ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡ್ಸರ್ ಷರ್ಟನ್ ಹೋಟೆಲ್ ತೆರವಿಗೆ ಆದೇಶ

Last Updated 9 ಫೆಬ್ರುವರಿ 2011, 19:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರತಿಷ್ಠಿತ ‘ವಿಂಡ್ಸರ್ ಷರ್ಟನ್’ ಹೋಟೆಲ್ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಸಂಬಂಧಿತ ‘ವಿಶೇಷ ಅಧಿಕಾರಿ’ಗೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿರುವ ಜಾಗದಲ್ಲಿ ಇದರ ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ (ಅನಧಿಕೃತ ಕಟ್ಟಡಗಳ ತೆರವು) ಕಾಯ್ದೆಯ ವ್ಯಾಪ್ತಿಗೆ ಇದು ಒಳಪಡುವುದಾಗಿ ತಿಳಿಸಿರುವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರು ಮೂರು ತಿಂಗಳ ಒಳಗೆ ತೆರವು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.

ಜಾಗ ತೆರವುಗೊಳಿಸುವಂತೆ ಸಾರ್ವಜನಿಕ (ಅನಧಿಕೃತ ಕಟ್ಟಡಗಳ ತೆರವು) ಕಾಯ್ದೆಯ ಅಡಿ ನೇಮಕಗೊಂಡಿರುವ ‘ವಿಶೇಷ ಅಧಿಕಾರಿ’ ನೀಡಿರುವ ಷೋಕಾಸ್ ನೋಟಿಸ್ ಅನ್ನು ಪ್ರಶ್ನಿಸಿ ಹೋಟೆಲ್ ಮಾಲೀಕರಾದ ಐಟಿಸಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾ ಮಾಡಿದ್ದಾರೆ.

ಇದರಿಂದಾಗಿ ಆರು ವರ್ಷಗಳಿಂದ ವಕ್ಫ್ ಮಂಡಳಿ ಹಾಗೂ ಹೋಟೆಲ್ ಮಾಲೀಕರ ನಡುವೆ ಇದ್ದ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ತೆರವು ಪ್ರಕ್ರಿಯೆ ಮುಗಿಯುವವರೆಗೆ, ಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಂತೆ ಮಂಡಳಿಗೆ ಹೋಟೆಲ್ ನೀಡುತ್ತಿರುವ ಆರು ಲಕ್ಷ ರೂಪಾಯಿಗಳ ಮಾಸಿಕ ಬಾಡಿಗೆಯನ್ನು ಮುಂದುವರಿಸುವಂತೆ ನಿರ್ದೇಶಿಸಲಾಗಿದೆ.

ಪ್ರಕರಣದ ವಿವರ: ಸುಮಾರು 3.8 ಎಕರೆ ಜಾಗದಲ್ಲಿ ಇರುವ ಈ ಹೋಟೆಲ್ ಮೂಲತಃ ಆಗಾ ಅಲಿ ಅಸ್ಗರ್ ಎನ್ನುವವರಿಗೆ ಸೇರಿದ್ದು. ಅವರು ಇದನ್ನು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ನೀಡಿದ್ದರು. ಕಾಲ ಕ್ರಮೇಣ ಈ ಜಾಗವನ್ನು ‘ಮೊನಾರ್ಕ್ ಕಾರ್ಪೋರೇಷನ್’ಗೆ ಗುತ್ತಿಗೆಗೆ ನೀಡಲಾಗಿತ್ತು. ‘ಮೊನಾರ್ಕ್’ 1977ರಲ್ಲಿ ಐಟಿಸಿಗೆ ಗುತ್ತಿಗೆಗೆ ನೀಡಿದೆ.

ಆದರೆ ಕೆಲವೊಂದು ಕಾರಣಗಳಿಗೆ ‘ಮೊನಾರ್ಕ್’ಗೆ ನೀಡಲಾಗಿದ್ದ ಗುತ್ತಿಗೆಯನ್ನು ಮಂಡಳಿ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ, ಹೋಟೆಲ್ ತೆರವಿಗೆ ಷೋಕಾಸ್ ನೋಟಿಸ್ ನೀಡಲಾಗಿತ್ತು. ಈ ವಿವಾದ ಸುಪ್ರೀಂಕೋರ್ಟ್‌ವರೆಗೂ ಹೋಗಿ ಕೊನೆಗೆ ಪುನಃ ಹೈಕೋರ್ಟ್ ಮೆಟ್ಟಿಲೇರಿತ್ತು. ತಮಗೆ ವಕ್ಫ್ ಬೋರ್ಡ್‌ನ 1954ನೇ ಕಾಯ್ದೆ ಅಡಿ ಗುತ್ತಿಗೆ ನೀಡಿರುವ ಕಾರಣ, 1995ರ ಹೊಸ ಕಾಯ್ದೆ ಅನ್ವಯ ಜಮೀನು ತೆರವುಗೊಳಿಸಲು ಸಾಧ್ಯವಿಲ್ಲ ಎನ್ನುವುದು ಅರ್ಜಿದಾರರ ಮುಖ್ಯ ವಾದವಾಗಿತ್ತು.

ಅದರಂತೆ ಸಾರ್ವಜನಿಕ (ಅನಧಿಕೃತ ಕಟ್ಟಡಗಳ ತೆರವು) ಕಾಯ್ದೆಯ ಅಡಿ ತೆರವು ಮಾಡುವಂತೆ ಷೋಕಾಸ್ ನೋಟಿಸ್ ನೀಡಲಾಗಿದೆ. ಇದು ಸರಿಯಲ್ಲ ಎನ್ನುವುದೂ ಅದರ ವಾದವಾಗಿತ್ತು. ಆದರೆ ಈ ಯಾವ ವಾದವನ್ನೂ ನ್ಯಾಯಮೂರ್ತಿಗಳು ಮಾನ್ಯ ಮಾಡಲಿಲ್ಲ.

ಸ್ವಾಗತ: ಈ ತೀರ್ಪನ್ನು ವಕ್ಫ್ ಸಚಿವ ಡಾ. ಮುಮ್ತಾಜ್ ಅಲಿ ಖಾನ್ ಸ್ವಾಗತಿಸಿದ್ದಾರೆ.

ಈ ಆದೇಶದಿಂದ ಮುಂದೆ ಇರುವ ಸಾಧ್ಯತೆಗಳ ಬಗ್ಗೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಕ್ಫ್ ಮಂಡಳಿ ಹೋಟೆಲ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದಾಗಿದೆ ಅಥವಾ ಹೋಟೆಲ್ ಹಾಗೂ ಮಂಡಳಿ ನಡುವೆ ಹೊಸದಾಗಿ ಒಪ್ಪಂದ ಮಾಡಿಕೊಂಡು ಬರುವ ಲಾಭದ ಕೆಲ ಪಾಲನ್ನು ಮಂಡಳಿಗೆ ನೀಡುವಂತೆ ಸೂಚಿಸಬಹುದಾಗಿದೆ. ಇದರಿಂದ ಮುಸ್ಲಿಂ ಸಮುದಾಯದ ಏಳಿಗೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT