ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರ ಸಂಕಿರಣ ಆಗಲಿ ಅರ್ಥಪೂರ್ಣ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಅದೊಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ. ಅದಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಒಂದಿಷ್ಟು ನೆರವು. ದೊಡ್ಡದಾದ ಸಭಾಂಗಣದಲ್ಲಿ ಜರುಗುತ್ತಿದ್ದ ಆ ಸಮ್ಮೇಳನಕ್ಕೆ ಬಂದಿದ್ದ ಅತಿಥಿಗಳು, ವಿಷಯ ಮಂಡನೆಕಾರರು, ಪತ್ರಿಕಾ ವರದಿಗಾರರು ಮತ್ತು ಒತ್ತಾಯದಿಂದ ಒಳತಳ್ಳಿದಂತೆ ಬಂದು ಕುಳಿತಿದ್ದ ವಿದ್ಯಾರ್ಥಿಗಳನ್ನೂ ಒಳಗೊಂಡು ಇದ್ದವರ ಸಂಖ್ಯೆ ಹೆಚ್ಚೂ ಕಡಿಮೆ ನೂರರ ಆಚೆ ಈಚೆ.

ಬೆಳಗಿನ ತಿಂಡಿ ಮುಗಿಸಿ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಆ ಸಮೂಹದಲ್ಲಿ ಕಾಲು ಭಾಗದಷ್ಟು ಮಂದಿ ಇಡೀ ಕಾರ್ಯಕ್ರಮ ಮುಗಿಯುವವರೆಗೂ ಆಕಳಿಸುತ್ತಲೇ ಕುಳಿತಿದ್ದರು. ಇನ್ನು ಕಾಲು ಭಾಗದಷ್ಟು ಜನ ಅದಾಗಲೇ ನಿದ್ದೆಗಿಳಿದಿದ್ದರು. ಮತ್ತೊಂದು ಕಾಲು ಭಾಗ ದೈಹಿಕವಾಗಿ ಉಪಸ್ಥಿತರಿದ್ದರೇ ಹೊರತು ಮಾನಸಿಕವಾಗಿ ಅಲ್ಲ. ಇನ್ನು ಸಂಘಟಕರು ಮತ್ತು ಕಾರ್ಯಕ್ರಮಕ್ಕೆ ಬಂದವರಿಗೆ ಅದು ಬಿಡದ ಕರ್ಮ. ಇಷ್ಟವೋ, ಕಷ್ಟವೋ... ಅಂತೂ ಸೆಮಿನಾರ್ ಮುಗಿಯುತ್ತದೆ.

***
ಅದು ವಿಚಾರ ಸಂಕಿರಣದಲ್ಲಿ ನಾನು ಮಂಡಿಸಹೊರಟ ಮೊತ್ತ ಮೊದಲ ಪತ್ರಿಕೆ. ರಾಣೆಬೆನ್ನೂರಿನ ಕಾಲೇಜೊಂದರಲ್ಲಿ ಆ ಸಂಕಿರಣವನ್ನು ಸಂಘಟಿಸಲಾಗಿತ್ತು. ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಒಂದಷ್ಟು ವಿವರಗಳನ್ನು ಅಲ್ಲಿ ಮಂಡಿಸಬಹುದು ಎಂಬ ಕಾರಣಕ್ಕೆ ನಾನು ತುಂಬ ಆಸಕ್ತಿ ಮತ್ತು ಉತ್ಸಾಹದಿಂದ ಇದ್ದೆ. ವೇದಿಕೆಯಲ್ಲಿದ್ದ ಅತಿಥಿಗಳು, ಆಶಯ ಭಾಷಣಕಾರರು ಗಂಟೆಗಟ್ಟಲೆ ಮಾತನಾಡಿದರು. ಆಗ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಹಾನುಭಾವರು `ಈಗಾಗಲೇ ಸಮಯ ಸಾಕಷ್ಟಾಗಿದೆ. ಹಾಗಾಗಿ ನಿಮ್ಮ ವಿಷಯವನ್ನು 2-3 ನಿಮಿಷಗಳಲ್ಲಿ ಮಂಡಿಸಬೇಕು' ಎಂದರು. ನನಗಾಗ ಏನು ಮಾತನಾಡುವುದು, ಹೇಗೆ ವಿಷಯವನ್ನು ಮಂಡಿಸುವುದು ಎಂಬುದೇ ತಿಳಿಯದೆ ಒಂದು ತೀರ್ಮಾನಕ್ಕೆ ಬಂದೆ. ನನಗೆ ನೀಡಿರುವ ಈ ಮೂರು ನಿಮಿಷವನ್ನು ನನ್ನ ನಂತರ ವಿಷಯ ಮಂಡಿಸಲಿರುವವರಿಗೆ ದೇಣಿಗೆಯಾಗಿ ನೀಡುತ್ತೇನೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದೆ. ಆಗ ನನಗೆ ಈ ವಿಚಾರ ಸಂಕಿರಣಗಳ ರೂಪುರೇಷೆಗಳು ಆಮೂಲಾಗ್ರವಾಗಿ ಬದಲಾಗಬೇಕಿದೆ ಎನಿಸಿತು.

***
ಬಹುತೇಕ ಶೈಕ್ಷಣಿಕ ವಿಚಾರ ಸಂಕಿರಣಗಳು ಹೀಗೆ ಅಂತೂ ಇಂತೂ ಮುಗಿಯುತ್ತವೆ ಹೊರತು, ಅಲ್ಲಿ ಚರ್ಚಿಸಬೇಕಾದ ವಿಷಯದ ಮೇಲೆ ಹೊಸ ಬೆಳಕು ಚೆಲ್ಲುವ, ಒಂದು ಅರ್ಥಪೂರ್ಣವಾದ ವಿಸ್ತೃತ ವರದಿಯನ್ನು ಕೊಡುವ ಕ್ರಿಯಾಶೀಲ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದು ಕಡಿಮೆ.

ಇನ್ನು ವಿಷಯ ಮಂಡನೆಗೆ ಬರುವ ಪ್ರತಿನಿಧಿಗಳಿಗೆ ಸಿಗುವ ಸಮಯ ಹೆಚ್ಚೆಂದರೆ ಐದು ನಿಮಿಷ. ಈ ಅಲ್ಪ ಸಮಯದಲ್ಲಿ ಅವರು ತಮ್ಮ ವಿಷಯದ ಒಟ್ಟು ಸಾರ ಸಂಗ್ರಹವನ್ನು ಮಂಡಿಸಬೇಕು. ಇನ್ನು ವಿಷಯ ಮಂಡನಕಾರರಾಗಿ ಬಂದವರಲ್ಲಿ ಹಲವರು, ಸಾರಾಸಗಟಾಗಿ ತಾವು ತಯಾರಿಸಿಕೊಂಡು ಬಂದ ಪತ್ರಿಕೆಯನ್ನು ಎದುರಿಗೆ ಇಟ್ಟುಕೊಂಡು ಬಡಬಡ ಓದಿ ಮುಗಿಸುವುದೇ ಹೆಚ್ಚು. ಈ ಬಗೆಯ ಯಾಂತ್ರಿಕ ಓದುವಿಕೆಯ ನಡುವೆ ಸಭಾಂಗಣದಲ್ಲಿ ಇದ್ದವರ ಕಣ್ಣುಗಳು ಸಹಜವಾಗಿಯೇ ತೂಗುತ್ತವೆ. ಹೀಗೆ ಹಲವು ಸಂಕಿರಣಗಳು ತೀರಾ ಯಾಂತ್ರಿಕವಾಗಿ ಕೊನೆಗೊಳ್ಳುತ್ತವೆ. ಆದರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಹಕಾರ ಮಾತ್ರ ಅಚ್ಚುಕಟ್ಟಾಗಿ ಬಳಕೆಯಾಗಿರುತ್ತದೆ. ಅಷ್ಟೇ ವ್ಯವಸ್ಥಿತವಾಗಿ ಆ ಸಂಕಿರಣದ ಆಶಯ ಈಡೇರಿರುವುದಿಲ್ಲ.

ವಿಷಯ ಸಕಾಲಿಕವಾಗಿರಲಿ
ಯಾವುದೋ ಒಂದು ನಿಷ್ಪ್ರಯೋಜಕವಾದ, ಕಾಲಬಾಹಿರವಾದ, ತೂಕಡಿಕೆ, ಆಕಳಿಕೆಗಳಿಗೆ ಹೇಳಿ ಮಾಡಿಸಿದಂತಿರುವ ವಿಷಯಗಳಿದ್ದರೆ ಸಂಕಿರಣಗಳು ನಡೆಯುವ ಸಭಾಂಗಣವೂ ಭಣಭಣ, ಅಲ್ಲಿ ಕುಳಿತವರ ಮೆದುಳೂ ಭಣಭಣ. ಪಾಲ್ಗೊಂಡ ಪ್ರತಿಯೊಬ್ಬರೂ ಕಿವಿ, ಕಣ್ಣು ತೆರೆದು ಅತ್ಯಂತ ಆಸಕ್ತಿಯಿಂದ ಗ್ರಹಿಸುವಂತಹ ವಿಷಯವನ್ನು ಸಂಕಿರಣದ ಪ್ರಮುಖ ವಿಷಯವನ್ನಾಗಿ ಇಟ್ಟುಕೊಳ್ಳಬೇಕು. ಅದನ್ನು ನಿರ್ಧರಿಸುವಾಗ ಹತ್ತಾರು ಅಭಿಪ್ರಾಯಗಳನ್ನು ಸಂಗ್ರಹಿಸಿ, ಒಂದು ತೀರ್ಮಾನಕ್ಕೆ ಬರಬೇಕು. ಯಾವುದೋ ಅಪ್ರಸ್ತುತ ವಿಷಯವನ್ನು ಆಧರಿಸಿ ಸಂಕಿರಣ ಏರ್ಪಡಿಸುವುದರಿಂದ, ಪಾಲ್ಗೊಳ್ಳುವವರಲ್ಲಿ ಸಹಜವಾಗಿಯೇ ತಾತ್ಸಾರ ಮೂಡುತ್ತದೆ.

ಸಂಕಿರಣ ಆರಂಭಕ್ಕೆ ಮುನ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೂ ಭಾಷಣದ ಸಮಯವನ್ನು ಕರಾರುವಾಕ್ಕಾಗಿ ಹಂಚಬೇಕು. ಮುಖ್ಯ ಭಾಷಣಕಾರರಿಗೆ ಹೆಚ್ಚೆಂದರೆ 20 ನಿಮಿಷವನ್ನು ಮಾತ್ರ ನಿಗದಿಗೊಳಿಸಬೇಕು. ವಿಷಯ ಮಂಡಿಸುವವರಿಗೆ ಹತ್ತು ನಿಮಿಷಗಳನ್ನು ಸೀಮಿತಗೊಳಿಸಬೇಕು. ಹಾಗೆಯೇ ಸಾಧ್ಯವಾದರೆ, ಬಂದಿರುವ ಎಲ್ಲ ಪೇಪರ್‌ಗಳನ್ನೂ ಪರಿಶೀಲಿಸಿ, ತೀರಾ ಅರ್ಥವತ್ತಾಗಿರುವ ಹತ್ತು ಪೇಪರ್‌ಗಳ ಮಂಡನೆಗೆ ಮಾತ್ರ ಅವಕಾಶ ನೀಡಬೇಕು. ಸಾಧ್ಯವಾದಷ್ಟೂ ಓದುವುದನ್ನು ಕಡಿಮೆ ಮಾಡಿ, ವಿಷಯವನ್ನು ಸಹಜವಾಗಿ ಮಂಡಿಸುವಂತೆ, ಚರ್ಚಿಸುವಂತೆ ಇರಬೇಕು. ಮುಕ್ತವಾದ ಚರ್ಚೆಗೆ ಹೆಚ್ಚು ಅವಕಾಶ ನೀಡಬೇಕು.

ಬಹಳಷ್ಟು ವಿಚಾರ ಸಂಕಿರಣಗಳಲ್ಲಿ ಪ್ರಶ್ನೆಗಳು ಹುಟ್ಟುವುದೇ ಇಲ್ಲ. ಅದರರ್ಥ ಅಲ್ಲಿರುವ ಯಾರಿಗೂ ಸಂಶಯಗಳೇ ಇಲ್ಲ ಎಂದಲ್ಲ. ಮತ್ತದೇ ಭಾಷೆಯ ತೊಡಕು. ಇಡೀ ಸಂಕಿರಣದ ನಡಿಗೆ ಇಂಗ್ಲಿಷ್‌ನಲ್ಲೇ ಇದ್ದಾಗ ಆ ಭಾಷೆಯ ಮೇಲೆ ಹೆಚ್ಚು ಪ್ರಭುತ್ವ ಇಲ್ಲದ, ಪ್ರಾದೇಶಿಕ ಭಾಷೆಯಲ್ಲಿ ಆಸಕ್ತಿ ಇರುವ, ತಿಳಿವಳಿಕೆ ಇರುವ ಎಲ್ಲರಿಗೂ ಮೌನ ಮುರಿಯಲಾಗುವುದಿಲ್ಲ. ಹೀಗಾಗಿ ಹಲವು ಸಂಕಿರಣಗಳಲ್ಲಿ ಚರ್ಚೆಯೂ ಕಡಿಮೆ. ಪ್ರತಿ ಸಂಕಿರಣದಲ್ಲೂ ಪ್ರಾದೇಶಿಕ ಭಾಷೆಯಲ್ಲಿ ಪೇಪರ್ ಮಂಡಿಸಬೇಕಾದ, ಚರ್ಚಿಸಬೇಕಾದ ಅಗತ್ಯ ಇದೆ. ವಿದ್ವತ್‌ಪೂರ್ಣವಾದ ಪತ್ರಿಕೆಗಳನ್ನು ಆಯ್ಕೆ ಮಾಡಿ ಅಲ್ಲಿಯೂ ಅರ್ಧ ಪ್ರಾದೇಶಿಕ ಭಾಷೆಯಲ್ಲಿ, ಇನ್ನರ್ಧ ಆಂಗ್ಲ ಭಾಷೆಯಲ್ಲಿ ಸಂಯೋಜಿಸಿ ಗ್ರಂಥ ರೂಪದಲ್ಲಿ ಅವನ್ನೆಲ್ಲ ಪ್ರಕಟಿಸುವಂತೆ ಆಗಬೇಕು. ಆ ಮೂಲಕ, ಪಾಲ್ಗೊಳ್ಳುವ ಎಲ್ಲರಿಗೂ ಸಂಕಿರಣದ ಸಾರ್ಥಕತೆ ದಕ್ಕುವಂತೆ ಆಗಬೇಕು.

ಎಲ್ಲಿ ತಪ್ಪುತ್ತಿದೆ?
ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರ ಸಂಕಿರಣಗಳು ವೃತ್ತಿಗೆ ಅವಶ್ಯಕ ಆಗುತ್ತಿವೆಯೇ ಹೊರತು ಅಧ್ಯಾಪಕರ ಪ್ರವೃತ್ತಿಗೆ ಹತ್ತಿರವಾಗುತ್ತಿಲ್ಲ. ಕೇವಲ ಪ್ರಮಾಣಪತ್ರಗಳನ್ನು ಪಡೆಯುವ ಸಲುವಾಗಿ, ಅದಕ್ಕೆ ಭವಿಷ್ಯದಲ್ಲಿ ಒಂದಷ್ಟು ಅಂಕಗಳು ಲಭ್ಯವಾಗುತ್ತವೆ ಎನ್ನುವ ಹಿನ್ನೆಲೆಯಲ್ಲಿ ಸಂಕಿರಣಗಳಲ್ಲಿ ಪಾಲ್ಗೊಳ್ಳುವವರೇ ಹೆಚ್ಚು ಮಂದಿ. ಇದರ ಪರಿಣಾಮವಾಗಿ ವಿಷಯವನ್ನು ಮಂಡಿಸುವವರು ಓದಿ ಮುಗಿಸಿದ್ದೇ ತಡ, ಮೊದಲು ಪ್ರಮಾಣಪತ್ರ ಪಡೆಯಲು ಚಡಪಡಿಸತೊಡಗುತ್ತಾರೆ. ಅವರ ಗಮನವೆಲ್ಲ ಪ್ರಮಾಣಪತ್ರ ಪಡೆಯುವುದರತ್ತಲೇ ಇರುತ್ತದೆ.

ಸಾಮಾನ್ಯವಾಗಿ ವಿಚಾರ ಸಂಕಿರಣಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಕಾಣುವುದು ತೀರಾ ಅಪರೂಪ. ಅದಕ್ಕೆ ಪ್ರಮುಖ ಕಾರಣ ಭಾಷೆಯ ತೊಡಕು. ಕರ್ನಾಟಕದಲ್ಲಿ ಒಂದು ರಾಷ್ಟ್ರೀಯ ಸಂಕಿರಣವನ್ನು ಸಂಘಟಿಸಿದರೆ ಅಲ್ಲಿ ವಿಷಯ ಮಂಡನೆಯಿಂದ ಹಿಡಿದು, ಚರ್ಚಿಸುವ ತನಕ ಎಲ್ಲರೂ ಇಂಗ್ಲಿಷ್‌ನಲ್ಲೇ ವ್ಯವಹರಿಸುತ್ತಾರೆ. ಅದು ಅನಿವಾರ್ಯವೂ ಹೌದು. ನೆರೆಯ ತಮಿಳುನಾಡು, ಕೇರಳ ಮುಂತಾದ ಕಡೆಗಳಲ್ಲಿ ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆ ನೀಡುತ್ತಾರೆ. ಪ್ರಾದೇಶಿಕ ಭಾಷೆಯಲ್ಲೂ ವಿಚಾರ ಸಂಕಿರಣಗಳು ನಡೆಯುವಂತಾದರೆ ಸ್ವಲ್ಪ ವಿಸ್ತೃತವಾದ ಪಾಲ್ಗೊಳ್ಳುವಿಕೆ, ಚರ್ಚೆ ಸಾಧ್ಯವಾಗಬಹುದೇನೋ. ಇಂಗ್ಲಿಷ್‌ನ್ನು ಸಂವಹನದ ಸಾಧನವಾಗಿ ಬಳಸಿಕೊಳ್ಳೋಣ. ಆದರೆ ಆ ಮೂಲಕವೇ ನಮ್ಮ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಭ್ರಮೆಯಲ್ಲಿ ಸಾಕಷ್ಟು ತೊಡಕುಗಳಿವೆ. ನಮ್ಮ ನೆಲದ ಸಾಂಸ್ಕೃತಿಕ ಭಿನ್ನತೆಯ ಹಿನ್ನೆಲೆಯನ್ನು ಅರಿತವರು ಈ ಮಾತನ್ನು ಸಮ್ಮತಿಸಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT