ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಿಂಟರ್ ಮಿಲಿಯನ್' ರೋಚಕ ರೇಸ್ ಇಂದು

Last Updated 15 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕಸುವು ತುಂಬಿದ ಕುದುರೆಗಳ ನಾಗಾಲೋಟ, ಜಾಕಿಗಳ ಕರಾಮತ್ತು, ಉಸಿರು ಬಿಗಿಹಿಡಿದು ನೋಡುವ ಪ್ರೇಕ್ಷಕ ವರ್ಗ, ಕೆಲವೇ ನಿಮಿಷಗಳಲ್ಲಿ ಕೈಬದಲಾಗುವ ಹಣ... ಇಂಥ ಹತ್ತು ಹಲವು ರೋಚಕ ಕ್ಷಣಗಳನ್ನು ಕಟ್ಟಿಕೊಡುತ್ತವೆ ಕುದುರೆ ರೇಸ್‌ಗಳು. ಶರವೇಗದಲ್ಲಿ ಮುನ್ನುಗ್ಗುವ ಕುದುರೆಗಳ ವೇಗವನ್ನು ಕಣ್ತುಂಬಿಕೊಳ್ಳುವುದೇ ಒಂದು ರೋಚಕ ಅನುಭವ. ಬೆಂಗಳೂರು ನಗರಿ ಈಗ ಮತ್ತೊಂದು ರೋಚಕ ಕುದುರೆ ರೇಸ್‌ಗೆ ಅಣಿಯಾಗಿದೆ.

ಬೆಂಗಳೂರು ಟರ್ಫ್ ಕ್ಲಬ್ ಸಹಯೋಗದಲ್ಲಿ ಸೆಂಚುರಿ ಗ್ರೂಪ್ ಆಯೋಜಿಸಿರುವ `ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಬೆಂಗಳೂರು ವಿಂಟರ್ ಮಿಲಿಯನ್-ಗ್ರೇಡ್ 3' ರೇಸ್ ಇದೇ ಶನಿವಾರ (ಫೆ.16) ನಡೆಯಲಿದೆ.

ಬೆಂಗಳೂರು ವಿಂಟರ್ ಮಿಲಿಯನ್ ರೇಸ್‌ನಲ್ಲಿ ಮೂರು ವರ್ಷ ವಯಸ್ಸಿನ ಎಂಟು ಕುದುರೆಗಳು ತಮ್ಮ ವೇಗದ ಕರಾಮತ್ತು ಪ್ರದರ್ಶಿಸಲಿವೆ. ಗುರುವಾರ ನಡೆದ `ಡ್ರಾ ಆಫ್ ಲಾಟ್ಸ್' ಕಾರ್ಯಕ್ರಮದಲ್ಲಿ ಜಾಕಿ ವಾಲ್ಡಿರ್ ಡಿಸೋಜ ಅವರು ಮುನ್ನಡೆಸಲಿರುವ `ಲವ್ ಈಸ್ ಲೈಫ್' ಕುದುರೆ ಮೊದಲ ಟ್ರ್ಯಾಕ್‌ನಿಂದ ಮುನ್ನುಗ್ಗುವ ಅದೃಷ್ಟ ಪಡೆದುಕೊಂಡರೆ, ಜಾಕಿ ಪಿ.ಮುಲ್‌ರೆನನ್ ಅವರು ಓಡಿಸಲಿರುವ `ಆ್ಯಬ್ಸಲ್ಯೂಟ್ ರೆಡ್' ಕುದುರೆ ಎಂಟನೇ ಟ್ರ್ಯಾಕ್‌ನಿಂದ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಂಡಿತು.

ಉಳಿದಂತೆ, `ಟರ್ಫ್ ಸ್ಟ್ರೈಕರ್' (ಜಾಕಿ ಎಸ್.ಜಾನ್) ಎರಡನೇ ಟ್ರ್ಯಾಕ್‌ನಿಂದ, `ಲಗೂನಾ' (ಜಾಕಿ ಸಿ.ಎಸ್.ಜೋಡಾ) ಮೂರನೇ ಟ್ರ್ಯಾಕ್‌ನಿಂದ, `ಆ್ಯಬ್ಸಲೂಟ್ ಪ್ಲೆಷರ್' (ಜಾಕಿ ಡಿ.ಜ್ಞಾನೇಶ್ವರ್) ನಾಲ್ಕನೇ ಟ್ರ್ಯಾಕ್‌ನಿಂದ, `ಜೆನಿಕಾ' (ಜಾಕಿ ಎಂ.ನೂರ್‌ನಬೀ) ಐದನೇ ಟ್ರ್ಯಾಕ್‌ನಿಂದ, `ಫೆಸಿಫಿಕ್ ಬ್ಲೂ' (ಜಾಕಿ ವಿ.ಆರ್.ಜಗದೀಶ್) ಆರನೇ ಟ್ರ್ಯಾಕ್ ಹಾಗೂ `ಲೈಟ್ ಆಫ್ ಸಕ್ಸೆಸ್' (ಜಾಕಿ ಪಿ.ಜಾನ್ಸ್) ಕುದುರೆ ಏಳನೇ ಟ್ರ್ಯಾಕ್‌ನಿಂದ ಸ್ಪರ್ಧಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡಿವೆ.

ಸೆಂಚುರಿ ಗ್ರೂಪ್ ಆಯೋಜಿಸಿರುವ `ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಬೆಂಗಳೂರು ವಿಂಟರ್ ಮಿಲಿಯನ್-ಗ್ರೇಡ್ 3' 1200 ಮೀಟರ್ ರೇಸ್‌ನ ಬಹುಮಾನದ ಮೊತ್ತ ಬರೋಬ್ಬರಿ ್ಙ 20.78 ಲಕ್ಷ. ಕುದುರೆಗಳ ಬಗ್ಗೆ ವ್ಯಾಮೋಹ ಹಾಗೂ ರೇಸ್ ಜೊತೆಗೆ ಭಾವುಕ ಸಂಬಂಧ ಹೊಂದಿರುವ ಸೆಂಚುರಿ ಗ್ರೂಪ್‌ನ ಮಾಲೀಕರು ನಡೆಸುತ್ತಿರುವ ಐದನೇ ರೇಸ್ ಇದು.

`ಸೆಂಚುರಿ ಗ್ರೂಪ್ ಬಹು ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮುಖ್ಯವಾಗಿ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಬಹುಮಹಡಿ ಕಟ್ಟಡ ನಿರ್ಮಾಣದಲ್ಲಿ ಗಮನ ಹರಿಸಿದೆ. ಇದರ ಜತೆಗೆ ಶಿಕ್ಷಣ, ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದೆ. ಸೆಂಚುರಿ ಗ್ರೂಪ್ ಕಳೆದ ಎರಡು ಮೂರು ವರ್ಷಗಳಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುತ್ತಾ ಬರುತ್ತಿದೆ. ಕುದುರೆಗಳ ಮೇಲೆ ನನಗೆ ತುಂಬು ಪ್ರೀತಿ. ಉದ್ಯಮದಲ್ಲಿ ತೊಡಗಿದ್ದರೂ ನನ್ನ ಮನಸ್ಸು ಕುದುರೆಗಳ ಬಗ್ಗೆ ಹಂಬಲಿಸುತ್ತದೆ. ರೇಸ್‌ಗಳನ್ನು ಆಯೋಜಿಸುತ್ತಿರುವುದು ಕುದುರೆಗಳ ಮೇಲಿರುವ ಪ್ರೀತಿಯಿಂದಲೇ.

ಮುಂದೆ ಕೂಡ ದೊಡ್ಡ ದೊಡ್ಡ ರೇಸ್‌ಗಳನ್ನು ಆಯೋಜಿಸುವ ಕನಸಿದೆ. ಬೆಂಗಳೂರು ಟರ್ಫ್ ಕ್ಲಬ್‌ನ್ನು ಅಭಿವೃದ್ಧಿಪಡಿಸುವುದರ ಜತೆಗೆ ಮುಂದೆ ಫ್ಲಡ್‌ಲೈಟ್ ರೇಸ್ ಮಾಡುವ ಹಂಬಲವಿದೆ' ಎಂಬ ಇಂಗಿತ ವ್ಯಕ್ತಪಡಿಸಿದರು ಪಿ.ದಯಾನಂದ ಪೈ.

`ಡ್ರಾ ಆಫ್ ಲಾಟ್ಸ್' ಕಾರ್ಯಕ್ರಮದಲ್ಲಿ ಕುದುರೆ ಮಾಲೀಕರು ಹಾಗೂ ತರಬೇತುದಾರರು ಪಾಲ್ಗೊಂಡಿದ್ದರು. ಡ್ರಾ ವೇಳೆ ತರಬೇತುದಾರರು, ಮಾಲೀಕರು ಹಾಗೂ ಜಾಕಿಗಳ ಮೊಗದಲ್ಲಿ ತಮ್ಮ ಕುದುರೆ ರೇಸ್‌ನಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ  ತುಂಬು ಆತ್ಮವಿಶ್ವಾಸ ವ್ಯಕ್ತವಾಗುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT