರಿಗೆ ಒಂದು ಮಾರ್ಗದಲ್ಲಿ ಮಾತ್ರ ಲಭ್ಯವಾಗಿದೆ. ಅದರಿಂದ ಏನೂ ಪ್ರಯೋಜನ ಇಲ್ಲ. ನಗರದ ಎಲ್ಲ ಭಾಗಗಳಿಗೆ ಮೆಟ್ರೊ ಸಂಪರ್ಕ ಸಾಧಿಸಲು ಇನ್ನೂ ಎಷ್ಟು ವರ್ಷಗಳು ಬೇಕಾಗುವವೋ ಯಾರಿಗೂ ತಿಳಿದಿಲ್ಲ. ಈ ಮಧ್ಯೆ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವರು, ಮಹಾನಗರಗಳಲ್ಲಿ ಮಾನೊ ರೈಲಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದಾರೆ!

ಚೀನಾದ ಬಹುತೇಕ ಮಹಾನಗರಗಳಲ್ಲಿ ಜನ ಸ್ವಂತ ವಾಹನ ಖರೀದಿಸಲು ಮನಸ್ಸು ಮಾಡದೆ ಸಾರ್ವಜನಿಕ ಸಾರಿಗೆಯನ್ನೇ ಬಳಸಲು ಹಾತೊರೆಯುತ್ತಾರೆ. ಅಲ್ಲಿನ ವ್ಯವಸ್ಥೆ ಅಷ್ಟೊಂದು ಅಚ್ಚುಕಟ್ಟಾಗಿದೆ. ಮನೆಯಿಂದ ಕಚೇರಿಗೆ ಮತ್ತು ಕಚೇರಿಯಿಂದ ಮನೆಗೆ ತೆರಳಲು ಬಸ್‌ಗಾಗಿ ಕಾಯುವುದು, ಅಲೆಯುವುದು, ತಡವಾಗಿ ಹೋಗಿ ಅಧಿಕಾರಿಗಳಿಂದ ಬೈಗುಳ ತಿನ್ನುವುದು... ಇಂತಹ ಯಾವ ಕಿರಿಕಿರಿಗೂ ಆಸ್ಪದ ಇಲ್ಲದೆ ಸುಲಭವಾಗಿ ಪ್ರಯಾಣ ಮಾಡುವ ವ್ಯವಸ್ಥೆ ಅಲ್ಲಿದೆ. ಸಿಂಗಾಪುರದಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಜನರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಕೊಡುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ.

‘ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಸ್ಥಿರಗೊಳಿಸಿದೇ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕೆಂಬ ಅಪೇಕ್ಷೆ ಮಾಡಿದರೆ ಹೇಗೆ’ ಎಂದು ಕೇಳುತ್ತಾರೆ ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌.ಮುಕುಂದ್. ‘ಸೈಕಲ್‌ ಸವಾರಿಯನ್ನೂ ಉತ್ತೇಜಿಸಬೇಕಿದೆ. ಆದರೆ, ನಗರದ ಇಕ್ಕಟ್ಟಾದ ರಸ್ತೆಗಳಲ್ಲಿ ತೇಲಿಬರುವ ಆ ವಾಹನಗಳ ಮಹಾಪ್ರವಾಹದಲ್ಲಿ ಸೈಕಲ್‌ ಓಡಿಸಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಓಡಿಸುವ ಧೈರ್ಯ ಮಾಡಿದರೆ ಪ್ರಾಣವನ್ನೇ ಪಣಕ್ಕೆ ಇಟ್ಟಂತೆ. ಸೈಕಲ್‌ ಟ್ರ್ಯಾಕ್‌ಗಳನ್ನಾದರೂ ನಿರ್ಮಾಣ ಮಾಡಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

‘ನಿಯಮಿತ ಅಂತರದಲ್ಲಿ ಬಸ್‌ ಬೇಗಳ ನಿರ್ಮಾಣ, ದಿನದ 24 ಗಂಟೆಗಳ ಸಂಚಾರ ದಟ್ಟಣೆಗೆ ಅನುಗುಣವಾಗಿ ಬಸ್‌ ಸೌಕರ್ಯ, ನಗರದ ಎಲ್ಲ ಭಾಗಗಳನ್ನು ಸಂಪರ್ಕಿಸುವಂತಹ ಮೆಟ್ರೊ ವ್ಯವಸ್ಥೆ, ಚಿಕ್ಕ ಗಲ್ಲಿಗಳಲ್ಲಿ ಸಾರಿಗೆ ಸಂಪರ್ಕ ಕಲ್ಪಿಸುವಂತಹ ಪುಟ್ಟ ವಾಹನಗಳ ಸೌಲಭ್ಯ ಒದಗಿಸಿದರೆ ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಇಳಿಮುಖವಾಗಬಹುದು’ ಎಂದು ಸಿವಿಕ್‌ ಸಂಸ್ಥೆಯ ಮುಖ್ಯಸ್ಥೆ ಕಾತ್ಯಾಯಿನಿ ಚಾಮರಾಜ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT