ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಕೆಲಸ ಇಲ್ಲ

Last Updated 5 ಜುಲೈ 2013, 5:24 IST
ಅಕ್ಷರ ಗಾತ್ರ

ಭದ್ರಾವತಿ: ಉಕ್ಕು ಮಾರುಕಟ್ಟೆಯಲ್ಲಿ  ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆ ಉತ್ಪಾದನೆಯಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ಊದು ಕುಲುಮೆ, ಎಸ್‌ಎಂಎಸ್, ಎಚ್‌ಟಿಎಸ್, ಫೋರ್ಜ್ ಪ್ಲಾಂಟ್‌ನಲ್ಲಿ ಒಂದಷ್ಟು ದಿನ ಮಟ್ಟಿಗೆ ಕೆಲಸ ಸ್ಥಗಿತವಾಗಿದೆ. ಸದ್ಯಕ್ಕೆ ಪಿಗ್‌ಐರನ್, ಸ್ಕ್ರಾಪ್ ವ್ಯವಹಾರ ನಡೆದಿದೆ.

ಕಾಯಂ ಕಾರ್ಮಿಕರ ಸಂಖ್ಯೆ ಸಹ ಗಣನೀಯ ಪ್ರಮಾಣದಲ್ಲಿ ಇಳಿಯುತ್ತಿದೆ. ಕಳೆದ ಡಿಸೆಂಬರ್‌ನಿಂದ ಜೂನ್ ಅಂತ್ಯದ ತನಕ 250 ಕ್ಕೂ ಅಧಿಕ ಮಂದಿ ನಿವೃತ್ತಿ ಹೊಂದಿದ್ದಾರೆ. ಈಗ ಇರುವ ಕಾರ್ಮಿಕರ ಸಂಖ್ಯೆ 650ರ ಆಸುಪಾಸಿನೊಳಗೆ ಇದೆ. 

ಹಾಲಿ 1,500ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಸ್ತುತ ಬದಲಾದ ಪರಿಸ್ಥಿತಿಯಲ್ಲಿ ಕಳೆದೆರಡು ತಿಂಗಳಿನಿಂದ 15 ದಿನಗಳ ಕಾಲ ಎಲ್ಲರಿಗೂ ಕೆಲಸ ನೀಡುವ ವ್ಯವಸ್ಥೆ ಪಾಲಿಸಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. 750 ಗುತ್ತಿಗೆ ಕಾರ್ಮಿಕರಿಗೆ ಯಾವುದೇ ಕೆಲಸ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜನರಲ್ ಫೌಂಡ್ರಿ, ಪ್ರೈಮರಿ ಮಿಲ್, ಬ್ಲಾಸ್ಟ್ ಫರ್ನೆಸ್...ಹೀಗೆ ಹಲವೆಡೆ ಇವರ ಅವಶ್ಯಕತೆ ಸದ್ಯಕ್ಕಿಲ್ಲ ಎಂಬ ಆದೇಶವನ್ನು ಆಡಳಿತ ಮಂಡಳಿ ಹೊರಡಿಸಿದೆ.

ಹೀಗಾಗಿ, ಮಾನವ ಸಂಪನ್ಮೂಲ ಏಜೆನ್ಸಿ ಪಡೆದ ಗುತ್ತಿಗೆದಾರರು ಕೆಲಸಕ್ಕೆ ಬಾರದಂತೆ ಮೌಖಿಕ ತಿಳಿವಳಿಕೆ ನೀಡಿದ್ದಾರೆ. ಇದರಿಂದಾಗಿ ಮುಂದಿನ ಹಲವು ತಿಂಗಳು ಅರ್ಧಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಬೇರೆ ಉದ್ಯೋಗ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

ಕಚೇರಿಯಲ್ಲಿ ಕೆಲಸ ಮಾಡುವ 150ಕ್ಕೂ ಅಧಿಕ ಮಂದಿ ನೌಕರರಿಗೆ ಸದ್ಯಕ್ಕೆ ಇದರ ಬಿಸಿ ತಟ್ಟಿಲ್ಲ. ಆದರೆ, ಕಾಲಾನಂತರ ತೊಂದರೆ ತಪ್ಪಿದ್ದಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಉದ್ಯೋಗಿಯೊಬ್ಬರು.

ಉಕ್ಕಿಗೆ ಸೂಕ್ತ ಮಾರುಕಟ್ಟೆ ಕೊರತೆ ಎದುರಾಗಿದ್ದರೆ, ಮತ್ತೊಂದೆಡೆ ಕಚ್ಛಾ ಸಾಮಗ್ರಿಗಳ ಶೇಖರಣೆ ಪ್ರಮಾಣ ಸಹ ಸಾಕಷ್ಟು ಕುಸಿತದಲ್ಲಿದೆ ಎನ್ನುತ್ತಾರೆ ಗುತ್ತಿಗೆ ಕಾರ್ಮಿಕರು.

ಈ ಎಲ್ಲಾ ಬೆಳವಣಿಗೆ ಕಾರಣ ಹತ್ತಾರು ವರ್ಷದಿಂದ ಇದನ್ನೇ ನಂಬಿ ಬದುಕಿದ್ದ ಕೆಲವು ಗುತ್ತಿಗೆ ಕಾರ್ಮಿಕರು ಈಗ ತಮ್ಮ ಕೌಶಲ ಬೇರೆಡೆ ಪ್ರದರ್ಶಿಸುವ ಸ್ಥಿತಿ ಇದೆ. ಆದರೆ, ಅವರ ಕೌಶಲದ ವೃತ್ತಿಗೆ ತಕ್ಕಂತ ಫೌಂಡ್ರಿಗಳ ಕೊರತೆ ಇಲ್ಲಿ ಇರುವುದರಿಂದ ವಲಸೆ ಅನಿವಾರ್ಯವಾರ್ಯ ಆಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT