ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರದಲ್ಲಿ ಶೀಘ್ರವೇ ಸಮಾರೋಪ

`ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ' ಪಾದಯಾತ್ರೆ ಅಂತ್ಯ
Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಬಸವ ವೇದಿಕೆ (ಕೂಡಲಸಂಗಮ):   ಕಾಂಗ್ರೆಸ್ ಪಕ್ಷ ಹೊಸಪೇಟೆಯಿಂದ ಇದೇ 7 ರಂದು ಆರಂಭಿಸಿದ್ದ  `ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ' ಪಾದಯಾತ್ರೆ ಸೋಮವಾರ ಕೂಡಲಸಂಗಮದಲ್ಲಿ ಮುಕ್ತಾಯವಾಯಿತು.

ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ವಿಧಾನಸಭೆ ಮತ್ತು ವಿಧಾನಪರಿಷತ್ ವಿರೋಧ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ ಮತ್ತು ಎಸ್.ಆರ್. ಪಾಟೀಲ ಸೇರಿದಂತೆ ಅನೇಕ ನಾಯಕರು ಮತ್ತು ಸಹಸ್ರಾರು ಕಾರ್ಯಕರ್ತರು ಒಟ್ಟು 142 ಕಿ.ಮೀ ದೂರವನ್ನು ಎಂಟು ದಿನಗಳಲ್ಲಿ ಕ್ರಮಿಸಿ ಕೂಡಲಸಂಗಮ ತಲುಪಿದರು.

ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ನಿಧನದಿಂದಾಗಿ ಸಮಾರೋಪ ಸಮಾರಂಭ ಅತ್ಯಂತ ಸರಳವಾಗಿತ್ತು. ಪಾದಯಾತ್ರೆಯ ಉದ್ದಕ್ಕೂ ಏಳು ದಿನಗಳ ಕಾಲ ಕಾಯ್ದುಕೊಂಡಿದ್ದ ಉತ್ಸಾಹ, ಹುಮ್ಮಸ್ಸು ಕೊನೆಯ ದಿನ ಇರಲಿಲ್ಲ. ಯಾತ್ರೆಯ ಉದ್ದಕ್ಕೂ ರಂಜಿಸಿದ ನೃತ್ಯ, ಜಾನಪದ ತಂಡಗಳ ಕಲಾ ಪ್ರದರ್ಶನ, ಘೋಷಣೆ, ಧಿಕ್ಕಾರ ಯಾವುದೂ ಇಲ್ಲದೇ ಪಾದಯಾತ್ರೆ ಮಲಪ್ರಭಾ ನದಿಯ ಸೇತುವೆಯಿಂದ (ಭಾನುವಾರ ಬೀಡು ಬಿಟ್ಟಿದ್ದ ಸ್ಥಳ) ಕೂಡಲಸಂಗಮದವರೆಗೆ ಮೌನ ಮೆರವಣಿಗೆಯಾಗಿ ಪರಿವರ್ತನೆಗೊಂಡಿತ್ತು.

ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಧಾವಂತ ಮುಖಂಡರಲ್ಲಿ ಇದ್ದುದರಿಂದ ಮುಕ್ತಾಯ ಸಮಾರಂಭ ಕೂಡ ಕಳಾಹೀನವಾಗಿತ್ತು. ಸಭೆಯಲ್ಲಿ ಮಾತನಾಡಿದ ಮುಖಂಡರೆಲ್ಲರೂ ಸ್ವಾಮೀಜಿ ಅವರ ಸಾಮಾಜಿಕ ಸೇವೆ ಸ್ಮರಿಸಿ, ಸಂತಾಪ ಸೂಚಿಸಿದರು. ಭಾಷಣ ಮುಗಿಸಿದ ತಕ್ಷಣ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಿರ್ಗಮಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ಅರ್ಪಿಸಿದರು. ನಂತರ ಬಸವಣ್ಣನ ಭಾವಚಿತ್ರಕ್ಕೂ ಪುಷ್ಪ ಅರ್ಪಿಸಿದರು.

ಸಮಾರಂಭದಲ್ಲಿ ಮಾತನಾಡಿದ ಪರಮೇಶ್ವರ್, `ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ಮೊಟಕುಗೊಳಿಸಲಾಗಿದೆ. ಶೀಘ್ರದಲ್ಲೇ ವಿಜಾಪುರದಲ್ಲಿ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸಲಾಗುವುದು' ಎಂದು ಘೋಷಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತದೆ ಎಂದು ಭರವಸೆ ನೀಡಿದರು.

`ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಸಂತ್ರಸ್ತರಿಗೆ ಸಕಲ ಸೌಲಭ್ಯ ಒದಗಿಸಲು ಕಾಂಗ್ರೆಸ್ ಪಕ್ಷ ಕಟಿಬದ್ಧವಾಗಿರುತ್ತದೆ' ಎಂದು  ನಾಯಕರಿಗೆ, ಕಾರ್ಯಕರ್ತರಿಗೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

`ರೈತರ ಮೇಲೆ ಪ್ರಮಾಣ ಮಾಡಿ, ಅವರ ಹೆಸರಿನಲ್ಲೇ ಅಧಿಕಾರ ಸ್ವೀಕರಿಸಿದ ಬಿಜೆಪಿ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಕೇವಲ ಸಮೀಕ್ಷೆ ಮತ್ತು ಗುದ್ದಲಿಪೂಜೆಗಷ್ಟೇ ಸೀಮಿತವಾಯಿತು. ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಲಿಲ್ಲ' ಎಂದು ಸಿದ್ದರಾಮಯ್ಯ ತೀಕ್ಷ್ಣವಾಗಿ ಟೀಕಿಸಿದರು.

`ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರಿಗೆ ತಿಳಿವಳಿಕೆ ಮತ್ತು ಅನುಭವ ಇದೆಯೋ ಇಲ್ಲವೋ ಗೊತ್ತಿಲ್ಲ. ಪಾದಯಾತ್ರೆಯನ್ನು ಟೀಕಿಸಿದ್ದಾರೆ. ಆದರೆ ತಪ್ಪು ಮತ್ತು ಪಾಪದ ಕೆಲಸ ಮಾಡಿರುವ ನೀವು ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಡುಗಡೆಯಾದ ಹಣವನ್ನು ಮುಧೋಳ ಕ್ಷೇತ್ರದಲ್ಲಿ ಗುಡಿ-ಗುಂಡಾರ ಕಟ್ಟಲು ಬಳಸಿಕೊಂಡಿರುವ ನಿಮಗೆ ಕಾಂಗ್ರೆಸ್‌ನವರ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ' ಎಂದು ಕುಟುಕಿದರು.

ಕಳಸಾ-ಬಂಡೂರಿ: `ಕಳಸಾ ಬಂಡೂರಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಲಿಲ್ಲ. ಈ ವಿಚಾರ ನ್ಯಾಯಮಂಡಳಿ ಮತ್ತು ನ್ಯಾಯಾಲಯದ ಮುಂದಿದೆ. ಯೋಜನೆ ಜಾರಿಗೆ ಆಗ್ರಹಿಸಿ ಹಿಂದೆ ಪಾದಯಾತ್ರೆ ಮಾಡಿದ್ದ ಬಸವರಾಜ ಬೊಮ್ಮಾಯಿ ಅವರೇ ನೀರಾವರಿ ಸಚಿವರಾದರೂ ಯೋಜನೆಯನ್ನು ಏಕೆ ಅನುಷ್ಠಾನ ಮಾಡಲಿಲ್ಲ? ಇದಕ್ಕೆ ಬದ್ಧತೆಯ ಕೊರತೆ ಕಾರಣ. ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇದೆ. ನಾವು ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಐದು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸುತ್ತೇವೆ. ಅದಕ್ಕಾಗಿ ಪ್ರತಿ ವರ್ಷ ರೂ. 10,000 ಕೋಟಿ ಒದಗಿಸಲು ಸಾಧ್ಯವಿದೆ' ಎಂದು ಸಿದ್ದರಾಮಯ್ಯ ಹೇಳಿದರು.

`ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಬಲದಂಡೆ ಮತ್ತು ಎಡದಂಡೆ ನಾಲೆಗಳ ದುರಸ್ತಿಗೆ 5600 ಕೋಟಿ ರೂಪಾಯಿ ಒದಗಿಸಲು ಸಾಧ್ಯವಿದೆ. ವಿವರವಾದ ಯೋಜನಾ ವರದಿ ಸಲ್ಲಿಸಿ ಎಂದು ಕೇಂದ್ರ ಸರ್ಕಾರ ಸೂಚಿಸಿದ್ದರೂ ರಾಜ್ಯ ಇನ್ನೂ ವರದಿ ಸಲ್ಲಿಸಿಲ್ಲ' ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

`ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ತೀರ್ಪು ಹೊರಬೀಳುವವರೆಗೆ ರಾಜ್ಯ 7.56 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಮತ್ತು ಸಂತ್ರಸ್ತರ ಕುಟುಂಬದ 400 ಮಂದಿಗೆ ನೀಡಿದ್ದ ಉದ್ಯೋಗ ಉಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು' ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT