ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗಾಗಿ ಮತ್ತೆ ನಾಲ್ವರು ವಶಕ್ಕೆ

ಬೋಧಗಯಾ ಸರಣಿ ಬಾಂಬ್ ಸ್ಫೋಟ ಪ್ರಕರಣ
Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಗಯಾ/ಪಟ್ನಾ/ನವದೆಹಲಿ (ಪಿಟಿಐ): ಬೋಧಗಯಾ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಗಳು ಮಹಿಳೆಯೊಬ್ಬರು ಸೇರಿದಂತೆ ಮತ್ತೆ ನಾಲ್ವರನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿವೆ. ಆದರೂ ಉಗ್ರರ ಜಾಡು ಭೇದಿಸುವಂತಹ ಮಹತ್ವದ ಸುಳಿವು ದೊರಕಿಲ್ಲ.

ಈ ಮಧ್ಯೆ, ಮಹಾಬೋಧಿ ದೇವಾಲಯದ ಭದ್ರತೆಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಬಿಹಾರ ಸೇನಾ ಪೊಲೀಸ್ (ಬಿಎಂಪಿ) ತಂಡಗಳನ್ನು ನಿಯೋಜಿಸಲಾಗಿದೆ. ಗಯಾ ಜಿಲ್ಲಾಡಳಿತವು ದೇವಾಲಯದ ಸುತ್ತಮುತ್ತ ಸಿಆರ್‌ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದೆ.

ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಅಧಿಕೃತವಾಗಿ ವರ್ಗಾಯಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ನವದೆಹಲಿಯಲ್ಲಿ ತಿಳಿಸಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಕೇಂದ್ರವನ್ನು ಕೋರ್ದ್ದಿದರು.

ಅಜ್ಞಾತ ಸ್ಥಳದಲ್ಲಿ ನಾಲ್ವರ ವಿಚಾರಣೆ: ಮಹಾಬೋಧಿ ದೇವಾಲಯದಲ್ಲಿನ 15 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಫೋಟ ಸಂಭವಿಸಿದ ಸಮಯದಲ್ಲಿ ಚಿತ್ರೀಕರಣಗೊಂಡ ದೃಶ್ಯವಾಳಿಯಲ್ಲಿ ಅನುಮಾನಸ್ಪದವಾಗಿ ಓಡುಡುತ್ತಿದ್ದ ನಾಲ್ವರನ್ನು ಎನ್‌ಐಎ ತಂಡ ಪಟ್ನಾದಲ್ಲಿ ವಶಕ್ಕೆ ತೆಗೆದುಕೊಂಡು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ.

ವಶಕ್ಕೆ ತೆಗೆದುಕೊಂಡವರ ಗುರುತು ತಿಳಿದುಬಂದಿಲ್ಲ. ಆದರೆ, ಈ ನಾಲ್ವರು ಬೋಧಗಯಾದ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಬಾಂಬ್ ಸ್ಫೋಟ ಸಂಭವಿಸುವುದಕ್ಕೂ ಎರಡು ತಾಸು ಮೊದಲಷ್ಟೆ ಹೋಟೆಲ್‌ಗೆ ಬಂದ ಅವರು, ಸ್ಫೋಟದ ತರುವಾಯ ಭಾನುವಾರ ಮುಂಜಾನೆ 6.30ರ ಹೊತ್ತಿಗೆ ಹೋಟೆಲ್ ಕೋಣೆಯನ್ನು ತೆರವು ಮಾಡಿಕೊಂಡು ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

15 ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿತ್ರಿತವಾಗಿರುವ ದೃಶ್ಯಗಳು ಉತ್ತಮ ಗುಣಮಟ್ಟದಲ್ಲ. ಬಿಂಬಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ಸೋಮವಾರ ವಶಕ್ಕೆ ತೆಗೆದುಕೊಂಡಿದ್ದ ಸ್ಥಳೀಯ ವಿನೋದ್ ಕುಮಾರ್ ಮಿಸ್ತ್ರಿ ವಿಚಾರಣೆಯನ್ನು ಎನ್‌ಐಎ ತಂಡ ಮುಂದುವರಿಸಿದೆ. ವಿನೋದ್ ಬಡಗಿಯಾಗಿದ್ದು, ಪ್ರರಕಣದಲ್ಲಿ ಈತನ ಪಾತ್ರ ಇರುವ ಬಗ್ಗೆ ಇನ್ನೂ ಖಚಿತ ಪಟ್ಟಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಿನೋದ್‌ಗೂ ಬಾಂಬ್ ಸ್ಫೋಟ ಪ್ರಕರಣಕ್ಕೂ ಸಂಬಂಧ ಇಲ್ಲ. ಅವನು ಮುಗ್ಧ, ಅವನನ್ನು ಬಿಟ್ಟುಬಿಡಿ ಎಂದು ವಿನೋದ್ ಪೋಷಕರು ಪೊಲೀಸರಲ್ಲಿ ಅಂಗಲಾಚಿದ್ದಾರೆ.

ಮಹಾಬೋಧಿ ದೇವಾಲಯ ಭದ್ರತೆಗೆ ಸಭೆ: ಬೋಧಗಯಾ ದೇವಾಲಯ ಆಡಳಿತ ಮಂಡಳಿ (ಬಿಟಿಎಂಸಿ), ಬೌದ್ಧ ವಿಹಾರಗಳ ಪ್ರಮುಖ ಬಿಕ್ಕುಗಳು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಉನ್ನತ ಅಧಿಕಾರಿಗಳ ಸಭೆ ಮಂಗಳವಾರ ನಡೆದಿದೆ. ದೇವಾಲಯಕ್ಕೆ ಸೂಕ್ತ ಭದ್ರತೆ ಕಲ್ಪಿಸುವ ಬಗ್ಗೆ ಚರ್ಚಿಸಲಾಗಿದೆ.

ಸಭೆಯಲ್ಲಿ ಶ್ರೀಲಂಕಾ, ಮ್ಯಾನ್ಮಾರ್, ಟಿಬೆಟ್ ಸೇರಿದಂತೆ ಇನ್ನಿತರ ದೇಶಗಳ ಬೌದ್ಧ ವಿಹಾರಗಳ ಪ್ರಮುಖ ಬಿಕ್ಕುಗಳು ಭಾಗವಹಿಸಿದ್ದರು ಎಂದು ಬಿಟಿಎಂಸಿ ಸದಸ್ಯ ಅರವಿಂದ್ ಸಿಂಗ್ ತಿಳಿಸಿದ್ದಾರೆ.

ದೇವಾಲಯದ ಭದ್ರತಾ ಹೊಣೆ ವಹಿಸಿಕೊಂಡಿರುವ ಸಿಆರ್‌ಪಿಎಫ್ ಮತ್ತು ಬಿಎಂಪಿ ತಂಡಗಳಿಗೆ ಬಿಟಿಎಂಸಿ ನಿಯೋಜಿಸಿಕೊಂಡಿರುವ ಖಾಸಗಿ ಭದ್ರತಾ ಸಿಬ್ಬಂದಿ ಕೂಡ ನೆರವು ನೀಡಿದ್ದಾರೆ ಎಂದು ಹೇಳಿದ್ದಾರೆ.

ಬಾಂಬ್ ಸ್ಫೋಟ ಘಟನೆಯ ನಂತರ ಯಾತ್ರಿಗಳು ಮತ್ತು ಪ್ರವಾಸಿಗರ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಈಗಲೂ ದೇವಾಲಯ ಪ್ರವೇಶಕ್ಕೆ ಸಾವಿರಾರು ಜನರು ಸರದಿಯಲ್ಲಿ ಬರುತ್ತಿದ್ದಾರೆ. ಸಂಪೂರ್ಣ ತಪಾಸಣೆಯ ನಂತರವಷ್ಟೆ ಅವರನ್ನು ದೇವಾಲಯದ ಆವರಣದೊಳಗೆ ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಮಹಾಬೋಧಿ ದೇವಾಲಯದ ಬಳಿ ಇದ್ದ ಅಂಗಡಿಗಳನ್ನು ಮುಚ್ಚಲಾಗಿದೆ ಎಂದೂ ಅವರು ಹೇಳಿದ್ದಾರೆ.

ಉಗ್ರರ ದಮನದಲ್ಲಿ ಯುಪಿಎ ವಿಫಲ- ಬಿಜೆಪಿ ಟೀಕೆ (ಬೋಧಗಯಾ ವರದಿ): ಗುಪ್ತಚರ ಇಲಾಖೆಯ ಮಾಹಿತಿ ಇದ್ದರೂ ಉಗ್ರರ ಚಟುವಟಿಕೆಯನ್ನು ನಿಗ್ರಹಿಸುವಲ್ಲಿ ಕೇಂದ್ರದ ಯುಪಿಎ ಮತ್ತು ಬಿಹಾರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಟೀಕಿಸಿರುವ ಬಿಜೆಪಿ, ರಾಷ್ಟ್ರದ ರಕ್ಷಣೆಯನ್ನು ಯುಪಿಎ ಮತ ಬ್ಯಾಂಕ್ ರಾಜಕೀಯವನ್ನಾಗಿ ಮಾಡಿಕೊಂಡಿದೆ ಎಂದು ಆಪಾದಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಪಕ್ಷದ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ಮತ್ತಿತರರು ಮಂಗಳವಾರ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರು, ಭಾನುವಾರ ಇಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿಂದೆ ಸ್ಥಳೀಯ ಮಟ್ಟದಲ್ಲಿ ಬೇರುಬಿಟ್ಟಿರುವ ಉಗ್ರರ ಗುಂಪುಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಶಂಕಿಸಿದರು.

ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ಈ ಮೂಲಕ ಭಯೋತ್ಪಾದನೆ ಹತ್ತಿಕ್ಕುವ ಕಾರ್ಯದಲ್ಲಿ ತನ್ನ ಬದ್ಧತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ದೇಶದ ಆಂತರಿಕ ಭದ್ರತೆಗೆ ಸಾವಲು ಒಡ್ಡುತ್ತಿರುವ ಮಾವೊವಾದಿಗಳು ಮತ್ತು ಭಯೋತ್ಪಾಕರನ್ನು ದಮನ ಮಾಡಲು ಸಮಗ್ರವಾದ ಮತ್ತು ವಿವಿಧ ಸಂಸ್ಥೆಗಳ ಒಟ್ಟು ಪ್ರಯತ್ನ ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಡಿಶಾ: ಬೌದ್ಧ ವಿಹಾರಗಳಿಗೆ ಬಿಗಿ ಭದ್ರತೆ (ಜಾಜಪುರ್/ಒಡಿಶಾ ವರದಿ): ಜಾಜಪುರ್ ಜಿಲ್ಲೆಯಲ್ಲಿರುವ ಬೌದ್ಧ ವಿಹಾರಗಳು ಮತ್ತು ಬೌದ್ಧ ಸ್ಮಾರಕಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೋಧಗಯಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯ ರತ್ನಗಿರಿ, ಉದಯಗಿರಿ, ಲಲಿತಗಿರಿ, ಲಾಂಗುಡಿ, ಕಯಿಮಾ ತಾರಾಪುರ್ ಮತ್ತು ದೇವುಲಿಗಳಲ್ಲಿರುವ ಬೌದ್ಧ ದೇವಾಲಯಗಳು, ಸ್ತೂಪಗಳು ವಿಶ್ವ ವಿಖ್ಯಾತವಾಗಿವೆ. ಜೊತೆಗೆ ರಾಧಾನಗರ್, ನೆವುಲಪುರ್, ಕಾಂತಿಗಡಿಯಾಗಳಲ್ಲೂ ಬೌದ್ಧ ಸ್ಮಾರಕಗಳಿವೆ.

ಇಂದು ಶಿಂಧೆ ಭೇಟಿ
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಬುಧವಾರ (ಜುಲೈ 10) ಬೋಧಗಯಾಕ್ಕೆ ಭೇಟಿ ನೀಡಲಿದ್ದಾರೆ. ಇವರೊಂದಿಗೆ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಮತ್ತಿತರ ಹಿರಿಯ ಅಧಿಕಾರಿಗಳು ತೆರಳಲಿದ್ದಾರೆ.

ಶಿಂಧೆ ಅವರು ಸರಣಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವ ಮ್ಯಾನ್ಮಾರ್ ಮತ್ತು ಟಿಬೆಟ್‌ನ ಬೌದ್ಧ ಬಿಕ್ಕುಗಳನ್ನೂ ಭೇಟಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT