ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರ ಪ್ರಚೋದಕ ವೈಜ್ಞಾನಿಕ ಆಟಿಕೆ

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನೂರು ಕಣ್ಣು ಸಾಲದು

ವೈಜ್ಞಾನಿಕ ಆಟಿಕೆಯಾಗಿ ಮೂಡಿಬಂದ ಚಲನಚಿತ್ರ ಮನರಂಜನೆಯ ಮಾಧ್ಯಮವಾಗಿ ಪ್ರಚಲಿತವಾದರೂ ಆಯಾ ದೇಶಕಾಲ ಪರಿಸ್ಥಿತಿಗಳ ಪ್ರತಿಬಿಂಬವಾಗಿಯೂ ಜನರನ್ನು ತಲುಪಲಾರಂಭಿಸಿತು.

ವಾಕ್ಚಿತ್ರ ಉದಯಿಸಿದ ಸಂದರ್ಭದಲ್ಲಿ ಭಾರತದ ಉದ್ದಗಲಕ್ಕೂ ಸ್ವಾತಂತ್ರ್ಯ ಹೋರಾಟ ಪ್ರತಿಧ್ವನಿಸುತ್ತಿತ್ತು. ಮನರಂಜನಾ ಉದ್ದೇಶಗಳಿಗಾಗಿ ವ್ಯಾಪಾರಿ ಚಿತ್ರಗಳ ನಿರ‌್ಮಾಣದ ಭರಾಟೆ ಜೋರಾಗಿದ್ದರೂ ಸ್ವಾತಂತ್ರ್ಯದ ಅಭಿಲಾಷೆ, ಸಮಾನತೆಯ ಕನಸುಗಳುಳ್ಳ ವಸ್ತುಗಳನ್ನು ಒಳಗೊಂಡ ಚಿತ್ರಗಳಿಗೇನೂ ಬರವಿರಲಿಲ್ಲ.

ಭಾರತದಂತಹದ ಬೃಹತ್ ದೇಶವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದ್ದ ಬ್ರಿಟಿಷ್ ಸರ್ಕಾರಕ್ಕೆ ಇಂತಹ ಚಿತ್ರಗಳು ಅಪಥ್ಯ. ಆದರೂ ಅಸ್ಪೃಶ್ಯತೆ ಹೋಗಲಾಡಿಸುವ ವಸ್ತು ಹಂದರವಿದ್ದ `ಅಚೂತ್ ಕನ್ಯಾ' ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು. ದೇವಿಕಾರಾಣಿ ಅಶೋಕ್‌ಕುಮಾರ್ ಅಭಿನಯವಿದ್ದ `ಅಚೂತ್ ಕನ್ಯಾ' ತಳಸಮುದಾಯದ ಹುಡುಗಿ ಹಾಗೂ ಮೇಲ್ವರ್ಗದ ಯುವಕನ ಪ್ರಣಯ ಕಥೆ ಹೊಂದಿದ್ದ ಚಲನಚಿತ್ರ.

ಮುಂಬೈನ ಬಾಂಬೆ ಟಾಕೀಸ್ ಚಿತ್ರನಿರ‌ಮಾಣ ಸಂಸ್ಥೆ ತಯಾರಿಸಿದ `ಅಚೂತ್ ಕನ್ಯಾ' ಸಮಾನತೆಯ ಸಮಾಜವನ್ನು ಪ್ರಚೋದಿಸಿದ ಕಲಾಕೃತಿ, ಹಿಂದಿ ಭಾಷೆಯಲ್ಲಿ ಸಿದ್ಧಗೊಂಡ ಈ ಚಿತ್ರ ದಶಕಗಳ ನಂತರವೂ ಚರ್ಚೆಯಲ್ಲಿರುವ ಚಿತ್ರ.

ಚಿತ್ರ ತಯಾರಿಕೆಯಲ್ಲಿ ಜಾಗತಿಕವಾಗಿಯೂ ಸುದ್ದಿಯಲ್ಲಿದ್ದ ಭಾರತದಲ್ಲಿ ಚಲನಚಿತ್ರಗಳಿಂದ ತಮ್ಮ ಅಸ್ತಿತ್ವಕ್ಕೆ ಅಪಾಯ ತರುತ್ತಿದೆಯೆಂಬ ಅನುಮಾನ ಬ್ರಿಟಿಷರನ್ನು ಕಾಡತೊಡಗಿತು. ಪರಕೀಯರ ಆಳ್ವಿಕೆಯಿಂದ ಬಿಡುಗಡೆ ಪಡೆಯಲು ಅಹಿಂಸಾ ತತ್ವದ ಮೂಲಕ ಸಾಧ್ಯವೆಂಬುದನ್ನು ಬಾಪೂಜಿ ತೋರಿಸಿಕೊಡುತ್ತಿದ್ದ ಆ ಸಮಯದಲ್ಲಿ `ಅಪ್ನಾ ಘರ್' ತೆರೆಗೆ ಬಂತು. ದೇವಕಿ ಬೋಸ್ ನಿರ್ಮಿಸಿದ `ಅಪ್ನಾ ಘರ್' ಆಗಿನ ಭಾರತೀಯ ಮನಸ್ಸುಗಳ ಆಶಯವನ್ನು ಹೊತ್ತು ತಂದಿತ್ತು. ಸೊಹ್ರಾಬ್ ಮೋದಿಯವರ `ಸಿಕಂದರ್' ಚಿತ್ರ ಕೂಡ ಇದನ್ನೇ ಧ್ವನಿಸಿತ್ತು.

ಅಷ್ಟೊತ್ತಿಗೆ ಪ್ರಾರಂಭವಾಗಿದ್ದ ಎರಡನೇ ಮಹಾಯುದ್ಧದಿಂದಾಗಿ ಚಿತ್ರ ತಯಾರಿಕೆಗೆ ಅಗತ್ಯವಾಗಿದ್ದ ಕಚ್ಛಾಫಿಲ್ಮ್ ಅಭಾವ ಒಂದೆಡೆಯಾದರೆ ರಾಷ್ಟ್ರ ಬಿಡುಗಡೆ ಆಂದೋಲನವನ್ನು ಬೆಂಬಲಿಸುವ ಚಿತ್ರಗಳನ್ನು ಹತ್ತಿಕ್ಕುವ ಪ್ರಯತ್ನ ಇನ್ನೊಂದೆಡೆ. ಬ್ರಿಟಿಷ್ ಸರ್ಕಾರ ಇದನ್ನೇ ನೆಪವಾಗಿಟ್ಟುಕೊಂಡು ಚಿತ್ರ ನಿರ್ಮಾಣ ಹಾಗೂ ಪ್ರದರ್ಶನ ನಿಯಂತ್ರಣಕ್ಕೆ ಕೈಹಾಕಿ ಕೆಲವು ನಿಯಮಗಳನ್ನು ಜಾರಿಗೊಳಿಸಿತು.
ಚಿತ್ರ ನಿರ್ಮಾಣ ಸಂಖ್ಯೆಗೆ ಮಿತಿ ಹಾಕಿದ ಸರ್ಕಾರ ಚಲನಚಿತ್ರಗಳ ಉದ್ದಕ್ಕೂ ಇಂತಿಷ್ಟೇ ಅಡಿಗಳ (11,000 ಅಡಿ) ಮಿತಿ ಹೇರಿತು. ಚಿತ್ರ ತಯಾರಿಕೆಗೆ ಅನುಮತಿ ಕಡ್ಡಾಯಗೊಳಿಸಿದ ಈ ಕಾನೂನಿನಲ್ಲಿ ಪ್ರತಿಚಿತ್ರದ ಪ್ರದರ್ಶನ ವೇಳೆ ಯುದ್ಧ ಪ್ರಚಾರ ಕಿರುಚಿತ್ರವನ್ನು ಕಾಯಮ್ಮಾಗಿ ಪ್ರದರ್ಶಿಸುವ ಷರತ್ತನ್ನು ವಿಧಿಸಿತು!

ವರ್ಷಕ್ಕೆ ಮೂರು ಚಿತ್ರಗಳನ್ನು ಮಾತ್ರ ಚಿತ್ರ ನಿರ್ಮಾಪಕರು ತಯಾರಿಸಬೇಕೆಂದು, ಚಿತ್ರ ತಯಾರಿಕೆಗೆ ಸರ್ಕಾರದಿಂದ ಅನುಮತಿ ಪಡೆಯಬೇಕೆಂದು ಕಾನೂನು ಮಾಡಿದ ಬ್ರಿಟಿಷರು ತಯಾರಿಸಿದ ಮೂರು ಚಿತ್ರಗಳಲ್ಲಿ ಒಂದಾದರೂ `ಯುದ್ಧ ಪ್ರಚಾರ' ವಸ್ತುವಿರಬೇಕೆಂದು ತಾಕೀತು ಮಾಡಿತು.

ನೇರವಾಗಿ ಸೆನ್ಸಾರ್‌ಷಿಪ್ ಶುರುಮಾಡಿದ್ದ ಸರ್ಕಾರಕ್ಕೆ ಒಳಸುಳಿಗಳಿರುವ, ಜನರ ಹೃದಯಕ್ಕೆ ರಾಷ್ಟ್ರೀಯತೆಯನ್ನು ಮುಟ್ಟಿಸುವ, ನೆಲಸೊಗಡಿನ ಐತಿಹಾಸಿಕ, ಪೌರಾಣಿಕ ಚಿತ್ರಗಳನ್ನು ತಯಾರಿಸಲು ಆರಂಭಿಸಿದ ಭಾರತೀಯ ಚಿತ್ರ ನಿರ್ಮಾಪಕರು ಜಾನಪದ ಗೀತೆಗಳನ್ನು ಚಿತ್ರಗಳಲ್ಲಿ ಅಳವಡಿಸಿ ಜನಜಾಗೃತಿ ಮೂಡಿಸಲು ಶುರುಹಚ್ಚಿಕೊಂಡರು.

ಹಿಂದಿ ಮಾತ್ರವಲ್ಲ ಪ್ರಾಂತೀಯ ಭಾಷೆಗಳಲ್ಲೂ ಇಂತಹ ಚಿತ್ರಗಳು- ಸ್ವಾತಂತ್ರ್ಯ ಉದ್ದೀಪನಗೊಳಿಸುವ ಗೀತೆಗಳು- ಪ್ರೇಕ್ಷಕರನ್ನು ತಲುಪಿದರು. ಬಾಂಬೇ ಟಾಕೀಸ್‌ನ `ಕಿಸ್ಮತ್' ಇಂತಹ ಪರಿಣಾಮಕಾರಿ ಸಂದೇಶ ಹೊಂದಿದ್ದ ಚಿತ್ರಗಳಲ್ಲೊಂದು. ಸೆನ್ಸಾರ್ ಮೂಗಿನಡಿಯಲ್ಲಿ ಬಂದಿದ್ದರೂ ಕಿಸ್ಮತ್‌ನ ಹಾಡೊಂದು (“ದೂರ್ ಹಟೋ ಏ ದುನಿಯಾ ವಾಲೆ...”) ಸ್ವಾತಂತ್ರ್ಯ ಪ್ರೇಮಿ ಭಾರತೀಯರಿಗೆ ಇಷ್ಟವಾಯಿತು. ಬ್ರಿಟಿಷರಿಗೆ ಭಾರತ ಬಿಡುವಂತೆ ಎಚ್ಚರಿಕೆ ನೀಡುವ ಸಂದೇಶ ಈ ಹಾಡಿನಲ್ಲಿ ಅಡಗಿತ್ತು.

ಬಿಮೆಲ್‌ರಾಯ್ ನಿರ್ದೇಶಿಸಿದ `ಹಮ್‌ರಾಹಿ' (ನ್ಯೂ ಥಿಯೇಟರ್ಸ್‌ ನಿರ್ಮಾಣ) ಸ್ವಾತಂತ್ರಾಭಿಲಾಷೆಯ ವಸ್ತುವನ್ನು ಹೊಂದ್ದ್ದಿದ ಇನ್ನೊಂದು ಚಿತ್ರ. ದಕ್ಷಿಣದಲ್ಲಿ ವಾಹಿನಿ ಸಂಸ್ಥೆಯವರ `ಪೋತನ' ಹಾಗೂ `ಸ್ವರ್ಗಸೀಮಾ' ಚಿತ್ರಗಳೂ ಭಾರತೀಯ ಮನಸ್ಥಿತಿಯ ಪ್ರತೀಕವಾಗಿದ್ದವು.

ಸೆನ್ಸಾರ್ ಕತ್ತರಿ ಪ್ರಯೋಗಕ್ಕೆ ಅವಕಾಶವೇ ಇಲ್ಲದಂತೆ ಕಥಾಹಂದರವನ್ನು ಕಟ್ಟುವ ಕಲೆಯನ್ನು ಭಾರತೀಯ ಚಿತ್ರಕರ್ಮಿಗಳು ಕರಗತ ಮಾಡಿಕೊಂಡರಲ್ಲದೆ ಆ ಕಾಲಮಾನದ ವಾಸ್ತವ ಚಿತ್ರಣವನ್ನು ತಮ್ಮ ಚಿತ್ರಗಳಲ್ಲಿ ಅಂತರ್ಗತವಾಗುವಂತೆ ಮಾಡುವ ಬುದ್ಧಿವಂತಿಕೆಯನ್ನು ಮೆರೆದರು.

ಪೌರಾಣಿಕ, ಚಾರಿತ್ರಿಕ ಕಥೆಗಳು ವಿಚಾರ ಪ್ರಚೋದಕವಾಗಿರುವಂತೆ ಚಿತ್ರಕಥೆಗಳನ್ನು ಕಟ್ಟಿದ ಭಾರತೀಯ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರು ಆಯಾ ಸಮಯದಲ್ಲಿ ಘಟಿಸಿದ ಘಟನೆಗಳನ್ನೂ ಪರಿಣಾಮಕಾರಿ ಚಿತ್ರಗಳನ್ನಾಗಿ ನಿರೂಪಿಸಿದರು. ಚೇತನ್ ಆನಂದ್ ಅವರ `ನೀಚನಗರ್' ಇದಕ್ಕೊಂದು ಉದಾಹರಣೆ.

ಪ್ರಭಾತ್ ಚಿತ್ರ ತಯಾರಿಕಾ ಸಂಸ್ಥೆಯ `ರಾಮಶಾಸ್ತ್ರೀ' ಚಿತ್ರ ಹೀಗೆಯೇ ಪ್ರೇಕ್ಷಕರನ್ನು ಸೆಳೆದರೆ `ರಾಮರಾಜ್ಯ', `ಭರತ್‌ಮಿಲಾಪ್' ಚಿತ್ರಗಳೂ ನೋಡುಗರನ್ನು ತಲುಪಿದವು.

ಬಂಗಾಲದಲ್ಲಿ ಸಂಭವಿಸಿದ ಭೀಕರ ಬರಗಾಲವನ್ನು ಸೆಲ್ಯೂಲಾಯ್ಡನಲ್ಲಿ ತಂದಿದ್ದು `ಧರ್ತಿಕಾಲಾಲ್'. ಇದು ಕೇವಲ ಕ್ಷಾಮಡಾಮರಗಳನ್ನು ಚಿತ್ರಿಸಲಿಲ್ಲ. ಅಂತಹ ಭೀಕರ ಸ್ಥಿತಿಗೆ ಕಾರಣಗಳನ್ನು, ಅದರಿಂದಾದ ದುಷ್ಪರಿಣಾಮಗಳನ್ನು ರೂಪಕ ಚಿತ್ರವಾಗಿ ಬಿಂಬಿಸಿತು.

ರಂಜನೆಗಾಗಿ ಮಾತ್ರ ಚಲನಚಿತ್ರಗಳು ಎಂಬ ಭಾವನೆ ಹೋಗಲಾಡಿಸಿದ ಕೆಲವು ಭಾರತೀಯ ಚಿತ್ರಗಳು ನಮ್ಮ ದೇಶವಲ್ಲದೆ ವಿದೇಶಗಳಲ್ಲೂ ಮನ್ನಣೆ ಪಡೆದವು. ಸ್ವಾತಂತ್ರ್ಯ ಸಂಗ್ರಾಮಕ್ಕೂ ಒತ್ತು ನೀಡಿದ ಇಂತಹ ಕೆಲ ಚಿತ್ರಗಳು ವಿಚಾರ ಪ್ರಚೋದಕ ವಾಹಕಗಳಾಗಿಯೂ ಕೆಲಸ ಮಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT