ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಖ್ಯಾತ ಜಂಬೂ ಸವಾರಿಗೆ 5 ಲಕ್ಷ ಮಂದಿ ಸಾಕ್ಷಿ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಐದು ಲಕ್ಷಕ್ಕೂ ಹೆಚ್ಚು ಮಂದಿ ವಿಶ್ವ ವಿಖ್ಯಾತ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯನ್ನು ಗುರುವಾರ ಕಣ್ಮನದೊಳಗೆ ತುಂಬಿಕೊಂಡು ಸಂಭ್ರಮಿಸಿದರು. ಇದರೊಂದಿಗೆ ಒಂಬತ್ತು ದಿನಗಳ ಜರುಗಿದ ಮೈಸೂರು ದಸರಾ ಉತ್ಸವಕ್ಕೆ ಅದ್ದೂರಿಯಾಗಿ ತೆರೆ ಬಿತ್ತು.

ವಿಜಯದಶಮಿ ದಿನ ನಡೆದ ನಯನ ಮನೋಹರ ಮೆರವಣಿಗೆಯಲ್ಲಿ 53 ವರ್ಷದ ಬಲರಾಮ 14 ನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ   ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹ ಹೊತ್ತು ಗಾಂಭೀರ‌್ಯದಿಂದ ಹೆಜ್ಜೆ ಹಾಕಿದ. ಬಲರಾಮ ತನ್ನ ಸಂಗಾತಿಗಳಾದ ಕಾಂತಿ ಮತ್ತು ಮೇರಿಗಳ ಜತೆ ರಾಜಗಾಂಭಿರ‌್ಯದಿಂದ ಶಾಂತವಾಗಿ ಹೆಜ್ಜೆ ಹಾಕುತ್ತಿದ್ದ. ಬಲರಾಮ ಇಡುವ ಪ್ರತಿ ಹೆಜ್ಜೆಗೂ ಚಿನ್ನದ ಅಂಬಾರಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ತೊನೆಯುತ್ತಿರುವುದನ್ನು ಕಣ್‌ತುಂಬಿಕೊಳ್ಳುವುದೇ ಸೊಗಸಾಗಿತ್ತು. ಸರಳ ಗರ್ಭವತಿಯಾದ ಕಾರಣ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿಲ್ಲ. ಇದರಿಂದಾಗಿ ಕಾಂತಿಗೆ ಅವಕಾಶ ಸಿಕ್ಕಿತು.

ಮಧ್ಯಾಹ್ನ 12.54 ರಿಂದ 1.24 ಗಂಟೆಯಲ್ಲಿ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ  ಡಿ.ವಿ.ಸದಾನಂದಗೌಡ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವೈಭವದ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.

ಸಿಎಂ ಪುಷ್ಪಾರ್ಚನೆ: ಅರಮನೆ ಆವರಣದಲ್ಲಿ ನಿರ್ಮಿಸಿದ್ದ ವಿಶೇಷ ವೇದಿಕೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬಲರಾಮ ಹೊತ್ತಿದ್ದ ಅಂಬಾರಿಯಲ್ಲಿದ್ದ   ಚಾಮುಂಡೇಶ್ವರಿ ವಿಗ್ರಹಕ್ಕೆ ಮಧ್ಯಾಹ್ನ 3.24 ನಿಮಿಷಕ್ಕೆ ಪುಷ್ಪಾರ್ಚನೆ ಮಾಡಿದರು.

ಇವರ ಜತೆ ಇದ್ದ ಡಾಟಿ ಸದಾನಂದಗೌಡ, ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಕೇಂದ್ರ ಪ್ರವಾಸೋದ್ಯಮ ಸಚಿವ ಸುಭೋದ್ ಕಾಂತ ಸಹಾಯ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್,  ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ನಗರ ಪೊಲೀಸ್ ಆಯುಕ್ತ  ಸುನೀಲ್ ಅಗರ್‌ವಾಲ್,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಸತ್ಯವತಿ, ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಸಹ ಪುಷ್ಪಾರ್ಚನೆ ಮಾಡಿದರು. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೈರು ಹಾಜರಾಗಿದ್ದು ಎದ್ದು ಕಾಣಿಸಿತು.

ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಆಗುತ್ತಿದ್ದಂತೆ ಜನಸ್ತೋಮ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಭಕ್ತಿಭಾವದಿಂದ ಕೈ ಮುಗಿದು ಜೈಕಾರ ಹಾಕಿ ಹರ್ಷ ಪಟ್ಟರು. ಈ ಸಂದರ್ಭದಲ್ಲಿ ಪೊಲೀಸರು 21 ಕುಶಾಲ ತೋಪುಗಳನ್ನು ಹಾರಿಸಿದರು. ವಾದ್ಯ ವೃಂದದವರು ರಾಷ್ಟ್ರಗೀತೆಯನ್ನು ನುಡಿಸಿದರು. ಬಗೆ ಬಗೆ ರೀತಿಯಲ್ಲಿ ಸಿಂಗಾರಗೊಂಡಿದ್ದ ಅಂಬಾರಿ ಹೊತ್ತ ಬಲರಾಮ ಮತ್ತು ಇತರೆ ಆನೆಗಳು ಅರಮನೆ ಆವರಣದಿಂದ ಮುಂದೆ ಸಾಗಿದವು.
 
ಮೆರವಣಿಗೆಯಲ್ಲಿ ನಂದಿಧ್ವಜ, ಇದರ ಹಿಂದೆ ನಾದಸ್ವರ, ಜತೆಗೆ ನಿಶಾನೆ ಆನೆ ಅರ್ಜುನ ಹಾಗೂ ನೌಷತ್ ಆನೆ ಶ್ರೀರಾಮ, ಪೊಲೀಸ್  ಬ್ಯಾಂಡ್ ಸೆಟ್ ಗಾಡಿ ಎಳೆಯುವ ಅಭಿಮನ್ಯು, ಸಾಲಾನೆಗಳಾದ ಹರ್ಷ, ವಿಕ್ರಮ, ಕವಿತಾ, ವರಲಕ್ಷ್ಮಿ ಹಾಗೂ ಪಟ್ಟದ ಆನೆ ಗಜೇಂದ್ರ ಸೇರಿದಂತೆ ಒಟ್ಟು 12  ಆನೆಗಳು ಮೆರವಣಿಗೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದವು.

ಕರ್ನಾಟಕ ದರ್ಶನ!: ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 34 ಸ್ತಬ್ಧಚಿತ್ರಗಳು, 90 ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಉಡುಪಿ, ಕಾರವಾರ, ಮಂಗಳೂರು, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಕೆಲವು ಸ್ತಬ್ಧಚಿತ್ರಗಳು ಗಮನ ಸೆಳೆದವು. ಜಾನಪದ ಕಲಾ ತಂಡಗಳು ಅದ್ಭುತ  ಪ್ರದರ್ಶನ ನೀಡುವ ಮೂಲಕ ಕರ್ನಾಟಕದ ದೇಸಿಯೇ ಕಲೆ, ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದವು. ಇದೇ ಮೊದಲ ಬಾರಿಗೆ ರುವಾಂಡ ದೇಶದ ಯುವಕ, ಯುವತಿಯರು ಪಾಲ್ಗೊಂಡಿದ್ದರು.

ತಗ್ಗದ ಉತ್ಸಾಹ: ನೆತ್ತಿ ಸುಡುವ ಬಿಸಿಲಿಗೆ ಸವಾಲು ಹಾಕಿದ ಜನರು ಬೆಳಿಗ್ಗೆ 10 ಗಂಟೆಯಿಂದಲೇ ಜಂಬೂಸವಾರಿ ವೀಕ್ಷಿಸಲು ಸಾಲುಗಟ್ಟಿ ಅರಮನೆ ಹಾಗೂ ಜಂಬೂಸವಾರಿ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪಾಸ್ ಹೊಂದಿದ್ದವರು ಬೆಳಿಗ್ಗೆ 11.30ರ ಹೊತ್ತಿಗೆ ಅರಮನೆಯ ಆವರಣದಲ್ಲಿ ಆಸೀನರಾಗಿ ಚಿನ್ನದ ಅಂಬಾರಿ, ಚಾಮುಂಡೇಶ್ವರಿ ವಿಗ್ರಹವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು.

ಅಂಬಾರಿ ಹೊತ್ತ ಬಲರಾಮನ ಸವಾರಿಯು ಚಾಮರಾಜೇಂದ್ರ ವೃತ್ತ, ಕೃಷ್ಣರಾಜ ವೃತ್ತ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಹೈವೇ ವೃತ್ತದ ಮೂಲಕ 5 ಕಿಲೋಮೀಟರ್ ಕ್ರಮಿಸಿ ಬನ್ನಿ ಮಂಟಪವನ್ನು ತಲುಪಿತು.

ರಸ್ತೆಯ ಎರಡು ಬದಿಯಲ್ಲಿ, ಕಟ್ಟಡಗಳು, ಮರಗಳು, ಜಾಹೀರಾತು ಫಲಕಗಳು, ಟವರ್‌ಗಳ ಮೇಲೆ ಸಾವಿರಾರು ಮಂದಿ ಕುಳಿತು ಜಂಬೂಸವಾರಿಯನ್ನು  ವೀಕ್ಷಿಸಿ ಆನಂದಿಸಿದರು. ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾವೀರಪ್ಪಗೌಡ ವೆುರವಣಿಗೆಯಲ್ಲಿ ಕುದುರೆ ಮೇಲೆ ಕುಳಿತು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

ಈ ವರ್ಷವೂ ಕೊನೆಯಲ್ಲಿ: ಕಳೆದ ದಸರಾ ಮೆರವಣಿಗೆಯಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ತಕ್ಷಣ ಅಂಬಾರಿಯಲ್ಲಿ  ವಿರಾಜಮಾನಳಾಗಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುತ್ತಿದ್ದರು. ಆದರೆ ಕಳೆದ ಬಾರಿಯಿಂದ ನಂದಿಧ್ವಜ ಪೂಜೆ ಸಲ್ಲಿಸಿದ ತಕ್ಷಣ ಜಾನಪದ ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಕೊನೆಯಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿದರು. ಹೀಗಾಗಿ ವೇದಿಕೆ ಬಳಿಯಲ್ಲಿ ಸುಮಾರು 2 ಗಂಟೆಗಳಷ್ಟು ಬಲರಾಮ ಭಾರೀ ತೂಕದ ಅಂಬಾರಿ ಹೊತ್ತು ನಿಲ್ಲುವುದನ್ನು ತಪ್ಪಿಸುವ ಸಂಪ್ರದಾಯವನ್ನು ಮುಂದುವರಿಸಲಾಯಿತು.

ಅರಮನೆ ಆವರಣದಲ್ಲಿ ಅವ್ಯವಸ್ಥೆ

ಮೈಸೂರು: ವಿಶ್ವ ವಿಖ್ಯಾತ ದಸರಾ ಉತ್ಸವದ ವಿಜಯದಶಮಿ ಮೆರವಣಿಗೆ ಮತ್ತು ಜಂಬೂ ಸವಾರಿ ವೇಳೆ ಅರಮನೆ ಆವರಣದಲ್ಲಿ ಗುರುವಾರ ಅವ್ಯವಸ್ಥೆ ವಿಜೃಂಭಿಸಿತು.

ಅರಮನೆ ಆವರಣದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಇದ್ದರು. ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆ ಕುರ್ಚಿಗಳಲ್ಲಿ ಕುಳಿತಿದ್ದವರು ಎದ್ದು ಓಡಾಡಲು ಆರಂಭಿಸಿದರು. ಸ್ತಬ್ಧಚಿತ್ರಗಳು ಹಾಗೂ ಜಾನಪದ ಕಲಾ ತಂಡಗಳು ಮುಂದೆ ಸಾಗಲು ತೊಂದರೆಯಾಗುವಂತೆ ಅಡ್ಡಾಡುತ್ತಿದ್ದರು. ಅಂದಾಜು 500 ಮಂದಿ ಕ್ಯಾಮೆರಾ ಹಿಡಿದು ಮೆರವಣಿಗೆಯಲ್ಲಿ ಸಾಗುವ ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲಾ ತಂಡಗಳು ನೀಡುವ ಪ್ರದರ್ಶನವನ್ನು ಸೆರೆ ಹಿಡಿಯಲು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು.

ಪ್ರತಿಯೊಂದು ಸ್ತಬ್ಧಚಿತ್ರ ಹಾಗೂ ಜಾನಪದ ಕಲಾ ತಂಡದ ಜೊತೆಗೆ 10 ರಿಂದ 15 ಮಂದಿ ಇರುತ್ತಿದ್ದರು. ಇವರು ಸಹ ಮನಸೋ ಇಚ್ಛೆ ಓಡಾಡುತ್ತಿದ್ದರು. ಇವರನ್ನು ತಡೆದು, ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕಾದ ಪೊಲೀಸರು ನಿಷ್ಕ್ರಿಯರಾಗಿದ್ದರು. ಕರ್ತವ್ಯದಲ್ಲಿದ್ದ ಹಲವು ಪೊಲೀಸರು ಜನರನ್ನು ನಿಯಂತ್ರಿಸುವ ಬದಲು ತಮ್ಮ ಮೊಬೈಲ್‌ನಲ್ಲಿ ಮೆರವಣಿಗೆಯನ್ನು ಸೆರೆ ಹಿಡಿಯುವಲ್ಲಿ ನಿರತರಾಗಿದ್ದರು. ಇದರಿಂದಾಗಿ ಮೆರವಣಿಗೆಯನ್ನು ವೀಕ್ಷಿಸಲು ಆಗಮಿಸಿದ್ದವರಿಗೆ ಅನಾನುಕೂಲವಾಗಿ ರಸಭಂಗವಾಯಿತು.

ಜನರ ವಿರೋಧ:
ಮೆರವಣಿಗೆ ಸಂಜೆ 5.20 ರ ಹೊತ್ತಿಗೆ ಹೈವೇ ಸರ್ಕಲ್ ತಲುಪಿತ್ತು. ಇಷ್ಟರಲ್ಲಿ ಸುಸ್ತಾಗಿದ್ದ ಕಲಾವಿದರು ಸರಿಯಾಗಿ ಪ್ರದರ್ಶನ ನೀಡದೆ ಒಂದೆರಡು ಹೆಜ್ಜೆ ಹಾಕಿ ಮುಂದೆ ಮುಂದೆ ಓಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಜನರು ಕಲಾ ತಂಡಗಳನ್ನು ತಡೆದು ಪ್ರದರ್ಶನ ನೀಡುವಂತೆ ಒತ್ತಾಯಿಸಿದರು. ಇದರಿಂದಾಗಿ ಸ್ವಲ್ಪ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT