ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸಾಲ- ಬ್ಯಾಂಕಿಗೆ ವಂಚನೆ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ಗಳಿಂದ ವಾಹನ ಸಾಲ ಪಡೆದು ಕಾರು ಖರೀದಿಸಿ ಸಾಲದ ಹಣ ಹಿಂದಿರುಗಿಸದೆ ವಂಚಿಸುತ್ತಿದ್ದ ಆರೋಪದ ಮೇಲೆ ನಾಲ್ಕು ಮಂದಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮತ್ತೀಕೆರೆಯ ಎಂಎಸ್‌ಆರ್ ನಗರದ ವಿ.ರಾಘವೇಂದ್ರನಾಯ್ಡು (42), ಅವರ ಮಗ ಎಸ್.ಹರ್ಷ (26), ಕೃಷ್ಣ (19) ಮತ್ತು ಮಂಜುನಾಥ (19) ಬಂಧಿತರು. ಆರೋಪಿಗಳಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಐದು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾದ ರಾಘವೇಂದ್ರನಾಯ್ಡು ಈ ಹಿಂದೆ ಆಹಾರ ಪದಾರ್ಥಗಳ ಕಾರ್ಖಾನೆ ನಡೆಸುತ್ತಿದ್ದ. ಐಸಿಐಸಿಐ, ಧನಲಕ್ಷ್ಮಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಆತ ವಾಹನ ಸಾಲ ಪಡೆದು ಐದು ಕಾರುಗಳನ್ನು ಖರೀದಿಸಿದ್ದ. ನಂತರ ಆತ ಆ ಕಾರುಗಳ ನೋಂದಣಿ ಫಲಕ ಬದಲಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸದೆ ವಂಚಿಸಿದ್ದ.
 
ಮತ್ತೊಂದೆಡೆ ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೀಕೆರೆ ಬಳಿ ಭಾನುವಾರ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ರಾಘವೇಂದ್ರನಾಯ್ಡುವಿನ ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಕಾರಿನಲ್ಲಿ ಬೇರೆ ವಾಹನಗಳ ನೋಂದಣಿ ಫಲಕಗಳು ಇರುವುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.

ಇತರೆ ಆರೋಪಿಗಳು ರಾಘವೇಂದ್ರನಾಯ್ಡುವಿಗೆ ನೆರವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನಗರದ ಏಳನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಯಶವಂತಪುರ ಉಪ ವಿಭಾಗದ ಎಸಿಪಿ ಹನುಮಂತಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT