ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್ ತಂಡಕ್ಕೆ ಉತ್ತಮ ಭವಿಷ್ಯ

ಭಾರತೀಯ ಮೂಲದ ವೀರಸ್ವಾಮಿ ಆತ್ಮವಿಶ್ವಾಸ
Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ‘ವೆಸ್ಟ್ ಇಂಡೀಸ್ ತಂಡವು ಮತ್ತೆ ತನ್ನ ವೈಭವದ ದಿನಗಳಿಗೆ ಮರಳುವ ಲಕ್ಷಣಗಳು ಈಗ ಕಾಣುತ್ತಿವೆ. ಉತ್ತಮ ಆಟಗಾರರು ತಂಡದಲ್ಲಿದ್ದಾರೆ. ಟೆಸ್ಟ್ ಮತ್ತು ಅಂತರರಾಷ್ಟ್ರೀಯ ಏಕದಿನ  ಪಂದ್ಯಗಳಲ್ಲಿ ಮತ್ತೆ ಉತ್ತಮ ಪ್ರದರ್ಶನ ನೀಡುವುದು ಖಚಿತ’–

ಈ ಮಾತುಗಳನ್ನು ಹೇಳುವಾಗ ಭಾರತೀಯ ಮೂಲದ ವೆಸ್ಟ್ ಇಂಡೀಸ್ ‘ಎ’ ತಂಡದ  ಆಟಗಾರ ವೀರಸ್ವಾಮಿ ಪೆರುಮಾಳ್ ಕಂಗಳಲ್ಲಿ ಆತ್ಮವಿಶ್ವಾಸ ಹೊಳೆಯುತ್ತಿತ್ತು.

2012ರಲ್ಲಿ ವಿಂಡೀಸ್ ಪರವಾಗಿ ಎರಡು ಟೆಸ್ಟ್ ಆಡುವ ಮೂಲಕ ಭಾರತೀಯ ಮೂಲದ ಕೆಲ ಆಟಗಾರರು ವಿಂಡೀಸ್ ತಂಡಕ್ಕೆ ಆಡುವ ಪರಂಪರೆಯ ಮತ್ತೊಂದು ಕೊಂಡಿ­ಯಾ­ದರು. 1951ರಲ್ಲಿ ಸೋನಿ ರಾಮ್ದಿನ್ ಮೊದಲ ಬಾರಿಗೆ ವಿಂಡೀಸ್ ತಂಡದಲ್ಲಿ ಆಡಿದ ಭಾರತೀಯ ಮೂಲದ ವ್ಯಕ್ತಿ. ಅವರ ನಂತರ ರೋಹನ್ ಕನಾಯ್,  ಇನ್ಶಾನ ಅಲಿ, ಶಿವನಾರಾಯಣ ಚಂದ್ರಪಾಲ್, ರಾಜೀಂ­ದರ್ ಧನರಾಜ್, ದೀನಾ­ನಾಥ್ ರಾಮನಾರಾಯಣ್, ಸೂರಜ್ ರಘುನಾಥ್, ರಾಮನರೇಶ್ ಸರವಣ್, ನರಸಿಂಗ್ ದಿಯೋನಾರಾಯಣ್, ದಿನೇಶ ರಾಮ್ದಿನ್, ಸುನಿಲ್ ನಾರಾಯಣ್ ಅವರ ಸಾಲಿಗೆ ಈಗ ವೀರಸ್ವಾಮಿ ಸೇರಿದ್ದಾರೆ.  

ಬೆಂಗಳೂರಿನಲ್ಲಿ ಕಳೆದ ಗುರುವಾರ  ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಬಳಗದ  ಮೂರು ವಿಕೆಟ್ ಪಡೆದು ಸಂಭ್ರಮಿಸಿದ್ದ ಅವರು ಈ ವಿಭಾಗದಲ್ಲಿ 50 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಸೋಮವಾರ  ಅಭ್ಯಾಸದ ನಂತರ ‘ಪ್ರಜಾವಾಣಿ’­ಯೊಂದಿಗೆ  ಮಾತನಾಡಿದರು.

‘ನನ್ನ ತಂದೆ ಉದ್ಯೋಗಕ್ಕಾಗಿ ವಿಂಡೀಸ್‌ನ ಗಯಾನದಲ್ಲಿ ನೆಲೆಸಿದರು. ನಾನು ಅಲ್ಲಿಯೇ ಜನಿಸಿದೆ. 10ನೇ ವಯಸ್ಸಿನಲ್ಲಿ ಡೇನಿಯಲ್ ವೆಟೋರಿ ಆಟ ನೋಡಿ ಕ್ರಿಕೆಟ್‌ನಲ್ಲಿ  ಆಸಕ್ತಿ ಬೆಳೆಸಿ­ಕೊಂಡೆ. 2007ರಿಂದ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದೆ.  ಗಯಾನ ತಂಡದಲ್ಲಿ ಸ್ಥಾನ ಪಡೆದುಕೊಂಡೆ. 2012ರಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ಎರಡು ಟೆಸ್ಟ್ ಮತ್ತು 4 ಏಕದಿನ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತು. ಸ್ಪಿನ್ನರ್‌ ಸುನಿಲ್ ನಾರಾಯಣ್ ಅವರೊಂದಿಗೆ ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದೆ’ ಎಂದರು.

‘ವಿಂಡೀಸ್ ತಂಡದಲ್ಲಿ ನನಗೆ ಬಹಳಷ್ಟು ಪ್ರೋತ್ಸಾಹ ಸಿಗುತ್ತಿದೆ. ತಂಡದ ಆಟಗಾರರು ಮತ್ತು ಕೋಚ್ ಉತ್ತಮ ಮಾರ್ಗದರ್ಶನ
ಕೊಡು­ತ್ತಿದ್ದಾರೆ‘ ಎಂದು ಹೇಳುವ ವೀರಸ್ವಾಮಿ, ‘ಭಾರತ ತಂಡದ ನಾಯಕ ಮಹೇಂದ್ರ­ಸಿಂಗ್ ದೋನಿಯ ಆಟ ಮತ್ತು ನಾಯಕತ್ವ ಚೆನ್ನಾಗಿದೆ. ಎಲ್ಲ ಯುವ ಆಟಗಾರರಿಗೆ ಅವರ ತಾಳ್ಮೆ ಮತ್ತು ಸ್ನೇಹಮಯ ಗುಣವು ಮಾದರಿ’ ಎಂದು  ಅಭಿಮಾನದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT