ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಕೆ.ಸಿಂಗ್ ಪತ್ರ ಸೋರಿಕೆ ಪ್ರಕರಣ : ಹಿರಿಯ ಮಹಿಳಾ ಅಧಿಕಾರಿ ತಪ್ಪಿತಸ್ಥೆ?

Last Updated 13 ಮೇ 2012, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಸೇನಾಪಡೆಯ ದುಃಸ್ಥಿತಿ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿದ್ದ ಪತ್ರ ಸೋರಿಕೆ ಪ್ರಕರಣದಲ್ಲಿ, ಸಂಪುಟ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯೊಬ್ಬರು ತಪ್ಪಿತಸ್ಥರು ಎಂಬುದು ಗೊತ್ತಾಗಿದೆ ಎಂದು ಉನ್ನತ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ಈ ಪ್ರಕರಣದಲ್ಲಿ ಕೆಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸಂಪುಟ ಸಚಿವಾಲಯದ ಅಡಿ ಬರುವ ಗುಪ್ತಚರ ಸಂಸ್ಥೆಗಳ ಉಸ್ತುವಾರಿಯಾಗಿದ್ದ ಭಾರತೀಯ ಆರ್ಥಿಕ ಸೇವೆಗೆ (ಐಇಎಸ್) ಸೇರಿದ ಮಹಿಳಾ ಅಧಿಕಾರಿಯೊಬ್ಬರನ್ನು ಇದೀಗ ವಿಚಾರಣೆಗೆ ಒಳಪಡಿಸಲಾಗಿದೆ. ಈ ಅಧಿಕಾರಿ ತಮ್ಮ ಮಾತೃಸಂಸ್ಥೆಗೆ ಮರಳಿದ್ದಾರೆ. ಇಂಥ ಸೂಕ್ಷ್ಮ ದಾಖಲೆಯನ್ನು ಬಹಿರಂಗಪಡಿಸಿದ್ದಕ್ಕೆ ಅವರ ವಿರುದ್ಧ ಹೆಚ್ಚಿನ ಕ್ರಮ ಜರುಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಂಪುಟ ಸಚಿವಾಲಯದ ಹಿರಿಯ ಅಧಿಕಾರಿಯಿಂದ ಈ ಪತ್ರ ಸೋರಿಕೆಯಾಗಿದೆ ಎಂಬ ವರದಿಯನ್ನು ಸರ್ಕಾರ ಶನಿವಾರ ರಾತ್ರಿ ತಳ್ಳಿಹಾಕಿದೆ. ಇಂತಹ ವರದಿಗಳು  ನಿರಾಧಾರ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಸೇನಾಪಡೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ತೀವ್ರ ಕೊರತೆ ಇದೆ ಎಂದು ವಿ.ಕೆ.ಸಿಂಗ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದರು.

 ಈ ಪತ್ರ ಸೋರಿಕೆಯಾಗಿದ್ದೇ ತಡ ಸಂಸತ್‌ನ ಉಭಯ ಸದನಗಳಲ್ಲಿಯೂ ಇದು ತೀವ್ರ ಕೋಲಾಹಲವನ್ನುಂಟು ಮಾಡಿತ್ತು. ಅಲ್ಲದೇ ಕೆಲವು ಪಕ್ಷಗಳು ಸೇನಾಪಡೆ ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸುವಂತೆಯೂ ಪಟ್ಟು ಹಿಡಿದಿದ್ದವು. ಈ ಘಟನೆಗೆ ಪ್ರತಿಕ್ರಿಯಿಸಿದ್ದ ವಿ.ಕೆ.ಸಿಂಗ್, `ಇದೊಂದು ರಾಷ್ಟ್ರದ್ರೋಹದ ಕೆಲಸ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು~ ಎಂದಿದ್ದರು.

ಈ ವಿಷಯವನ್ನು ತನಿಖೆಗೊಳಪಡಿಸುವಂತೆ ಸರ್ಕಾರವು ಗುಪ್ತಚರ ದಳಕ್ಕೆ ಸೂಚಿಸಿತ್ತು. ಕಳಪೆ ದರ್ಜೆ ವಾಹನ ಖರೀದಿಗಾಗಿ ತಮಗೆ 14 ಕೋಟಿ ರೂಪಾಯಿ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಸಿಂಗ್ ಅವರು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಹಾಗೂ ಆ ಬಳಿಕ ಎದ್ದ ವಿವಾದದ ಮಧ್ಯೆಯೇ ಪತ್ರ ಸೋರಿಕೆ ಪ್ರಕರಣ ನಡೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT