ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಿಕ್ರಮ' ಹಿಮಪುರುಷ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರ ಬಿಸಿಲಿನ ಬೇಗೆಗೆ ಪ್ರಸಿದ್ಧಿ. ಉತ್ತರ ಕರ್ನಾಟಕದ ಬಹುತೇಕ ಎಲ್ಲ ಊರುಗಳು ಬಿರು ಬಿಸಿಲಿಗೆ ಬಾಡಿ ಬೆಂಡಾದ ಊರುಗಳೇ! ಇಲ್ಲಿನ ಜನ ಬಿಸಿಲ ಬೇಗೆಯಿಂದ ಮುಕ್ತರಾಗಲು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಐಸ್‌ಕ್ರೀಮ್ ಚಪ್ಪರಿಸುತ್ತಾರೆ. ಆದರೆ ಐಸ್ ಅನ್ನೇ ಹಾಸಿ ಐಸ್ ಅನ್ನೇ ಹೊದ್ದು ಮಲಗುವ ಯುವಕ ಇಲ್ಲಿದ್ದಾರೆ. ಅವರೇ ವಿಕ್ರಮ ಅಡವಯ್ಯಾ ನಂದಯ್ಯಗೋಳ.

ವಿಕ್ರಮ, 24ರ ಹರೆಯದ ಯುವಕ. ಇವರು ಬರಿಮೈಯಲ್ಲಿ ಮಂಜುಗಡ್ಡೆಯ ಚಪ್ಪಡಿಯ ಮೇಲೆ ಮಲಗಿ, ಮಂಜುಗಡ್ಡೆಯ ತುಣುಕುಗಳಿಂದಲೇ ಮೈ ಮುಚ್ಚಿಕೊಂಡು, ಎರಡು ಗಂಟೆಗಳ ಕಾಲ ನಿರಾಯಾಸವಾಗಿ ಮಲಗಿಕೊಳ್ಳುತ್ತಾರೆ. ಇದನ್ನು ಕುತೂಹಲದಿಂದ ನೋಡಬಂದ ತನ್ನೂರು-ಲೋಕಾಪುರದ ಜನರನ್ನು ರಂಜಿಸಲು ಹಾಡು ಹಾಡುತ್ತಾರೆ.

ಅವರಿಗೆ ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ಸೇರುವ ತವಕ. ಒಮ್ಮೆ ಟಿ.ವಿ. ನೋಡುತ್ತಿರುವಾಗ, ಚೀನಿ ವ್ಯಕ್ತಿಯೊಬ್ಬ 108 ನಿಮಿಷಗಳ ಕಾಲ ಹಿಮದ ಆವರಣದಲ್ಲಿದ್ದು ವಿಶ್ವ ದಾಖಲೆ ಮಾಡಿದ್ದನ್ನು ಕಂಡು ವಿಕ್ರಮ ಪ್ರೇರಿತನಾದರು. ತಾವೂ ಹೀಗೆ ಮಾಡಬಹುದಲ್ಲ ಎಂದುಕೊಂಡರು.

ಅಷ್ಟಕ್ಕೇ ಬಿಡದೇ ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾದರು. ಈಗ ವಿಕ್ರಮ ಚೀನಿ ವ್ಯಕ್ತಿಗಿಂತ 12 ನಿಮಿಷ ಹೆಚ್ಚು ಕಾಲ, ಅಂದರೆ 120 ನಿಮಿಷಗಳವರೆಗೆ ತನ್ನ ಬರಿ ಮೈಯನ್ನು ಹಿಮಗಡ್ಡೆಗಳ ಮಧ್ಯ ಅಡಗಿಸಿಡಬಲ್ಲರು. ಇನ್ನು ಬಾಕಿ ಇರುವುದು ಗಿನ್ನೆಸ್ ಅಧಿಕಾರಿಗಳು ವಿಕ್ರಮನ ಸಾಧನೆಯನ್ನು ಪರೀಕ್ಷಿಸಿ, ಅಧಿಕೃತವಾಗಿ ಘೋಷಿಸುವುದು ಹಾಗೂ ಪ್ರಮಾಣ ಪತ್ರ ನೀಡುವುದು ಮಾತ್ರ. 

ಒಂದು ವರ್ಷದಿಂದ ವಿಕ್ರಮ ನಿರಂತರವಾಗಿ ಈ ಸಾಧನೆಯಲ್ಲಿ ತೊಡಗಿದ್ದಾರೆ. ಪದವಿಪೂರ್ವ ಶಿಕ್ಷಣವನ್ನು ಮಾತ್ರ ಪಡೆದಿರುವ ಇವರು, ಬಡತನದಿಂದ ಓದುವುದನ್ನು ಅರ್ಧಕ್ಕೇ ನಿಲ್ಲಿಸಿದರು. ಬದುಕು ಸಾಗಿಸಲು ಗಣಿ ಕಾರ್ಮಿಕ ವೃತ್ತಿ. ಅಲ್ಲಿಯೇ ನಿತ್ಯ ದುಡಿದರೆ ಹೊಟ್ಟೆ ತುಂಬುತ್ತದೆ. ಆ ಮೂಲಕ ತಂದೆ-ತಾಯಿಯರಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ ವಿಕ್ರಮ. ಬಿಸಿಲು-ಬಡತನಗಳಿಗೆ ವಿಕ್ರಮನ ಅಮಿತೋತ್ಸಾಹವನ್ನು ಬಾಡಿಸುವ-ಕುಂದಿಸುವ ಸಾಮರ್ಥ್ಯ ಇಲ್ಲ. ಯೋಗ-ಧ್ಯಾನಗಳಿಂದ ಗಟ್ಟಿಗೊಂಡ ಇವರ ದೇಹವನ್ನು ಹಿಮವೂ ನಡುಗಿಸಲಾರದು!

ಬಿಸಿಲೂರಿನ ಈ ಹಿಮವಂತ ಬೇಗನೆ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಿ ಎನ್ನುವುದು ಲೋಕಾಪುರದ ಜನರ ಹಾರೈಕೆ. ಅದಕ್ಕೆ ಮುನ್ನುಡಿಯಾಗಿ ಇವರ ಹೆಸರು ಈಗ ಇಂಡಿಯಾ ಬುಕ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಅಲ್ಲಿನ ಎಂಡ್ಯುರೆನ್ಸ್ ವಿಭಾಗದಲ್ಲಿ ದಾಖಲಾದ 96 ದಾಖಲೆಗಳಲ್ಲಿ ಇವರೂ ಒಬ್ಬರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT