ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿಲೀಕ್ಸ್ ಬಹಿರಂಗ: ಮುಜುಗರದ ನೆರಳಿನಲ್ಲಿ ಕಾಂಗ್ರೆಸ್ ಮಹಾಧಿವೇಶನ

Last Updated 19 ಡಿಸೆಂಬರ್ 2010, 10:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಲವು ಹಗರಣಗಳು ಮತ್ತು ವಿಕಿಲೀಕ್ಸ್ ಬಹಿರಂಗಪಡಿಸಿದ ಮಾಹಿತಿಗಳು ಯುಪಿಎ ಸರ್ಕಾರಕ್ಕೆ ಭಾರಿ ಮುಜುಗರವನ್ನು ತಂದಿತ್ತಿರುವಂತೆಯೇ, ವಿರೋಧ ಪಕ್ಷಗಳು ತಮ್ಮ ಖಡ್ಗಗಳನ್ನು ಮತ್ತಷ್ಟು ಝಳಪಿಸತೊಡಗಿವೆ. ಇದರಿಂದ ಪಾರಾಗುವ ದಾರಿಗಳನ್ನು ಕಂಡುಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷದ ಎರಡು ದಿನಗಳ ಮಹಾ ಅಧಿವೇಶನ ಭಾನುವಾರದಿಂದ ಇಲ್ಲಿ ಆರಂಭವಾಗಲಿದೆ.

‘ಕಾಂಗ್ರೆಸ್ ಪಕ್ಷದ 125 ವರ್ಷಗಳ ಅರ್ಪಣೆ ಮತ್ತು ಸೇವೆ’ ಎಂಬ ಆಶಯದೊಂದಿಗೆ ಈ ಸಭೆ ನಡೆಯಲಿದ್ದರೂ, ಇಷ್ಟು ವರ್ಷದಲ್ಲಿ ಕಂಡರಿಯದಂತಹ ವಿವಾದಕ್ಕೆ ಪಕ್ಷ ಇಂದು ಸಿಕ್ಕಿರುವುದರಿಂದ ಈ ವಿವಾದಗಳಿಂದ ಪಾರಾಗುವ ಬಗೆಯನ್ನು ಚಿಂತಿಸುವುದೇ ಈ ಮಹಾ ಅಧಿವೇಶನದ ಪ್ರಮುಖ ಉದ್ದೇಶವಾಗಲಿದೆ. ಟೆಲಿಕಾಂ ಹಗರಣ, ಕಾಮನ್ವೆಲ್ತ್ ಅಕ್ರಮ, ರಾಡಿಯಾ ದೂರವಾಣಿ ಸಂಭಾಷಣೆ, ರಾಹುಲ್ ಗಾಂಧಿ ಹಿಂದೂ ಸಂಘಟನೆಗಳ ಬಗ್ಗೆ ಅಮೆರಿಕದ ರಾಯಭಾರಿ ಜತೆಗೆ ಆಡಿದ ಮಾತುಗಳು ಸಹಿತ ಇತರ ವಿವಾದಗಳು, ಹಗರಣಗಳಿಂದ ಪಕ್ಷದ ಮಾನ ಕಾಪಾಡುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುವ ಸಾಧ್ಯತೆ ಇದೆ.

ಇದರ ಜತೆಗೆ ಬಿಹಾರದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಪಕ್ಷಕ್ಕಾದ ಮುಖಭಂಗದ ಬಗ್ಗೆ ಆತ್ಮಾವಲೋಕನ, ಮುಂದಿನ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ನಡೆಯಲಿರುವ ಚುನಾವಣೆಗಳಿಗೆ ಪಕ್ಷ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಸಭೆಯಲ್ಲಿ ವಿವರ ನೀಡುವ ಸಾಧ್ಯತೆ ಇದೆ.

ಕಾಂಗ್ರೆಸ್ ಪಕ್ಷದ ಶತಮಾನೋತ್ಸವ ಕಾರ್ಯಕ್ರಮ 1985ರಲ್ಲಿ ಮುಂಬೈಯಲ್ಲಿ ನಡೆದಿದ್ದಾಗ ರಾಜೀವ್‌ಗಾಂಧಿ ಅವರು ಮಧ್ಯವರ್ತಿಗಳ ವಿರುದ್ಧ ಹರಿಯಾಯ್ದಿದ್ದರು. ಆದರೆ ಅದಾದ ಕೇವಲ 25 ವರ್ಷಗಳಲ್ಲಿ ಅದೇ ಮಧ್ಯವರ್ತಿಗಳ ಕಾಟದಿಂದ ಪಕ್ಷ ಎದುರಿಸಿರುವ ತೀವ್ರ ಮುಜುಗರದ ಬಗ್ಗೆ ಪಕ್ಷ ಗಂಭೀರವಾಗಿ ಸಮಾಲೋಚನೆ ನಡೆಸುವಂತಾಗಿದೆ.

ಮುಗಿದ ಅಧ್ಯಾಯ:  ಹಿಂದೂ ತೀವ್ರಗಾಮಿ ಸಂಘಟನೆಗಳು ಭಾರತಕ್ಕೆ ಎಲ್‌ಇಟಿಗಿಂತ ಹೆಚ್ಚು ಅಪಾಯಕಾರಿ ಭಯೋತ್ಪಾದಕ ಸಂಘಟನೆಗಳು ಎಂಬ ರಾಹುಲ್ ಗಾಂಧಿ ಅವರು ಹೇಳಿಕೆಯಿಂದ ಉಂಟಾಗಿರುವ ವಿವಾದ ಮುಗಿದ ಅಧ್ಯಾಯ ಎಂಬ ನಿಲುವನ್ನು ಪಕ್ಷವು ಮಹಾ ಅಧಿವೇಶನಕ್ಕೆ ಮೊದಲು ತೆಗೆದುಕೊಂಡಿದೆ. ಅಮೆರಿಕದ ರಾಜತಾಂತ್ರಿಕರೊಂದಿಗೆ ನಡೆಸಿದ ಮಾತುಕತೆಯ ಗೋಪ್ಯ ದಾಖಲೆಗಳಲ್ಲಿ ವಿಶ್ಲೇಷಣೆಗಳು, ವಿವರಣೆಗಳು ಸೇರಿರುವ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT