ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ಬೃಹತ್ ಮೊತ್ತಕ್ಕೆ ರಸೂಲ್ ಅಡ್ಡಿ

ಕ್ರಿಕೆಟ್‌: ಶತಕ ವಂಚಿತ ವೆಸ್ಟ್‌ ಇಂಡೀಸ್‌ ತಂಡದ ಕ್ರೆಗ್–ಕರ್ಕ್
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಬ್ಯಾಟ್ಸ್‌ಮನ್‌ಗಳ ಆಡುಂಬೊಲ­ವಾಗಿರುವ ಗಂಗೋತ್ರಿ ಗ್ಲೇಡ್ಸ್ ಅಂಗಳದಲ್ಲಿ ಬುಧವಾರ ವೆಸ್ಟ್ ಇಂಡೀಸ್ ‘ಎ‘ ತಂಡದ ಬೃಹತ್ ಮೊತ್ತ ಗಳಿಸುವ ಹಾದಿಯಲ್ಲಿ ‘ಕಾಶ್ಮೀರದ ಕುವರ’ ಪರ್ವೇಜ್ ರಸೂಲ್ ಅಡ್ಡಗಾಲು ಹಾಕಿದರು!

‘ಎ‘ ಟೆಸ್ಟ್ ಪಂದ್ಯದ ಮೊದಲ ದಿನ ಶತಕವಂಚಿತರಾದ ಪ್ರವಾಸಿ ಬಳಗದ ಆರಂಭಿಕ ಬ್ಯಾಟ್ಸ್ ಮನ್ ಕ್ರೇಗ್ ಬ್ರೆತ್ ವೇಟ್ ಮತ್ತು ನಾಯಕ ಕರ್ಕ್ ಎಡ್ವರ್ಡ್ಸ್ ಹಾಕಿದ ಬುನಾದಿ ಮೇಲೆ ದೊಡ್ಡ ಮೊತ್ತ ಕಟ್ಟಲು  ನಂತರದ ಬ್ಯಾಟ್ಸ್ ಮನ್ ಗಳಿಗೆ ಸಾಧ್ಯವಾಗಲಿಲ್ಲ.

ಆದ್ದರಿಂದ ವಿಂಡೀಸ್ ‘ಎ‘ ತಂಡವು ದಿನದಾಟದ ಕೊನೆಗೆ 90 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.  ಅಸದ್ ಫುದದಿನ್ (ಬ್ಯಾಟಿಂಗ್ 4, 85ನಿ, 65ಎಸೆತ) ಮತ್ತು ಶಡ್ವಿಕ್ ವಾಲ್ಟನ್ (ಬ್ಯಾಟಿಂಗ್ 26, 32ಎಸೆತ, 33ನಿ, 4ಬೌಂಡರಿ, 1ಸಿಕ್ಸರ್) ಗುರುವಾರಕ್ಕೆ ತಮ್ಮ ಆಟ ಕಾಯ್ದಿಟ್ಟುಕೊಂಡಿದ್ದಾರೆ.  ಚಹಾ ವಿರಾಮದ ನಂತರ ತಮ್ಮ ಕೈಚಳಕ ತೋರಿದ ರಸೂಲ್ (27–10–60–2)  ಆತಿಥೇಯ ಬಳಗಕ್ಕೆ ಸಮಾಧಾನ ಮೂಡಿಸಿದರು.

ತಲೆಕೆಳಗಾದ ಲೆಕ್ಕಾಚಾರ: ನಾಯಕ ಚೇತೇಶ್ವರ ಪೂಜಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದು­ಕೊಂ­ಡಿದ್ದು, ದಿನದ ಮೊದಲ ಎರಡು ಅವಧಿಯಲ್ಲಿ ತುಟ್ಟಿ­ಯಾ­­­ಯಿತು. ಮೈಸೂರು ಅಂಗಳವು ಮಧ್ಯಮ­ವೇಗಿ­ಗಳಿಗೆ ಸಹಕಾರಿ ಎಂಬ ನಂಬಿ­ಕೆ­ಯಿಂದ ಮಾಡಿದ ನಿರ್ಧಾರ ಕೈಕೊಟ್ಟಿತು.

ದಿನದ ಮೂರನೇ ಓವರ್ ನಲ್ಲಿ ಮಧ್ಯಮ ವೇಗಿ ಮೊಹಮ್ಮದ್ ಶಮಿ ಅಪಾಯಕಾರಿ ಬಾ್ಯಟ್ಸ್ ಮನ್  ಕಿರನ್ ಪೊವೆಲ್ ಅವರನ್ನು ಎಲ್ ಬಿಡಬ್ಲು್ಯ ಬಲೆಗೆ ಬೀಳಿಸಿದಾಗ ಆತಿಥೇಯರ ಬಳಗದಲ್ಲಿ ಚಿಮ್ಮಿದ ಉತ್ಸಾಹಕ್ಕೆ ಬ್ರೆತ್ ವೆಟ್ (92; 215ಎಸೆತ, 286ನಿ, 12ಬೌಂಡರಿ) ಮತ್ತು  ಎಡ್ವರ್ಡ್ಸ್ (91; 162ಎಸೆತ, 234ನಿ, 11ಬೌಂಡರಿ, 1ಸಿಕ್ಸರ್) ತಣ್ಣೀರು ಸುರಿದರು.

ಅದರಲ್ಲೂ ಅಂತರರಾಷ್ಟ್ರೀಯ ಏಕ­ದಿನ ಪಂದ್ಯ ಆಡಿದ ಅನುಭವಿ ಅಶೋಕ ದಿಂಡಾ ಮತ್ತು ಸ್ಪಿನ್ನರ್  ಪರ್ವೇಜ್ ರಸೂಲ್ ದಂಡನೆಗೆ ಒಳಗಾದರು.

ಊಟದ ವಿರಾಮಕ್ಕೆ 27 ಓವರು­ಗಳಲ್ಲಿ 58 ರನ್ ಗಳಿಸಿದ ಜೋಡಿಯು, ನಂತರದ ಅವಧಿಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಅದರಲ್ಲೂ ನಾಯಕ­ನಿಗೆ ತಕ್ಕ ಆಟ ಪ್ರದರ್ಶಿಸಿದ ಎಡ್ವರ್ಡ್ 32ನೇ ಓವರ್ ನಲ್ಲಿ ರಸೂಲ್ ಎಸೆತ­ವನ್ನು  ಸಿಕ್ಸರ್ ಗೆ ಎತ್ತಿದರು. ಆ ಚೆಂಡು ‘ಮಾಧ್ಯಮ ಬಾಕ್ಸ್‘ ನ ಮುಂದಿನ ಸಾಲಿನ ಟೇಬಲ್ ಗೆ ಅಪ್ಪಳಿಸಿತು. ಈ ಅವಧಿಯಲ್ಲಿ ಅವರು 9 ಬೌಂಡರಿ ಬಾರಿಸಿದರು. ಇನ್ನೊಂದೆಡೆ ನಿಧಾನವಾಗಿ ಆಡುತ್ತಿದ್ದ ಕ್ರೇಗ್ ಆರು ಬಾರಿ ಚೆಂಡನ್ನು ಬೌಂಡರಿಲೈನ್ ದಾಟಿಸಿದರು. ಕರ್ಕ್ ಮೊದಲು ಅರ್ಧಶತಕ ಪೂರೈಸಿದ, ಇಪ್ಪತ್ತು ನಿಮಿಷಗಳ ನಂತರ ಕ್ರೇಗ್ 50ರ ಗಡಿ ಮುಟ್ಟಿದರು. ಎರಡನೇ ಅವಧಿ­ಯಲ್ಲಿ 30 ಓವರುಗಳಲ್ಲಿ 115 ರನ್ನು­ಗಳನ್ನು ಸೇರಿಸಿಬಿಟ್ಟರು. 2ನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರು ಗಳಿಸಿದ 172 ರನ್ನುಗಳಿಂದ ಪ್ರವಾಸಿಗರು 350 ರನ್ನುಗಳ ಗಡಿ ದಾಟಿ ಬಿಡುವ ಲಕ್ಷಣಗಳು ಇದ್ದವು.

ಆರು ಬೌಲರ್‌ಗಳೂ ಇವರನ್ನು ನಿಯಂತ್ರಿಸಲು ಪರದಾಡಬೇಕಾಯಿತು. ಮೂವರು ಸ್ಲಿಪ್, ಪಾಯಿಂಟ್, ಗಲ್ಲಿ ಫೀಲ್ಡರ್ ಗಳನ್ನು ನಿಲ್ಲಿಸಿಕೊಂಡು ಬೌಲಿಂಗ್ ಮಾಡಿದರೂ ಬೌಂಡರಿ ತಡೆಯಲು ಸಾಧ್ಯವಾಗಲಿಲ್ಲ. ಸುಮಾರು ಎರಡು ಸಾವಿರ ಪ್ರೇಕ್ಷಕರ ಕಣ್ಮಣಿ ದಿಂಡಾ ವಿಕೆಟ್ ಸಿಗದೇ ಪರದಾಡಿದ್ದು ಅಲ್ಲದೇ, ನಾಲ್ಕು ನೋಬಾಲ್ ಎಸೆದರು. ಆದರೆ, ಚಹಾದ ನಂತರದ ಮೊದಲ ಓವರ್ ನಲ್ಲಿಯೇ  ಕೆರಿಬಿಯನ್ ಜೋಡಿಯ  ಆಟಕ್ಕೆ ಈಶ್ವರ್ ಪಾಂಡೆ ಪೂರ್ಣ­ವಿರಾಮ ಹಾಕಿದರು.  91 ರನ್ ಗಳಿಸಿ ಶತಕದತ್ತ ಸಾಗುತ್ತಿದ್ದ ಎಡ್ವರ್ಡ್ ಅವರ ಲೆಗ್ ಸ್ಟಂಪ್ ಎಗರಿಸಿದ ಪಾಂಡೆ, ತಮ್ಮ ನಾಯಕ ಪೂಜಾರ ಮುಖದಲ್ಲಿ ಮಂದಹಾಸ ಮೂಡಿಸಿದರು. ಬೆಂಗ­ಳೂ­ರಿನ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಕರ್ಕ್ ಮೈಸೂರಿನಲಿ್ಲ ನಿರಾಸೆಯಿಂದ ಪೆವಿಲಿಯನ್ ಗೆ ಮರಳಿದರು. 

ರಸೂಲ್ ಮಿಂಚು: ಮೊದಲ ಸ್ಪೆಲ್ ನಲ್ಲಿ ದಂಡನೆಗೆ ಒಳಗಾಗಿದ್ದ ರಸೂಲ್ ತಮ್ಮ ಎರಡನೇ ಸ್ಪೆಲ್ ನಲ್ಲಿ ಸೇಡು ತೀರಿಸಿಕೊಂಡರು. ತಂಡದ ಮೊತ್ತವನ್ನು 200ರ ಗಡಿ ದಾಟಿಸಿ, ತಮ್ಮ ಶತಕದತ್ತ ಧಾವಿಸುತ್ತಿದ್ದ ಕ್ರೆಗ್ ರಸೂಲ್ ಎಸೆದ ನಿಧಾನಗತಿಯ ಎಸೆತವನ್ನು ಆಡುವ ಪ್ರಯತ್ನದಲ್ಲಿ ವಿಕೆಟ್ ಕೀಪರ್ ಮೋಟ್ವಾನಿಗೆ ಕ್ಯಾಚಿತ್ತು ನಿರ್ಗಮಿಸಿದರು, ಪ್ರೇಕ್ಷಕರ ಗ್ಯಾಲರಿಯಲ್ಲಿ ಕೇಕೆ, ಸಿಳ್ಳೆಗಳು ಪ್ರತಿಧ್ವನಿಸಿದವು. ಇನ್ನೊಂದೆಡೆ ಬಿರುಸಿನ ಆಟವಾಡುತ್ತಿದ್ದ ನರಸಿಂಗ್ ದೇವ್‌ನಾರಾಯಣ್‌ ಅವರಿಗೂ ರಸೂಲ್ ಪೆವಿಲಿಯನ್ ಹಾದಿ ತೋರಿಸಿದರು. ಅವರು ನೇರವಾಗಿ ಹೊಡೆದ ಚೆಂಡನ್ನು ತಮ್ಮ ಎಡಬದಿಗೆ ಹಾರಿ ಹಿಡಿದ ರಸೂಲ್ ಸಂಭ್ರಮಿಸಿದರು.

ಸಾಂದರ್ಭಿಕ ಬೌಲರ್ ರಜತ್ ಪಲಿವಾಲ ಲಿಯೋನ್ ಜಾನ್ಸನ್ ಅವರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಮತ್ತೊಂದು ಯಶಸ್ಸು ತಂದಿತ್ತರು.
 

ಸ್ಕೋರ್ ವಿವರ

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 90 ಓವರುಗಳಲ್ಲಿ 5 ವಿಕೆಟ್‌ಗಳಿಗೆ 264
ಕ್ರೇಗ್ ಬೆ್ರತ್ ವೇಟ್ ಸಿ ಮೋಟ್ವಾನಿ ಬಿ ಪರ್ವೇಜ್ ರಸೂಲ್  92
ಕಿರನ್ ಪೊವೆಲ್ ಎಲ್ ಬಿಡಬ್ಲು್ಯ ಬಿ ಮೊಹಮ್ಮದ ಶಮಿ  00
ಕರ್ಕ್ ಎಡ್ವರ್ಡ್ಸ್ ಬಿ ಈಶ್ವರ್ ಪಾಂಡೆ  91
ನರಸಿಂಗ್ ದೇವ್‌ನಾರಾಯಣ್‌ ಸಿ ಮತ್ತು ಬಿ  ಪರ್ವೇಜ್ ರಸೂಲ್ 28
ಅಸದ್ ಫುದದಿನ್ ಬ್ಯಾಟಿಂಗ್  4
ಲಿಯೋನ್ ಜಾನ್ಸನ್ ಎಲ್ ಬಿಡಬ್ಲು್ಯ ಬಿ ರಜತ್ ಪಲಿವಾಲಾ  10
ಶಡ್ವಿಕ್ ವಾಲ್ಟನ್ ಬ್ಯಾಟಿಂಗ್  26

ಇತರೆ: 13 (ಬೈ 3, ಲೆಗ್ ಬೈ 6, ನೋಬಾಲ್ 4)
ವಿಕೆಟ್ ಪತನ: 1–3(ಪೊವೆಲ್ 2.2), 2–175 (ಎಡ್ವರ್ಡ್ಸ್ 57.5), 3–212(ಬ್ರೆತ್ ವೇಟ್ 68.2), 4–223 (ದೇವ್‌ನಾರಾಯಣ್‌ 72.5), 5–237 (ಜಾನ್ಸನ್ 80.2)

ಬೌಲಿಂಗ್  ವಿವರ: ಮೊಹಮ್ಮದ್ ಶಮಿ 16–2–54–1, ಈಶ್ವರ್ ಪಾಂಡೆ 19–5–53–1,  ಅಶೋಕ ದಿಂಡಾ 16–2–43–0 (ನೋಬಾಲ್ 4), ಪರ್ವೇಜ್ ರಸೂಲ್ 27–10–60–2, ರಜತ್ ಪಲಿವಾಲಾ 8–2–28–1,ಹರ್ಷದ್ ಖಡಿವಾಲೆ 4–0–17–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT