ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರಕ್ಕೆ ಸಿಇಟಿ ಕೌನ್ಸೆಲಿಂಗ್ ಸಹಾಯ ಕೇಂದ್ರ

Last Updated 12 ಮೇ 2012, 6:25 IST
ಅಕ್ಷರ ಗಾತ್ರ

ವಿಜಾಪುರ: ಸರ್ಕಾರಿ ಕೋಟಾದಡಿ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲಿಕ್ಕಾಗಿ ರಾಜ್ಯದ 11 ಕಡೆಗಳಲ್ಲಿ ಹೊಸದಾಗಿ ಸಹಾಯ ಕೇಂದ್ರ (ಹೆಲ್ಪ್‌ಲೈನ್ ಸೆಂಟರ್) ಆರಂಭಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ.

`ವಿಜಾಪುರ, ಬಳ್ಳಾರಿ, ಕಾರವಾರ, ರಾಯಚೂರು, ಧಾರವಾಡ, ಬೆಳಗಾವಿ, ಚಿತ್ರದುರ್ಗ, ಮಂಗಳೂರು, ಶಿವಮೊಗ್ಗ, ಮೈಸೂರು, ಗುಲ್ಬರ್ಗ ಹೀಗೆ ರಾಜ್ಯದ 11 ಕಡೆಗಳಲ್ಲಿ ಹೆಲ್ಪ್‌ಲೈನ್ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ~ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

`ಈ ನಗರಗಳಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿಯೇ ಹೊಸ ಹೆಲ್ಪ್‌ಲೈನ್ ಸೆಂಟರ್‌ಗಳನ್ನು ಆರಂಭಿಸಬೇಕು ಎಂಬುದು ನಮ್ಮ ಬಯಕೆ. ಒಂದೊಮ್ಮೆ ಅಲ್ಲಿ ಅಗತ್ಯ ಮೂಲಸೌಲಭ್ಯ ಇಲ್ಲದಿದ್ದರೆ ಖಾಸಗಿ ಕಾಲೇಜುಗಳಲ್ಲಿ ಕೇಂದ್ರ ಆರಂಭಿಸುತ್ತೇವೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಜಿಲ್ಲೆಗಳ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.
 
ಅವರ ವರದಿ ಆಧರಿಸಿ ಅಗತ್ಯ ಮೂಲ ಸೌಲಭ್ಯ ಮತ್ತು ಸರಿಯಾದ ಸಾರಿಗೆ ಸಂಪರ್ಕ ಇರುವ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಹೆಲ್ಪ್‌ಲೈನ್ ಸೆಂಟರ್ ಆರಂಭಿಸಲಾಗುವುದು~ ಎಂಬುದು ಆ ಮೂಲಗಳ ವಿವರಣೆ.

`ವಿಜಾಪುರ ನಗರದಲ್ಲಿ ಸಿಇಟಿ ಕೌನ್ಸೆಲಿಂಗ್‌ಗೆ ಹೆಲ್ಪ್‌ಲೈನ್ ಸೆಂಟರ್ ಆರಂಭಿಸಲು ಸೂಕ್ತ ಸ್ಥಳಾವಕಾಶ ಗುರುತಿಸಿ ವರದಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಿರ್ದೇಶನ ಬಂದಿದೆ. ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್, ಮಹಿಳಾ ವಿಶ್ವವಿದ್ಯಾಲಯ, ಬಿಎಲ್‌ಡಿಇ ಸಂಸ್ಥೆ ಡಾ.ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಲಾಗಿದ್ದು, ಆ ವರದಿಯನ್ನು ಪರೀಕ್ಷಾ ಪ್ರಾಧಿಕಾರಕ್ಕೆ ಕಳಿಸಲಾಗಿದೆ~ ಎಂದು ಇಲ್ಲಿಯ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಕೆ.ಎಂ. ಚೌರ ಹೇಳಿದರು.

`ಸಾಮಾನ್ಯ ಪ್ರವೇಶ ಪರೀಕ್ಷೆಗೆ ವಿಜಾಪುರ ಜಿಲ್ಲೆಯೊಂದರಿಂದಲೇ 3716 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದೇ 21 ಮತ್ತು 22ರಂದು ಪರೀಕ್ಷೆ ನಡೆಯಲಿದೆ. ಇದರ ಫಲಿತಾಂಶದ ನಂತರ ಸೀಟು ಹಂಚಿಕೆಗೆ ಕೌನ್ಸೆಲಿಂಗ್ ಆರಂಭಗೊಳ್ಳಲಿದೆ~ ಎಂದು ಅವರು ವಿವರಿಸಿದರು.

`ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ವಿಕೇಂದ್ರೀಕರಣ ಗೊಳಿಸಿ ತಮಗೆ ಅನುಕೂಲ ಕಲ್ಪಿಸಬೇಕು ಎಂಬುದು ಪಾಲಕರ ಬೇಡಿಕೆಯಾಗಿತ್ತು. ಪರೀಕ್ಷಾ ಪ್ರಾಧಿಕಾರ ಅದಕ್ಕೆ ಸ್ಪಂದಿಸಿದೆ~ ಎಂದು ಇಲ್ಲಿಯ ಬಿಎಲ್‌ಡಿಇ ಸಂಸ್ಥೆಯ ಡಾ.ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ವಿ.ಪಿ. ಹುಗ್ಗಿ ಸಂತಸ ವ್ಯಕ್ತಪಡಿಸಿದರು.

`ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಬಯಕೆ. ನಮ್ಮ ಕಾಲೇಜಿನಲ್ಲಿ ಹೆಲ್ಪ್‌ಲೈನ್ ಕೇಂದ್ರ ಆರಂಭಿಸಿ, ಅದಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಕಲ್ಪಿಸಿಕೊಡುತ್ತೇವೆ ಎಂದು ಲಿಖಿತ ಭರವಸೆ ನೀಡಿದ್ದೇವೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT