ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಲಿತ ಗೋಪುರ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

Things standing shall fall,
But the moving ever shall stay. -  Basavanna
  
ಕನಸುಗಳಿಗೆ ಹೊತ್ತಿಗೆಯಲಿ ಜಾಗ ಮಾಡಲು ಪೂರ್ಣ ಬೇಗನೆ ಎದ್ದಾಗ ಗಡಿಯಾರ ತನ್ನೆರಡು ತಲೆಗಳನ್ನು ಬಡಿದುಕೊಳ್ಳುತ್ತಿತ್ತು. ಕಿರ‌್ರೆನ್ನುವ ಅದಿರೇಟುಗಳಿಗೆ ನಾಲ್ಕಾರು ವಸ್ತು ವಿಷಗಳು ರುಯ್ಯನೆ ಹಾದುಹೋದರೆ... ಸದ್ದು...!
***
ದೇವಸ್ಥಾನದ ವಿಚಲಿತ ಗೋಪುರವನ್ನು ನೋಡುತ್ತಿದ್ದ `ಪೂರ್ಣ' ಮೆಲ್ಲನೆಯೇ ಚೆಲುವನ ಸಹಾಯದಿಂದ ಇತಿಹಾಸವ ಹೇಳಲು ತಡವರಿಸಿದನು... ತಡವರಿಕೆಯೇ ಹಾಗೆ! ಮಂಜುವಿನ ಜೊತೆ ಪುಡಿ ತಿಂಡಿಗಾಗಿ... ಪುಡಿವಾದದ ಗೆಲುವಿಗೆ ಅವನ ಜಗಳಗಳು ಬೇರೆ. ಸಾಲದ್ದಕ್ಕೆ ಪ್ರಸಾದಿ ಪೂರ್ಣನನ್ನು ಮನೆಗೆ ಬಿಡಲು ಕಾಯುತ್ತಿದ್ದನು... ಸನಿಹದ ಸಾಲು ಕಂಬಗಳ ಮಾಡಿನ ಕೆಳಗೆ ನಾಟಕ ಕಲಾವಿದ ಸಂಗಡಿಗರು ಹಳೆಯ ಪೋಟೋಗಳನ್ನು ಹೆಕ್ಕಿ ಹೆಕ್ಕಿ ನೋಡುತ್ತಿದ್ದರು, ಫೋಟೋಗಳು ಮಾಸಿಹೋಗುತ್ತವೆಯೇನೋ ಎನ್ನುವಷ್ಟರಮಟ್ಟಿಗೆ.

ಸೋಮುವಿನ ಆಕಳಿಕೆ ಪೂರ್ಣನ ಇತಿಹಾಸ ನಿರೂಪಣೆಗೆ ಒಮ್ಮೆಲೆ ಗಕ್ಕಿಸಿ ಬಾಯ್ತೆರೆಸಿತ್ತು. ಮನೆಯೋ ಮನೆ..! ಎಂಬ ಸದ್ದು ಪ್ರಸಾದಿಯ ಸಿಗಾರು ಗೀಜಿನ ಹಲ್ಲುಗಳನ್ನು ದಾಟಿ ಬಂದಿತ್ತು... ಜಾನು ತನ್ನ ಒಂದು ಕೈಯನ್ನು ಹಸುವಿನ ಗುದಕ್ಕೆ ತುರುಕಿ ಇನ್ನೊಂದರಲ್ಲಿ ಜಂಗಮವಾಣಿಯ ಹಿಡಿದು ನಾಟಕ ವಿರೋಧಿ ಅಪ್ಪನಿಗೆ ವರದಿ ಒಪ್ಪಿಸುವ ಹಗಲು ದುಃಸ್ವಪ್ನ; ಪೂರ್ಣನ ಮಿದುಳು ಮಜ್ಜೆಯ ಸ್ಕ್ರೀನ್‌ನಲ್ಲಿ ಹಾದುಹೋದದ್ದು ಅವನ ಕಣ್ಗಳಲ್ಲಿ ಅದುರಿತು. ಫೋಟೋಗಳು ಸವೆದು ಹೋಗುತ್ತವೆ ಎಂಬ ಮಾಸಲು ಕಾಳಜಿ ಚೆಲುವನ ಉಸಿರನ್ನು ಹೂಂಕರಿಸಿತ್ತು. ವಿಚಲಿತ ಗೋಪುರದ ಇಕ್ಕೆಲದಲ್ಲಿ ಹಂದಿ ಗುಟರಿಸುವ ಸದ್ದಿಗೆ ಒಡನೆ ಪ್ರಸಾದಿಯ ಮೋಟಾರುಗಾಡಿ ಗೂಂಗುಟರಿಸುವ ಸದ್ದು! ಹಂದಿಸೈನ್ಯವೇ ಗೂಂಗಿಗೆ ರಾಜಗೋಪುರದ ವೀದಿಯಲ್ಲಿ ಓಟಕಿತ್ತವು. ಪೂರ್ಣ, ಪ್ರಸಾದಿಯ ರಥವೇರಲು. ಜೋತುಬಿದ್ದ ಬಾವಲಿಗಳು ಸತ್ತು ಬೀಳುವಂತೆ ಹಲ್ಕಿರಿದು ಇತ್ತಿಂದತ್ತ ಅತ್ತಿಂದಿತ್ತ ಹಾರಿಕೊಂಡವು.
***
ಆನೆಯಷ್ಟು ಬೃಹತ್ತಾದ ಒಂಟೆಯಷ್ಟು ಸೂಕ್ಷ್ಮವಾದ ಹಸುಗಳನ್ನು ಹಿಡಿದು ತಾತನ ಮನೆಗೆ ಬಿಡಲು ಜವ್ರ ಬಂದಿದ್ದ. ಜವ್ರ ಕತ್ತೆಯ ಹಾಗೇ ದುಡಿಯುತ್ತಿದ್ದ. ಲಿಂಗ ಕಟ್ಟಿದ್ದ ಜವ್ರ ಮನೆಯೊಳಗೆ ಸಲೀಸಾಗಿ ಬರುತ್ತಿದ್ದನು... ಆದರವನ ವಾರಗೆಯ ಮಂದಿ ಹಿತ್ತಲಿನಲ್ಲಿ ಕೂರುತ್ತಿದ್ದರು. ಪೂರ್ಣನಿಗೆ ಈ ಪಕ್ಷಪಾತಿ ಧೋರಣೆಯೇ ಅರ್ಥವಾಗಲಿಲ್ಲ. ಲಿಂಗಕ್ಕೂ ಅವನ ಜಾತಿಗೂ ಏನಾದರೂ ಸಂಬಂಧವಿದೆಯೇ? ಲಿಂಗರೂಪಿ ಶಿವನೇ ಉತ್ತರಿಸಬೇಕೆಂದು ಕೆಳಗೆ ನೋಡಿಕೊಂಡ!

`ಕತ್ತೆ ಜವ್ರ' ಅಂತ ಜವ್ರನನ್ನು ಎಲ್ಲರೂ ಕರೆಯುತ್ತಿದ್ದದ್ದು. ಪೂರ್ಣ ಮಾತ್ರ ಜವ್ರಣ್ಣ ಎನ್ನುತ್ತಿದ್ದ. ಮನೆಯ ಎಲ್ಲಾ ಕೆಲಸಗಳು, ತೋಟ ಗದ್ದೆಗಳನ್ನು ಮಗಳಂತೆ ಸಾಕಿಸಲಹಿದ್ದ. ಬೇಸಿಗೆಯ ರಜದಲ್ಲಿ ದೊಡ್ಡೆಗೌಡನ ಕಟ್ಟೆಯ ಹಿನ್ನೀರ ಮೈದಾನಕೆ ಹೊರಟರೆ ಸೂರ್ಯನಿಳಿದು ಹೊರಟಾಗಲೇ ಮನೆಗೆ ಬರುತ್ತಿದ್ದದ್ದು. ಅಲ್ಲಿಯವರೆಗೂ ತರಹೆವಾರಿ ಆಟಗಳನ್ನು ಆಡಿ ದನ ಮೇಯಿಸಲು ಬಂದ ಹುಡುಗರಿಗೂ ಕಲಿಸಿ ಬೆಲ್ಲ-ಅಕ್ಕಿಯಲ್ಲಿ ಅನ್ನವ ಮಾಡಿ ಅಷ್ಟೂ ಹುಡುಗರಿಗೂ ಇಕ್ಕುತ್ತಿದ್ದನು. ಸಂಜೆಯ ವೇಳೆಗೆ ಬರುವಾಗ ಹಸುಗಳ ತುಂಬು ಕೆಚ್ಚಲುಗಳ ನೋಡಿ ಕಣ್ತುಂಬಿಕೊಳ್ಳುತ್ತಿದ್ದನು. ಮನೆಯು ಸನಿಹ ಬಂದಾಗ ಎಳೆಗರುಗಳ ಜಿಗಿತಗಳ ಕಂಡು ಕೆನೆಯುವ ತಾಯಿಹಸುಗಳ ಮೊಗವ ನೋಡಿ ಎಂದೋ ಗತಿಸಿದ ತಾಯಿಯ ನೆನೆಯುತ್ತಿದ್ದನು.

ಹಸುಗಳು ಅವನನ್ನು ಅವನಂತೆಯೇ ಅರಿತಿದ್ದವು. ಅವನಿಲ್ಲದಾಗ ಪೂರ್ಣನೇನಾದರೂ ಮೇವಿಗೆ ಅಟ್ಟಿಕೊಂಡು ಹೊರಟರೆ ಅವುಗಳ ಜೊತೆ ಏಗುವುದೇ ಕಷ್ಟ. ಅಂದು ಜವ್ರ ಹಸುಗಳನ್ನು ಅಟ್ಟಿಕೊಂಡು ಮನೆಗೆ ಬಂದಾಗ ಅದಾಗಲೇ 10 ಗಂಟೆ.

ಜಾನುವಿನ ಆರೈಕೆಯೊಂದಿಗೆ ಮೆಳೆತು ಜವ್ರನ ಹಸುಗಳು ಆನೆಯಂತೆ ಸದೃಢವಾಗಿದ್ದವು. ಜಾನು ದಿನವೂ ಮಸೀದಿಯ ಗುಂಬಜ್‌ನಂತಿರುವ ಕಂಬಿಗಳ ನಡುವೆ ನುಗ್ಗಿಸಿ ಬಸಿರುಮಾಡಿಸುತ್ತಿದ್ದ. ಪಶುವೈದ್ಯ ಆಸ್ಪತ್ರೆಯ ಎಲ್ಲಾ ಕಾರ‌್ಯ ನಿರ್ವಹಿಸುತ್ತಿದ್ದ ಜಾನುವನ್ನು ಪೂರ್ಣ `ಎಷ್ಟು ದನಗಳಿಗೆ ಬಸಿರು ಮಾಡಿಸಿದ್ದೀಯೋ' ಎಂದು ರೇಗಿಸುತ್ತಿದ್ದ. ಪೂರ್ಣನ ಮನೆಯ ದನಗಳನ್ನು ಬಸಿರುಮಾಡಿಸಲು ಬೆಳಿಗ್ಗೆಯೇ ಅಟ್ಟಿಕೊಂಡು ಹೊರಟಿದ್ದ ಜವ್ರ ಜಾನುವಿನ ಹಾದಿಯನ್ನು ಕಾದು ಕಾದು ಅಂದು ಮನೆಗೆ ಬಂದಾಗ ತಡರಾತ್ರಿಯಾಗಿತ್ತು. ದೇವರು ಅದಾಗಲೇ ಹೊಟ್ಟೆಯಲ್ಲಿಳಿದಿತ್ತು. ಸೂರ್ಯ ಚಂದ್ರ ನಕ್ಷತ್ರರ ಬಗ್ಗೆ ಏನೇನೋ ಹೇಳುತಿದ್ದ.
***
ಪೂರ್ಣ ಮನೆಗೆ ಇನ್ನೂ ಹೋಗಿರಲಿಲ್ಲ. ಪ್ರಸಾದ್ ಸರ್ ಕಿಡಿಯನ್ನು ಆರಿಸುತ್ತಾ ರಾತ್ರಿ ಚಳಿಗೆ ಬೆಚ್ಚಗೆ ಕುಳಿತಿದ್ದರು. ಪೂರ್ಣ ಅವರನ್ನು ನೋಡುತ್ತಿದ್ದಂತೆ ಬೈಕ್ ನಿಲ್ಲಿಸಲು ಹೇಳಿ ಬೆಂಕಿಯ ಮುಂದೆ ಕೂತ. ಅದಾಗಲೇ 10 ಗಂಟೆಯಾಗಿತ್ತು. ಮನೆಯ ಕಡೆಯಿಂದ ಠಿಟಿ ಛಿಚಿಟಟಗಳು ಬರತೊಡಗಿದವು. ಪ್ರೀತಿಯಿಂದ ಅವನೆಲ್ಲಾ ಆಟಗಳನ್ನು ಸಹಿಸಿಕೊಂಡಿದ್ದವನ ತಾಯಿ ಅಂದು ಸಿಡಿಮಿಡಿಯಾಗಿದ್ದರು. ಪೂರ್ಣನಿಗೆ ಅರ್ಧಕ್ಕೆ ನಿಲ್ಲಿಸಿದ್ದ ಶಿವನ ದೇವಸ್ಥಾನದ ಕಥೆಯನ್ನು ಚೆಲುವನಿಗೆ ಹೇಳಿಬಿಡುವ ಮನಸ್ಸಾಯಿತು. ಪ್ರಸಾದಿಗೆ ಪೂರ್ಣನನ್ನು ಮನೆಗೆ ಮುಟ್ಟಿಸುವ ಆತುರ ಬೇರೆ.

ಚೆಲುವ ಶಿವನ ದೇವಸ್ಥಾನದ ಕತೆಯನ್ನು ಸ್ವಗತವಾಗಿ ವಿವರಿಸುತ್ತಿದ್ದ. ಪೂರ್ಣನನ್ನು ನೋಡಿ ಚೆಲುವನಿಗೆ ಖುಷಿಯಾಯಿತು. ಜೋತಾಡುತ್ತಲೇ ಹೇಳಲು ಶುರುಮಾಡಿದ. ದೇವರೇಕೆ ಇವನುದರಕಿಳಿದನು! ಎಂದುಕೊಂಡ ಪೂರ್ಣನಿಗೆ ಅವನ ಜೋಲಾಡುವಿಕೆ, ಆತುರವ ನೋಡಿ ಮೂವತ್ತು ಶತಮಾನಗಳ ವಿಚಲಿತ ಗೋಪುರ ಓಲಾಡುವಂತೆ ಭಾಸವಾಯ್ತು. `ಸುಮ್ಮನೆ ಇತಿಹಾಸವ ಕೆದಕಿದರೆ ಓಲಾಡದೆ ಇನ್ನೇನು' ಎಂದು ಪೂರ್ಣ ತನ್ನ ತಲೆಯ ಗೋಪುರವನ್ನು ಉಜ್ಜಿಕೊಂಡ. ಜಿನ-ಬುದ್ಧ-ಹರಿರೂಪಿ ಶಿವನೂ ಕಾಲಕಾಲಕ್ಕೆ ರೂಪಾಂತರಿಯಾಗುತ್ತಾ ಕೊನೆಗೂ ಶಿವನಾಗಿದ್ದ.

ಲಿಂಗರೂಪಿ ಅಲ್ಲದವನನ್ನು ಶಿವ ಎಂದು ಕರೆಯದೆ ವಿಚಲಿತ ಗೋಪುರದಡಿಯ ಗಂಟೆಯ ಸದ್ದನು ಮಾತ್ರ ಕೇಳಲು ಇಚ್ಛಿಸುತ್ತಿದ್ದ. ಗೋಪುರದ ನಾಲ್ಕು ಕಂಬಗಳಲ್ಲಿ ನಿಲ್ಲುತ್ತಿದ್ದ ಜಿನ-ಬುದ್ಧ-ಹರಿಹರರೂ ಮುಖ್ಯ ಸ್ಥಾನಕ್ಕಾಗಿ ಹೊಡೆದಾಡುತ್ತಿದ್ದರೂ, ಎಷ್ಟು ಜನ ಗಂಟೆಯೊಡೆದಿದ್ದರೋ ಏನೋ. ಗಂಟೆಯ ಸದ್ದು ಮಾತ್ರ ಹಾಗೇ ಇತ್ತು. ಚೆಲುವ ಕಂದೀಲು ಹಚ್ಚಿ ಒಂದೊಂದೇ ಮೆಟ್ಟಿಲೇರಿ ಗೋಪುರದ ಕಥೆಯ ಹೇಳುತ್ತಿದ್ದ.

ಅವನರೆಬರೆ ಇತಿಹಾಸವ ಕೇಳಲು ಸೋಮು ಆಕಳಿಕೆಯನ್ನು ಜೋರುಮಾಡಿ ನಿದ್ದೆಹೋದ. ಪ್ರಸಾದ್ ಸರ್ ಕಿಡಿಯನ್ನು ಆರಿಸುತ್ತ ಬೆಚ್ಚಗೆ ಕುಳಿತಿದ್ದರು. ಸಿಗಾರು ಗೀಜಿನ ಹಲ್ಲುಗಳು ಎರಡು ಪ್ರಸಾದಗಳ ದಾಡೆಗಳಲ್ಲಿ ಭದ್ರವಾಗಿದ್ದು ಹೊಗೆಯನ್ನು ಮಾತ್ರವೇ ಬಿಡುತ್ತಿದ್ದವು. ಹೊಗೆಯು ಹಾರಿ ಹೋಗುವಂತೆ ಅವರ ಗೀಜುಹಲ್ಲುಗಳು ಹಾರಬಾರದೆ ಎಂದುಕೊಂಡ. ಅಷ್ಟರಲ್ಲಿ 32 ಹಲ್ಲುಗಳು ಗಂಭೀರದಲ್ಲೂ ಬಕ್ಕನೆ ನಕ್ಕವು. ಹೊಗೆಯೂ ನಗುತ್ತಲೇ ಹಾರಿಹೋಯ್ತು.
***
ಜವ್ರನು ಸೂರ್ಯ ಚಂದ್ರರ ಕಥೆಗಳನ್ನು ಮುದ್ದೆಯನ್ನು ನುಂಗುತ್ತಾ ಹೇಳಿ ಮುಗಿಸಿದ್ದ. ಸೂರ್ಯ ಚಂದ್ರರೀರ್ವರು ನಿದ್ದೆಹೋಗಿದ್ದರೂ ಆನೆಯಂಥಾ ಹಸುಗಳ ಕಣ್ಗಳು ಮಾತ್ರ ರಾತ್ರಿಯಲಿ ದುಂಡನೆ ಕಣ್ಗಳನ್ನು ಬಿಟ್ಟು ಸೂರ್ಯ ಚಂದ್ರರಿಹರಿಲ್ಲೇ ಎಂದು ಹೇಳುತ್ತಿದ್ದವು. ಬ್ರಹ್ಮಾಂಡ ಕಣ್ಗಳ ಮರಿಗಣ್ಗಳು ಜಾನುವಿನ ಬಸಿರ ಕೊಳವೆಯ ಗುಂಡಿನಿಂದ ಹೊಕ್ಕಿ ಪಿಳಿಪಿಳಿ ಬಿಟ್ಟವು ಹೊಟ್ಟೆಯಲ್ಲಿ. ಎಷ್ಟು ಪಿಳಿಪಿಳಿಗಳನ್ನು ದಾಟಿಸಿವೆ ಇಂಥಾ ಪಿಳಿಪಿಳಿಗಳು.
“ಸೂರ್ಯ ಚಂದ್ರರು ಮಾತ್ರ ಬಿಟ್ಟಂತೆ ಬಿಟ್ಟವ್ರೆ ಕಣ್ಣಾ” ಎಂಬ ಜವ್ರನ ಮಾತು ಪೂರ್ಣನಿಗೆ ಅಸ್ಪಷ್ಟವಾಗಿ ಅರ್ಥವಾಯಿತು.
***
ಚೆಲುವ ಸುಮ್ಮನೆ ಮೆಟ್ಟಿಲು ಹತ್ತುತ್ತಾ ಗೋಪುರದ ತುದಿಯನ್ನು ತಲುಪಿದ. ಬಿರುಕು ಬಿಟ್ಟ ಗೋಪುರವ ನೋಡಿ ಪೂರ್ಣನಿಗೆ ಭಯ ಶುರುವಾಯಿತು. ಜೊತೆಗೆ ಹತ್ತರ ರಾತ್ರಿಯ ಹೊರಗನ್ನು ನೋಡಿ ಆನಂದವಾಯ್ತು. ದೇವರು, ಉಸಿರು ಬಿಗಿಹಿಡಿಸುವ ಗೋಪುರದಲ್ಲಿರದೇ ಆಚೆಯಲ್ಲೇ ಇಂಥಾ ರಾತ್ರಿಗಳಲ್ಲೇ ತಲೆತಪ್ಪಿಸಿಕೊಂಡಿರಬೇಕು ಎನಿಸಿತು. ಚೆಲುವನ ದೇವಾನುದೇವತೆಗಳ ಸಮಕ್ಷಮ ವರದಿಗೆ ಪೂರ್ಣನಿಗೆ ಗೊತ್ತಿದ್ದ ನಿಜವಾದ ಇತಿಹಾಸವೂ ದ್ವಂದ್ವದಲ್ಲಿ ಸಿಲುಕಿತ್ತು.

ಬೋರಿಟ್ಟ ಗಾಳಿ ಕಂದೀಲನ್ನು ಆರಿಸಿತ್ತು. ಗಾಳಿ ಬೀಸಲು ಮೊದಲೇ ತೂರಾಡುತ್ತಿದ್ದ ಚೆಲುವ ಆಸರೆಗೆ ಕರೆಂಟ್ ವೈರ್ ಹಿಡಿಯುವುದೇ..? ಒಡನೇ ಕರೆಂಟ್ ಹರಿಯಿತು, ಬಲ್ಬ್ ಹತ್ತಿತ್ತು. ಆದರೇನು ಬಂತು, ಕರೆಂಟ್ ಹೊಡೆಸಿಕೊಂಡ ಚೆಲುವ ಮೆಟ್ಟಿಲು ಜಾರಿದ. ಬಲ್ಬ್ ಸಿಡಿತ ಪೂರ್ಣನ ಕಾಲನ್ನದುರಿಸಿ ಅವನನ್ನು ಜಾರಿಸಿತ್ತು. ಬಾವಲಿಗಳು ಮತ್ತೆ ಸತ್ತು ಬೀಳುವಂತೆ ಹಲ್ಕಿರಿದು ಇತ್ತಿಂದತ್ತ ಅತ್ತಿಂದಿತ್ತ ಹಾರಿಕೊಂಡವು. ಮಂಜನು ಗೋಪುರದಡಿಗೆ ಓಡಿ ಬಂದನು.

ಮತ್ತೆ ಇವನೊಂದಿಗೆ ಪುಡಿವಾದ ಮಾಡಬೇಕಲ್ಲ ಎಂದುಕೊಂಡ ಪೂರ್ಣ ಚೆಲುವನ ದಂಗನ್ನು ಇಳಿಸಲು ಮೆಟ್ಟಿಲನ್ನು ಇಳಿಸಿ ಕೆಳಗೆ ಬಂದ. ಆಗ, ಇತಿಹಾಸವನ್ನು ಹೀನಾಮಾನ ಹರಾಜಿಗೆ ಹಾಕುತ್ತಿದ್ದ ಮಂಜನ ವಾದ ತಾರಕಕ್ಕೆ ಏರಿತು. ಸೋಮ `ಒಂದು apple ಜ್ಯೂಸ್' ಎಂದ್ಹೇಳಿ ನಿದ್ದೆಹೋದ. ಚೆಲುವ ಮತ್ತು ಪೂರ್ಣ ಗಹಗಹಿಸಿ ನಗಲು ಶುರುಮಾಡಿದರು. ರಾತ್ರಿಯಲ್ಲೂ ಭ್ರಮೆಯ ಜ್ಯೂಸ್‌ಗಾಗಿ ಮಂಜನ ಕಣ್ಗಳು ತಡಕಾಡಿದವು. ಸಾಲು ಕಂಬಗಳ ಮಾಡಿನ ಕೆಳಗೆ ತಮ್ಮ ವೈಭವ ಸಾರುವ ಭೂತಕಾಲದ ಮಾಸಿದ ಪೋಟೋಗಳನ್ನು ಹೆಕ್ಕಿ ಹೆಕ್ಕಿ ನೋಡುತ್ತಿದ್ದ ನಾಟಕ ಕಲಾವಿದ ಗೆಳೆಯರು ಬೂಂದಿ ಕಾಳುಗಳನ್ನು ಮುಕ್ಕುತ್ತಿದ್ದರು.

ಅದ ನೋಡಿದ ಮಂಜ ಮತ್ತು ಪೂರ್ಣ ಜಗಳವಾಡುತ್ತಾ ಓಡಿದರು.ಪ್ರಸಾದ್‌ಗಳು ಮಾತಾಡದೇ ಇದ್ದರೂ ಅವರ ಸಿಗರೇಟು ಹೊಗೆ ಮಾತಾಡುತ್ತಿತ್ತು. ಚಳಿಗಾಳಿ ಗೋಪುರದ ಸುಳಿ ಬೆಂಕಿಯನ್ನು ಉರಿಸುತ್ತಿತ್ತು. ಜ್ವಾಲೆಯ ಹೂವನ್ನು ಪೂರ್ಣ ಬೂಂದಿಯ ಮುಕ್ಕುತ್ತಾ ನೋಡುತ್ತಿದ್ದನು. ಅಲ್ಲಿಗೆ ಸೋಮುವಿನ ಜುಟ್ಟು ಹಬ್ಬಿಸಿಕೊಂಡ `ಚೋಮಿ' ನಾಯಿ ಕೆನೆಯುತ್ತಾ ಬಂದು ಗೋಪುರದ ಇಕ್ಕೆಲದಲ್ಲಿ ಮಲಗಿದ್ದ ಹಂದಿಗಳನ್ನು ಓಡಿಸಲು ಅಣಿಯಾಯಿತು.

ಹಂದಿಗಳನ್ನು ಗರ್ಭಗುಡಿ ನವರಂಗಗಳಲ್ಲೆಲ್ಲಾ ಓಡಾಡಿಸಿತು. ಅವಕ್ಕೆ ತಪ್ಪಿಸಿಕೊಳ್ಳಲು ದಾರಿ ಕಾಣಲಿಲ್ಲ. ಪ್ರಸಾದ್‌ಗಳು ಕೂತಿದ್ದ ನಾಲ್ಕಡಿ ಜಾಗದ ದಾರಿಯಲ್ಲೇ ಪಾರಾಗಬೇಕಿತ್ತು. ಒಡನೇ ಅಷ್ಟೂ ಹಂದಿಗಳು ನುಗ್ಗಿದವು. ಪ್ರಸಾದ್‌ಗಳು ವಿಚಲಿತರಾದರೂ ಹೊಗೆಯ ಉಗುಳಿ ಹಾರಿದರು. ಹಂದಿಮರಿಗಳು ಓಡದಾದಾಗ ತಾಯಿಹಂದಿ ದಾರಿಗೆ ವಿಮುಖವಾಗಿ ಗುಟರಿಸಿತು. ಜುಟ್ಟು ಬೆಳೆಸಿಕೊಂಡ ನಾಯಿ ಇದ್ದಕ್ಕಿದ್ದಂತೆ ಎದುರಾದ ಅನಿರೀಕ್ಷಿತಕ್ಕೆ ವಿಚಲಿತವಾಗಿ ವೇಗವನ್ನು ತಡೆಯಲಾರದೆ ಬೆಂಕಿಗೆ ಬಿತ್ತು. ಒಡನೆ ಕಿಡಿ ನಾಯಿಜುಟ್ಟಿಗೆ ಹತ್ತಿತು.

ಕಿಡಿ ಪುರ‌್ರೆನ್ನಲು ಊಳಿಟ್ಟ ನಾಯಿಯ ಸಂಕಟ ದನಿಗೆ ಸೋಮ ಶತಮಾನದ ನಿದ್ದೆಯಿಂದ ಎಚ್ಚೆತ್ತು `ಆರಿಸ್ರೋ ಆರಿಸ್ರೋ' ಎಂದರೂ ಭೂತಕಾಲದ ಮಾಸಿದ ಪೋಟೋಗಳನ್ನೆ ವಿಚಲಿತರಾಗದೆ ಕಲಾವಿದ ಗೆಳೆಯರು ಹೆಕ್ಕಿ ಹೆಕ್ಕಿ ನೋಡುತ್ತಿದ್ದರು. ಪೂರ್ಣನ ಬಾಯಿ ಬೂಂದಿಯನ್ನು ಅಗಿಸದೆ ತೆರೆಸಿತ್ತು. ಚೆಲುವ ದೇವರೇರಿದ್ದರೂ ಚಂಗನೆ ಹಾರಿದ, ನಾಯಿ ಪುರ‌್ರೆನ್ನುತ ವಿಚಲಿತ ಗೋಪುರದ ಸುತ್ತ ಓಡಹತ್ತಿತು. ಹಂದಿಗಳು ರಾಜವೀದಿಯಲ್ಲಿ ಆರಾಮಾಗಿ ಪೆರೇಡ್ ನಡೆಸಿದವು. ಚೆಲುವ ಓಡಿ ತೀರ್ಥದ ತೊಟ್ಟಿಯಲ್ಲಿ ನಾಯಿಯನ್ನು ಎತ್ತಿ ಬಿಸಾಡಿದ. ಬೆಂಕಿ ಪುಸ್ ಅಂದಿತು.
ಪೂರ್ಣನ ಬಾಯಿ ಬೂಂದಿ ನುಂಗಿತು. ಸೋಮ ಮತ್ತೆ ನಿದ್ದೆಹೋದ.
***
ಜವ್ರನ ಸೂರ್ಯಚಂದ್ರರ ಕಥೆ ಪೂರ್ಣನನ್ನು ಕಾಡಲು ಶುರುಮಾಡಿತು. ಅವನನ್ನೂ ಮತ್ತೂ ಕಾಡಲೂ ಶುರು ಮಾಡಿದ್ದು ಅವನ ದುರಂತ ಜೀವನಕತೆ.ಅವನು, ತಿಮ್ಮಪ್ಪನು ಯೀರಭದ್ರನೂ ಒಂದೇ ಎಂದಿದ್ದ. ಅವನ ಮಗಳು ತಿಮ್ಮಪ್ಪನ ಒಕ್ಕಲಿಗೆ ಮದುವೆಯಾಗಿದ್ದಳು. ಅವನೆಂಡತಿ ಬೈರಿ `ದೇವರು ಕೂಡಿಬರಲ್ಲ. ಎಲ್ಡು ಬ್ಯಾರೆ ಬ್ಯಾರೆ, ಮದ್ವಿ ಮಾಡಸ್‌ಬ್ಯಾಡಿ' ಅಂದಿದ್ಲು.. ಆದ್ರೂ ಮಾಡಿಸ್ದ. ಎರಡು ವರ್ಷದಲ್ಲಿ ಹಲ್ಲಿನಲ್ಲಿ ಕೀವು ತುಂಬಿ ಮಗಳು ಸತ್ತಳು, ಅದೂ ಮದುವೆಯಾದ ದಿನವೇ. ಜವ್ರನ ಹೆಂಡತಿ ಮನೆ ದೇವರ ಶಾಪ ಅಂತ ಕೊರಗಿ ಸತ್ತಳು. `ಆದ್ರೂ ಎಲ್ಡು ಒಂದೇ ದೇವ್ರ' ಅನ್ನೋದನ್ನ ಬಿಡಲಿಲ್ಲ ಜವ್ರ. ಪೂರ್ಣನು `ಜವ್ರಣ್ಣ ಅದ್ಹೇಗೆ ಹೇಳ್ತೀಯ' ಅಂದದಕ್ಕೆ ಊರಾಚೆಯ ಕಾಡುಹಾದಿಯಲ್ಲಿ ಕರೆದುಕೊಂಡು ಚೋಳರ ಕಾಲದ ಯೀರಭದ್ರನ ಗುಡಿಯ ಮುಂದೆ ನಿಲ್ಲಿಸಿದ.

ಮರಳುಕಲ್ಲಿನಲ್ಲೆ ಕಟ್ಟಿದ್ದ ಸುಂದರ ದೇಗುಲ ಪಾಳು ಬಿದ್ದಿತ್ತು. ಒಳಗೆ ಕರೆದುಕೊಂಡು ಹೋಗಿ ಎರಡು ದೇವರುಗಳ ಅಂಗಲಿಂಗ ಎಲ್ಲವನ್ನು ಸಮೀಕರಿಸಿ ತಲೆದೂಗಿಸಿದ. ಹಸ್ತ, ಹಣೆ, ಕೈಗಳನ್ನು ವಿವರಿಸಿ ಹೇಳಿದ. ಪೂರ್ಣನಿಗೆ ಬಹಳ ಕಾಡಿದ್ದು ಅವನ ಮಗಳೊಕ್ಕಲಿನ ದೇವರ ಎಡಗೈ ಏಕೆ ಖಾಲಿ ಇದೆ ಅಂತ! ಇಲ್ಲಿ, ಯೀರಭದ್ರನ ಗದೆ ಅದರ ಜಾಗ ತುಂಬಿತ್ತು. ದಿಗಿಲಾದ. ಮತ್ತೆ `ಹ್ಹೇ ನಿನ್ನ ಯೀರಭದ್ರ ಯಾಕ್ ಸೊಂಟ ವಾರೆ ಮಾಡವನೆ' ಅಂದ. `ಹ್ಹೂ ಬುದ್ದಿ ಅವನಿಗೂ ಸುಸ್ತಾಗಲ್ವ ರಾಕ್ಸಸರರ್ನ ಕೊಂದೂ ಕೊಂದೂ' ಅಂದು ನಕ್ಕ. ಪೂರ್ಣನಿಗೂ ಸಾಕಾಗಿತ್ತು. `ಆರ‌್ಯ-ದ್ರಾವಿಡ ಕಲಹ ಯಾಕೆ' ಅಂತ ನಕ್ಕ. `ನಾವೋ ದ್ಯಾವ್ರೆಸರಲ್ಲಿ ಜಗಳ ತಂದಿಕ್ಕತಿವಿ. ಆ ದೇವ್ರಗಳೋ ಹೆಣ್ತಿ ಮಕ್ಳ ಜ್ವತೆಲಿ ಸುಕ್ವಾಗಿರ‌್ತವೆ' ಅಂದು ತನ್ನ ಹೆಂಡತಿ ಮಗಳಿನ ಸಾವಿಗೆ ದೇವರನ್ನು ದೂರಿ ಭಾವುಕನಾದ.
***
ಪ್ರಸಾದಗಳ ಸಾಹಿತ್ಯ ಸಂವಾದಗಳು ಮುಗಿದಿರಬೇಕೆನಿಸಿತು ಪೂರ್ಣನಿಗೆ. ಪ್ರಸಾದ್ ಸರ್ ಮಾನವ ಮಂಟಪದ ಕನಸು ಸುಳಿದು ಹೋಯಿತು. ಇಷ್ಟಕ್ಕೂ ಅವಳು ಒಪ್ಪಿದ್ದರೆ ಮದುವೆಯಾಗಿರುತ್ತಿದ್ದ. ಕನಸಿಗೂ ವಾಸ್ತವಕ್ಕೂ ಸೀಮಾಗೆರೆ ದೊಡ್ಡದಾಗಿಯೇ ಇರುತ್ತದಲ್ಲವೇ.

ವಿಚಲಿತ ಗೋಪುರವನ್ನೇ ನೋಡುತ್ತಾ ಬರುತ್ತಿದ್ದ ಪೂರ್ಣನಿಗೆ ಜವ್ರನ ಕಥೆ ಮತ್ತೆ ಕಾಡಲು ಶುರುವಾಯಿತು. ಅದೇನಾಗಿಬಿಡುತ್ತದೋ ನೋಡೋಣ ಎಂದು ಗೋಪುರದ ಮೆಟ್ಟಿಲೇರತೊಡಗಿದನು. ಇತಿಹಾಸದ ಗೋಜಲಿಗೆ ಸಿಲುಕದೆ ಮೂರ್ತಿಗಳ ಅಂಗ ಲಿಂಗ ಸಮೀಕರಿಸಲು ಶುರುಮಾಡಿದ. ರಾಸ ಮೂರ್ತಿಗಳನ್ನೇಕೆ ಗೋಪುರದಿ ನಿಲ್ಲಿಸಿರುತ್ತಾರೆ ಎಂದು ಯೋಚಿಸಿದ. ಶತಮಾನಗಳ ನಿದ್ದೆಯಿಂದ ಎಚ್ಚೆತ್ತ ಸೋಮ ಮತ್ತವನ ಚೋಮಿ ಮೆಟ್ಟಿಲೇರಿ ಬಂದರು. ಲೌಕಿಕವ ಆಚೆಬಿಟ್ಟು ಒಳಬರಬೇಕೆನ್ನುವ ಅರ್ಥದಲ್ಲಿ ಸೋಮ ವಿವರಿಸಿದ. ಪೂರ್ಣನಿಗೇನೋ ಈ ಉತ್ತರ ಸಮಂಜಸವೆನಿಸಲಿಲ್ಲ.

ಏಕೆಂದರೆ ಇವುಗಳ ನೋಡಿದವರು ಎಲ್ಲಿಗಾದರೂ ಓಡಲೇಬೇಕೆನ್ನುವ ಭಂಗಿಯಲ್ಲಿದ್ದವು. ಪೂರ್ಣ ಗೋಪುರದ ಬಿರುಕನ್ನು ಅನುಸರಿಸುತ್ತ ಗರ್ಭಗುಡಿಗೆ ಬಂದ. ಗದೆ ಹಿಡಿದ ನೇರ ಭಂಗಿಯಲ್ಲಿ ನಿಂತಿದ್ದ ಯೀರಭದ್ರನ ಮೂರ್ ಅಡ್ಡನಾಮ ಮೂರನೇ ಕಣ್ಣನ್ನು ಮುಚ್ಚುವಂತೆ ಉದ್ದ ಮೂರ‌್ನಾಮ ಬರೆದೆ. ಹಿಂಗೈಗಳಲ್ಲಿ ಶಿವತ್ರಿಶೂಲ ತೆಗೆದು ವಿಷ್ಣುಚಕ್ರ ಬರೆದೆ. ಸೋಮ `ಗೋವಿಂದ ಗೋವಿಂದ' ಅಂದು ಅಡ್ಡಬಿದ್ದ.

ಚೋಮಿಯು ಇತಿಹಾಸ ಕೆದಕುವಂತೆ ಮೂಸತೊಡಗಿತು. ಅದುವರೆವಿಗೂ ಯಾರಿಗೂ ಕಾಣದಿದ್ದ ಅಸ್ಥಿಗಳು ಗರ್ಭಗುಡಿಯ ತೀರ್ಥ ತೊಟ್ಟಿಯಲ್ಲಿ ಕಂಡವು. ಜೇಡಗಟ್ಟಿದ ಅಸ್ಥಿಗಳ ಎಳೆದು ನೋಡಿದರೆ ಒಂದು ಕೈಮೂಳೆ ಕಲ್ಲಿಗೆ ಸಿಕ್ಕಿಕೊಂಡಿತ್ತು. ಒಮ್ಮೆಲೆ ಆರಡಿ ಕೆಳಗಿನ ತೀರ್ಥತೊಟ್ಟಿಗೆ ಸೋಮ ಚೋಮಿ ಧುಮುಕಿ ಸಿಲುಕಿಕೊಂಡಿದ್ದ ಮೂಳೆಯನ್ನು ತೆಗೆದರು. ಪೂರ್ಣ ಕಂದೀಲನ್ನು ಹಿಡಿದು ಇಳಿದ. ಮೂರಡಿಯ ಬಾಗಿಲು ಮೂಳೆ ತೆಗೆದ ಕಲ್ಲಿನಲ್ಲಿ ಕಂಡಿತು. ಪೂರ್ಣ ಬಾಗಿಲ ತೆಗೆಯಲು ಪ್ರಯತ್ನಿಸಿದ. ಚೋಮಿ ಬೊಗಳಲು ಶುರುಮಾಡಿತು.

ಸೋಮ ಪೂರ್ಣ ವಿಚಲಿತರಾದರು. ಮೂರಡಿ ಬಾಗಿಲು ತೆರೆಯಿತು. ಪೂರ್ಣನ ವಿಚಲಿತ ತಲೆ ಬಾಗಿಲೊಳಗೆ ಇಣುಕಿದಾಗ ಮತ್ತೆಲ್ಲಿಗೋ ಹೋಗುವ ದಾರಿ. ಚೋಮಿ ಒಂದೇ ಸಮನೆ ಬೊಗಳಲು ಜೋರು ಮಾಡಿತು. ಸೋಮ ಬಿರುಕಿನ ಹಾದಿಯನ್ನು ತೋರಿಸಿದ. ಪೂರ್ಣನ ವಿಚಲಿತ ತಲೆಗೋಪುರಕ್ಕೆ ಬಿರುಕಿನ ದಾರಿ ಏನೆಂದು ಹೊಳೆದುಬಿಟ್ಟಿತು. ಚಂಗನೆ ಮೇಲೆ ನೆಗೆದರು. ದೇವರ ಗದೆಯು ಜಾರಿ ತೀರ್ಥತೊಟ್ಟಿಗೆ ಸಾಗಿತು. ಸೋಮ ಚೋಮಿ ಓಡಲು ಶುರುಮಾಡಿದರು. ವಿಚಲಿತ ತಲೆಯ ಪೂರ್ಣ ಗೋಪುರದ ಬಿರುಕನ್ನು ದಿಟ್ಟಿಸಲು ಅವಾಕ್ಕಾದ. ಪ್ರಸಾದ್‌ಗಳು ಓಡಿಬಂದು ಪೂರ್ಣನನ್ನು ನೋಡಿ ಎಳೆದು ತಂದರು.

ಅವನ ವಿಚಲಿತ ತಲೆಯ ತುಂಬ ಉದ್ದನಾಮದ ಯೀರನೇ ತುಂಬಿದ್ದ. ಅವರೆಲ್ಲ ಎಳೆದು ತರುತ್ತಿದ್ದಂತೆ ವಿಚಲಿತ ಗೋಪುರ ಅದುರಲು ಶುರುವಾಯಿತು. ಸಾಲುಕಂಬಗಳ ಮಾಡಿನ ಕೆಳಗೆ ಇನ್ನೂ ಫೋಟೋಗಳನ್ನು ನೋಡುತ್ತಲೇ ಕೂತಿದ್ದ ಕಲಾವಿದರು ಫೋಟೋಗಳನ್ನು ನೋಡಿಕೊಂಡೇ ಹೊರಓಡಿದರು. ಬಾವಲಿಗಳ ಸತ್ತುಬೀಳುವಂಥ ಅರಚಾಟ ಜೋರಾಯಿತು. ಮತ್ತೆ ಬಂದಿದ್ದ ಹಂದಿಗಳನ್ನು ಚೋಮಿ ಅಟ್ಟಲು ಪ್ರಾಂಗಣದ ಸುತ್ತಾ ಓಡಾಡಲು ಹತ್ತಿದವು. ಎಲ್ಲರೂ ರಾಜವೀದಿಯಲ್ಲಿ ಓಟಕಿತ್ತರು. ವರಾಹಗಳೆಲ್ಲ ಗರ್ಭಗುಡಿಯಲ್ಲಿ ಹೊಕ್ಕವು. ಗೋಪುರ ಹೇಳಹೆಸರಿಲ್ಲದಂತೆ ಮಣ್ಣಲ್ಲಿ ಹುದುಗಿತು. ವರಾಹನ ಕೃಪೆಯಿಂದ ಉದ್ದ ಮೂರ‌್ನಾಮ ಬಳಿಸಿಕೊಂಡ ಮೂರ್ತಿ ಗಂಭೀರನಗೆ ಬೀರಿತು. ವಿಗ್ರಹ ಹೊರತು ಮಿಕ್ಕವೆಲ್ಲ ಮಣ್ಣಲ್ಲಿ ಹುದುಗಿದವು. ಪೂರ್ಣನ ಮನಸ್ಸು ವಿಷ್ಣುಚಕ್ರದಂತೆ ತೀರ್ಥಕ್ಕೆ ಬಿದ್ದ ಗದೆಯ ಸುತ್ತಾ ಸುತ್ತುತ್ತಿತ್ತು.
***
ಪೂರ್ಣ ಪ್ರೀತಿಸಿದ ಹುಡುಗಿಯು ಅವನ ಮನೆಯಲ್ಲಿ ಅವನ ತಂಗಿಯ ಜೊತೆಗಿರಬೇಕೆ. ಅವನಿಗೆ ತಾನು ಬದುಕುತ್ತಿರುವುದಾದರೂ ಎಲ್ಲಿ ಅನ್ನಿಸಿತು. ನಾಯಿಗಳು ಅವನನ್ನು ನೋಡಿ ಮೊದಲು ಬೊಗಳಿದರೂ ಕುಂಯ್ ಗುಡುತ್ತಾ ಸುಮ್ಮನಾದುದು ಅವನಿಗೆ ಆಶ್ಚರ್ಯ ತರಿಸಿತು. ಅವಳೇಕೆ ಇಲ್ಲಿಗೆ ಬಂದಳು ಎಂದುಕೊಂಡ. ಅವನ ನಾಟಕ, ಪ್ರೀತಿಯನ್ನು ಹಳಹಳಿಸಿ ಡೆಹ್ರಾಡೂನಿಗೆ ಹೋಗಿದ್ದ ಅವಳು ಮತ್ಯಾಕೆ ಬಂದಳು. ಅದು ಈ ಸರಿರಾತ್ರಿ. ಅವಳ ನಿರ್ಲಿಪ್ತ ನೋಟವ ನೋಡಿ ಹೃದಯ ತೂಕವಾಯಿತು. ತಲೆ ವಿಚಲಿತವಾಯಿತು. ಪ್ರಸಾದ್ ಸರ್‌ರ ಮಾನವ ಮಂಟಪ ಗಿರಿಕೆ ಹೊಡೆಸಿತು. ಅವಳು ನಕ್ಕಳು.. ಇವನೂ... ತಂಗಿ ನಕ್ಕು ಅವರಿಬ್ಬರ ತಬ್ಬಿದಳು.
***
ಪ್ರಸಾದ್‌ಗಳು ಏನೂ ಆಗೇ ಇಲ್ಲ ಎನ್ನುವಂತೆ ಎಲ್ಲರನ್ನು ಮುಂದಿನ ನಾಟಕ ಪ್ರದರ್ಶನಕ್ಕೆ ಬಸ್ ಹತ್ತಿಸಿದರು. ಚೋಮಿ ಕೆನೆಯುತ್ತಾ ಧೂಳದುರಿಸಿ ಬಂತು. ವಿಚಲಿತ ಗೋಪುರವು ಅವಸಾನವಾದುದನ್ನು ನೋಡಿ ಅವನ ಮನ ಇನ್ನು ವಿಚಲಿತವಾಗಿತ್ತು. ಅವನನ್ನು ನೋಡಿದ ಪ್ರಸಾದ್ ಸರ್, `ಮನ ಯಾವತ್ತು ವಿಚಲಿತ ಅಲ್ಲವೇ ಅಲ್ಲ. ಗುಡಿಗೋಪುರ, ಮಂದಿರ ಮಸೀದಿ ಇಗರ್ಜಿಗಳ ಬಿಟ್ಟು ಹೊರಬನ್ನಿ ಅಂಥ ಹೇಳಿದ ಕವಿ ಯಾಕೆ ನಮ್ಮನ್ನ ಕಾಡುತ್ತಾನೆ. ಯೋಚಿಸಿ ನೋಡೋconstant ಅನ್ನೋದು ಜಗತ್ತಲಿ ಇಲ್ಲವೇ ಇಲ್ಲ. ಎಲ್ಲವನ್ನೂ ನೋಡೋ ಕ್ರಮ ಹಾಗಿರಬೇಕೆ ಹೊರತು ದಿಗಿಲಾಗಿ ಮನಪೀಡಿತವಾಗಿ ವಿಚಾರಗಳ ನೋಡಲೇಬಾರದು. ಅತಿವಾಸ್ತವ ನಮಗಿರಬೇಕು, ಅಂದರೆ surrealism ಥರ. ಅದಕ್ಕೆ ಬಸವಣ್ಣ ಹೀಗಂದಿದಾನೆ:

he rich will make temples for shiva.
What shall I, a poor man,do?
My legs are pillars,
the body the shrine,
the head a cupola of gold.
Listen, 0 lord of the meeting rivers,
things standing shall fall,
but the moving ever shall stay.
ಏನ್ ಹೇಳು
things standing shall fall,
but the moving ever shall stay.

ತಿಳಕೋ ಪೆದ್ದ ಅಂತ ಮೊಟಕಿದರು'. ಇವನಿಗೆ ವಿಚಲಿತ ಗೋಪುರ, ಮನಸ್ಸು, ಜವ್ರ ಅವನ ಹಸುಗಳು ಯೀರ, ತಿಮ್ಮಪ್ಪ. ಅವನು ಬರೆದ ನಾಮ. ಗದೆ, ಬೈರಿ, ಜಾನು, ಚೆಲುವ, ಚೋಮಿ, ಸೋಮ, ಮಂಜ, ಗೆಳತಿ, ಪ್ರಸಾದ್ಗಳ ಹೊಗೆ, ಮಾತು, ಮಾನವ ಮಂಟಪ, ಬಾವಲಿ. ಹಂದಿ ಹಾದುಹೋದವು. ಗೊತ್ತಿಲ್ಲದೇ ಪ್ರಸಾದಿಯ ಮೋಟಾರು ಗಾಡಿ ಮನೆಯ ಕಡೆ ಹಾದುಹೋಯ್ತು.
***
things standing shall fall,
but the moving ever shall stay. ಎಂದು ಗುನುಗುತ್ತಿದ್ದಾಗ ಸದ್ದೇನೆಂದು ನೋಡಲು ಕಿರ‌್ರೆಂದು ಬಡಿದುಕೊಳ್ಳುತ್ತಿದ್ದ ಗಡಿಯಾರದ ತಲೆಯ ಬಡಿದು ಆಚೆ ಬಂದನು. ಅವನ ಗೆಳತಿ ಪ್ರಸಾದ್ಗಳ ಜೊತೆ ಬಂದಿದ್ದಳು. ಅವನು ನಗುತ್ತಲೇ  ಮನೆಯಲ್ಲಿ ಗತಿಸಿದ ಹಿರಿಯರ ಫೋಟೋಗಳ ನೋಡಿದನು. ವಿಚಲಿತನಾಗದೇ ತಂಗಿಯೊಂದಿಗೆ ಮಾನವ ಮಂಟಪದ ದಾರಿ ಹಿಡಿದನು. ಹಿಡಿದ ಮಂಜಿನ ಹಾದಿ ಬೆಚ್ಚಗಿತ್ತು. ದಾರಿಯಲ್ಲಿ ತಿಮ್ಮನ ನೋಡಿ ನಕ್ಕ ಪೂರ್ಣ ಗೆಳತಿಯ ನಗುವನ್ನು ನೋಡಿ surrealismಇದೇನಾ ಅನ್ನಿಸಿ ಕಣ್ಣುಮುಚ್ಚಿದನು. ರಾತ್ರಿಯ ಎಲ್ಲರ ಎಲ್ಲವ ನೆನೆದನು.

ಅಷ್ಟರಲ್ಲಿ ಮಾನವ ಮಂಟಪ ಬಂದಿತು. ವೇದಿಕೆಯ ತಳಿರು ತೋರಣಗಳನ್ನು ನಾಟಕ ಕಲಾವಿದ ಗೆಳೆಯರು ಸಿಂಗರಿಸಿದ್ದರು. ಮಂತ್ರ ಮಾಂಗಲ್ಯ ಸೋಮನ ಕೈಯಲ್ಲಿತ್ತು. ಅವನ ಹಿಂದೆಯೆ ಚೋಮಿ. ಮನದ ತೂಕವು ಹೃದಯಕ್ಕೆ ಹಾಯಿತು. ಮನದ ಗೋಪುರ ಮತ್ತೆ ವಿಚಲಿತ. ಪ್ರಸಾದ್ ಸರ್ ಬೆನ್ನುತಟ್ಟಿದರು. ಪ್ರಸಾದಿ ಬಿಗಿದಪ್ಪಿದ. ಎಲ್ಲಾ ಸ್ನೇಹಿತರ ಹರ್ಷೋದ್ಗಾರ ಪೂರ್ಣನ ಹೃದಯ ತೂಕವನ್ನು ಅತಿಯಾಗಿಸಿತು. ಗೆಳತಿ ಪೂರ್ಣನ ಕೈ ಹಿಡಿದು ವೇದಿಕೆಗೆ ಕರೆದೊಯ್ದಳು. ಹಿತವೆನಿಸಿತು. this moving ever shall stay  ಎಂದುಕೊಂಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT