ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ಗೆ ಬಾಂಗ್ಲಾ ಸವಾಲು

Last Updated 3 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮಿರ್‌ಪುರ (ಪಿಟಿಐ): ಕ್ವಾರ್ಟರ್ ಫೈನಲ್ ಪ್ರವೇಶದ ಮೇಲೆ ಕಣ್ಣಿಟ್ಟಿರುವ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಪರಸ್ಪರ ಪೈಪೋಟಿ ನಡೆಸಲಿವೆ.

ಇವೆರಡು ತಂಡಗಳು ಇದೀಗ ಎರಡು ಪಂದ್ಯಗಳನ್ನಾಡಿದ್ದು, ತಲಾ ಎರಡು ಪಾಯಿಂಟ್ ಕಲೆಹಾಕಿವೆ. ‘ಬಿ’ ಗುಂಪಿನಲ್ಲಿ ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಹಾಲೆಂಡ್ ತಂಡಗಳು ಇವೆ. ಆದರೆ ಗುಂಪಿನಲ್ಲಿ ಇದೀಗ ಹಾಲೆಂಡ್ ಹೊರತುಪಡಿಸಿ ಉಳಿದ ಎಲ್ಲ ತಂಡಗಳಿಗೂ ಮುಂದಿನ ಹಂತ ಪ್ರವೇಶಿಸುವ ಅವಕಾಶ ಇದೆ. ಏಕೆಂದರೆ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಗೆಲುವು ಪಡೆದಿತ್ತು.

ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಪಡೆಯುವ ತಂಡಕ್ಕೆ ಕ್ವಾರ್ಟರ್ ಫೈನಲ್ ಪ್ರವೇಶದ ಹಾದಿ ಸುಗಮವಾಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತದ ಎದುರು ಸೋಲು ಅನುಭವಿಸಿದ್ದ ಬಾಂಗ್ಲಾದೇಶ ತಂಡ ತನ್ನ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು.

ಮತ್ತೊಂದೆಡೆ ವಿಂಡೀಸ್ ತಂಡ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕೈಯಲ್ಲಿ ನಿರಾಸೆ ಅನುಭವಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಪುಟಿದೆದ್ದು ನಿಂತು ಹಾಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು.

ಬಾಂಗ್ಲಾ ತಂಡ ತವರು ನೆಲದ ಪರಿಸ್ಥಿತಿಯ ಲಾಭವನ್ನು ಎತ್ತಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಮಾತ್ರವಲ್ಲ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನೆರೆಯಲಿರುವ ಸಾವಿರಾರು ಅಭಿಮಾನಿಗಳ ಬೆಂಬಲವೂ ಬಾಂಗ್ಲಾ ತಂಡದ ಬಲ ಹೆಚ್ಚಿಸಲಿದೆ.

ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾ ತನ್ನ ಸ್ಪಿನ್ನರ್‌ಗಳನ್ನು ನೆಚ್ಚಿಕೊಂಡು ಆಡಲಿಳಿಯಲಿದೆ. ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಈ ಸವಾಲನ್ನು ಹೇಗೆ ಸ್ವೀಕರಿಸುವರು ಎಂಬುದನ್ನು ನೋಡಬೇಕು. ಪ್ರಮುಖ ಸ್ಪಿನ್ನರ್ ಅಬ್ದುಲ್ ರಜಾಕ್ ಅವರು ಡರೆನ್ ಸಾಮಿ ನೇತೃತ್ವದ ತಂಡವನ್ನು ಕಾಡುವುದು ಖಚಿತ.

‘ಕಳೆದ ಕೆಲ ದಿನಗಳಲ್ಲಿ ನಾವು ಚೆನ್ನಾಗಿ ಅಭ್ಯಾಸ ನಡೆಸಿದ್ದೇವೆ. ವಿಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದೇವೆ’ ಎಂದು ರಜಾಕ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಮೊದಲ ಎರಡು ಪಂದ್ಯಗಳಲ್ಲಿ ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಿರಲಿಲ್ಲ. ಆದರೆ ಶುಕ್ರವಾರ ಸ್ಪಿನ್ನರ್‌ಗಳಿಗೆ ನೆರವು ಲಭಿಸಬಹುದು. ಹಾಗಾದಲ್ಲಿ ನಮಗೆ ವಿಂಡೀಸ್ ವಿರುದ್ಧ ಗೆಲುವು ಪಡೆಯುವ ಉತ್ತಮ ಅವಕಾಶವಿದೆ’ ಎಂದರು.
2009 ರಲ್ಲಿ ಏಕದಿನ ಸರಣಿಯಲ್ಲಿ ಇವೆರಡು ತಂಡಗಳು ಪರಸ್ಪರ ಪೈಪೋಟಿ ನಡೆಸಿದ್ದಾಗ ಬಾಂಗ್ಲಾ 3-0 ರಲ್ಲಿ ಗೆಲುವು ಪಡೆದಿತ್ತು. 

ತನಗೆ ಅಷ್ಟೊಂದು ಪರಿಚಿತವಲ್ಲದ ಪರಿಸ್ಥಿತಿಯಲ್ಲಿ ಸ್ಪಿನ್ ದಾಳಿಯನ್ನು ಎದುರಿಸುವುದು ವಿಂಡೀಸ್ ಮುಂದಿರುವ ದೊಡ್ಡ ಸವಾಲು. ‘ಪ್ರತಿ ಪಂದ್ಯವೂ ಸವಾಲಿನಿಂದ ಕೂಡಿರುತ್ತದೆ. ಬಾಂಗ್ಲಾದೇಶ ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸುವುದು ಸವಾಲು’ ಎಂದಿದ್ದಾರೆ ವಿಂಡೀಸ್ ಮ್ಯಾನೇಜರ್ ರಿಚಿ ರಿಚರ್ಡ್ಸನ್.

 ವೆಸ್ಟ್ ಇಂಡೀಸ್
ಡರೆನ್ ಸಾಮಿ (ನಾಯಕ), ಕ್ರಿಸ್ ಗೇಲ್, ಡರೆನ್ ಬ್ರಾವೊ, ಕೀರನ್ ಪೊಲಾರ್ಡ್, ರಾಮನರೇಶ್ ಸರವಣ್, ಡೆವೊನ್ ಸ್ಮಿತ್, ಡೆವೊನ್ ಥಾಮಸ್, ಸುಲೆಮಾನ್ ಬೆನ್, ನಿಕಿತಾ ಮಿಲ್ಲರ್, ಆಂಡ್ರೆ ರಸೆಲ್, ರವಿ ರಾಂಪಾಲ್, ಕೆಮರ್ ರೋಚ್, ಶಿವನಾರಾಯಣ ಚಂದ್ರಪಾಲ್, ದೇವೇಂದ್ರ ಬಿಶೂ, ಕಿರ್ಕ್ ಎಡ್ವರ್ಡ್ಸ್. 

 ಬಾಂಗ್ಲಾದೇಶ
ಶಕೀಬ್ ಅಲ್ ಹಸನ್ (ನಾಯಕ), ತಮೀಮ್ ಇಕ್ಬಾಲ್, ಇಮ್ರುಲ್ ಕಯೇಸ್, ಜುನೈದ್ ಸಿದ್ದೀಕಿ, ಶಹರ್ಯಾರ್ ನಫೀಸ್, ರಕೀಬುಲ್ ಹಸನ್, ಮೊಹಮ್ಮದ್ ಅಶ್ರಫುಲ್, ಮುಷ್ಫಿಕುರ್ ರಹೀಮ್, ನಯೀಮ್ ಇಸ್ಲಾಮ್, ಮೊಹಮ್ಮದ್ ಮಹಮೂದುಲ್ಲಾ, ಅಬ್ದುಲ್ ರಜಾಕ್, ರೂಬೆಲ್ ಹೊಸೇನ್, ಶಫೀಯುಲ್ ಇಸ್ಲಾಮ್, ನಜ್ಮುಲ್ ಹೊಸೇನ್, ಸುಹ್ರವದಿ ಶುವೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT