ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿರಣ ಪರಿಣಾಮ ಅಂದಾಜು ಅಸಾಧ್ಯ

Last Updated 24 ಏಪ್ರಿಲ್ 2011, 9:40 IST
ಅಕ್ಷರ ಗಾತ್ರ

ಶಿರಸಿ: ಅಣು ಸ್ಥಾವರದಿಂದ ಹೊರಸೂಸುವ ವಿಕಿರಣದ ವಿಲಕ್ಷಣ ಪರಿಣಾಮ ಅಂದಾಜಿಸಲು ಸಾಧ್ಯವಿಲ್ಲ ಎಂದು ವಿಜ್ಞಾನ ಬರಹಗಾರ, ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು. ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೈಗಾ ಅಣುಸ್ಥಾವರ ಸಂಬಂಧಿ ನಾಗರಿಕ ಸಮಿತಿ ಹಕ್ಕೊತ್ತಾಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಣುಸ್ಥಾವರಗಳ ಆಯಸ್ಸು ನೂರಿನ್ನೂರು ವರ್ಷಗಳಾದರೆ ಅದರಿಂದ ಹೊರ ಸೂಸುವ ವಿಕಿರಣ 15ಲಕ್ಷ ವರ್ಷಗಳಷ್ಟು ಸುದೀರ್ಘ ದುಷ್ಪರಿಣಾಮ ಉಂಟುಮಾಡುತ್ತದೆ. ಪರಮಾಣುವಿನ ಭಯಂಕರ ಸ್ವರೂಪದಿಂದ ಕ್ಯಾನ್ಸರ್, ವಿಕಲಾಂಗ ಮಕ್ಕಳು, ಇತ್ಯಾದಿ ಆರೋಗ್ಯ ಸಂಬಂಧಿ ಸಮಸ್ಯೆ ಉಂಟಾಗುತ್ತವೆ ಎಂದರು. ಕೈಗಾ ಅಣುಸ್ಥಾವರ ಸುತ್ತಮುತ್ತ ವಿಕಿರಣ ಪ್ರಮಾಣ ಪತ್ತೆ ಮಾಡುವ ಡೋಸಿಮೀಟರ್ ಆಸ್ಪತ್ರೆಗಳಲ್ಲಿ ಸಹ ಲಭ್ಯವಿಲ್ಲ.
ಜನಪ್ರತಿನಿಧಿಗಳು, ಆಸ್ಪತ್ರೆ, ಪ್ರಮುಖ ಕೇಂದ್ರಗಳಲ್ಲಿಯಾದರೂ ಡೋಸಿಮೀಟರ್ ಸಿಗುವಂತಾಗಬೇಕು. ಜರ್ಮನಿ ನಿಧಾನವಾಗಿ ಅಣುಸ್ಥಾವರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿ ಸಹ ಇಂತಹ ದಿಟ್ಟಹೆಜ್ಜೆ ಇಡಬೇಕಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸ್ವರ್ಣವಲ್ಲೆ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಜಪಾನ್ ಸೇರಿದಂತೆ ವಿವಿಧೆಡೆ ಅಣುಸ್ಥಾವರಗಳ ಸೋರಿಕೆ ಪ್ರಕರಣ ಇಡೀ ಜಗತ್ತು ಅಣುಸ್ಥಾವರಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚಿಂತನೆಗೆ ಮಾಡುವ ಕಾಲ ಬಂದಿದೆ ಎಂದರು.

ಕೈಗಾ ಅಣುಸ್ಥಾವರ ಕುರಿತಂತೆ ಸ್ಥಳೀಯರನ್ನು ಒಳಗೊಂಡ ನಾಗರಿಕ ಸುರಕ್ಷಾ ಸಮಿತಿ ರಚನೆಯಾಗಬೇಕು, ವಿಸ್ತರಣಾ ಘಟಕಗಳನ್ನು ತಡೆಯಬೇಕು ಎಂಬ ಕುರಿತಂತೆ ಬಲವಾದ ಹೋರಾಟ ಅಗತ್ಯವಿದೆ ಎಂದು ಹೇಳಿದರು.

ರಾಜ್ಯ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಮಾತನಾಡಿ ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಟ್ರಿಷಿಯಂಗೆ ಒಂದು ಲಕ್ಷ ಡಾಲರ್ ಬೆಲೆ ಇದ್ದು, ಕೈಗಾದಲ್ಲಿ ಟ್ರಿಷಿಯಂ ಕಳ್ಳ ಸಾಗಣೆ ಮಾಡುತ್ತಿಲ್ಲವೆಂದು ಹೇಗೆ ಹೇಳುತ್ತೀರಿ. ಟ್ರಿಷಿಯಂ ನೀರಿನಲ್ಲಿ ಬೆರಕೆಯಾದ ಪ್ರಕರಣದ ತನಿಖಾ ವರದಿ ಬಹಿರಂಗಗೊಳಿಸಿದರೆ ಈ ಸತ್ಯ ಹೊರಬೀಳುತ್ತದೆ’ ಎಂದರು.

ಶಕ್ತಿ ತಜ್ಞ, ನಿವೃತ್ತ ಅಧಿಕಾರಿ ಶಂಕರ ಶರ್ಮಾ, ದೇಶಕ್ಕೆ ಅಣು ವಿದ್ಯುತ್ ಸ್ಥಾವರ ಅವಶ್ಯವೂ ಅಲ್ಲ; ಅನಿವಾರ್ಯವೂ ಅಲ್ಲ ಎಂದರು. ಅಣು ವಿದ್ಯುತ್ ಸ್ಥಾವರದಿಂದ ಸಮಾಜಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ.

ಪ್ರಸ್ತುತ ದೇಶದಲ್ಲಿ ಅಣು ವಿದ್ಯುತ್ ಸ್ಥಾವರದಿಂದ 4700ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅಣು ವಿದ್ಯುತ್ ಇಲಾಖೆ 2050ರ ವೇಳೆಗೆ 2.75ಲಕ್ಷ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಿದೆ. ವಿದ್ಯುತ್ ಸಾಗಾಟದಲ್ಲಿ ಶೇ 28ರಷ್ಟು ಸೋರಿಕೆಯಾಗುತ್ತಿದ್ದು, ಶೇ 10ರಷ್ಟು ಸೋರಿಕೆ ಉಳಿಸಿಕೊಂಡರೆ ವಿದ್ಯುತ್ ಬೇಡಿಕೆ ನೀಗಿಸಿಕೊಳ್ಳಲು ಸಾಧ್ಯವಿದೆ ಎಂದರು.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ, ಕೈಗಾ ದುಷ್ಪರಿಣಾಮ ತಡೆಯುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಯಬೇಕು ಎಂದರು. ಹೊನ್ನಾವರ ಸ್ನೇಹಕುಂಜದ ಎಂ.ಆರ್. ಹೆಗಡೆ, ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಉಪಾಧ್ಯಕ್ಷೆ ವಾಸಂತಿ ಹೆಗಡೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಡಿ. ಹೆಗಡೆ, ಶೋಭಾ ನಾಯ್ಕ, ಉಷಾ ಹೆಗಡೆ,  ನಗರಸಭೆ ಅಧ್ಯಕ್ಷ ರವಿ ಚಂದಾವರ, ಉಮೇಶ ಭಾಗ್ವತ, ಶಾಂತಾರಾಮ ಸಿದ್ಧಿ ಉಪಸ್ಥಿತರಿದ್ದರು. ಗಣಪತಿ ಬಿಸಲಕೊಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT