ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಬ್ಯಾಂಕ್ ಶೇ15 ಪ್ರಗತಿ ನಿರೀಕ್ಷೆ:ಉಪೇಂದ್ರ ಕಾಮತ್

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷಬ್ಯಾಂಕ್‌ನ ಒಟ್ಟಾರೆ ಪ್ರಗತಿ ಶೇ 15ರಷ್ಟು ಇರಲಿದೆ ಎಂದು ವಿಜಯ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಉಪೇಂದ್ರ ಕಾಮತ್ ಹೇಳಿದರು.ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ, ದಸರಾದಿಂದ ಸಂಕ್ರಾಂತಿವರೆಗಿನ ಹಬ್ಬಗಳ ಅವಧಿಗೆ ಹೊಸ ಠೇವಣಿ ಮತ್ತು ಸಾಲ ಯೋಜನೆಗಳನ್ನು  ಪ್ರಕಟಿಸಿ ಅವರು ಮಾತನಾಡಿದರು.

ಹಬ್ಬದ ಈ ವಿಶೇಷ ಕೊಡುಗೆಗಳು ಅಕ್ಟೋಬರ್ 1ರಂದೇ ಆರಂಭಗೊಂಡಿದ್ದು, 2013ರ ಮಾರ್ಚ್ 31ರವರೆಗೂ ಚಾಲ್ತಿಯಲ್ಲಿರಲಿವೆ.  ಒಂದು ವರ್ಷ ಅವಧಿಯ `ವಿ-ವೈಭವ್~ ಠೇವಣಿ ಯೋಜನೆಯಲ್ಲಿ ಶೇ 9.30 ಬಡ್ಡಿ ನೀಡಲಾಗುವುದು. ಕಳೆದ 9 ದಿನಗಳಲ್ಲಿಯೇ ಈ ಯೋಜನೆಯಡಿ ರೂ. 960 ಕೋಟಿ ಸಂಗ್ರಹವಾಗಿದೆ. ಮುಂದಿನ ಆರು ತಿಂಗಳಲ್ಲಿ ರೂ. 7000 ಕೋಟಿ ಸಂಗ್ರಹ ಗುರಿ ಇದೆ ಎಂದರು.

`ವಿಜಯ-ಹೋಮ್ ಲೋನ್~ ಯೋಜನೆ ಬಡ್ಡಿದರವನ್ನು 80 ಮೂಲ ಅಂಶಗಳಷ್ಟು (ಬೇಸಿಸ್ ಪಾಯಿಂಟ್ಸ್) ಕಡಿಮೆ ಮಾಡಲಾಗಿದೆ. ರೂ. 30 ಲಕ್ಷದ ಗೃಹ ಸಾಲ 10 ವರ್ಷ ಅವಧಿಗೆ ಶೇ 10.50ರಷ್ಟು, 20 ವರ್ಷದ ಅವಧಿಗೆ ಶೇ 10.75ರಷ್ಟು ಬಡ್ಡಿ ಇರಲಿದೆ.

ರೂ. 30 ಲಕ್ಷದಿಂದ 75 ಲಕ್ಷದವರೆಗಿನ ಗೃಹ ಸಾಲಕ್ಕೆ ಕ್ರಮವಾಗಿ ಶೇ 10.75 ಮತ್ತು ಶೇ 11ರಷ್ಟು, ರೂ. 75 ಲಕ್ಷ ಮೇಲ್ಪಟ್ಟ ಸಾಲಕ್ಕೆ ಶೇ 11 ಮತ್ತು ಶೇ 11.50ರಷ್ಟು ಬಡ್ಡಿ ಇರಲಿದೆ. ಆರು ತಿಂಗಳಲ್ಲಿ ಈ ಯೋಜನೆಯಡಿ ರೂ. 700 ಕೋಟಿವರೆಗೂ ಗೃಹಸಾಲ ವಿತರಿಸುವ ಗುರಿ ಇದೆ ಎಂದರು.

`ವಿ-ವ್ಹೀಲ್ಸ್~ ಯೋಜನೆಯಡಿ ವಾಹನಗಳ ಸಾಲದ ಅವಧಿಯನ್ನು 7 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಬಡ್ಡಿದರ 30 ಮೂಲ ಅಂಶಗಳಷ್ಟು ಕಡಿಮೆ ಮಾಡಲಾಗಿದೆ ಎಂದು ವಿವರಿಸಿದರು.ಏಪ್ರಿಲ್-ಸೆಪ್ಟೆಂಬರ್ ನಡುವಿನ ಆರು ತಿಂಗಳ ಅವಧಿಯಲ್ಲಿ ರೂ. 5280 ಕೋಟಿ ಕೃಷಿ ಸಾಲ ವಿತರಿಸಲಾಗಿದ್ದು, ಶೇ 32.5ರಷ್ಟು ಹೆಚ್ಚಳ ಸಾಧಿಸಲಾಗಿದೆ.

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ರೂ. 9382 ಕೋಟಿ ಸಾಲ ವಿತರಿಸಿ ಶೇ 26.45ರ ಪ್ರಗತಿ ದಾಖಲಿಸಲಾಗಿದೆ. ಒಟ್ಟಾರೆ ಠೇವಣಿ ಸಂಗ್ರಹದಲ್ಲಿಯೂ ಶೇ 46ರಷ್ಟು ಸಾಧನೆಯಾಗಿದೆ ಎಂದು ಕಾಮತ್ ವಿವರಿಸಿದರು.ಬ್ಯಾಂಕ್‌ನ 2ನೇ ತ್ರೈಮಾಸಿಕದ ಲೆಕ್ಕಪತ್ರವನ್ನು ನವೆಂಬರ್ ಮೊದಲ ವಾರ ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT