ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರಕ್ಕೂ ಕಾಲಿಟ್ಟ ಬಂದೂಕು ಸಂಸ್ಕೃತಿ

Last Updated 13 ಅಕ್ಟೋಬರ್ 2011, 6:20 IST
ಅಕ್ಷರ ಗಾತ್ರ

ವಿಜಾಪುರ: ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಗುಂಡು ಹಾರಿಸಿದ ಘಟನೆಯಿಂದ ಇಡೀ ನಗರದ ಜನತೆ ಬೆಚ್ಚಿಬಿದ್ದರು. ಬಂದೂಕು ಸಂಸ್ಕೃತಿ ನಮ್ಮೂರಿಗೂ ಬಂತೇ ಎಂದು ಹಳಹಳಿಸಿದರು.

ಚುನಾವಣೆಯ ಅರಿವಿಲ್ಲದೆ `ಪಾಠ~ ಹೇಳಿಸಿಕೊಳ್ಳಲಿಕ್ಕಾಗಿ ಗುಂಪು ಗುಂಪಾಗಿ ಆ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಸಂಭವಿಸಬಹುದಾಗಿದ್ದ ಭಾರಿ ಅನಾಹುತದಿಂದ ಪಾರಾಗಿ ನಿಟ್ಟುಸಿರು ಬಿಟ್ಟರು.

ವಿಜಾಪುರದ ದರಬಾರ ಹೈಸ್ಕೂಲ್‌ನಲ್ಲಿ ಬುಧವಾರ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ನಡೆಯುತ್ತಿತ್ತು. ಅದೇ ಕಾಲೇಜಿನಲ್ಲಿ ಬೆಳಗ್ಗೆ 9.30ರಿಂದ 10.30ರವರೆಗೆ ನಡೆಯಲಿದ್ದ ಕ್ಲಾಸ್‌ಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಬೆಳಗ್ಗೆ 9.20ರ ಸುಮಾರು ಎರಡು ಗುಂಪುಗಳ ಮಧ್ಯೆ ವಾಗ್ವಾದ ಉಂಟಾಗಿ ಒಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ.

`ಪಾಠಕ್ಕಾಗಿ ನಾವೆಲ್ಲ ಬರುತ್ತಿದ್ದೆವು. ಕಾಲೇಜಿನ ಎದುರು ಯುವಕರು ಗುಂಪು ಗುಂಪಾಗಿ ನಿಂತಿದ್ದರು. ಗುಂಡು ಹಾರಿದ ಶಬ್ದ ಕೇಳಿತು. ಇದನ್ನು ಕಂಡು ನಮಗೆ ಹೆದರಿಕೆಯಾಯಿತು~ ಎಂದು ವಿದ್ಯಾರ್ಥಿಗಳು ಹೇಳಿಕೊಂಡರು.

`ಚುನಾವಣೆ ಮತ್ತು ಕ್ಲಾಸ್ ಏಕಕಾಲಕ್ಕೆ ನಡೆಸಿದ್ದು ಸರಿಯಲ್ಲ. ಕ್ಲಾಸ್‌ಗೆ ರಜೆಯನ್ನಾದರೂ ನೀಡಬೇಕಿತ್ತು. ಇಲ್ಲವೆ ಇಲ್ಲಿ ಚುನಾವಣೆ ನಡೆಸಲು ಅನುಮತಿ ನಿರಾಕರಿಸಬೇಕಿತ್ತು. ನೂರಾರು ವಿದ್ಯಾರ್ಥಿಗಳು ಕ್ಲಾಸ್‌ಗೆ ಬಂದಿದ್ದರು. ಗುಂಡು ಅವರಿಗೆ ತಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು~ ಎಂದು ಪಾಲಕರೊಬ್ಬರು ಆತಂಕ-ಆಕ್ರೋಶ ವ್ಯಕ್ತಪಡಿಸಿದರು.

`ಕಾಂಗ್ರೆಸ್ ಪಕ್ಷದ ಚುನಾವಣಾಧಿಕಾರಿ ಬಂದು ಪರವಾನಗಿ ಹಾಗೂ ರಕ್ಷಣೆ ಕೋರಿದ್ದರು. ಚುನಾವಣೆಗೆ ರಕ್ಷಣೆಯನ್ನೂ ನೀಡಲಾಗಿತ್ತು. ಮತದಾನದ ಸ್ಥಳವನ್ನು ಅವರೇ ಆಯ್ದುಕೊಂಡಿದ್ದಾರೆ~ ಎಂದು ಹೆಚ್ಚುವರಿ ಎಸ್ಪಿ ಎಫ್.ಎ. ಟ್ರಾಸ್ಗರ್ ಹೇಳಿದರು.

`ಇರುವವರು ಕೇವಲ 131 ಮತದಾರರು. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಯೇ ಮತದಾನ ಮಾಡಿಕೊಳ್ಳಬಹುದಿತ್ತು. ಇಷ್ಟು ದೊಡ್ಡ ಕಾಲೇಜಿನಲ್ಲಿ ಮತಗಟ್ಟೆ ಸ್ಥಾಪಿಸಿದ್ದು, ಚುನಾವಣೆಗೆ ಅನುಮತಿ ನೀಡಿಯೂ ಕಾಲೇಜಿನ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಕ್ಲಾಸ್ ನಡೆಸಿದ್ದು ನಮಗೂ ಅಚ್ಚರಿ ತಂದಿದೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಘಟನೆಯ ವಿವರ: ವಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊಯಿನ್‌ಅಹ್ಮದ್ ಶೇಖ ಮತ್ತು ಸೈಯದ್‌ಗೌಸ್ ಇನಾಮದಾರ ಸ್ಪರ್ಧಿಸಿದ್ದರು. 81 ಮತದಾರರು ಇರುವ ವಿಜಾಪುರ ನಗರ ಮತಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಬುಧವಾರ ಮತದಾನ ನಡೆಯುತ್ತಿತ್ತು.

`ಮೊಹಿನ್ ಅಹ್ಮದ್ ಶೇಖ್‌ಗೆ ಫಯಾಜ್ ಮುಶ್ರೀಫ್ ಹಾಗೂ ಸೈಯದ್‌ಗೌಸ್ ಇನಾಮದಾರಗೆ ಇರ್ಫಾನ್ ಕಲಾದಗಿ ಬೆಂಬಲ ನೀಡಿದ್ದರು. ಎದುರಾಳಿ ಗುಂಪಿನವರು ತನಗೆ ಜಂಬೆ ತೋರಿಸಿದರು ಎಂದು ಇರ್ಫಾನ್ ಕಲಾದಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅಭ್ಯರ್ಥಿ ಸೈಯದ್‌ಗೌಸ್ ಇನಾಮದಾರನನ್ನು ಬಂಧಿಸಲಾಗಿದೆ~ ಎಂದು ಎಸ್ಪಿ ಡಾ.ಡಿ.ಸಿ. ರಾಜಪ್ಪ ಹೇಳಿದರು.

`ಮತದಾನ ನಡೆಯುವ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು. ಕಾಲೇಜು ಎದುರಿನ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ 9.20ರ ಸಮಯದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ನಾನು ಮತ್ತು ಹೆಚ್ಚುವರಿ ಎಸ್ಪಿ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದೇವೆ~ ಎಂದರು. `ಇಲ್ಲಿಯ ಜಗಜ್ಯೋತಿ ಬಸವೇಶ್ವರ ಕಾಲೇಜಿನಲ್ಲಿ ಬಿ.ಇಡಿ ಓದುತ್ತಿರುವ ನಾನು ಚುನಾವಣೆಗೆ ಸ್ಪರ್ಧಿಸಿದ್ದೆ. ಕಣದಿಂದ ಹಿಂದೆ ಸರಿಯುವಂತೆ ನನಗೆ ಜೀವ ಬೆದರಿಕೆ ಹಾಕುತ್ತಿದ್ದರು.

ಇರ್ಫಾನ್ ಕಲಾದಗಿ ನನ್ನ ಮೇಲೆ ಗುಂಡು ಹಾರಿಸಿದ. ಅದು ಬದಿಯಿಂದ ಹಾರಿ ಹೋಯಿತು. ಅಲ್ತಾಫ್ ಲಕ್ಕುಂಡಿ ಮತ್ತು ಮುದಸ್ಸರ್ ನನ್ನನ್ನು ಬದುಕಿಸಿದರು~ ಎಂದು ಅಭ್ಯರ್ಥಿ ಮೊಹಿನ್ ಅಲಿಯಾಸ್ ಅನೀಸ್‌ಅಹ್ಮದ್ ಶೇಖ ದೂರಿದರು. ಮತಗಟ್ಟೆಯ ಹೊರಗಡೆ ಈ ಘಟನೆ ನಡೆದರೂ ಮತದಾನ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT