ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ: ಆರಂಭವಾಗದ ಕೃಷಿ ಚಟುವಟಿಕೆ

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ಕಳೆದ ವರ್ಷ ಮುಂಗಾರು-ಹಿಂಗಾರು ಎರಡೂ ಬೆಳೆಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯ ರೈತರು ಈ ವರ್ಷದ ಮುಂಗಾರು ಹಂಗಾಮಿನಲ್ಲೂ ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗಲಿಕ್ಕಿಲ್ಲ ಎಂದು ಆತಂಕಗೊಂಡಿದ್ದಾರೆ.

ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಮಳೆ ಆರಂಭವಾಗುತ್ತಿತ್ತು. ರೈತರು ಭೂಮಿಯನ್ನು ಹದ ಮಾಡಿಟ್ಟುಕೊಂಡು ಜೂನ್ ಮೊದಲ ವಾರದಿಂದ ಬಿತ್ತನೆ ಆರಂಭಿಸುತ್ತಿದ್ದರು. ಆದರೆ, ಜೂನ್ ಮೊದಲ ವಾರ ಕಳೆದರೂ ಇನ್ನೂ ಮಳೆಯಾಗಿಲ್ಲ. ರೈತರು ಭೂಮಿಯನ್ನು ಹದಮಾಡಿಲ್ಲ. ಸದ್ಯ ಉತ್ತಮ ಮಳೆಯಾದರೂ ಭೂಮಿ ಹದಮಾಡಿ ಬಿತ್ತನೆ ಕೈಗೊಳ್ಳಬೇಕಾದರೆ 10-15 ದಿನಗಳಾದರೂ ಬೇಕು. ತಡವಾಗಿ ಬಿತ್ತನೆ ಆದರೆ ಇಳುವರಿಯೂ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

`ಕಳೆದ ವರ್ಷ ಜೋಳ ಬಿತ್ತಿದ್ದೆವು. ಬಿತ್ತಿದಷ್ಟು ಕಾಳೂ ಬರಲಿಲ್ಲ. ಈ ವರ್ಷ ಮಳೆಯೇ ಆಗಿಲ್ಲ. ಭೂಮಿ ಒಣಗಿ ಗಟ್ಟಿಯಾಗಿದೆ. ದೊಡ್ಡ ಮಳೆಯಾದರೆ ಮಾತ್ರ ಅದನ್ನು ಹದ ಮಾಡಲು ಸಾಧ್ಯ. ಹೀಗಾಗಿ ಈ ಒಂದು ಬೆಳೆ ಹೋಯಿತು. ಹೆಚ್ಚು ಕಡಿಮೆ ಪ್ರಸಕ್ತ ಮುಂಗಾರು ಹಂಗಾಮೂ ವಿಫಲವಾದಂತೆಯೇ~ ಎಂದು ತೊರವಿಯ ರೈತ ತಿಪ್ಪಣ್ಣ ದಳವಾಯಿ ಆತಂಕ ವ್ಯಕ್ತಪಡಿಸಿದರು.

`ವಿಜಾಪುರ ಜಿಲ್ಲೆಯಲ್ಲಿ ಇದೇ 11ರ ನಂತರ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಜೂನ್ 1ರಿಂದಲೇ ಬಿತ್ತನೆ ಆರಂಭಗೊಳ್ಳುತ್ತಿತ್ತು. ರೈತರು ಈಗಾಗಲೆ ಹೆಸರು, ಸಜ್ಜೆ, ವೆುಕ್ಕೆಜೋಳ, ಸೂರ್ಯಕಾಂತಿಯನ್ನು ಬಿತ್ತನೆ ಮಾಡಿರುತ್ತಿದ್ದರು. ಆದರೆ, ಮಳೆ ವಿಳಂಬವಾಗಿದ್ದರಿಂದ ಹೆಸರು ಬಿತ್ತಿದರೂ ಇಳುವರಿ ಸರಿಯಾಗಿ ಬರುವುದಿಲ್ಲ. ಒಂದು ವಾರದಲ್ಲಿ ಮಳೆ ಬಾರದಿದ್ದರೆ ಸಜ್ಜೆಯ ಬಿತ್ತನೆಯೂ ಕಡಿಮೆಯಾಗಲಿದೆ. ಒಂದು ವೇಳೆ ಈ ತಿಂಗಳಲ್ಲಿ ಮಳೆ ಆಗದೇ ಇದ್ದರೆ ತೊಗರಿ-ಸೂರ್ಯಕಾಂತಿ ಮಾತ್ರ ಬಿತ್ತನೆ ಮಾಡಲು ಸಾಧ್ಯ~ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಡಾ.ಬಂಥನಾಳ.

`ಜಿಲ್ಲೆಯ 4.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1.30 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ನೀರಾವರಿ ಇದೆ. ಮೂರು ಲಕ್ಷ ಹೆಕ್ಟೇರ್ ಪ್ರದೇಶ ಮಳೆ ಆಶ್ರಿತವಾಗಿದೆ. ಈ ಪೈಕಿ 2.72 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. 4,300 ಮೆಟ್ರಿಕ್ ಟನ್ ಮೆಕ್ಕಜೋಳ, ಸಜ್ಜೆ ಹಾಗೂ ಅಂದಾಜು 5,000 ಮೆ.ಟನ್ ದ್ವಿದಳ ಧಾನ್ಯ ಬೆಳೆಯುವ ಗುರಿ ಹೊಂದಲಾಗಿತ್ತು. ಬಿತ್ತನೆ ವಿಳಂಬವಾದರೆ ಸಹಜವಾಗಿಯೇ ಇಳುವರಿ ಕುಂಠಿತಗೊಳ್ಳಲಿದೆ~ ಎಂದರು.

`ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೂ.197 ಕೋಟಿ, ಹಿಂಗಾರು ಹಂಗಾಮಿನಲ್ಲಿ ರೂ.628 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿತ್ತು.ಸಿ.ಆರ್.ಎಫ್. ನಿಯಮಾವಳಿ ಪ್ರಕಾರ ಬೆಳೆ ಹಾನಿ ಪರಿಹಾರಕ್ಕೆ ಸುಮಾರು ರೂ.70 ಕೋಟಿ ಹಣ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಈ ವರೆಗೂ ಪರಿಹಾರ ಬಿಡುಗಡೆಯಾಗಿಲ್ಲ~ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT