ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಸಾಮ್ರಾಜ್ಯದ ಸಾಕಷ್ಟು ಮಾಹಿತಿ ಸಿಕ್ಕಿಲ್ಲ

Last Updated 22 ಜನವರಿ 2011, 7:15 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ; ಈಜಿಪ್ತ್  ಸೇರಿದಂತೆ ಹಲವಾರು ನಾಗರಿಕತೆಯ ಬಗ್ಗೆ ಸರಿಯಾದ ಮಾಹಿತಿ ಇದೆ. ಆದರೆ  ವಿಜಯನಗರ ಸಾಮ್ರಾಜ್ಯದ ಬಗ್ಗೆ ಪರಿಪೂರ್ಣವಾದ ಮಾಹಿತಿ ಇಲ್ಲ. ಹೀಗಾಗಿ ವಿಜಯನಗರ ಇತಿಹಾಸದ ವಿಷಯದಲ್ಲಿ ನಾವು  ಗೊಂದಲದಲ್ಲಿ ಸಿಲುಕಿದ್ದೇವೆ ಎಂದು ಹೊಸಪೇಟೆ ವಿಜಯನಗರ ಕಾಲೇಜಿನ ಉಪನ್ಯಾಸಕ ಡಾ.ಎಚ್.ಎಂ. ಚಂದ್ರಶೇಖರಶಾಸ್ತ್ರಿ ಅಭಿಪ್ರಾಯಪಟ್ಟರು.

ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಹೊಸಪೇಟೆ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ದಿ.ಕಾಕುಬಾಳು ಮಠದ ಜಂಭಯ್ಯ ಪಾರ್ವತಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಹಂಪಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ  ಧಾರ್ಮಿಕವಾಗಿ ಗತ ವೈಭವ  ಮೆರೆದಿದೆ. ಈ ಇತಿಹಾಸವನ್ನು ನಾವು ಹುಡುಕುತ್ತಿದ್ದೇವೆ.  ಮೊದಲು ನಮ್ಮ ಸಂಸ್ಕೃತಿ, ಇತಿಹಾಸವನ್ನು ನಾವು ಅರಿತುಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿನ ಎಷ್ಟೋ ಶಾಸನಗಳು ಕಣ್ಮರೆಯಾಗಿವೆ.  ಉಳಿದಿರುವ ಶಾಸನಗಳನ್ನಾದರೂ  ವಿದ್ಯಾರ್ಥಿಗಳು  ಸಂರಕ್ಷಿಸುವ ಕೆಲಸ ಮಾಡಬೇಕು. ಕೈಗಾರೀಕರಣದಿಂದಾಗಿ  ಗ್ರಾಮಗಳು ಮಾಯವಾಗುತ್ತಿವೆ. ಅಲ್ಲಿನ ಸಂಸ್ಕೃತಿ, ಬದುಕು, ಭಾಷೆಗೂ ಗಂಡಾಂತರ ಎದುರಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಗೋವಿಂದ ಕುಲಕರ್ಣಿ ಮಾತನಾಡಿ,  ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳಸಿಕೊಳ್ಳುವುದರ ಮೂಲಕ, ನಮ್ಮ ಭಾಷೆ, ಸಂಸ್ಕೃತಿಯನ್ನು ಆಳವಾಗಿ ಅರಿತುಕೊಳ್ಳಬೇಕು ಎಂದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಎಂ. ಬದರೀನಾಥ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಟಿ.ಎನ್. ಸುಜಾತಾ  ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಕೆ.ಲಕ್ಷ್ಮಣ  ಅಧ್ಯಕ್ಷತೆ ವಹಿಸಿದ್ದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಾಣೇಶ್ ಕುಲಕರ್ಣಿ, ರೇವಣಸಿದ್ದಪ್ಪ, ಕೆ.ಎಂ. ಸುರೇಶ, ಉಪ ತಹಸೀಲ್ದಾರ ನಾಗರಾಜ  ಉಪಸ್ಥಿತರಿದ್ದರು. ಉಪನ್ಯಾಸಕ ತಿಪ್ಪೇರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT