ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳಿಗೆ ದೊರಕದ ಪೊಲೀಸ್‌ ಬಾಡಿಗೆ!

ವಿಧಾನಸಭಾ ಚುನಾವಣೆ ನಡೆದು 8 ತಿಂಗಳು
Last Updated 11 ಜನವರಿ 2014, 6:31 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಂದೋಬಸ್ತ್‌ಗಾಗಿ ಪೊಲೀಸರು ಖಾಸಗಿ ವಾಹನಗಳನ್ನು ಪಡೆಯುವುದು ನಿಶ್ಚಿತ. ಆದರೆ ಎಂಟು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಗೆ ಬಳಸಿಕೊಂಡ ವಾಹನಗಳಿಗೆ ಇಲಾಖೆ ಇದುವರೆಗೂ ಹಣ ಪಾವತಿಸಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಬಂದೋ­ಬಸ್ತ್ ಕಾರ್ಯಗಳಿಗಾಗಿ ಬಳಸಿಕೊಂಡ ಖಾಸಗಿ ವಾಹನಗಳಿಗೆ ಪೊಲೀಸ್‌ ಇಲಾಖೆ ಸುಮಾರು ರೂ. 20 ಲಕ್ಷ ಪಾವತಿಸುವುದು ಬಾಕಿ ಉಳಿದಿದ್ದು, ವಾಹನಗಳ ಮಾಲೀಕರು ಪರಿತಪಿಸುತ್ತಿದ್ದಾರೆ.

ಚುನಾವಣಾ ಬಂದೋಬಸ್ತ್ ಗಾಗಿ ಜಿಲ್ಲಾ ಪೊಲೀಸ್‌ ಬಳಸಿಕೊಂಡ 15 ಖಾಸಗಿ ವಾಹನಗಳಿಗೆ ರೂ. 4.75 ಲಕ್ಷ ಬಾಡಿಗೆ ನೀಡುವುದು ಬಾಕಿ ಇದೆ. ಮಂಗಳೂರು ಪೊಲೀಸ್‌ ಕಮಿಷನರ್ ಕಚೇರಿ ಬಳಸಿಕೊಂಡ 93 ವಾಹನಗಳಿಗೆ ರೂ. 15.18 ಲಕ್ಷ ಬಾಡಿಗೆ ಕೊಡುವುದು ಬಾಕಿ ಉಳಿದಿದೆ. ಪೊಲೀಸ್‌ ಇಲಾಖೆ ಕೆಲವೊಂದು ವಾಹನಗಳನ್ನು 25 ದಿನಗಳ ವರೆಗೂ ತನ್ನ ಉದ್ದೇಶಕ್ಕೆ ಬಳಸಿಕೊಂಡಿದೆ.

ಪುತ್ತೂರಿನ ಸಿ.ಎಸ್‌.ಶಾಸ್ತ್ರಿ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ದೊರೆತ ಉತ್ತರದಿಂದ ಈ ಅಂಶ ಬೆಳಕಿಗೆ ಬಂದಿದೆ. ವಾಹನ ಮಾಲೀಕರೊಬ್ಬರು ತಮಗೆ ಇನ್ನೂ ಪೊಲೀಸ್‌ ಇಲಾಖೆಯಿಂದ ಹಣ ಬಂದಿಲ್ಲ ಎಂದು ತಮ್ಮ ಗೋಳು ತೋಡಿಕೊಂಡಿದ್ದರ ಹಿನ್ನೆಲೆಯಲ್ಲಿ ಶಾಸ್ತ್ರಿ ಅವರು ಈ ಬಗ್ಗೆ ಮಾಹಿತಿ ಕೇಳಿದ್ದರು. ತಾಂತ್ರಿಕ ಕಾರಣಗಳಿಂದ ಹಣ ಪಾವತಿಸಿಲ್ಲ ಎಂಬ ಉತ್ತರವಷ್ಟೇ ಅವರಿಗೆ ಲಭಿಸಿದ್ದು, ಎಂತಹ ತಾಂತ್ರಿಕ ತೊಂದರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ದೊರೆತೇ ಇಲ್ಲ.

‘ನನ್ನ ಕ್ವಾಲಿಸ್‌ ವಾಹನವನ್ನು ಪೊಲೀಸರು 21 ದಿನ ಬಳಸಿಕೊಂಡಿದ್ದರು. ನನಗೆ ರೂ. 31 ಸಾವಿರ ಹಣ ಪಾವತಿಸಬೇಕಿದೆ. ಟಯರ್‌ ಪಂಕ್ಚರ್‌ ಆಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ನನ್ನ ವಾಹನವನ್ನು ಪೊಲೀಸರು ಚುನಾವಣಾ ಕರ್ತವ್ಯಕ್ಕಾಗಿ ಕೊಂಡೊಯ್ದಿದ್ದರು. ಇಲ್ಲಿಯವರೆಗೆ ನನಗೆ ಹಣ ಬಂದಿಲ್ಲ’ ಎಂದು ಪುತ್ತೂರಿನ ದಿನೇಶ್‌ ಸಾಲ್ಯಾನ್‌ ಅವರು ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡರು.

‘ಲೋಕಸಭಾ ಚುನಾವಣೆ ಸಮೀಪಿಸುತ್ತಿರುವು­ದರಿಂದ ಚುನಾವಣಾ ಬಂದೋಬಸ್ತ್‌ ಕಾರ್ಯ­ಗಳಿಗಾಗಿ ಮತ್ತೆ ಖಾಸಗಿ ವಾಹನಗಳಿಗೆ ಪೊಲೀಸ್‌ ಇಲಾಖೆ ಮುಗಿಬೀಳುವುದು ನಿಶ್ಚಿತ. ಅದಕ್ಕಿಂತ ಮೊದಲಾಗಿಯಾದರೂ ಹಳೆ ಬಾಕಿ ಪಾವತಿ­ಯಾದೀತೇ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ’ ಎಂದು ಅವರು ಹೇಳಿಕೊಂಡರು.

ಬಾಕಿ ಇರುವುದು ನಿಜ
ವಾಹನಗಳಿಗೆ ಬಾಡಿಗೆ ನೀಡಲು ಬಾಕಿ ಇರುವುದು ನಿಜ. ಈಗಾಗಲೇ ಕಡತವನ್ನು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಮಂಜೂರಾತಿ ಸಿಕ್ಕ ತಕ್ಷಣ ಹಣ ಸಂದಾಯ ಮಾಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಆರ್‌.ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT